Saturday , 25 July 2026

ಮಾತ್ಸರ್ಯ (ಸತ್ಯ ಕಥೆ) – ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

********************
(ಸತ್ಯ ಘಟನೆಯನ್ನಾಧರಿಸಿದ ಕಥೆ. ಹೆಸರು ಬದಲಾಯಿಸಲಾಗಿದೆ)
ಸುಮನ ಬಹಳ ಚುರುಕಾದ ಹುಡುಗಿ. ಒಂದನೆ ತರಗತಿಯಿಂದಲೂ ತರಗತಿಯಲ್ಲಿ ಶಿಕ್ಷಕರಿಂದ ತೊಡಗಿ ಎಲ್ಲ ವಿದ್ಯಾರ್ಥಿಗಳೂ ಮೆಚ್ಚುವಂಥ ಗುಣವುಳ್ಳ ಜಾಣೆ ಹಾಗೂ ಮುಗ್ಧೆ. ಪಾಠಗಳಲ್ಲಾಗಲಿ, ಪದ್ಯ ಹಾಡುವುದರಲ್ಲಾಗಲಿ, ಆಟೋಟಗಳಲ್ಲಾಗಲಿ, ಮಾತಿನಲ್ಲಾಗಲಿ ತನ್ನದೆ ಆದಂಥ ಛಾಪನ್ನು ಮೂಡಿಸಿದ್ದ ಸುಮನ ತಂದೆ ತಾಯಿಯ ಪ್ರೀತಿಯಂತೆ ಎಲ್ಲರ ಪ್ರೀತಿಗೊಳಗಾದವಳು. ಶಾಲೆಗೂ ಮನೆಗೂ ಅರ್ಧ ಮೈಲಿನಷ್ಟು ಅಂತರವಿದ್ದುದರಿಂದ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಬರುವಲ್ಲಿವರೆಗೆ ಬುತ್ತಿಯನ್ನೇ ಕೊಂಡು ಹೋಗುತ್ತಿದ್ದಳು. ಅಂತೆಯೇ ನೆರೆಕರೆಯ ಮಕ್ಕಳೊಡನೆ ಶಾಲೆಗೆ ಹೋಗುತ್ತಿದ್ದುದರಿಂದ ತಂದೆ ತಾಯಿಯರೂ ನಿಶ್ಚಿಂತೆಯಲ್ಲಿದ್ದರು. ಅಂತೆಯೇ ಸುಮನಾ ಒಂದು ಎರಡು ತರಗತಿ ಮುಗಿಸಿ ಮೂರನೆ ತರಗತಿಗೆ ಹೋಗುವಾಗ ತಂಗಿಯಾದಂಥ ಭಾವನಾ ಕೂಡ ಅಕ್ಕನ ಜತೆಗೆ ಒಂದನೆ ತರಗತಿಗೆ ಹೋಗಲು ಪ್ರಾರಂಭಿಸಿದಳು. ಶುರು ಶುರುವಿಗೆ ಭಾವನಾ ಮತ್ತು ಸುಮನಳ ಜತೆ ಅಮ್ಮ ವಿಶಾಲಾಕ್ಷಿ ಹೋಗುತ್ತಿದ್ದರೆ ಕ್ರಮೇಣ ಅಭ್ಯಾಸವಾದ ಮೇಲೆ ವಿಶಾಲಾಕ್ಷಮ್ಮ ಜತೆಗೆ ಹೋಗುವುದನ್ನು ನಿಲ್ಲಿಸಿದ್ದರು. ಈ ನಡುವೆ ಸುಮನಾಳಿಗೆ ಒಂದನೆ ಮತ್ತು ಎರಡನೆ ತರಗತಿಗಳಲ್ಲಿ ಆದಂಥ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆವ ಸ್ಪರ್ಧೆಗಳಲ್ಲಿ ಕೂಡ ಹಲವಾರು ಬಹುಮಾನಗಳೂ ದೊರಕಿದ್ದವು. ಮುಂದೆ ತಂಗಿಯೂ ಅಕ್ಕನಿಗೆ ಸರಿ ಸಮನಾಗಿ ಬರಬಹುದೆಂಬ ಭರವಸೆ ಶಿಕ್ಷಕರಿಗೂ ಹೆತ್ತವರಿಗೂ ಇತ್ತು. ಕಾರಣ ಅಕ್ಕನಂತೆ ತಂಗಿ ಕೂಡ ಬಹಳ ಜಾಣೆಯಾಗಿದ್ದಳು. ಅಂತು ಒಂದು ಸುಖಾನುಭವದಲ್ಲಿ ದಿನಗಳುರುಳುತ್ತಿದ್ದವು.

ಆದರೆ ಮೂರನೆ ತರಗತಿಗೆ ಹೋಗುತ್ತಿದ್ದ ಸುಮನಾ ಹಿಂದಿನಂತೆ ಲವಲವಿಕೆಯಿಂದ ಇಲ್ಲದಿರುವುದು ವಿಶಾಲಾಕ್ಷಮ್ಮನಿಗೆ ತಡವಾಗಿ ಅನುಭವವಾಗತೊಡಗಿತು. ಶಾಲೆಗೆ ಹೋಗುವಾಗ ಅಥವಾ ಶಾಲೆಯಿಂದ ವಾಪಸು ಬಂದ ಮೇಲೆ ಮಗಳು ಏನೋ ಒಂದು ವ್ಯಥೆಯಲ್ಲಿರುವಂತೆ ಕಂಡಾಗ ವಿಶಾಲಾಕ್ಷಮ್ಮ ನಿಜವಾಗಿಯೂ ಗಾಬರಿಯಾಗತೊಡಗಿದರು. ಅಂತೆಯೆ ಒಂದೊಂದು ದಿವಸ ಸುಮನಾ ಶಾಲೆಯಿಂದ ಬರುವ ವೇಳೆ ಮೈ ಕೈ ಬಿಸಿಯಾಗಿ ಜ್ವರದ ಅನುಭವವೂ ಆಗುತ್ತಿತ್ತು. ಹಾಗೆಯೆ ಸುಮನಾಳನ್ನು ವಿಚಾರಿಸಿದಾಗ ಏನೂ ಗೊತ್ತಾಗಲಿಲ್ಲ. ಆದರೆ ಆಕೆಯೊಳಗೆ ಏನೊ ಒಂದು ಅಸಹಜತೆ ಉಂಟಾಗಿದೆ ಎಂದು ತಾಯ ಕರುಳಿಗೆ ಗೊತ್ತಾಗಿತ್ತು. ಆಕೆ ತಂದೆ ವಿಶ್ವನಾಥ ರಾಯರಿಗೂ ಈ ವಿಷಯ ತಿಳಿಸಿದಾಗ ಅವರು ಕೂಡ ಈ ಸೂಕ್ಷ್ಮತೆಯನ್ನು ಮನಗಂಡು ಯಾವುದಕ್ಕೂ ಇರಲಿ ನಾವೊಂದು ಸಲ ವೈದ್ಯರಲ್ಲಿ ತೋರಿಸೋಣವೆಂದುಕೊಂಡು ಮಗಳನ್ನು ವೈದ್ಯರಲ್ಲಿ ಕರಕೊಂಡು ಹೋದರು. ವೈದ್ಯರು ಎಲ್ಲ ಪರೀಕ್ಷೆಗಳನ್ನು ಮಾಡಿ ಮಗುವಿಗೆ ಶರೀರದಲ್ಲಿ ಯಾವ ಕಾಯಿಲೆಯೂ ಇಲ್ಲ. ಮನಸ್ಸಿಗೆ ಏನಾದರು ಹೆದರಿಕೆ ಆದರೆ ಈ ರೀತಿಯಾಗಬಹುದು. ಆದ್ದರಿಂದ ಆಕೆಗೆ ಶಾಲೆಯಲ್ಲಿ ಶಿಕ್ಷಕರಿಂದ ಅಥವಾ ವಿದ್ಯಾರ್ಥಿಗಳಿಂದ ಏನಾದರು ತೊಂದರೆ ಆಗಿದೆಯೇ ಎಂದು ವಿಚಾರಿಸಿ. ಕ್ರಮೇಣ ಸರಿ ಹೋಗಬಹುದು ಎಂದು ಭರವಸೆ ಕೊಟ್ಟು ಔಷಧಿಗಳಿಲ್ಲದೆ ಮಗುವನ್ನು ವಾಪಸು ಕಳುಹಿಸಿದರು. ಅದೇರೀತಿ ವಿಶ್ವನಾಥ ರಾಯರು ಮತ್ತು ವಿಶಾಲಾಕ್ಷಮ್ಮನವರು ಮಗುವನ್ನು ನಿಧಾನವಾಗಿ ವಿಚಾರಿಸಿದರೂ ಯಾವ ಕಾರಣಗಳೂ ಗೊತ್ತಾಗದ್ದರಿಂದ ಕಾಲಕ್ಕೆ ಕಾಯೋಣವೆಂದುಕೊಂಡು ಸುಮ್ಮನಾದರು. ಆದರೆ ದಿನೇ ದಿನೇ ಸುಮನಾಳ ಮಾನಸಿಕ ಸ್ಥಿತಿ ಬಿಗಡಾಯಿಸುತ್ತಿತ್ತು ಮಾತ್ರವಲ್ಲ ಸಾಧಾರಣ ಮಧ್ಯಾಹ್ನ ನಂತರ ನಾಲ್ಕು ಗಂಟೆಯ ಆಸುಪಾಸು ಸಣ್ಣಗೆ ಮೈ ನಡುಕ ಉಂಟಾಗಿ ಅಲ್ಪ ಪ್ರಮಾಣದಲ್ಲಿ ಜ್ವರವೂ ಬಂದು ಮುಂದೆ ಒಂದರ್ಧ ಗಂಟೆಯಲ್ಲಿ ಬಿಡುತ್ತಿತ್ತು. ವೈದ್ಯರಿಗೆ ಗೊತ್ತಾಗದ ವ್ಯಾಧಿ ಯಾವುದಿರಬಹುದು ಎಂದೆ ತಿಳಿಯದಾದಾಗ ಅಂತೆಯೇ ಮಗಳು ದಿನದಿಂದ ದಿನಕ್ಕೆ ಮಂಕಾಗತೊಡಗಿದಾಗ ದಂಪತಿಗಳು ವ್ಯಥೆಗೊಳಗಾದದ್ದಂತು ಸತ್ಯ.

Advertisement:

ವೈದ್ಯರೊಡನೆ ಭೇಟಿ ನಿಷ್ಫಲವಾದಾಗ ವಿಶ್ವನಾಥ ರಾಯರಿಗೆ ಮುಂದೇನು ಮಾಡಬೇಕೆಂಬುದೇ ತಿಳಿಯಲಿಲ್ಲ. ಸುಮ್ಮನೆ ಕೂರುವಂತಿಲ್ಲ ಪರಿಹಾರ ಕಾಣುವುದಿಲ್ಲ. ಏನೇ ಇರಲಿ ಎಂದು ವಿಶ್ವನಾಥ ರಾಯರು ನೇರ ಶಾಲೆಗೆ ಹೋಗಿ ಶಿಕ್ಷಕರಲ್ಲಿ ತನ್ನ ಮಗಳ ಸಮಸ್ಯೆಯನ್ನು ಹೇಳಿಕೊಂಡರು. ಶಿಕ್ಷಕರು ಕೂಡ ಸುಮನಾಳ ಖಿನ್ನತೆ ಬಗ್ಗೆ ರಾಯರಿಗೆ ಹೇಳಿದರೇ ವಿನಹ ಸಮಸ್ಯೆ ಏನೆಂದು ಶಿಕ್ಷಕರಿಗೂ ತಿಳಿಯಲಿಲ್ಲ, ರಾಯರಿಗೂ ತಿಳಿಯಲಿಲ್ಲ. ಆದರೆ ಶಿಕ್ಷಕರು ರಾಯರಿಗೆ ಸುಮನಾಳನ್ನು ಮಂಗಳೂರಿನ ಮನೋವೈದ್ಯರಲ್ಲಿ ಕರಕೊಂಡು ಹೋದರೆ ಒಳ್ಳೆಯದು ಎಂದು ಸಲಹೆ ಕೊಟ್ಟರು. ಆದರೆ ರಾಯರ ಮನಸ್ಸು ಮಗಳಿಗೆ ಮನೋವ್ಯಾಧಿ ಇದೆ ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಗೆಂದು ಸುಮ್ಮನೆ ಕೂರಲುಂಟೆ?
ಇತ್ತ ವಿಶಾಲಾಕ್ಷಮ್ಮನವರು ಕೂಡ ಮಗಳ ಬಗ್ಗೆ ಯೋಚನೆ ಮಾಡತ್ತಿದ್ದರೂ ಯಾವುದೇ ನಿರ್ಧಾರಕ್ಕೆ ಬಾರದಾದರು. ಅಂತೆಯೇ ಒಂದು ದಿನ ದಂಪತಿಗಳು ಇದರ ಬಗ್ಗೆ ಚರ್ಚೆ ನಡೆಸಿ ಮನೋವೈದ್ಯರಲ್ಲಿಗೆ ಕರಕೊಂಡು ಹೋಗುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದರು. ಮನಸ್ಸು ಕೆಟ್ಟರೆ ದೇಹಕ್ಕೆ ಬಾಧೆ ಕೊಡುವಂತೆ ಗಂಡ ಹೆಂಡಿರ ಮನಸ್ಥಿತಿ ಇದೇ ರೀತಿ ಮುಂದುವರೆದರೆ ಮಗುವಿನ ಜತೆಗೆ ತಾವು ಕೂಡ ಆರೋಗ್ಯವನ್ನು ಕಳಕೊಳ್ಳಬೇಕಾಗುತ್ತದೆ ಎಂಬ ಅರಿವು ಇಬ್ಬರಿಗೂ ಇದ್ದುದರಿಂದ ಮಗುವನ್ನು ಕರಕೊಂಡು ಮಂಗಳೂರಿನ ಮನೋವೈದ್ಯರಲ್ಲಿ ತೋರಿಸಲು ಹೋದರು. ಅಲ್ಲಿ ವೈದ್ಯರು ತಪಾಸಣೆ ಮಾಡಿ ಮಗುವಲ್ಲಿ ಬಹಳಷ್ಟು ಮಾತಾಡಿ ಒಂದು ನಿರ್ಧಾರಕ್ಕೆ ಬಂದರು. ಅಂತೆಯೇ ರಾಯರಲ್ಲಿ ‘ನೋಡಿ ರಾಯರೆ ಮಗುವಿಗೆ ಮನಸ್ಸಿಗೆ ಏನೋ ಆಘಾತವಾಗಿದೆ. ಹಾಗೆಂದು ಇದು ಗುಣವಾಗದ ವ್ಯಾಧಿಯಲ್ಲ. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಏನಾದರೊಂದು ಅಹಿತಕರ ಘಟನೆ ನಿತ್ಯವೊ ಅಥವಾ ಆಗಾಗ್ಗೆ ಘಟಿಸುತ್ತಿರುತ್ತದೆ ಅದರ ಪರಿಣಾಮ ಮಗುವಿನ ಮನಸ್ಸಿಗೆ ಭೀತಿಯನ್ನು ತರಿಸಿದೆ. ಸ್ವಲ್ಪ ದಿನ ಮಗುವಿನ ಚಲನ ವಲನಗಳ ಮೇಲೆ ನಿಗಾ ಇಡಿ. ಮತ್ತು ಇದು ಮಗುವಿಗೆ ಗೊತ್ತಾಗದಂತಿರಲಿ. ನೋಡೋಣ ಮುಂದೆ ವ್ಯತ್ಯಾಸ ಅಥವಾ ಕಾರಣ ತಿಳಿದರೆ ಮತ್ತೊಮ್ಮೆ ನಮ್ಮನ್ನು ಭೇಟಿಯಾಗಿ. ಬೇರೆ ಬಹಳಷ್ಟು ವಿಧಾನದ ಚಿಕಿತ್ಸೆಗಳಿವೆ. ಆದರೆ ನೀವು ಖಿನ್ನತೆಗೆ ಒಳಗಾಗಬೇಡಿ. ಇಂಥ ಹಲವಾರು ಅನುಭವಗಳು ನಮಗಿರುವುದರಿಂದ ಇದು ಗುಣವಾಗುವಂಥ ವ್ಯಾಧಿಯೇ ಆಗಿದೆ. ಯಾವುದಕ್ಕೂ ಒಂದು ವಾರದಲ್ಲಿ ಮತ್ತೊಮ್ಮೆ ಭೇಟಿಯಾಗಿ’ ಎಂದು ವೈದ್ಯರು ಹೇಳಿದಾಗ ದಂಪತಿಗಳು ಮಗುವನ್ನು ಕರಕೊಂಡು ಮನೆಗೆ ಬಂದರು.

ಒಂದು ದಿನ ಶನಿವಾರದಂದು ಮಧ್ಯಾಹ್ನ ನಂತರ ಸುಮನಾ ಅಮ್ಮ, ತಂಗಿಯೊಡನೆ ಮನೆಯಲ್ಲಿ ಆಡಿಕೊಂಡಿದ್ದಳು. ಸರಿಯಾಗಿ ನಾಲ್ಕು ಗಂಟೆಯ ಹೊತ್ತು ಹಟಾತ್ತನೆ ಕೈ ಕಾಲು, ಶರೀರ ಎಲ್ಲವೂ ಒಂದೆರಡು ಸೆಕೆಂಡಿನಷ್ಟು ಹೊತ್ತು ಕಂಪಿಸಿದ್ದನ್ನು ತಂಗಿಯೂ, ವಿಶಾಲಾಕ್ಷಿಯೂ ಗಮನಿಸಿದರು. ಕೂಡಲೆ ವಿಶಾಲಾಕ್ಷಮ್ಮ ಮಗಳನ್ನು ಹತ್ತಿರಕ್ಕೆ ಕರಕೊಂಡು ‘ಏನಾಯಿತು ಮಗಳೆ ಯಾಕೆ ಮೈ ನಡುಗಿತು’ ಎಂದು ವಿಚಾರಿಸಿದರು. ಅದಕ್ಕೆ ಸುಮನಾ ‘ಇಲ್ಲಮ್ಮ ನನಗೆ ಯಾವಾಗಲು ಹೀಗೆ ಆಗುತ್ತದೆ’ ಎಂದಾಗ ವಿಶಾಲಾಕ್ಷಮ್ಮನಿಗೆ ಸಮಸ್ಯೆ ಇಲ್ಲಿಯೇ ಇದೆ ಎಂದು ಗೊತ್ತಾದರೂ ಅದನ್ನು ಹುಡುಕುವುದು ಹೇಗೆಂದು ತಿಳಿಯಲಿಲ್ಲ. ನಿತ್ಯದಂತೆ ಒಂದಷ್ಟು ಹೊತ್ತು ಮೈಯೂ ಬಿಸಿಯಾಗಿ ನಿಧಾನವಾಗಿ ಸುಮನಾ ಸಹಜತೆಯೆಡೆಗೆ ಬಂದಳು. ಆದರೆ ಇದು ಕ್ಷಣಿಕವಷ್ಟೆ ನಾಳೆ ಪುನಹ ಇದರ ಪುನರಾವರ್ತನೆ ಆಗುತ್ತದೆ. ವಿಶಾಲಾಕ್ಷಿ ಮತ್ತೊಮ್ಮೆ ಗಂಡನೊಡನೆ ನಡೆದ ಘಟನೆಯನ್ನು ಹೇಳಿದಾಗ ವಿಶ್ವನಾಥನ ರಾಯರಿಗೆ ಏನೋ ಒಂದು ಯೋಚನೆಯು ಹೊಳೆಯಿತು. ಇರಲಿ ನಾಳೆ ನೋಡೋಣ ಎಂದು ಕೊಂಡು ಅವರ ಕೆಲಸದಲ್ಲಿ ತೊಡಗಿಸಿಕೊಂಡರು. ತಿಳಿದೊ ತಿಳಿಯದೆಯೊ ಸುಮನಾಳಿಗೆ ಈ ನಡುಕ ಸರಿಯಾಗಿ ನಾಲ್ಕು ಗಂಟೆಗೆ ದಿನಾಲೂ ಉಂಟಾಗುತ್ತದೆ ಎಂದರಿತಂಥ ರಾಯರು ಮರು ದಿವಸದ ನಾಲ್ಕು ಗಂಟೆಗೆ ಮುಂಚಿತವಾಗಿ ಅಂದರೆ ಮೂರುವರೆ ಗಂಟೆಗೆ ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಬರುವಂಥ ನಾಲ್ಕು ಗಂಟೆಯ ಗಡುವನ್ನು ಅವಳಿಗೆ ತಿಳಿಯದಂತೆ ವರ್ತಿಸಬೇಕು ಎಂದು ನಿರ್ಧರಿಸಿ ಒಂದು ಸುಂದರವಾದ ರಾಮಾಯಣದ ಕಥೆಯನ್ನು ಹೇಳಲು ಪ್ರಾರಂಭಿಸಿದರು. ಪೂರ್ವ ನಿರ್ಧಾರದಂತೆ ವಿಶಾಲಾಕ್ಷಮ್ಮನವರು ಕೂಡ ಕಥೆ ಕೇಳಲು ಭಾವನಾಳ ಜತೆ ಕೂತಿದ್ದರು. ಕಥೆಯನ್ನು ಹೇಳುವ ಕಲೆಯಲ್ಲಿ ಪಳಗಿದ್ದಂಥ ರಾಯರು ಹೇಳುತ್ತ ಹೇಳುತ್ತ ಮುಂದುವರಿದಂತೆ ಸುಮನಾ ತಾನೂ ಒಂದು ಪಾತ್ರದಂತೆ ಕಥೆಯಲ್ಲಿ ಲೀನವಾಗಿ ಹೋಗಿದ್ದಳು. ರಾಯರು ಕಥೆ ಹೇಳುತ್ತಿದ್ದರೂ ಒಂದು ಕಣ್ಣು ಗಡಿಯಾರದಲ್ಲೇ ಇತ್ತು. ಗಂಟೆ ಮೂರು ಐವತ್ತೈದು ಆಯಿತು, ನಾಲ್ಕಾಯಿತು. ರಾಯರ ಕಥೆ ರೋಚಕವಾಗಿ ಮುಂದುವರೆದಂತೆ ನಾಲ್ಕು ಗಂಟೆ ಕಳೆದು ಮತ್ತೂ ಹದಿನೈದು ನಿಮಿಷಗಳಾದವು. ಆ ಕ್ಷಣದಲ್ಲಿ ಸುಮನಾಳಿಗೆ ನಡುಕ ಬರಲಿಲ್ಲ. ಅಲ್ಲಿಗೆ ರಾಯರು ಗೆದ್ದಿದ್ದರು. ನಿಧಾನವಾಗಿ ಕಥೆ ಮುಗಿಸಿದ ಮೇಲೆ ರಾಯರು ಮಗುವಿಗೆ, ಇದೇ ಕಥೆಯನ್ನು ನಾಳೆ ಮುಂದುವರಿಸೋಣ ಇವತ್ತು ಸಾಕು ಎಂದು ಹೇಳಿದಾಗ ಸುಮನಾಳಿಗೆ ಬಹಳ ಖುಷಿಯಾಗಿತ್ತು. ಗಂಡನ ಪ್ರಯೋಗ ಮೊದಲ ದಿನ ಯಶಸ್ವಿಯಾದದ್ದನ್ನು ಕಂಡು ವಿಶಾಲಾಕ್ಷಿಗೂ ಖುಷಿಯಾಗಿತ್ತು. ಆದರೆ ಇದು ಸುಮನಾಳಿಗೆ ತಿಳಿಯಲಿಲ್ಲ. ಕಥೆಯ ಗುಂಗಿನಲ್ಲಿ ಸುಮನಾ ಅಂದಿನ ನಡುಕದ ವಿಚಾರವನ್ನು ಮರೆತಿದ್ದಳು. ಇದೇ ರೀತಿ ರಾಯರು ಈ ಪ್ರಯೋಗವನ್ನು ನಾಲ್ಕು ದಿವಸಗಳಷ್ಟು ವಿಸ್ತರಿಸಿದಾಗ ಸುಮನಾಳ ನಡುಕ, ಜ್ವರ ಎಲ್ಲವೂ ನಿಂತಿತ್ತು. ಅಂತೆಯೆ ಮಗು ಖಿನ್ನತೆಯಿಂದ ಹೊರ ಬರುವ ಲಕ್ಷಣಗಳೂ ಕಾಣತೊಡಗಿತು. ಮತ್ತೆ ವಿಶ್ವನಾಥ ರಾಯರು ಸುಮನಾಳನ್ನು ಬಳಿಗೆ ಕರೆದು ‘ಮಗಳೆ ನಿನಗೆ ಕಳೆದ ನಾಲ್ಕು ದಿನಗಳಿಂದ ನಡುಕವಾಗಲಿ ಜ್ವರವಾಗಲಿ ಬಂದಿಲ್ಲ. ಮುಂದೆ ಬರುವುದೂ ಇಲ್ಲ. ಆದ್ದರಿಂದ ನೀನಿನ್ನು ಮುಂಚಿನ ಸುಮನಾಳೆ ಆಗಿರುತ್ತೀಯ’ ಎಂದು ಧೈರ್ಯ ತುಂಬಿದಾಗ ಸುಮನಾಳಿಗೂ ಹೌದಲ್ಲ ಈ ನಾಲ್ಕು ದಿನಗಳಲ್ಲಿ ನಾನು ಹುಶಾರಾಗಿದ್ದೆ. ನನಗೇನೂ ಆಗಿಲ್ಲವೆಂದು ದೃಢವಾದಾಗ ತನ್ನೊಳಗೆ ತಾನು ವಿಶ್ವಾಸವನ್ನು ಕಂಡುಕೊಂಡಳು. ಅಂತೆಯೇ ವಿಶ್ವನಾಥ ರಾಯರೂ ವಿಶಾಲಾಕ್ಷಮ್ಮನವರೂ ತಮ್ಮ ಜೀವನದಲ್ಲಿ ಮರೆಯಲಾಗದ ದಿನವೊಂದಕ್ಕೆ ಸಾಕ್ಷಿಯಾದರು.

ಆದರೆ ಇದಿಷ್ಟು ಯಶಸ್ಸಿನಿಂದ ರಾಯರಿಗೆ ತೃಪ್ತಿ ಇರಲಿಲ್ಲ. ಇದರ ಮೂಲ ಶೋಧಿಸಬೇಕೆಂದು ಅವರ ಮನಸ್ಸು ಚಡಪಡಿಸುತ್ತಿತ್ತು.ಮಾತ್ರವಲ್ಲ ಅದರಲ್ಲಿ ತೊಡಗಿಸಿಯೂ ಕೊಂಡರು. ತಮ್ಮ ಮಕ್ಕಳೊಡನೆ ಹೋಗುವ ಇತರ ಮಕ್ಕಳನ್ನು ಮಾತಾಡಿಸಬೇಕೆಂದು ನಿರ್ಧರಿಸಿ ಸುಮನಾಳ ಒಡನಾಟ ಜಾಸ್ತಿ ಇದ್ದಂಥ ಮಕ್ಕಳನ್ನು ವಿಚಾರಿಸಿದರು. ಅದರಲ್ಲೊಬ್ಬಳಾದ ದಿವ್ಯಾಳು ಒಂದಷ್ಟು ವಿಷಯಗಳನ್ನು ಹೇಳಿದಾಗ ಸಮಸ್ಯೆಯ ಒಂದೊಂದೆ ಸುಳಿಗಳು ಬಿಚ್ಚತೊಡಗಿದವು. ನಡೆದದ್ದೇನೆಂದರೆ ಸುಮನಾಳಿಗಿಂತ ಹಿರಿಯಳಾದ ಸುಪ್ರಿಯಾ ಎಂಬವಳು ಜತೆ ಜತೆಯಾಗಿ ಶಾಲೆಗೆ ಹೋಗುವವರಲ್ಲಿ ಮುಖಂಡಳಾಗಿದ್ದಳು. ಆಕೆ ಆರನೆ ತರಗತಿಯಲ್ಲಿ ಕಲಿಯುತ್ತಿದಾದರೂ ಆಕೆ ಯಾವ ಸ್ಪರ್ಧೆಯಲ್ಲೂ ಭಾಗವಹಿಸುತ್ತಿರಲಿಲ್ಲ ಮಾತ್ರವಲ್ಲ ಕಲಿಕೆಯಲ್ಲೂ ಬಹಳ ಹಿಂದಿದ್ದಳು. ತನಗಿಂತ ಕೆಳಗಿನ ತರಗತಿಯವರು ಬಹುಮಾನಗಳನ್ನು ಪಡೆಯುತ್ತಿರುವಾಗ ತಾನು ಏನನ್ನೂ ಪಡೆಯಲಾರದೆ ಇರುವಾಗ ಸಹಜವಾಗಿ ಸಾಧನೆ ಮಾಡುವಲ್ಲಿ ಮಾತ್ಸರ್ಯ ಉತ್ಪತ್ತಿ ಆಗಿತ್ತು. ಆದ್ದರಿಂದ ತಾನು ಶಾಲೆಗೆ ಹೋಗುವ ಸಂಗಡಿಗರಲ್ಲಿ ಸುಮನಾ ಬಹಳ ಬುದ್ಧಿವಂತಳಿದ್ದುದರಿಂದ ಆಕೆಗೆ ಈ ಸುಪ್ರಿಯಾ ಎನ್ನುವ ಹುಡುಗಿ ಪ್ರತಿ ನಿತ್ಯವೂ ಏನಾದರೊಂದು ರೀತಿಯಲ್ಲಿ ಹಿಂಸೆ (ಟಾರ್ಚರ್) ಕೊಡುತ್ತಲೇ ಇರುತ್ತಿದ್ದಳು. ಸಾಯಂಕಾಲ ಶಾಲೆ ಬಿಟ್ಟೊಡನೆ ಮನೆಗೆ ಬರುವ ದಾರಿಯಲ್ಲಿ ಸುಮನಾಳನ್ನುದ್ದೇಶಿಸಿ ನೀನು ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಬಾರದು, ನಾನು ಹೇಳಿದಂತೆಯೇ ಕೇಳಬೇಕು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡಕೊಳ್ಳಬಾರದು, ನಿನ್ನ ತಲೆಗೂದಲು ಸರಿ ಇಲ್ಲ, ನಿನಗೀ ಅಂಗಿ ಒಪ್ಪುವುದಿಲ್ಲ.. ಹೀಗೆ ಅನೇಕ ವಿಚಾರಗಳಲ್ಲಿ ಶತ್ರುವನ್ನು ನೋಡಿದಂತೆ ಸುಮನಾಳಿಗೆ ಹಿಂಸೆಯನ್ನು ಕೊಡುತ್ತಲೇ ಇದ್ದಳು. ಅಂತೆಯೇ ನಾನು ಈ ರೀತಿ ಹೇಳಿದ್ದನ್ನು ಮನೆಯಲ್ಲಿ ಯಾರಲ್ಲೂ ಹೇಳಬಾರದೆಂದು ತಾಕೀತು ಮಾಡಿದ್ದಳು. ಮೊದಲೇ ಸೌಮ್ಯ ಸ್ವಭಾವದ ಸುಮನಾ ಸುಪ್ರಿಯಾಳ ಭಯೋತ್ಪಾದನೆಗೆ ನಲುಗಿ ಹೋಗಿದ್ದಳು ಮಾತ್ರವಲ್ಲ ಮನೆಯಲ್ಲಿ ತಂದೆ ತಾಯಿಯೊಂದಿಗೆ ಹೇಳಲೂ ಆಗದೆ ಅನುಭವಿಸಲೂ ಆಗದೆ ಸಾಯಂಕಾಲ ನಾಲ್ಕು ಗಂಟೆಯ ಶಾಲೆ ಬಿಡುವ ವೇಳೆ ಬಂದಾಗ ಸುಪ್ರಿಯಾಳೊಡನೆ ಹೋಗಬೇಕಲ್ಲ ಎಂಬ ಭೀತಿಯು ನಿಧಾನವಾಗಿ ಉಂಟಾಗಿ ಅದು ಬೆಳೆದು ಹೆಚ್ಚಾದಂತೆ ಮನಸ್ಸು ಕಂಪಿಸತೊಡಗುತ್ತಿತ್ತು. ಅಂತೆಯೇ ಸುಪ್ರಿಯಾಳ ಟಾರ್ಚರ್ ದಿನದಿಂದ ದಿನಕ್ಕೆ ಹೆಚ್ಚಾದಂತೆ ಸುಮನಾಳ ಸುಪ್ತ ಪ್ರಜ್ಞೆಗೆ ಭೀತಿ ಆವರಿಸಿ ಶಾಲೆ ಇದ್ದರೂ ರಜೆ ಇದ್ದರೂ ಸರಿಯಾಗಿ ನಾಲ್ಕು ಗಂಟೆಗೆ ಭೀತಿಯ ಅಲಾರಂ ಬಡಿಯುತ್ತಿತ್ತು. ಪರಿಣಾಮ ರೂಪವಾಗಿ ಮೈಯಲ್ಲಿ ನಡುಕ, ಮೈ ಬಿಸಿಯಾಗುವಿಕೆ, ಖಿನ್ನತೆ ಉಂಟಾಗಿ ಅಯೋಮಯವಾಗುತ್ತಿತ್ತು. ಇಷ್ಟೆಲ್ಲ ಮಾಹಿತಿಯನ್ನು ಸಂಗ್ರಹಿಸಬೇಕಾದರೆ ಸದಾಶಿವ ರಾಯರಿಗೆ ಸಾಧಾರಣ ಒಂದು ತಿಂಗಳೇ ಬೇಕಾಗಿತ್ತು. ಅಂತೆಯೇ ಸುಮನಾಳ ಭವಿಷ್ಯವೂ ಈ ಒಂದು ತಿಂಗಳ ಅವಧಿಯಲ್ಲಿ ಪರಿಪೂರ್ಣ ಬದಲಾಗಿತ್ತು… ಅದರೊಟ್ಟಿಗೆ ಮಕ್ಕಳ ಸಹಜತೆಯಲ್ಲಿ ಒಂದಷ್ಟು ಅಹಿತಕರವಾದ ಬದಲಾವಣೆಗಳಾದರೂ ನಿರ್ಲಕ್ಷಿಸಬಾರದು ಎಂಬ ಪಾಠ ಸದಾಶಿವ ವಿಶಾಲಾಕ್ಷಿ ದಂಪತಿಗಳಿಗಾಗಿತ್ತು.
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

Events/Announcements

Advertisement

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 8 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 20 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 496 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

ಗರುಡ ಗರ್ವಭಂಗ – ಚಿತ್ಪಾವನರೆ ಸೇರಿ ಪ್ರಸ್ತುತ ಪಡಿಸಿದ ಚಿತ್ಪಾವನಿ ಭಾಷೆಯ ಯಕ್ಷಗಾನ

Post Views: 234 ಚಿತ್ಪಾವನರಿಂದ ಗರುಡ ಗರ್ವಭಂಗ ************************** ಈ ದಿನ ಅಂದರೆ ೨೮/ ೬/ ೨೦೨೬ ನೇ ಆದಿತ್ಯವಾರ ಚಿತ್ಪಾವನ ಸಮಾಜಕ್ಕೆ ಒಂದು ಹೆಮ್ಮೆಯ ದಿನ. ಇದಕ್ಕೆ ಕಾರಣ ಈ...

ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ)

Post Views: 95 ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಪದ್ಯಾಣ...

ಡಾ. ಚಂದ್ರಶೇಖರ ದಾಮ್ಲೆಯವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ

Post Views: 140   ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಲೇಖಕ,ಪ್ರಸಂಗ ಕರ್ತ, ಕಲಾವಿಮರ್ಶಕ,...

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ -ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Post Views: 125 ****** -***** ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶ್ರೀ ಅಜಿತ ಹೆಬ್ಬಾರ್...

ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ

Post Views: 149 ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ...

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 101 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 149 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 150 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 246 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 372 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 256 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 317 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 397 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 249 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 238 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 260 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 176 Courtesy: Scholarspace with Anubhav

Watch our latest podcasts