Friday , 22 May 2026

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

ನರ್ಮದಾ ಪರಿಕ್ರಮ
— ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ.
— ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ.
–ನರ್ಮದಾ ಪರಿಕ್ರಮ ವಿಶೇಷವಾದುದೇಕೆ?
• ಈ ಯಾತ್ರೆ ಶುದ್ಧ ನದಿಯಾದ ನರ್ಮದೆಯ ಎರಡು ತೀರಗಳನ್ನೂ ಸುತ್ತುವಂತೆ ಅಂದರೆ ಸುಮಾರು 3,300–3,500 ಕಿಮೀ ದೂರವನ್ನು 4ರಿಂದ 6 ತಿಂಗಳೊಳಗೆ ನಡೆಯುತ್ತಾ ಪೂರ್ಣಗೊಳಿಸುವ
• ಈ ಪರಿಕ್ರಮವು ಆತ್ಮ ಶುದ್ಧಿ, ಆಧ್ಯಾತ್ಮಿಕ ಶಾಂತಿ ಹಾಗೂ ಆಶೀರ್ವಾದಗಳನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.
ಅಶೋಕ್ ಅವರ ಅನುಭವದಲ್ಲಿ ಪ್ರತಿಯೊಂದು ಹೆಜ್ಜೆಯೂ ಧ್ಯಾನ, ಪ್ರತಿಯೊಂದು ತೀರವೂ ಪುಣ್ಯಭೂಮಿ. ನಿತ್ಯ ಜೀವನಕ್ಕಿಂತ ತುಸು ದೂರವಾಗಿ ಆತ್ಮ-ಸಂಭ್ರಮ ಮತ್ತು ಆತ್ಮವಲೋಕನದ ಮೂಲಕ ಇಹ – ಪರದ ಸಂವಾದದ ಕ್ಷಣ.
ಇದು ನಮ್ಮೆಲ್ಲರಿಗೂ ಪ್ರೇರಣೆ. ಪ್ರಕೃತಿ, ಭಕ್ತಿ, ಆತ್ಮ-ಅನ್ವೇಷಣೆಯತ್ತ ಒಂದು ಹೆಜ್ಜೆ ಇಡಿ.
ಅವರ ಅನುಭವವನ್ನು ಅವರದೇ ಮಾತಲ್ಲಿ ತಿಳಿಯೋಣ
— ಸುದ್ದಿ ಸುವಿಧಾ

ನರ್ಮದಾ – ಪರಿಕ್ರಮ

ನರ್ಮದಾ ಪರಿಕ್ರಮ ಎಂದರೆ ಕೇವಲ ಒಂದು ಯಾತ್ರೆಯಲ್ಲ, ಅದನ್ನು ಬರಿಯ ದೂರ ಅಥವಾ ಮೈಲಿಗಳಿಂದ ಅಳೆಯಲಾಗುವುದಿಲ್ಲ. ಅದೊಂದು ಶ್ರದ್ಧೆಯ ಪಯಣ, ನಡೆಯುವ ಪ್ರತಿ ಹೆಜ್ಜೆಯೂ ನಿ:ಶಬ್ದ ಪ್ರಾರ್ಥನೆ; ಕ್ರಮಿಸಿದ ಪ್ರತಿ ಮೈಲಿಯೂ ಅಹಂಕಾರವನ್ನು ನೀಗುವತ್ತ ಒಂದು ಹೆಜ್ಜೆ; ಪರಮಾತ್ಮ ಮತ್ತು ಆತ್ಮದ  ನಡುವಿನ ಸಂವಾದ; ಭಕ್ತಿ, ಶರಣಾಗತಿ ಮತ್ತು ಅನ್ವೇಷಣೆಯ ಅವಸ್ಥೆ.

ನರ್ಮದಾ ನದಿ ನಮ್ಮ ದೇಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಅತಿ ದೊಡ್ಡ ನದಿ.  ನರ್ಮದಾ ನದಿಯ ಉಗಮ ಛತ್ತೀಸಗಢ ರಾಜ್ಯದ ಅಮರಕಂಟಕದಲ್ಲಿ. ಈ ಪಟ್ಟಣವು ವಿಂಧ್ಯಾಚಲ ಮತ್ತು ಸತ್ಪುರ್  ಶ್ರೇಣಿಯ ಮಧ್ಯಭಾಗದಲ್ಲಿರುವ ಮೇಕಲಾ ಪರ್ವತದ ಮೇಲೆ ನೆಲೆಸಿದೆ. ಪಶ್ಚಿಮಾಭಿಮುಖವಾಗಿ  ಹರಿದು ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್ ಮೂಲಕ ಒಟ್ಟು ಸುಮಾರು 1600 ಕಿ. ಮಿ. ಕ್ರಮಿಸಿ ಭರುಚ್ ಜಿಲ್ಲೆಯಲ್ಲಿನ ವಿಮಲೇಶ್ವರದಲ್ಲಿ ರತ್ನಸಾಗರ (ಅರಬ್ಬೀ ಸಮುದ್ರ) ವನ್ನು ಸೇರುತ್ತಾಳೆ.  ನರ್ಮದಾ ನದಿಯ ಇನ್ನೊಂದು ಹೆಸರು ’ರೇವಾ’ ಎಂದು.  ಪುರಾಣದ ಉಲ್ಲೇಖದಂತೆ ಸಾವಿರಾರು ವರ್ಷಗಳ ತಪಶ್ಚರ್ಯೆರ್ಯೆಯಿಂದ ತಪಿತವಾದ ಶಿವನ ದೇಹದ ಬೆವರ ಹನಿಯಿಂದ ಸೃಷ್ಟಿಯಾದವಳು ನರ್ಮದೆ. ನರ್ಮದೆಯ ವಿವಾಹ ಬ್ರಹ್ಮನ ಪುತ್ರ ಸೋನಭದ್ರ (ನದಿ) ನೊಂದಿಗೆ ನಿಶ್ಚಯವಾಗಿತ್ತು. ಆದರೆ ಸೋನಭದ್ರ ನರ್ಮದೆಯ ಸಖಿ ಜ್ವಾಲಾ (ನದಿ) ಳನ್ನು ವಿವಾಹವಾಗುತ್ತಾನೆ. ಹೀಗಾಗಿ  ನರ್ಮದೆಯು ಆಜನ್ಮ ಕನ್ಯೆಯಾಗಿ ಉಳಿಯುತ್ತಾಳೆ.  ಸೋನಭದ್ರ ಮತ್ತು ಜ್ವಾಲಾ ನದಿಗಳು ಮೇಕಲ ಪರ್ವತದಿಂದ ಪೂರ್ವಕ್ಕೆ ಹರಿಯುತ್ತವೆ.  ದೇವ ದಾನವರ ಯುದ್ಧದ ನಂತರ ದೇವತೆಗಳ ಪಾಪಗಳನ್ನು ತೊಳೆಯಲು ಮತ್ತು ಶುದ್ಧೀಕರಿಸುವ ಸಲುವಾಗಿ ನರ್ಮದೆಯ ಸೃಷ್ಟಿಯಾಯಿತು. ಜನರ ಪಾಪಗಳನ್ನು ತೊಳೆದು ಸುಖ ಸಂತೋಷವನ್ನು ನೀಡಿ ಜನರಿಗೆ ಸಂತೃಪ್ತ ಜೀವನ ನಡೆಸುವ ಹಾದಿಯನ್ನು ತೋರಿಸುವ ತಾಯಿ ನರ್ಮದೆ. ನರ್ಮದೆಯ ದರ್ಶನ ಮಾತ್ರದಿಂದಲೆ ಎಲ್ಲ ಪಾಪ ಪರಿಹಾರ ಆಗುತ್ತದೆಂದು ಪ್ರತೀತಿ.  ನರಮ್-ದೇ ಎಂದರೆ ಸುಖ-ಸಂತೋಷ, ನೆಮ್ಮದಿ ನೀಡುವವಳು ಎಂಬ ಅರ್ಥವಿದೆ.

ಬಕಾವಾ ಎಂಬ ಊರಿನಲ್ಲಿ ಶಿವಲಿಂಗ ಮಾರುವ ಅಂಗಡಿ

ನರ್ಮದಾ ತಟದ ಜನರು ಈ ನದಿಯನ್ನು ತಾಯಿಯಂತೆ ಪ್ರೀತಿಸಿ ಪೂಜಿಸುತ್ತಾರೆ.   ನರ್ಮದಾ ಪರಿಕ್ರಮ ಆಕೆಯನ್ನು ಆರಾಧಿಸುವ ಒಂದು ಭಕ್ತಿಪೂರ್ವಕ ಆಚರಣೆ.  ನಾವು ದೇವಾಲಯಗಳಲ್ಲಿ ಪ್ರದಕ್ಷಿಣೆ ಮಾಡಿದಂತೆ ನರ್ಮದಾ ನದಿಯನ್ನು ಯಾವುದೇ ಸ್ಥಳದಲ್ಲಿಯೂ ದಾಟದೆ ನದಿಗೆ ಒಂದು  ಪ್ರದಕ್ಷಿಣೆ ಹಾಕುವುದೇ ನರ್ಮದಾ ಪರಿಕ್ರಮ. ನದಿಯ ಉತ್ತರ ಅಥವಾ ದಕ್ಷಿಣ ತಟದ ಯಾವುದೇ ಕ್ಷೇತ್ರದಿಂದ ಹೊರಟು ನದಿಯನ್ನು ಪ್ರದಕ್ಷಿಣೆ ಮಾಡುತ್ತ ಮೊದಲಿಗೆ ಹೊರಟ ಕ್ಷೇತ್ರಕ್ಕೆ ಬಂದರೆ ನಮ್ಮ ಪರಿಕ್ರಮ ಪೂರ್ಣಗೊಂಡಂತೆ.   ಪಶ್ಚಿಮದಲ್ಲಿ ಸಮುದ್ರ ಸೇರುವಲ್ಲಿ ದಕ್ಷಿಣ ತಟದಿಂದ ನಾವೆಯ ಮೂಲಕ 3 ತಾಸು ಪಯಣಿಸಿ ಉತ್ತರ ತಟ ತಲುಪಿ ಮತ್ತೆ ಪರಿಕ್ರಮ ಮುಂದುವರೆಸಬೇಕು. ಸಾಮಾನ್ಯವಾಗಿ ಪರಿಕ್ರಮವನ್ನು ಚಾತುರ್ಮಾಸ ಮುಗಿದ ನಂತರ ಕೈಗೊಳ್ಳುತ್ತಾರೆ.  ಪರಿಕ್ರಮ ಆರಂಭಿಸುವ ಮೊದಲು ನರ್ಮದಾ ಸ್ನಾನ, ಸಂಕಲ್ಪ, ಪೂಜನ, ಕನ್ಯಾ ಭೋಜನ ಇತ್ಯಾದಿ ವಿಧಿಗಳನ್ನು ಮಾಡುತ್ತಾರೆ.  ಪರಿಕ್ರಮದ ಅವಧಿಯಲ್ಲಿ ಕಮಂಡಲದಲ್ಲಿ ನರ್ಮದೆಯ ಪವಿತ್ರ ಜಲವನ್ನಿರಿಸಿ ದಿನಂಪ್ರತಿ ಸ್ನಾನದ ನಂತರ ಬೆಳಗ್ಗೆ ಮತ್ತು ಸಂಜೆ ಈ ಜಲಕ್ಕೆ ಪೂಜೆ ಸಲ್ಲಿಸಿ,  ಶ್ರೀ ಶಂಕರಾಚಾರ್ಯ ವಿರಚಿತ ನರ್ಮದಾಷ್ಟಕ ಮತ್ತು ಶಿವಾನಂದ ಸ್ವಾಮಿಗಳಿಂದ ರಚಿತ ಆರತಿ ಹಾಡಿನಿಂದ ಭಜಿಸುತ್ತಾರೆ. ಪರಿಕ್ರಮ ಮುಗಿದ ನಂತರ ತಾವು ದಿನ ನಿತ್ಯ ಪೂಜಿಸಿದ ನರ್ಮದಾ ಮಾತೆಯ ಜಲದಿಂದ ಓಂಕಾರೇಶ್ವರನಿಗೆ ಅಭಿಷೇಕ ಮಾಡುತ್ತಾರೆ.  ಕಾಲ್ನಡಿಗೆ ಪರಿಕ್ರಮವಾಸಿಗಳು  ಬಲಗೈಯಲ್ಲೊಂದು ದಂಡ, ಎಡಗೈಯಲ್ಲಿ ನೀರಿನ ಕಮಂಡಲ ಹಿಡಿದು, ತಮ್ಮ-ತಮ್ಮ ಬ್ಯಾಗುಗಳನ್ನು ಬೆನ್ನಿಗೇರಿಸಿ ನಡೆಯುತ್ತಾರೆ.

ನರ್ಮದೆಯು ತಾನು ಹರಿಯುವ ಸಾವಿರಾರು ಎಕರೆ ಪ್ರದೇಶದಲ್ಲಿ  ಜನ ಜಾನುವಾರುಗಳಿಗೆ, ಪಕ್ಷಿ ಪ್ರಾಣಿಗಳಿಗೆ ನೀರುಣಿಸಿ ಎಲ್ಲರ ಜೀವಾಳವಾಗಿ, ಜೀವನದಿಯಾಗಿದ್ದಾಳೆ. ತನ್ನ ಉಗಮ ಸ್ಥಾನ ಅಮರಕಂಟಕದಿಂದ ಹೊರಟು ವಿಂಧ್ಯ ಪರ್ವತದಿಂದಿಳಿದು ಮುಂದೆ ಭೋರ್ಗರೆಯುತ್ತ ತನ್ನ ಪಾತ್ರವನ್ನು ಅಪಾರವಾಗಿ ಹಿಗ್ಗಿಸಿ ಹರಿಯುತ್ತಾಳೆ.  ನದಿಯ ಇಕ್ಕೆಲಗಳಲ್ಲಿ ಸಮೃದ್ಧಿ ಇದ್ದು,  ಕಣ್ಣು ಹಾಯಿಸಿದಷ್ಟು ದೂರ ಕಬ್ಬು, ಗೋಧಿ, ಹತ್ತಿ, ಸೋಯಾ, ಅವರೆ, ತೊಗರಿ, ಮೆಣಸು, ಬಾಳೆ ಹೀಗೆ ಹತ್ತು ಹಲವಾರು ಬೆಳೆಗಳನ್ನು ಕಾಣಬಹುದು. ಹಲವೆಡೆ  ಸಾಗುವಾನಿ-ತೇಗದ ನಿತ್ಯ ಹರಿದ್ವರ್ಣ ಕಾಡು ಮೈಲಿಗಟ್ಟಲೆ ಹಬ್ಬಿದೆ.

ನರ್ಮದೆಯ ಎರಡೂ ತೀರದಲ್ಲಿ ಅನೇಕ ಆಶ್ರಮಗಳಿವೆ.  ಇಲ್ಲಿ ಪ್ರಾಚೀನ ಕಾಲದಲ್ಲಿ ಅನೇಕ ಋಷಿ-ಮುನಿಗಳು ತಪಸ್ಸು ಮಾಡಿದ್ದರು.  ಆದ್ದರಿಂದ ಈ ಭೂಮಿಯನ್ನು ತಪೋಭೂಮಿ ಎಂದು ಕರೆಯುತ್ತಾರೆ.

ಈ ಆಶ್ರಮಗಳ ಜಾಲವು ಅನಾದಿ ಕಾಲದಿಂದಲೂ ತೀರ್ಥಯಾತ್ರಿಗಳಿಗೆ ಅನ್ನಹಾರ-ಆಶ್ರಯ ಒದಗಿಸುತ್ತ ಅದ್ಭುತ ಸೇವೆಗೈಯುತ್ತಿದೆ.  ಪ್ರಾಚೀನ ಕಾಲದಲ್ಲಿ ಮಾರ್ಕಂಡೇಯ ಮಹರ್ಷಿಗಳು ನರ್ಮದಾ ಪರಿಕ್ರಮವನ್ನು ಮಾಡಿದ್ದರೆಂದು, ಅವರು ನರ್ಮದಾ ನದಿ ಮಾತ್ರವಲ್ಲದೆ ಅದರ ಉಪನದಿಗಳನ್ನು ಸಹ ಪ್ರದಕ್ಷಿಣೆ ಮಾಡುತ್ತ 30 ವರ್ಷಗಳಲ್ಲಿ ಪರಿಕ್ರಮವನ್ನು ಪೂರ್ಣಗೊಳಿಸಿದರೆಂದು ನರ್ಮದಾ ಪುರಾಣದಲ್ಲಿ ಉಲ್ಲೇಖವಿದೆ.  ಋಷಿ-ಮುನಿಗಳು ಮತ್ತು ವಾನಪ್ರಸ್ತ ಆಶ್ರಮಿಗಳು 3 ವರ್ಷ 3 ತಿಂಗಳು 13 ದಿನ ಪರಿಕ್ರಮ ಮಾಡುತ್ತಾರೆ.  ಚಾತುರ್ಮಾಸ್ಯದ ಅವಧಿಯಲ್ಲಿ ಒಂದೇ ಸ್ಥಳದಲ್ಲಿ, ಅಂದರೆ ಯಾವುದಾದರೊಂದು ಆಶ್ರಮದಲ್ಲಿ ತಂಗಿದ್ದು ನಂತರ ತಮ್ಮ ನಡಿಗೆ ಪ್ರಾರಂಭಿಸುತ್ತಾರೆ . ಸಾಮಾನ್ಯ ಜನರಿಗೆ ಈ 3,200 ಕಿ.ಮೀ. ಪರಿಕ್ರಮ ಪೂರ್ಣಗೊಳಿಸಲು ತಮ್ಮ-ತಮ್ಮ ಶಕ್ತಿಗನುಗುಣವಾಗಿ 3 ರಿಂದ  5 ತಿಂಗಳಷ್ಟು ಸಮಯ ಬೇಕಾಗುತ್ತದೆ.  ಪ್ರತಿ 10 ಕಿಮಿ ಗೆ ಒಂದು ಆಶ್ರಮ ಇದ್ದು, ಬೆಳಗಿನ ಸ್ನಾನಾದಿ ಮುಗಿಸಿ ಹೊರಟರೆ, ತಮ್ಮ ಶಕ್ತ್ಯಾನುಸಾರ ನಡೆಯುತ್ತ ಮೊದಲನೇ, ಎರಡನೇ ಅಥವಾ ಮುಂದಿನ ಆಶ್ರಮದಲ್ಲಿ ಮಧ್ಯಾಹ್ನದ ಭೋಜನ, ಒಂದಿಷ್ಟು ವಿಶ್ರಾಂತಿಯ ನಂತರ ಮತ್ತೆ ನಡಿಗೆ, ಕತ್ತಲಾಗುವ ಮುನ್ನ ಮುಂದಿನ ಆಶ್ರಮ ದಲ್ಲಿ ವಾಸ್ತವ್ಯ ಹೂಡಿ, ರಾತ್ರಿಯ ಭೋಜನ ಮತ್ತು ವಿಶ್ರಾಂತಿ, ಹೀಗೆ ದಿನಚರಿ ಸಾಗುತ್ತದೆ. ಹಿಂದಿನ ಕಾಲದಲ್ಲಿ ನರ್ಮದಾ ನದಿ ತೀರದಲ್ಲೇ ನಡೆಯುತ್ತ ಪೂರ್ಣ ಪರಿಕ್ರಮ ಮಾಡಬಹುದಾಗಿತ್ತು ಇತ್ತೀಚೆಗೆ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಲವಾರು ಆಣೆಕಟ್ಟೆಗಳ ಹಿನ್ನೀರಿನಿಂದಾಗಿ ಕೆಲವೊಂದು ಆಶ್ರಮಗಳು, ಕ್ಷೇತ್ರಗಳು ಮುಳುಗಡೆ ಆಗಿವೆ. ಇನ್ನೊಂದಿಷ್ಟು ಕಡೆ ಮರಳು ಮಾಫಿಯಾದ ಹಾವಳಿ ಇದ್ದು, ನದಿ ತೀರದಲ್ಲಿ ನಡೆಯಲಾಗುವುದಿಲ್ಲ. ಇಂತಹ ಸ್ಥಳಗಳಲ್ಲಿ ರಸ್ತೆಯ ಮೂಲಕ ಸಾಗಿ ಯಾತ್ರೆ ಮಾಡಬೇಕಾಗುತ್ತದೆ.  ಪರಿಕ್ರಮ ಮಾರ್ಗದರ್ಶಿ ಪುಸ್ತಕಗಳಲ್ಲಿ ಯಾತ್ರಿಗಳು ಒಂದು ಆಶ್ರಮದಿಂದ ಹೊರಟು ಮುಂದಿನ ಊರು/ಆಶ್ರಮ ಸೇರಲು ಇರುವ ದೂರ, ಅಲ್ಲಿ ಭೋಜನ ಮತ್ತು ವಸತಿ ವ್ಯವಸ್ಥೆಯ ಬಗೆಗಿನ ವಿವರಗಳು ಲಭ್ಯವಿದೆ. ಪರಿಕ್ರಮ ಸಾಗಬೇಕಾದ ರಸ್ತೆಯಲ್ಲಿ ಮಾರ್ಗಸೂಚಿಗಾಗಿ ಆಯಾ ಊರಿನ ಭಕ್ತರು ಕೇಸರಿ ಪತಾಕೆಗಳನ್ನು ಮರಗಳ ಮೇಲೆ ಕಟ್ಟಿರುತ್ತಾರೆ ಮತ್ತು ಕಾಲಕಾಲಕ್ಕೆ ಅವು ಸುಸ್ಥಿತಿಯಲ್ಲಿ ಇದೆ ಎಂಬುದನ್ನು ಪರೀಕ್ಷಿಸುತ್ತಾರೆ.  ಈ ವ್ಯವಸ್ಥೆಯ ಮೂಲಕ ಯಾತ್ರಿಗಳು ದಾರಿ ತಪ್ಪಿ ಅಲೆದಾಡದಂತೆ ರಕ್ಷಿಸುತ್ತಾರೆ.

 

ದಾರಿಯಲ್ಲಿ ಭಕ್ತ ಜನರು ಯಾತ್ರಿಗಳಿಗೆ “ನರ್ಮದೆ ಹರ” ಎಂದು ನಮಸ್ಕರಿಸಿ ಚಹ, ಬಿಸ್ಕತ್ತು, ಹಣ್ಣು, ಮಜ್ಜಿಗೆ, ಹೀಗೆ ಏನಾದರೊಂದು  ನೀಡಿ ತಮ್ಮ ಕೈಲಾದ ಸೇವೆ ಮಾಡುತ್ತಾರೆ. ಪರಿಕ್ರಮಕ್ಕೆ ಬರುವ ಜನರಲ್ಲಿ ಶೇಕಡಾ 50 ರಷ್ಟು ಮಹಾರಾಷ್ಟ್ರ ರಾಜ್ಯದಿಂದ, ಇನ್ನುಳಿದಂತೆ ಮಧ್ಯ ಪ್ರದೇಶ ಸೇರಿ ದೇಶದ ಇತರ ಭಾಗಗಳಿಂದ ಬರುತ್ತಾರೆ.  ಆದರೆ ದಕ್ಶಿಣ ಭಾರತದ ಭಕ್ತರು ತೀರಾ ಕಡಿಮೆ.

ಪರಿಕ್ರಮದಲ್ಲಿನ ನಿಯಮ ಗಳು ಹೀಗಿವೆ :

ಪರಿಕ್ರಮವಾಸಿಗಳು ಬಿಳಿ ಬಟ್ಟೆ ಧರಿಸಬೇಕು, ದಂಡಧಾರಿ ಆಗಿರಬೇಕು, ನರ್ಮದಾ ಮಾತೆಯ ಜಲವನ್ನು ಒಂದು ಕಮಂಡಲುವಿನಲ್ಲಿ ಇಟ್ಟು ನಿತ್ಯ ಎರಡು ಹೊತ್ತು- ಮುಂಜಾನೆ ಮತ್ತು ಸಾಯಂಕಾಲ ಪೂಜಿಸಬೇಕು, ನರ್ಮದಾ ಜಲ ಮತ್ತು ದಂಡ ಎರಡಕ್ಕೂ ನೈವೇದ್ಯ ಮತ್ತು ಆರತಿಯೊಂದಿಗೆ ನಿತ್ಯ ಪೂಜಿಸಬೇಕು .

ಪರಿಕ್ರಮದಲ್ಲಿ ನಮ್ಮ ವಸ್ತುಗಳನ್ನು ನಾವೇ ಹೊತ್ತು ನಡೆಯಬೇಕಾದುದರಿಂದ ಕಡಿಮೆ ಲಗೇಜ್ ತೆಗೆದುಕೊಂಡು ಹೋಗಬೇಕು.  ಹಲವೆಡೆ ಗುಡ್ಡ- ಕಾಡಿನ ದಾರಿ ಇದ್ದು ಹಗುರವಾದ ಲಗೇಜ್ ಇದ್ದಾಗ ನಡೆಯುತ್ತ ಸಾಗುವುದು ಸಲೀಸು.  ಈ ಪಾಠವು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ, ಒಳ್ಳೆಯ ಯೋಚನೆ-ಕೃತಿಗಳನ್ನು ಮಾಡಬೇಕು, ಆ ಮೂಲಕ ನಮ್ಮ ಜೀವನವನ್ನು ಹಗುರಾಗಿಸಿ, ಹಸನು ಮಾಡಬಹುದು, ಎಂಬ ಮಾತನ್ನು ನಾವು ತಂಗಿದ್ದ ಒಂದು ಆಶ್ರಮದ ಸಂತರೊಬ್ಬರು ನಮಗೆ ಹೇಳಿದ್ದರು.

ನಾವು ಸಾಧಾರಣವಾಗಿ ಕೇಳಿರದ, ನಮಗೆ ಅಪರೂಪ ಮತ್ತು ಹೊಸದೆನ್ನಿಸಿದ ನರ್ಮದಾ ಪರಿಕ್ರಮವನ್ನು ನಾವು ಮೂವರು – ಶ್ರೀಮತಿ ಮಾಧುರಿ ಗುರುರಾವ್ ಬಾಪಟ್, ನಾನು ಮತ್ತು ನನ್ನ ಪತ್ನಿ ಸೌ. ಶಾಂತಾ ಪಟ್ವರ್ಧನ್ ಕೈಗೊಳ್ಳುವುದೆಂದು ನಿಶ್ಚಯಿಸಿ  ಬೆಂಗಳೂರಿನಿಂದ ಹೊರಟು ಇಂದೋರ್ ಮೂಲಕ ಓಂಕಾರೇಶ್ವರ ತಲುಪಿದೆವು.                8-11-2024 ರಂದು ಸಂಕಲ್ಪ ಪೂಜೆ ಸಲ್ಲಿಸಿ ಬಲಗೈಯಲ್ಲೊಂದು ದಂಡ ಹಿಡಿದು, ಬೆನ್ನಿಗೆ ಬ್ಯಾಗು ಏರಿಸಿ  20 ಪರಿಕ್ರಮವಾಸಿಗಳೊಂದಿಗೆ ನರ್ಮದಾ ಮಾತೆ ಹರಿಯುವ ಪಶ್ಚಿಮ ದಿಕ್ಕಿನೆಡೆಗೆ ನಡಿಗೆ ಆರಂಭಿಸಿದೆವು.   ಮೊದಲ ಒಂದೆರಡು ದಿನ 15 ರಿಂದ 20 ಕಿ.ಮೀ. ಕ್ರಮಿಸಿದರೆ, ನಂತರ ದಿನವಹಿ 28-30 ಕಿ.ಮೀ. ನಡೆಯುತ್ತಿದ್ದೆವು.

ನರ್ಮದಾ ನದಿ ತೀರದ ಜನಸಾಮಾನ್ಯರು ನಡೆದು ಸಾಗುವ ಪರಿಕ್ರಮವಾಸಿಗಳಿಗೆ ಏನಾದರು ಸೇವೆ ಮಾಡಬೇಕೆಂದು ಉತ್ಸುಕರಾಗಿರುತ್ತಾರೆ. ಈ ದಿಸೆಯಲ್ಲಿ ನಾವು ಕಂಡ-ಅನುಭವಿಸಿದ ಒಂದಷ್ಟು ಘಟನೆಗಳು  ಹೀಗಿವೆ.

ಒಂದು ದಿನ ದಾರಿಯಲ್ಲಿ ಬಕಾವಾ ಎಂಬ ಗ್ರಾಮವನ್ನು ಹಾದು ಹೋದೆವು.  ಇಲ್ಲಿಂದ ಕೆಲವಾರು ಕಿ.ಮಿ. ದೂರದಲ್ಲಿನ ತಟದಲ್ಲಿ ಈ ಹಿಂದೆ ನದಿಯಲ್ಲಿ ಸ್ವಾಭಾವಿಕ ಶಿವಲಿಂಗಗಳು (ಸ್ವಯಂಭು) ದೊರೆಯುತ್ತಿದ್ದವಂತೆ. ಈಗ ಈ ಸ್ಥಳವು ಹಿನ್ನೀರಿನಲ್ಲಿ ಮುಳುಗಿದೆ. ಹಾಗಾಗಿ ಬಕಾವಾದಲ್ಲಿ ನದಿಯಿಂದ ಶಿಲೆಗಳನ್ನು ತಂದು ಯಂತ್ರಗಳ ಮೂಲಕ ಶಿವಲಿಂಗಗಳನ್ನು ತಯಾರಿಸುತಾರೆ.  ಈ ಗ್ರಾಮದಲ್ಲಿ ಶೇಕಡಾ 90 ಅಂಗಡಿಗಳು ಶಿವಲಿಂಗ ಮತ್ತು ಇತರ ಮೂರ್ತಿಗಳನ್ನು ಮಾರುವ ಅಂಗಡಿಗಳು. ಇಲ್ಲಿನ ಅಂಗಡಿಗಳಲ್ಲಿ ಅತಿ ಚಿಕ್ಕ ಮತ್ತು ದೊಡ್ಡ ಆಕೃತಿಯ ಶಿವಲಿಂಗಗಳನ್ನು ಕಾಣಬಹುದು.  ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಗ್ರಾಮದ ಹಿರಿಯ ವ್ಯಾಪಾರಿಯೊಬ್ಬರು ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ ಚಹಾ ಬಿಸ್ಕತ್ತು ನೀಡಿ ಒಂದೊಂದು ಸಣ್ಣ ಶಿವಲಿಂಗವನ್ನು ಕೊಟ್ಟು ಬೀಳ್ಕೊಟ್ಟರು.

ಭಟ್ಯಾಣದ ಸಿಯಾರಾಮ್ ಬಾಬಾ ಅಶ್ರಮದಲ್ಲಿ ರಾತ್ರೆ ಭೋಜನ ಮುಗಿಸಿ ನಿದ್ರೆಗೆ ಶರಣಾಗುವ ಸಮಯ. ಅಂದು ಮಧ್ಯಾಹ್ನ ಬಕಾವಾ ಗ್ರಾಮದಲ್ಲಿ ಭೇಟಿಯಾಗಿದ್ದ ಶ್ರೀ ಹರಿರಾಮ್ ಎಂಬ ಯುವಕ ಎಲ್ಲ ಪರಿಕ್ರಮವಾಸಿಗಳ ಕ್ಷೇಮ ವಿಚಾರಿಸುತ್ತ ನಮ್ಮತ್ತ ಬಂದು ಕಳಕಳಿಯಿಂದ – ’ಇಷ್ಟೊಂದು ಲಗೇಜ್ ಹೊತ್ತು ನೀವು ಮುಂದೆ ಸಿಗುವ “ಶೂಲಪಾಣಿ” ಎಂಬ ಗುಡ್ಡ-ಬೆಟ್ಟ ಕಾಡಿನ ದಾರಿಯಲ್ಲಿ ನಡೆಯುವುದು ಅಸಾಧ್ಯ, ನಿಮಗೆ ಬೇಡವಾದ ಲಗೇಜನ್ನು ಒಂದು ಗೋಣಿ ಚೀಲದಲ್ಲಿಟ್ಟು ನನಗೆ ಕೊಡಿ, ಮುಂದೆ 15-20 ದಿನಗಳಲ್ಲಿ ನೀವು ಸಮುದ್ರ ದಾಟಿ ಉತ್ತರ ತಟದಲ್ಲಿ ಮಹೇಶ್ವರ ಕ್ಷೇತ್ರಕ್ಕೆ ಬಂದಾಗ ನನಗೆ ಫೋನ್ ಮಾಡಿ, ಆಗ ನಾನು ನದಿ ದಾಟಿ ಬಂದು ನಿಮ್ಮ ಹೆಚ್ಚಿನ ಲಗೇಜನ್ನು ಹಿಂತಿರುಗಿಸುತ್ತೇನೆ’ ಎಂದು ಹೇಳಿದರು. ಅದಾಗಲೆ ನಮಗೂ ತಲಾ ಸುಮಾರು 10 ಕಿಲೋ ಹೊತ್ತು ನಡೆಯುವುದು ಕಠಿಣ ಎಂಬ ಅರಿವಾಗತೊಡಗಿತ್ತು.  ನಾವು ಒಂದು ಕ್ಷಣವೂ ಯೋಚಿಸದೆ ನಮ್ಮಲ್ಲಿದ್ದ ಅನಗತ್ಯವೆನಿಸಿದ ವಸ್ತುಗಳನ್ನು ಆತ ಕೊಟ್ಟ ಖಾಲಿ ಅಕ್ಕಿಚೀಲಕ್ಕೆ ತುಂಬಿ ಅವರಿಗೆ ನೀಡಿದೆವು.  ಇಲ್ಲಿಂದ ಮುಂದಕ್ಕೆ ನಾವು ಮೊದಲಿಗಿಂತ ಹಗುರವಾದ ತಲಾ ಸುಮಾರು 7 ಕಿಲೋ ಭಾರದ  ತಮ್ಮ-ತಮ್ಮ ಬ್ಯಾಗುಗಳನ್ನು ಹೊತ್ತು ನಡೆದೆವು.  ನಮ್ಮ ಮುಂದಿನ ಯಾತ್ರೆಯನ್ನು ಹಗುರಗೊಳಿಸಿ, ಸುಗಮಗೊಳಿಸಿದ ಆ ಮಹಾನುಭಾವನಿಗೆ ಪ್ರಣಾಮ ಸಲ್ಲಿಸುತ್ತೇವೆ. ಮುಂದೆ 20 ದಿನಗಳ ನಂತರ ನಾವು ಮಹೇಶ್ವರ ತಲುಪಿದಾಗ ಶ್ರೀ ಹರಿರಾಮ್ ರಿಂದ ನಮ್ಮ ಲಗೇಜನ್ನು ಹಿಂಪಡೆದು ಬೆಂಗಳೂರಿಗೆ ಕಳುಹಿಸಿದೆವು.

ಒಂದು ಏಕಾದಶಿ ದಿನ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ರಸ್ಥೆಯ ಇಕ್ಕೆಲಗಳಲ್ಲಿನ ಬಾಳೆತೋಟದ ಪಕ್ಕ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿದ್ದ ಕೃಷಿಕ ನಮ್ಮನ್ನು ತೋಟದೊಳಗೆ ಕರೆದು ನಮ್ಮೆದುರು ಸುಮಾರು 30 ಪಕ್ವ ಬಾಳೆ ಹಣ್ಣುಗಳನ್ನಿಟ್ಟು ತಿನ್ನಲು ಕೊಟ್ಟರು.  ತಂಪಾದ ತೋಟದಲ್ಲಿ ಕುಳಿತು ರುಚಿಯಾದ ಬಾಳೆ ಹಣ್ಣುಗಳನ್ನು ಸೇವಿಸಿ ತೃಪ್ತರಾಗಿ ಮುಂದೆ ಸಾಗಿದೆವು.

ಕೇಲಾಘಾಟ್ ಮತ್ತು ಭ್ಹೂಯಿಂದಾ ಎಂಬ ಹಳ್ಳಿಗಳ ಮದ್ಧ್ಯೆ ರಸ್ತೆ ಬದಿಯ ತನ್ನ ಹೊಲದಲ್ಲಿ ಒಂದು ಸಣ್ಣ ಟೆಂಟ್ ಹಾಕಿಕೊಂಡು ಆ ದಾರಿಯಾಗಿ ಸಾಗುವ ಪರಿಕ್ರಮವಾಸಿಗಳಿಗೆ ಚಹಾ-ಬಿಸ್ಕತ್ತು ನೀಡಿ ಉಪಚರಿಸುತ್ತಾರೆ, ಸುಭದ್ರಾ ಮೈಯಾ ಎಂಬ ಮಹಿಳೆ.  ಮನೆ ಹಾಗು ಹೊಲದ ಕೆಲಸವನ್ನು ತನ್ನ ಮಕ್ಕಳು ನೋಡಿಕೊಳ್ಳುತ್ತಾರೆ, ಹಾಗಾಗಿ  ತಾನು ಈ ರೀತಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಹೇಳುತ್ತಾರೆ.  ಇವರು ಯಾರಿಂದಲೂ ಧನ/ಸಹಾಯ ಇಲ್ಲದೆ ಈ ಸೇವೆ ಮಾಡುತ್ತಾರೆ. ಪ್ರತಿದಿನ ಸುಮಾರು 8-10 ಲೀಟರ್ ಹಾಲು ಮತ್ತಿತರ ಸಾಮಗ್ರಿಗಳನ್ನು ತಾವೇ ಹೊಂದಿಸಿಕೊಳ್ಳುತ್ತಾರೆ. ಇದೇ ರೀತಿ ಇನ್ನೊಂದು ದಿನ ಬೆಳಗ್ಗೆ 8 ಗಂಟೆ ಸುಮಾರಿಗೆ  ಬೊಕರಾಟೊ ಎಂಬ ಘಟ್ಟ ಪ್ರದೇಶದಿಂದ ಸಾಗಿ ಅಂಬಾಪಾಡ ಎಂಬಲ್ಲಿಗೆ ನಡೆಯುತ್ತ ಹೋಗುವಾಗ ದಾರಿಯಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿಯ ಆದಿವಾಸಿ ಮಹಿಳೆಗೆ ನಾವು ’ಎಲ್ಲಾದರು ಚಹಾ ಸಿಗಬಹುದೆ’ ಎಂದು ಕೇಳಿದಾಗ ಆಕೆ ತಡಮಾಡದೆ ಪಕ್ಕದ ತನ್ನ ಮನೆಗೆ ಹೋಗಿ ಮೂರು ಕಪ್ ಚಹಾ ಮಾಡಿ ನಮಗೆ ನೀಡಿದರು, ನಾವು ಕೊಟ್ಟ ಹಣ ನಿರಾಕರಿಸಿದರು.  ಹಳ್ಳಿ ಅಥವಾ ಪೇಟೆಯಲ್ಲಿ ಸಾಗುವಾಗ ಹಾದಿ ಬದಿಯ ಸಣ್ಣ ವ್ಯಾಪಾರಿಗಳು ತಾವು ಮಾರುವ ಹಣ್ಣು, ಚಹಾ, ಅವಲಕ್ಕಿ ಇತರ ವಸ್ತುಗಳನ್ನು ನೀಡುತ್ತಾರೆ ಮತ್ತು ಅದರ ದರವನ್ನು ನಮ್ಮಿಂದ ಪಡೆಯಲು ನಿರಾಕರಿಸುತ್ತಾರೆ.

ಒಂದು ಮಧ್ಯಾಹ್ನ ಬಾವನಗಜ ಆಶ್ರಮದಲ್ಲಿ ಭೋಜನದ ನಂತರ ಪಾಟಿ ಎಂಬ ಊರಿನತ್ತ ಬಿಸಿಲಿನಲ್ಲಿ ನಡೆಯುತ್ತ ದಣಿವಾರಿಸಿಕೊಳ್ಳಲು ಒಂದು ಶಾಲೆಯ ಚಾವಡಿಯಲ್ಲಿ ವಿಶ್ರಮಿಸುತ್ತಿದ್ದೆವು.  ಅಲ್ಲಿಗೆ ಬಂದ, ಬೈಕ್ ಮೇಲೆ ಪಾನ್ ಪರಾಗ್ ಮತ್ತಿತರ ಗುಟ್ಕಾ ಪೌಚ್ ಗಳನ್ನು ಮಾರಾಟ ಮಾಡುವ ವ್ಯಾಪಾರಿ ನಮ್ಮನ್ನು ಕಂಡು ವಾಹನವನ್ನು ನಿಲ್ಲಿಸಿ, ಒಂದಷ್ಟು ಹೊತ್ತು ತನ್ನ ವಸ್ತುಗಳನ್ನು ತಡಕಾಡಿ, ಒಂದು 50 ಪೌಚ್ ಗಳ ಪೂರ್ಣ ಪ್ಯಾಕೆಟನ್ನು ನಮಗೆ ನೀಡಿದ.  ನಾವು ’ಈ ರೀತಿಯ ಗುಟ್ ಕಾ ಮುಂತಾದುವನ್ನು ನಾವು ತಿನ್ನುವುದಿಲ್ಲ, ನಮಗೆ ಅದು ಬೇಡ’ ಎಂದಾಗ  ಅವನು ನಗುತ್ತ – ’ಇದು ಗುಟ್ ಕಾ ಅಲ್ಲ, “ಧನಾ ದಾಲ್”, ಹುರಿದ ಬೇಳೆ, ಪಚನಕ್ಕೆ ಒಳ್ಳೆಯದು, ಊಟವಾದ ನಂತರ ತಿನ್ನಬಹುದು, ದಯವಿಟ್ಟು ತೆಗೆದುಕೊಳ್ಳಿ’ ಎಂದು ಹೇಳಿ ನಮ್ಮಿಂದ ಯಾವುದೆ ಪ್ರತಿಫಲ/ಧನ ನಿರೀಕ್ಷಿಸದೆ ’ನರ್ಮದೆ ಹರ’ ಎಂದು ವಂದಿಸುತ್ತ ಬೈಕ್ ಏರಿ ಮುಂದೆ ಸಾಗಿದ.

ಇನ್ನೊಂದು ದಿನ ಮಧ್ಯಾಹ್ನದ ಬಿಸಿಲಿನಲ್ಲಿ ನಡೆಯುವಾಗ ನಮ್ಮಲ್ಲಿ ಒಬ್ಬ ಯಾತ್ರಿಗೆ ಕಾಲಿಗೆ ಗಾಯವಾಗಿದ್ದು, ಕುಂಟುತ್ತ ಸಾಗುವುದನ್ನು ಕಂಡು, ಒಬ್ಬ ಆಟೋವಾಲ ತನ್ನ ಆಟೊ ನಿಲ್ಲಿಸಿ ವಂದಿಸುತ್ತ  ನಮ್ಮನ್ನು ಮುಂದಿನ ಊರಿಗೆ ಒಯ್ದು ಬಿಡುವುದಾಗಿ ತಿಳಿಸಿದ. ಮುಂದಿನ ಊರಿನಲ್ಲಿ ಆಟೋ ನಿಲ್ಲಿಸಿ, ಅಂಗಡಿಯಿಂದ 3 ಪ್ಯಾಕೆಟ್ ಕ್ರಂಚೀಸ್ ತಂದು ನಮಗೆ ನೀಡಿ  ವಂದಿಸಿ ಹೇಳಿದ  ’ ನನ್ನ ಹೆಂಡತಿಗೆ ಸದ್ಯದಲ್ಲಿ ಹೆರಿಗೆ ಆಗುವದಿದೆ, ದಯವಿಟ್ಟು ನಮಗೆ ಆಶೀರ್ವಾದ ಮಾಡಿ’ ಎಂದು .  ಆಗಷ್ಟೆ ನಮ್ಮ ಗಮನಕ್ಕೆ ಬಂತು,  ಆತ ಒಂದು ಜೈಪುರ ಕಾಲು ಧರಿಸಿದ್ದ. ತುಂಬಿದ ಕಣ್ಣಾಲಿಗಳಿಂದ ಆತನಿಗೆ ಆಶೀರ್ವದಿಸಿ ಆಶ್ರಮದತ್ತ ಸಾಗಿದೆವು.

ಇನ್ನು ಕೆಲವೆಡೆ ರಸ್ತೆ ಬದಿಯಲ್ಲಿ ಸಣ್ಣ ಸ್ಟಾಲ್ ಗಳಲ್ಲಿ ಔಷಧಿ, ಚಪ್ಪಲಿ, ಶೂ ಮುಂತಾದುವನ್ನು ಇಟ್ಟು ದಾರಿಯಲ್ಲಿ ಬರುವ ಪರಿಕ್ರಮವಾಸಿಗಳಿಗೆ ಉದಾರವಾಗಿ ನೀಡುತ್ತಾರೆ.  ಡಿಸೆಂಬರ್ ನಂತರ ಮುಂದೆ ಚಳಿ ಹೆಚ್ಚಾಗುವುದರಿಂದ ತೊಟ್ಟುಕೂಳ್ಳಲು ಸ್ವೆಟರ್, ಸಾಕ್ಸ್, ಮಫ್ಲರ್, ಉಣ್ಣೆಯ ಹೊದಿಕೆ ಇತ್ಯಾದಿ ಕೂಡ ದಾನವಾಗಿ ನೀಡುತ್ತಾರೆ. ನಾವು ಅವರು ನೀಡಿದ ದಾನವನ್ನು ನಿರಾಕರಿಸುವಂತಿಲ್ಲ, ಏಕೆಂದರೆ ಆ ರೀತಿಯ ನಡವಳಿಕೆಯಿಂದ ನರ್ಮದಾ ಮಾತೆಗೆ ಮತ್ತು ಭಕ್ತರಿಗೆ ಅವಮಾನವಾದಂತೆ, ಎಂಬುದು ಅವರ ಅನಿಸಿಕೆ.  ಕೆಲ ಭಕ್ತ ಜನರು ಪರಿಕ್ರಮವಾಸಿಗಳನ್ನು ಈ ರೀತಿ ಎಚ್ಚರಿಸುತ್ತಾರೆ – “ನೀವೇನಾದರು ನಾವು ನೀಡುವ ಚಹ ಅಥವಾ  ಇನ್ನೇನನ್ನೋ ನಿರಾಕರಿಸಿದರೆ, ಮುಂದೆ ಸಾಗುತ್ತ ನಡೆಯುವಾಗ ನಿಮಗೆ ಒಂದೂ ಕಡೆ ಚಹಾ/ಭೋಜನ ಸಿಗಲಿಕ್ಕಿಲ್ಲ”  ಎಂಬುದಾಗಿ.  ಈ  ದಾನದಿಂದ ನರ್ಮಾದಾ ಮಾತೆ ಅವರಿಗೆ ಹೆಚ್ಚಿನ ಫಲ ನೀಡುತ್ತಾಳೆ ಎಂಬುದು ಅವರ ಗಟ್ಟಿ ನಂಬಿಕೆ.  ಇಂತಹ ಹಲವಾರು ಭಕ್ತ-ಜನರನ್ನು ನಮ್ಮ ಪರಿಕ್ರಮದಲ್ಲಿ ಭೇಟಿಯಾದೆವು.  ಪರಿಕ್ರಮವಾಸಿಗಳಿಗೆ ಭಕ್ತಿಯಿಂದ ಏನನ್ನಾದರು ನೀಡಿ ಕೃತಾರ್ಥರಾಗಬೇಕು ಎಂಬ ಅವರ ಸಹಜ ನಡವಳಿಕೆ ನಮಗೆ ಹಲವು  ಬಾರಿ ಆನಂದಾಶ್ರು ತಂದಿದ್ದಂತೂ ನಿಜ.

ಪರಿಕ್ರಮ ಮಾರ್ಗದಲ್ಲಿ ಬರುವ ಎಲ್ಲ ಆಶ್ರಮಗಳು ನೀಡುವ ಅನ್ನ-ಆಶ್ರಯ ಸೇವೆ ನಮ್ಮನ್ನು ಮೂಕರನ್ನಾಗಿಸುತ್ತದೆ. ಫೋನು-ಮೊಬೈಲ್ ಮೂಲಕ ಹಿಂದಿನ ಊರಿನ ಆಶ್ರಮದಲ್ಲಿ ಎಷ್ಟು ಪರಿಕ್ರಮವಾಸಿಗಳು  ವಸತಿಗಿದ್ದರು ಎಂದು ತಿಳಿದುಕೊಂಡು ಈ ದಿನ ತಮ್ಮ ಆಶ್ರಮಕ್ಕೆ ಎಷ್ಟು ಜನ ಬರಬಹುದು ಎಂದು ಅಂದಾಜಿಸಿಕೊಂಡು ಅವರ ಸೇವೆಗೆ ಸನ್ನದ್ಧರಾಗುತ್ತಾರೆ.  ಆಶ್ರಮಗಳ ಈ ಸೇವೆಯು ಪರಿಕ್ರಮ ನಡೆಯುವಷ್ಟು ದಿನ ಅಂದರೆ ಸುಮಾರು 3 ರಿಂದ 4 ತಿಂಗಳು ನಿರಂತರವಾಗಿ ನಡೆಯುತ್ತದೆ.

ನಾವು ಮುನ್ನಡೆಯುತ್ತ ಗುಜರಾತ್ ರಾಜ್ಯದ ವಿಮಲೇಶ್ವರ ತಲುಪಿ ಅರಬಿ ಸಮುದ್ರ ಮೂಲಕ ದೋಣಿಯಲ್ಲಿ ತಟ ಪರಿವರ್ತನ ಮಾಡಿ  ಉತ್ತರ ತಟದಲ್ಲಿನ ದಾರಿಯಲ್ಲಿ, ಆಶ್ರಮ, ಹಳ್ಳಿ, ಪಟ್ಟಣಗಳನ್ನು ದಾಟಿ ಡಿಸೆಂಬರ್ 12 ರಂದು ನೇಮಾವರ ತಲುಪುವ ಹೊತ್ತಿಗೆ ತೀವ್ರ ಚಳಿ ಆರಂಭವಾಗಿತ್ತು.  ಈ 35 ದಿನಗಳಲ್ಲಿ ನಾವು ಪರಿಕ್ರಮದ ಒಟ್ಟು 3200 ಕಿ.ಮಿ. ಗಳಲ್ಲಿನ 900 ಕಿ.ಮಿ. ನಷ್ಟು ಮಾತ್ರವೆ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದೆವು.  ನಮ್ಮ ಈ ನಡಿಗೆ ಅಲ್ಪ ಅನಿಸಿದರೂ ನಿಜವಾದ ಅರ್ಥದ ತೀರ್ಥಯಾತ್ರೆಯ ಸಾರ್ಥಕ ಅನುಭವ ಬೆಟ್ಟದಷ್ಟು ಮುದ ನೀಡಿತ್ತು ಅಂತೆಯೇ ದಣಿದ ದೇಹ ನಮ್ಮನ್ನು ಎಚ್ಚರಿಸುತ್ತಿತ್ತು.  ಆದುದರಿಂದ ಮುಂದಿನ ಸುಮಾರು 2,300 ಕಿ.ಮೀ. ಯಾತ್ರೆಯನ್ನು ಕಾರಿನಲ್ಲಿ ಹೊರಟು ನೇಮಾವರದಿಂದ ಪೂರ್ವಕ್ಕೆ ಸಾಗಿ, ಅಮರಕಂಟಕದಲ್ಲಿನ ನರ್ಮದಾ ಉಗಮದಲ್ಲಿ ಪೂಜೆ ಸಲ್ಲಿಸಿ ನಂತರ ದಕ್ಷಿಣ ತಟಕ್ಕೆ ಬಂದು ಪಶ್ಚಿಮಕ್ಕೆ ಸಾಗಿ ನಾವು ಯಾತ್ರೆ ಪ್ರಾರಂಭಿಸಿದ  ಓಂಕಾರೇಶ್ವರವನ್ನು ಡಿಸೆಂಬರ್ 18 ರಂದು ತಲುಪಿದೆವು. ಓಂಕಾರೇಶ್ವರ ಜ್ಯೊತಿರ್ಲಿಂಗ ದೇವಳ ಸ್ಥಿತಗೊಂಡಿರುವ ಓಂ ಆಕಾರದ ಮಾಂಧಾತ ಪರ್ವತದ 21 ಕಿ.ಮಿ. ಪರಿಕ್ರಮವನ್ನು ಕಾಲುದಾರಿಯಲ್ಲಿ ಮಾಡಿ ತದನಂತರ ನಾವು ಈವರೆಗೆ ನಿತ್ಯ ಪೂಜಿಸಿದ ಜಲದಿಂದ  ಓಂಕಾರೇಶ್ವರನಿಗೆ ಅಭಿಷೇಕ ಮಾಡಿ ನಮ್ಮ ಸಂಕಲ್ಪವನ್ನು,  ಪರಿಕ್ರಮವನ್ನು ಪೂರ್ಣಗೊಳಿಸಿದೆವು.

ನರ್ಮದಾ ನದಿಯ ತೀರದಲ್ಲಿ ನಾವು ಹಲವಾರು ತೀರ್ಥಕ್ಷೇತ್ರಗಳನ್ನು ಹಾದು ಹೋದೆವು. ಅವುಗಳಲ್ಲಿ ಮುಖ್ಯವಾದ ಕೆಲವೊಂದು ಕ್ಷೇತ್ರಗಳು ಹೀಗಿವೆ.

ಓಂಕಾರೇಶ್ವರ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು.  ಈ ದೇವಳವು ಮಾಂಧಾತ ಪರ್ವತದ ಮೇಲೆ ಇದೆ.  ಮಾಂಧಾತ ಪರ್ವತ  ನರ್ಮದಾ ಮತ್ತು ಕಾವೇರಿ ನದಿಗಳ ಸಂಗಮದಿಂದ ಉಂಟಾದ ದ್ವೀಪ.  ನರ್ಮದಾ ನದಿಯ ದಕ್ಷಿಣ  ತೀರದಲ್ಲಿ ಓಂಕಾರೇಶ್ವರ ಪಟ್ಟಣ ಇದೆ.  ಹೆಚ್ಚಿನ ಪರಿಕ್ರಮವಾಸಿಗಳು ಓಂಕಾರೇಶ್ವರದಿಂದ ಯಾತ್ರೆ ಆರಂಭಿಸುತ್ತಾರೆ. ನರ್ಮದಾ ತೀರದ ಬೇರಾವುದೇ ಕ್ಷೇತ್ರದಿಂದಲೂ ಯಾತ್ರೆ ಕೈಗೊಳ್ಳಬಹುದು. ಪ್ರಾಚೀನ ಕಾಲದಲ್ಲಿ, ಮಳೆಗಾಲದಲ್ಲಿ ಓಂಕಾರೇಶ್ವರನ ದರ್ಶನಕ್ಕೆ ನದಿ ದಾಟಿ ಹೋಗಲು  ಆಗುತ್ತಿರಲಿಲ್ಲ. ಹೀಗಾಗಿ ಶ್ರಿ ಶಂಕರಾಚಾರ್ಯರು ಮಾಮಲೇಶ್ವರ ಎಂಬ ಒಂದು ದೇವಾಲಯವನ್ನು ನರ್ಮದೆಯ ದಕ್ಷಿಣ ತಟದ ಓಂಕಾರೇಶ್ವರ ಪಟ್ಟಣದಲ್ಲಿ ಸ್ಥಾಪಿಸಿದರು. ಓಂಕಾರೇಶ್ವರ ಮಂದಿರವು ಸ್ಥಿತವಾಗಿರುವ ಮಾಂಧಾತ ಪರ್ವತದ ಮೇಲೆ ಇತ್ತೀಚೆಗೆ ಶ್ರಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.   ಮಾಂಧಾತ ಪರ್ವತದಲ್ಲಿ ಇನ್ನೂ ಹತ್ತು ಹಲವಾರು ದೇವಳಗಳಿವೆ.

ಕಪಿಲೇಶ್ವರ ಆಶ್ರಮ – ಕಪಿಲ ಮುನಿಗಳು ತಪಸ್ಸು ಮಾಡಿದ ಕ್ಷೇತ್ರ.  ರಿವಾರ್ ಖೇಡಿ – ಮಧ್ಯ ಪ್ರದೇಶದ ಖರ್ ಗೋನ್ ಜಿಲ್ಲೆಯಲ್ಲಿನ ಈ ಹಳ್ಳಿಯಲ್ಲಿ ಮೊದಲ ಪೇಶ್ವಾ ಬಾಜಿ ರಾವ್ ರ ಸಮಾಧಿ ಇದೆ.  ಛತ್ರಪತಿ ಶಿವಾಜಿಯ ನಂತರದಲ್ಲಿ ಮರಾಠರ ಅತಿ ಬಲಿಷ್ಟ ನಾಯಕರೆಂದು ಪೇಶ್ವಾ ಬಾಜಿ ರಾವ್ ರನ್ನು ಪರಿಗಣಿಸುತ್ತಾರೆ.  ಈತ ತಾನು ಮಾಡಿದ ಸುಮಾರು 30ಕ್ಕು ಹೆಚ್ಚಿನ ಯುಧ್ಧಗಳಲ್ಲಿ ಅಜೇಯನಾಗಿ ಉಳಿದಿದ್ದ ಎಂಬುದು ನಮಗೆ ಚರಿತ್ರೆಯಿಂದ ತಿಳಿಯುತ್ತದೆ.

ಭಟ್ಯಾಣ್ ಗ್ರಾಮದ ಸಿಯಾರಾಮ್ ಬಾಬಾ ಆಶ್ರಮ. ತಮ್ಮ 14ನೆ ವಯಸ್ಸಿನಲ್ಲಿ ತಪಶ್ಚರ್ಯೆ ಆರಂಭಿಸಿದ ಬಾಬಾ ಸುತ್ತಲಿನ ಹಳ್ಳಿಗಳಲ್ಲಿ ರಾಮ ನಾಮದ ಕಂಪನ್ನು ಹರಡುತ್ತಿದ್ದಾರೆ. ಸಿಯಾರಾಮ್ ಬಾಬಾರವರು ಅಗ್ನಿ ಬಳಸದೆ ಕೈಯಲ್ಲಿನ ಹೂ ಬತ್ತಿ ಪ್ರಜ್ವಲಿಸುವಂತೆ ಮಾಡಿ ಶ್ರೀರಾಮನಿಗೆ ಆರತಿ ಎತ್ತುವುದನ್ನು ಕಂಡು ದಂಗಾದೆವು.  94ರ ಇಳಿ ವಯಸ್ಸಿನಲ್ಲೂ ಅಹರ್ನಿಶಿ ತುಲಸೀ ರಾಮಾಯಣ ಪಠಣ ಮಾಡುವ ಇವರನ್ನು ಆಂಜನೇಯನ ಅವತಾರ ಎಂದು ಭಕ್ತಾದಿಗಳು ನಂಬುತ್ತಾರೆ.

ಬಲ್-ಬಲಾ ಕುಂಡ  –  ಗುಜರಾತ್ ನ ಅಂಕಲೇಶ್ವರ್ ದಿಂದ ಭರುಚ್ ಗೆ ಸಾಗುವ ದಾರಿಯಲ್ಲಿ ಈ ಕುಂಡ ಇದೆ.  ಇಲ್ಲಿ “ನರ್ಮದೆ ಹರ” ಎಂದು ಜೋರಾಗಿ ಕೂಗಿದಾಗ ನೀರು ಬುಗ್ಗೆಯಾಗಿ ಮೇಲೇಳುತ್ತದೆ.

ವಿಮಲೇಶ್ವರ್ – ಭರುಚ್ ಜಿಲ್ಲೆಯಲ್ಲಿನ ಈ ಗ್ರಾಮ ಸಮುದ್ರ ತೀರದಲ್ಲಿದೆ. ಇಲ್ಲಿ ವಿಮಲೇಶ್ವರ್ ಮಹದೇವ ದೇವಳ ಇದೆ.  ಇಲ್ಲಿಂದ ಸಮುದ್ರದ ಮೂಲಕ ತಟ ಪರಿವರ್ತನದ ನಂತರ ನಮಗೆ ಉತ್ತರ ತಟದಲ್ಲಿ ಸಿಗುವ ಮೊದಲ ಊರು ಮೀಠಿ ತಲಾಯ್.  ಇಲ್ಲಿನ ಸಮುದ್ರ ತೀರದ ಬಾವಿಯಲ್ಲಿ ಸಿಹಿ ನೀರು ಇದ್ದು, ಇಲ್ಲಿ  ಪರಿಕ್ರಮವಾಸಿಗಳು ಪುಣ್ಯಸ್ನಾನ ಮಾಡುತ್ತಾರೆ.

ಭರುಚ್ ಪಟ್ಟಣದ ಹತ್ತಿರದಲ್ಲಿ ಝಡೇಶ್ವರ್ ನಲ್ಲಿ ನೀಲಕಂಠೇಶ್ವರ ಮಂದಿರ, ಮಂಗಲೇಶ್ವರ್ ಮಂದಿರ, ವಿಷ್ಣು ವರಾಹ ದೇವಳ.

ಕಬೀರವಾಡ ಎಂಬಲ್ಲಿ ಭಾರದ್ವಾಜ ಮುನಿ ಆಶ್ರಮ, ನಾರೇಶ್ವರ್ ಎಂಬಲ್ಲಿ  ನಾರೇಶ್ವರ ಮಂದಿರ ಇದೆ.

ಮಲ್ ಸಾರ್ ನ ಸತ್ಯನಾರಾಯಣ ದೇವಳ (ಗುಜರಾತ್) – ಇಲ್ಲಿ ಮಹಾರಾಷ್ಟ್ರದಿಂದ ಬಂದು ನೆಲೆಸಿದ ಶ್ರಿ ಡೊಂಗ್ರೆ ಮಹಾರಾಜ್ ಎಂಬ ಸಂತರು ದೇವಳ/ಆಶ್ರಮದ ಮುಖ್ಯಸ್ಥರಾಗಿದ್ದರಂತೆ, ಅವರ ಭಾಗವತ ಪಠಣ ಮತ್ತು ಪ್ರವಚನ ಈ ಭಾಗದ ಜನರಲ್ಲಿ ಬಹಳ ಪ್ರಖ್ಯಾತವಾಗಿತ್ತು ಎನ್ನುತ್ತಾರೆ.  6 ವರ್ಷಗಳಿಗೊಮ್ಮೆ ಮಳೆಗಾಲದಲ್ಲಿ ನರ್ಮದೆಯ ನೀರು ನದಿಯಿಂದ ಸುಮಾರು 70 ಅಡಿ ಎತ್ತರದಲ್ಲಿರುವ ಇಲ್ಲಿನ ಸತ್ಯನಾರಾಯಣ ಸ್ವಾಮಿಯ ವಿಗ್ರಹದ ಪಾದದ ವರೆಗು ಬರುತ್ತದಂತೆ.  ಈ ಕುರಿತು ಆಶ್ರಮದಲ್ಲಿಗೋಡೆಯ ಮೇಲೆ ಗುರುತು ಕೂಡ ಮಾಡಿದ್ದಾರೆ.  ಆಶ್ರಮದ ಸ್ವಲ್ಪ ದೂರದಲ್ಲಿ ಅಂಗಾರೇಶ್ವರ ದೇವಳವಿದೆ.  ಹಿಂದೆ ಔರಂಗಜೇಬನ ಧಾಳಿಯಾದಾಗ ಸೈನಿಕರು ದೇವಳದ ಒಳಗಡೆ ಪ್ರವೇಶಿಸದಂತೆ ದೇವಳದ ಛಾವಣಿಯಿಂದ ಬೆಂಕಿಯ ಉಂಡೆ (ಅಂಗಾರೆ) ಸುರಿಯಲಾರಂಭಿಸಿತು, ಹತಾಶನಾದ ಔರಂಗಜೇಬನ ಸೈನಿಕರು ದೇವಳದ ಹೊರ ಪಾರ್ಶ್ವದಲ್ಲಿ ಮೂರು ಬಣ್ಣಗಳನ್ನು (ಮಸೀದಿಯ ಚಿಹ್ನೆ) ಬಳಿದು ಹೋದರೆಂದು ಹೇಳುತ್ತಾರೆ.  ಮೂರು ಬಣ್ಣದ ಪಟ್ಟಿಯನ್ನು ನಾವು ದೇವಳದ ಹೊರ ಪಾರ್ಶ್ವದಲ್ಲಿ ಈಗಲೂ ನೋಡಬಹುದು. ಈ ದೇವಳದ ಹೆಸರು ಅಂಗಾರೇಶ್ವರ ಮಹದೇವ ಎಂದು.

ಅಂಬಾಲಿ ಗ್ರಾಮದಲ್ಲಿ ಮಾ ಅನುಸೂಯಾ ಆಶ್ರಮ ಇದೆ.  ಇಲ್ಲಿ ಸತಿ ಅನುಸೂಯಾ ದೇವಿ ತಪಸ್ಸು ಮಾಡಿದ್ದರೆಂದು ಪ್ರತೀತಿ.

ಕರ್ನಾಲಿಯಲ್ಲಿನ ಕುಬೇರ್ ಭಂಡಾರೆಶ್ವರ್ ಮಂದಿರ –  ರಾವಣನಿಂದ ಲಂಕೆಯನ್ನು ಕಳೆದುಕೊಂಡ ಕುಬೇರನು ಶಿವನ ಕುರಿತು ತಪಸ್ಸು ಮಾಡಿ ಐಶ್ವರ್ಯದ ಅಧಿಪತಿ ಎಂದು ವರವನ್ನು ಪಡೆದ ಸ್ಥಳ ಎನ್ನುತ್ತಾರೆ.

ಗರುಡೇಶ್ವರ ದೇವಸ್ಥಾನ.  ಇದು ದತ್ತಾವತಾರಿ ಎಂದು ಕರೆಯಲ್ಪಡುವ ಶ್ರಿ ವಾಸುದೇವಾನಂದರ (ಟೇಂಬೆ ಮಹಾರಾಜ್)  ತಪೋಭೂಮಿ.  ಇಲ್ಲಿ ಅವರ ಸಮಾಧಿಯೂ ಇದೆ.  ಇಲ್ಲಿ ನರ್ಮದಾ ತೀರದಿಂದ ನಾವು ಸರ್ದಾರ್ ಸರೋವರದಲ್ಲಿನ ಶ್ರಿ ವಲ್ಲಭಾ ಭಾಯ್ ಪಟೇಲರ ಪ್ರತಿಮೆಯ ಹಿಂಭಾಗವನ್ನು ದೂರದಿಂದ ನೋಡಬಹುದು.

ಮಾಂಡವ (ಮಾಂಡೊ) –  ವಿಂಧ್ಯಾಚಲ ಪರ್ವತ ಶ್ರೇಣಿಯಲ್ಲಿನ ಈ ಪಟ್ಟಣ 6ನೆ ಶತಮಾನದಲ್ಲಿ ಪರಮಾರ ವಂಶದ ರಾಜರ ರಾಜಧಾನಿ.  ರಾಣಿ ರೂಪ್ ಮತಿಯ ಪ್ರಾರ್ಥನೆಗೆ ಓಗೊಟ್ಟು ಮಾತೆ ನರ್ಮದೆ ಇಲ್ಲಿನ ರೇವಾ ಕುಂಡ ಎಂಬಲ್ಲಿ ಉದ್ಭವವಾಗಿದ್ದಾಳೆ.  ಮಾಂಡವದಲ್ಲಿ ಪ್ರಸಿದ್ಧ ಹನುಮಾನ್ ಮಂದಿರ ಇದೆ.

ಮಹೇಶ್ವರ್ – ನರ್ಮದಾ ತೀರದ ಮಹೇಶ್ವರ್ ಪಟ್ಟಣ ಹಿಂದೊಮ್ಮೆ ರಾಣಿ ಅಹಲ್ಯಾಬಾಯ್ ಹೋಳ್ಕರ್ ರ ರಾಜಧಾನಿ ಆಗಿತ್ತು.  ಇಲ್ಲಿ ನದಿ ತೀರದಲ್ಲಿ ಬಲು ಸುಂದರವಾದ ಕೋಟೆ ಮತ್ತು ದೇವಸ್ಥಾನಗಳಿವೆ.  ಇಲ್ಲಿನ  ಕೈಮಗ್ಗದ ಸೀರೆ ಮತ್ತಿತರ ಜವಳಿ ಉದ್ಯಮ ಬಹಳ ಹೆಸರುವಾಸಿ. ಇಲ್ಲಿ ರಾಣಿ ಅಹಲ್ಯಾಬಾಯ್ ಹೋಳ್ಕರ್ ವಾಸಿಸುತ್ತಿದ್ದ  ಅರಮನೆ ಮತ್ತು ಆಕೆಯ ಬಗೆಗಿನ ವಸ್ತು ಸಂಗ್ರಹಾಲಯ ಸಹ ಇದೆ.

ಮಂಡಲೇಶ್ವರ್ – ಇದು ಮಂಡನಮಿಶ್ರರ ಹುಟ್ಟೂರು.  ಇಲ್ಲಿ ಮಂಡಲೇಶ್ವರ ದೇವಳ ಮತ್ತು ಗುಪ್ತೇಶ್ವರ ದೇವಳ ಇದೆ.  ಇದು ಶ್ರಿ ಶಂಕರಾಚಾರ್ಯರು ಮತ್ತು ಮಂಡನಮಿಶ್ರರ ನಡುವೆ ಶಾಸ್ತ್ರ-ಸಿದ್ಧಾಂತದಲ್ಲಿ ವಾದ ನಡೆದ ಸ್ಥಳ ಎಂದು ಪ್ರತೀತಿ.

ವಿಂಧ್ಯಾಚಲದ ತಪ್ಪಲಲ್ಲಿ ಮಹರ್ಷಿ ವಾಲ್ಮೀಕಿ ಆಶ್ರಮ, ಚ್ಯವನಾಶ್ರಮ, ಸೀತಾವನ ಮತ್ತು ಜಯಂತಿ ಮಾತಾ ಮಂದಿರ ಎಲ್ಲವು ದಟ್ಟವಾದ ಕಾಡಿನಲ್ಲಿ ಸ್ಥಿತವಾಗಿದೆ.  ಇಲ್ಲಿ ಕಾಡು ಪ್ರಾಣಿಗಳ ಭಯ ಇರುವುದರಿಂದ ಈ ಮೂರು ಸ್ಥಾನಗಳ ನಡುವೆ ಸುಮಾರು 70 ಕಿ.ಮೀ. ನಷ್ಟು ದೂರವನ್ನು ನಾವು ಬಹಳ ಜಾಗೃತೆಯಾಗಿ, 10-15 ಜನರ ತಂಡದಲ್ಲಿ ದಿನದ ಬೆಳಕಿನಲ್ಲೇ ಸಾಗಬೇಕು.  ಚ್ಯವನಾಶ್ರಮದಲ್ಲಿನ ಕುಂಡದಲ್ಲಿನ ನೀರು ಕಣ್ಣಿನ ವ್ಯಾಧಿ/ತೊಂದರೆಗಳಿಗೆ ಒಳ್ಳೆಯ ಔಷಧ ಎನ್ನುತ್ತಾರೆ.  ಸೀತಾವನದ ವಾಲ್ಲ್ಮೀಕಿ ಆಶ್ರಮದಲ್ಲಿ ಲವ-ಕುಶರ  ಜನ್ಮ ಸ್ಥಾನವನ್ನು ನೋಡಬಹುದು.

ನೇಮಾವರ – ಉತ್ತರ ತಟದಲ್ಲಿನ ನೇಮಾವರ ನರ್ಮದಾ ಮಾತೆಯ ನಾಭಿ ಪ್ರದೇಶವೆಂದು ಭಾವನೆ.  ಇಲ್ಲಿನ ತೀರದಲ್ಲಿ ಸಿದ್ಧೀಶ್ವರ್ ದೇವಳ ಮತ್ತು ಇನ್ನೊಂದು ತೀರದಲ್ಲಿ ರಿದ್ಧೀಶ್ವರ್ ದೇವಳವಿದೆ.  ಸಿದ್ಧೀಶ್ವರ ದೇವಳವು ನಾಗರ ಶೈಲಿಯಲ್ಲಿದ್ದು ಸುಂದರವಾದ ವಾಸ್ತುಶಿಲ್ಪ ಕೆತ್ತನೆ ಕಾಣಬಹುದು.

ಅಮರಕಂಟಕ – ಇಲ್ಲಿನ ಬೆಟ್ಟ-ಕಾಡಿನಲ್ಲಿ ನರ್ಮದಾ, ಜ್ವಾಲಾ ಮತ್ತು ಸೋನಭದ್ರ ನದಿಗಳು ಉಗಮವಾಗುತ್ತವೆ.  ಅಮರಕಂಟಕದಲ್ಲಿ ಅಮರೇಶ್ವರ, ಜ್ವಾಲೇಶ್ವರ, ಅನ್ನಪೂರ್ಣ, ಶ್ರೀ ಯಂತ್ರ ಮಹಾ ಮೇರು ಮಂದಿರ ( ಶ್ರೀಚಕ್ರ ಮಂದಿರ) ಮುಂತಾದ ದೇವಾಲಯಗಳಿವೆ.  ಇದಲ್ಲದೆ ದೂರ್ವಾಸ ಮುನಿಗಳು ತಪಸ್ಸು ಮಾಡಿದ ಗುಹೆ, ಪಕ್ಕದಲ್ಲಿ ದುರ್-ಧಾರಾ ಜಲಧಾರೆ, ಕಪಿಲ ಮುನಿಗಳು ತಪಸ್ಸು ಮಾಡಿದ ಗುಹೆ ಮತ್ತು ಕಪಿಲ ಧಾರಾ ಸಹ ಇದೆ.

ಜಬಲ್ಪುರದ ಭೇಡಾ ಘಾಟ್ –  ಇಲ್ಲಿ ನದಿಯಲ್ಲಿ ಅಮೃತ ಶಿಲೆ ದೊರೆಯುತ್ತದೆ.  ಜಲಪಾತಗಳು ಕಣ್ಮನ ಸೆಳೆಯುತ್ತವೆ.

ನರ್ಮದಾಪುರ (ಹೊಶಂಗಾಬಾದ್) –  ಇಲ್ಲಿ ಏಕಮುಖಿ-ಷಡ್ಭುಜ ದತ್ತನ ದೇವಳವಿದೆ.

ಸಲ್ಕನ್ ಪುರ – ಇಲ್ಲಿ ಗುಡ್ಡದ ಮೇಲೆ ವಿಜಾಸನ (ದುರ್ಗಾ ಬಿಜಾಸನ್) ಮಾತಾ ದೇವಳವಿದೆ.  ರೋಪ್ ವೇ ಮೂಲಕ ಇಲ್ಲಿಗೆ ಹೋಗಬಹುದು.

ಡಿಸೆಂಬರ್ 20 ರಂದು ಇಂದೋರ್ ನಿಂದ ಬೆಂಗಳೂರು ಕಡೆಗೆ ಮರಳುವಾಗ ಧನ್ಯತಾ ಭಾವವೊಂದು ಮನಸ್ಸಿನಲ್ಲೆ ಹುಟ್ಟಿಕೊಂಡು,  ನವೀನ ಜೀವನ ದರ್ಶನ ಪಡೆದುಕೊಂಡಂತೆ ಭಾಸವಾಗುತ್ತಿತ್ತು. ನಮ್ಮ ಪರಿಕ್ರಮದಲ್ಲಿನ 45 ದಿನಗಳಲ್ಲಿ ಕೇವಲ 5-6 ದಿನ ಮಾತ್ರ ನಮಗೆ ಅನ್ನ ದೊರಕಿತ್ತು, ಇನ್ನುಳಿದ ದಿನಗಳಲ್ಲಿ ನಮ್ಮ ನಿತ್ಯದ ಆಹಾರವಲ್ಲದ ದಪ್ಪಗಿನ ರೋಟಿ ಮತ್ತು ದಾಲ್ ಪ್ರಸಾದವಾಗಿ ದೊರೆಯುತ್ತಿತ್ತು.  ನಿತ್ಯ ನದಿ ಸ್ನಾನ, ಆಶ್ರಮದಲ್ಲಿನ ಭೋಜನ, ದಾರಿಯಲ್ಲಿ ಭಕ್ತ ಜನರು ನೀಡಿದ ಚಹಾ-ಬಿಸ್ಕತ್ತು ಇನ್ನಿತರ ಪದಾರ್ಥಗಳಿಂದ ನಮಗೆ ಆರೋಗ್ಯದಲ್ಲಿ ಯಾವುದೇ ಏರು-ಪೇರು ಉಂಟಾಗದಿದ್ದುದು ನರ್ಮದಾ ಮಾತೆಯ ಕೃಪೆಯೇ ಸರಿ.  ಅಲ್ಲಿ ಭಕ್ತಾದಿಗಳು ಪರಿಕ್ರಮವಾಸಿಗಳನ್ನು ನರ್ಮದೆಯ ಮಕ್ಕಳಂತೆ ಕಂಡರೆ, ನಮಗೆ ಆ ಭಕ್ತರು ದೇವರಂತೆ ಭಾಸವಾಗುತ್ತಿದ್ದರು. ಪರಿಕ್ರಮದಲ್ಲಿ ನಾವು ಪಡೆದ ಅಪೂರ್ವ ಅನುಭವಗಳು, ಜನರ ಶ್ರದ್ಧಾ-ಭಕ್ತಿ, ಜೀವನ ಸಂತೃಪ್ತಿ ಮತ್ತು ತಾನು ಇನ್ನೊಬ್ಬರಿಗೆ ಕಿಂಚಿತ್ತಾದರು ಸೇವೆ ಮಾಡಬೇಕು ಎನ್ನುವ ಭಕ್ತ ಜನರ ತುಡಿತ ಮನೋಭಾವ, ಹೃದಯ ಶ್ರೀಮಂತಿಕೆ,  ಎಲ್ಲವೂ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿತು.

ನಮ್ಮ ಸನಾತನ ಸಂಸ್ಕೃತಿ, ಪರಂಪರೆ, ತನ್ಮೂಲಕ ಮೂಡಿದ ವಿವಿಧ ನಂಬಿಕೆ-ಆಚರಣೆಗಳು ಎಲ್ಲದಕ್ಕು ಶಿರಸಾ ವಂದಿಸುತ್ತ, ನರ್ಮದಾ ಮಾತೆ ನಮ್ಮೆಲ್ಲರಿಗೆ ಭಕ್ತಿ ಮತ್ತು ಶ್ರದ್ಧೆ ನೀಡಲೆಂದು ಪ್ರಾರ್ಥನೆ.

ನರ್ಮದೆ ಹರ

ಸಪ್ಟೆಂಬರ್ 2025 ರ ಭಾರ್ಗವ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನದ ಪ್ರಥಮಾರ್ಧ ಭಾಗದಿಂದ ಪ್ರೇರಿತರಾಗಿ ನಮ್ಮ ಕುಲಬಾಂಧವರಾದ ಶ್ರೀ ಉಮಾನಾಥ ಶಾಸ್ತ್ರೀ ಡೋಂಗ್ರೆ ಇವರು ನರ್ಮದಾ ಪರಿಕ್ರಮವನ್ನು ಕೈಗೊಂಡು ಈಗಾಗಲೇ ಸುಮಾರು 2800 ಕಿ. ಮೀ ನಡಿಗೆಯನ್ನು ಪೂರೈಸಿರುತ್ತಾರೆ. ಶ್ರೀಯುತರು ದಶಂಬರ್ 2025 ರ ಹೊತ್ತಿಗೆ ತಮ್ಮ ಯಾತ್ರೆಯನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ. (ಶ್ರೀಯುತರು ಬೆಂಗಳೂರು ನಗರ ಸಾರಿಗೆಯ ನಿವೃತ್ತ ಉದ್ಯೋಗಿ). ಇವರಿಗೆ ನರ್ಮದಾ ಮಾತೆಯ ಪೂರ್ಣ ಅನುಗ್ರಹ ದೊರೆಯಲಿ. 🙏

Events/Announcements

Advertisement

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 7 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 49 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು

Post Views: 48 ಮುಂಡಾಜೆ ವನದುರ್ಗ ದೇವಸ್ಥಾನದಲ್ಲಿ ಆಪದ್ಭಾಂಧವ ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಅಭಿನಂದನೆಗಳು🌹

ಸಂತೃಪ್ತಿ ಫಡಕೆ – ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ

Post Views: 43 ಸಂತೃಪ್ತಿ ಫಡಕೆ ಪೋಸ್ಟ್ ಮಾಸ್ಟರ್ ಕೊಯ್ಯುರು ಬೆಳ್ತಂಗಡಿ ಅವರಿಗೆ ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ. ಅಭಿನಂದನೆಗಳು

ಶ್ರೀ ಮುಂಡಾಜೆ ಅನಂತ ತಾಮನ್ಕರ್ ಮೈಸೂರು – ಪುಸ್ತಕ ಬಿಡುಗಡೆ ಸಮಾರಂಭ

Post Views: 53 ಮೈಸೂರಿನಲ್ಲಿ ಶ್ರೀ ಮುಂಡಾಜೆ ಅನಂತ ತಾಮನ್ಕರ್ ಅವರ ಎರಡು ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು

ಸ್ವಾಗತ – ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆ

Post Views: 127 ಮುಂಡಾಜೆ ಭಿಡೆ ಮನೆಯ, ಪ್ರಸ್ತುತ ಅಮೆರಿಕದ ಫ್ಲೋರಿಡಾ ಯೂನಿವರ್ಸಿಟಿಯಲ್ಲಿ “ಮಕ್ಕಳಲ್ಲಿ ಗುರುತಿಸಲಾಗದ ಖಾಯಿಲೆಗಳ” ವಿಭಾಗದ ಮುಖ್ಯಸ್ಥರಾಗಿರುವ ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆಯವರು ಹುಟ್ಟೂರಿಗೆ ಆಗಮಿಸಿದ ಸಂದರ್ಭ ಮುಂಡಾಜೆಯ...

First Rank with Gold Medal in M.Com at the 44th Convocation of Mangalore University ✨-Srujana Chiplunkar

Post Views: 97 Srujana Chiplunkar, Daughter of Sudarshan Chiplunkar and Suvarna Chiplunkar, Phajinadka, secured First Rank with Gold Medal in M.Com. Let’s hear...

🏆 INTERNATIONAL ACHIEVEMENT: PROF. SOURABH R. CHIPLOONKAR

Post Views: 69 🏆 INTERNATIONAL ACHIEVEMENT: PROF. SOURABH R. CHIPLOONKAR Thrilled to announce a major competitive milestone from the 2nd Grand RCC FIDE...

ವಸಂತ ವೇದ ಪಾಠ ಶಿಬಿರ ಮತ್ತು ಹೆಣ್ಣು ಮಕ್ಕಳಿಗೆ ಸಂಸ್ಕಾರ ಶಿಕ್ಷಣ

Post Views: 79 *ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ* *ಎಡಪಾಡಿ ಮಾಳ** *ವಸಂತ ವೇದ ಪಾಠ ಶಿಬಿರ ಮತ್ತು ಹೆಣ್ಣು ಮಕ್ಕಳಿಗೆ ಸಂಸ್ಕಾರ ಶಿಕ್ಷಣ…* *ಆತ್ಮೀಯರೇ,* ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ...

ಚಿತ್ಪಾವನ ಮಹಿಳಾ ಘಟಕ ಉದ್ಘಾಟನೆ

Post Views: 131 ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಉದ್ಘಾಟನಾ ಸಮಾ ರಂಭ ಮಂಗಳವಾರ ಮುಂಡಾಜೆಯ ಶ್ರೀ ಪರಶುರಾಮ ದೇವಸ್ಥಾನದ ಸಭಾ ಭವನದಲ್ಲಿ ಜರುಗಿತು. ನಿಡ್ಲೆಯ ಉದ್ಯಮಿ...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 77 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 140 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 209 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 178 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 254 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 313 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 183 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 172 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 217 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 124 Courtesy: Scholarspace with Anubhav

Watch our latest podcasts