ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರಾಧಿಕಾರ ಸಮಿತಿಗೆ ಪರಿಸರ ತಜ್ಞ ಸದಸ್ಯರಾಗಿ ಕಡಬ ತಾಲೂಕಿನ ಹೊಸಮಠದ ಡಾ. ಎಚ್. ಅಜಿತ್ ಹೆಬ್ಬಾರ್ ಅವರು ನಾಮನಿರ್ದೇಶನಗೊಂಡಿದ್ದಾರೆ.
ಪ್ರಸ್ತುತ ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಡಬ ತಾಲೂಕಿನ ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿಯ ಸಕ್ರಿಯ ಸದಸ್ಯರೂ ಆಗಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಪಶ್ಚಿಮ ಘಟ್ಟ ಜೀವ ವೈವಿಧ್ಯತೆ, ನದಿ ಹಾಗೂ ಅಂತರ್ಜಲಗಳಂತಹ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಸ್ವಚ್ಛ ಕುಡಿಯುವ ನೀರು, ಬೃಹತ್ ಜಲವಿದ್ಯುತ್ ಯೋಜನೆಗಳಿಂದ ಪರಿಸರಕ್ಕಾಗುವ ಹಾನಿ, ಪರ್ಯಾಯ ಶಕ್ತಿಯ ಮೂಲಗಳು, ಹವಾಮಾನ ವೈಪರೀತ್ಯಗಳು ಮುಂತಾದ ಹಲವಾರು ವಿಚಾರಗಳ ಅಧ್ಯಯನದಲ್ಲೂ ತೊಡಗಿಸಿಕೊಂಡಿದ್ದಾರೆ.















