Thursday , 24 September 2026

ಅಳಂಬ (Alamba)..ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ. – ಭಾಗ-೧,೨,೩,೪,೫,೬,೭,೯,೧೦,೧೧,೧೨,೧೩,೧೪,೧೫,೧೬,೧೭,೧೮,೧೯,೨೦,೨೧,೨೨,೨೩

ಅಳಂಬ.. ೨೬
************


ಕಾರ್ತಿಕನಿಗೆ ಕುತೂಹಲ ತಾಳಲಾರದೆ ಮರುದಿವಸವೆ ಪುನಹ ಸುಳ್ಕೇರಿಗೆ ಹೋಗುವುದೆಂದು ತೀರ್ಮಾನಿಸಿದ. ಅಂದು ಸಂಕ್ರೇ ಗೌಡರು ಹುಲಿಯಿಂದ ಪಾರಾಗಿ ಬಂದ ನಂತರದ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಇರುವಾಗ ಈ ಹುಲಿಯ ಕಳೆಬರ ಕಾಣೆಯಾದದ್ದಾದರೂ ಹೇಗೆಂಬ ವಿಚಾರ ಇವತ್ತಿನವರೆಗೂ ನಿಗೂಢವಾಗಿತ್ತು. ಸುಳ್ಕೇರಿಯಲ್ಲಿ ತಮ್ಮ ಪ್ರಕಾಶನ ಅಂಗಡಿಗೆ ಹೋದರೆ ಸಾಧಾರಣ ಎಲ್ಲ ಸಮಾಚಾರಗಳು ದೊರೆಯುತ್ತವೆ. ಅದಕ್ಕಿಂತಲೂ ಅಂದರೆ ಪ್ರಕಾಶನ ಅಂಗಡಿ ಪ್ರಾರಂಭವಾಗುವುದಕ್ಕಿಂತ ಹಿಂದೆ ನೆಲ್ಲಿತಡ್ಕದಿಂದ ಯಾರೇ ಸುಳ್ಕೇರಿಗೆ ಬಂದರೂ ರಸ್ತೆ ಬದಿಯಲ್ಲಿ ಇರುವ ಸುಧಾಕರ ಶೆಟ್ರ ಅಂಗಡಿಯೆ ತತ್ಕಾಲದಲ್ಲಿ ಬಾಯಾರಿಕೆಗೆ ನೀರು ಕುಡಿದು ಒಂದಷ್ಟು ವಿಶ್ರಾಂತಿ ಪಡೆಯಲು ಅಂತೆಯೇ ನಾಗರಿಕ ಪ್ರಪಂಚದ ಅರಿವಿಗೆ ಮಾಧ್ಯಮವಾಗಿದ್ದಂಥ ವಾರ್ತಾ ಪತ್ರಿಕೆಗಳ ಓದಿಗೆ ಎಲ್ಲರ ತಾಣವಾಗಿತ್ತು. ಆದ್ದರಿಂದ ನೆಲ್ಲಿತಡ್ಕದಿಂದ ಸುಳ್ಕೇರಿಗೆ ಹೋಗಿ ಬಂದವರಲ್ಲಿ ಹೊಸತಾದಂಥ ಯಾವುದಾದರು ಸುದ್ದಿಗಳು ಇದ್ದೇ ಇರುತ್ತಿತ್ತು. ಬೆಳಗ್ಗೆ ಗಂಜಿ ಊಟ ಮಾಡಿಕೊಂಡು ಕಾರ್ತಿಕ ಹೊರಟೇ ಬಿಟ್ಟ ಸುಳ್ಕೇರಿಗೆ. ನೇರ ಪ್ರಕಾಶನ ಅಂಗಡಿಗೆ ಹೋಗಿ ಪಕ್ಕದಲ್ಲೇ ಇದ್ದ ಪುರುಷೋತ್ತಮ ಭಟ್ಟರ ಹೋಟೇಲಲ್ಲಿ ಕಾಫಿ ಕುಡಿದು ಪುನಹ ಅಂಗಡಿಗೆ ಬಂದು ತಮ್ಮನೊಡನೆ ವ್ಯವಹಾರದ ಒಂದಷ್ಟು ವಿಷಯಗಳನ್ನು ಮಾತಾಡಿ ನೇರ ವಿಷಯಕ್ಕೆ ಬಂದ ಕಾರ್ತಿಕ. “ಕುತ್ಲೂರಲ್ಲಿ ಮೊನ್ನೆ ಪೋಲೀಸರು ಹಿಡಿದ ಹುಲಿಯ ಚರ್ಮ ಉಗುರುಗಳ ವಿಷಯ ಏನಾಯಿತು ” ಎಂದು ತಮ್ಮನಲ್ಲಿ ಕಾರ್ತಿಕ ಕೇಳಿದ. “ಹ್ಞ.. ನಿನಗೆ ಗೊತ್ತಿಲ್ಲವೆ.. ಅದು ದೊಡ್ಡ ಕತೆ.” ಎಂದು ತನಗೆ ಅಡಿಕೆ ಮಾರಾಟಕ್ಕೆಂದು ಬಂದಂಥ ಕುತ್ಲೂರಿನ ಕೋಟ್ಯಪ್ಪ ಎನ್ನುವವನ ಮಾಹಿತಿಯಂತೆ ತನಗೆ ಗೊತ್ತಾದ ವಿಷಯಗಳನ್ನು ಹೇಳತೊಡಗಿದ.

“ಕುಕ್ಕುಜೆಯಲ್ಲಿ ತಂಗಚ್ಚನ್ ಎಂಬವನೊಬ್ಬ ಇದ್ದಾನೆ.” “ಹೌದು ಆತನಲ್ಲಿ ಜೀಪು ಇದೆ ಅವನೇ ಅಲ್ಲವೆ ” ಎಂದು ಕಾರ್ತಿಕ ಕೇಳುವಾಗ ಪ್ರಕಾಶ ಮತ್ತೆ ಘಟನೆಯ ವಿವರಗಳನ್ನು ಹೇಳತೊಡಗಿದ. “ಹೌದು ಅವನೆ. ಅವನು ದಿನಾಲು ತನ್ನ ಜೀಪನ್ನು ಬಾಡಿಗೆಗೊ ಸ್ವಂತಕ್ಕೊ ಬಳಸಿಕೊಂಡು ತನ್ನ ಕೃಷಿಯ ಜತೆಗೆ ವಾಹನದಿಂದಲೂ ಆದಾಯ ಗಳಿಸಿಕೊಂಡು ಉಪಕಾರಿಯೇ ಆಗಿದ್ದ. ಆದ್ದರಿಂದ ಆತನ ಬಗ್ಗೆ ಎಲ್ಲರಲ್ಲೂ ಒಳ್ಳೆಯ ಅಭಿಪ್ರಾಯವಿತ್ತು. ಕಾಲ ಬಂದಾಗ ಏನೇನೆಲ್ಲ ಆಗುತ್ತದೆ ಎನ್ನುವುದಕ್ಕೆ ಈ ತಂಗಚ್ಚನ್ ಎಂಬವನ ಅತಿಯಾದ ಹಣದ ವ್ಯಾಮೋಹವೇ ಸಾಕ್ಷಿ.”ಅಂದರೆ ಈ ಪ್ರಕರಣ ತಂಗಚ್ಚನ್ ಎಂಬವನ ಕ್ರಿಮಿನಲ್ ಅಪರಾಧವೆಂದಾಯಿತು. ಮಹಾರಾಯಾ ನಮ್ಮ ಈ ಪಶ್ಚಿಮ ಘಟ್ಟಗಳು ಯಾವುದೆ ಹೊರಗಿನ ಪ್ರಪಂಚದ ಅಪರಾಧಗಳಿಂದ ಮುಕ್ತವೆಂದು ನಾವು ನಂಬಿದ್ದೆವು. ಈ ಪ್ರಕರಣದಿಂದ ಅದು ಸುಳ್ಳಾಗುವ ಸ್ಥಿತಿ ಉಂಟಾಗಿದೆ.. ಸರಿ.. ಅದು ಅವನಿಂದ ಹೇಗಾಯಿತು ವಿವರವೇನಾದರು ಉಂಟ” ಎಂದು ಆಶ್ಚರ್ಯದಿಂದ ಮತ್ತು ಯಾರನ್ನು ಹೇಗೆ ನಂಬುವುದು ಎಂಬ ಸಂಶಯದ ಭಾವದಿಂದ ಕೇಳಿದ ಕಾರ್ತಿಕ. “ಹೌದು ನನಗೂ ಬಹಳ ಆಶ್ಚರ್ಯವಾಗಿದೆ. ಕೋಟ್ಯಪ್ಪ ಹೇಳಿದಂತೆ ಮೂರು ನಾಲ್ಕು ದಿವಸ ಯಾರಿಗೂ ಎಂಥದ್ದೂ ತಿಳಿದಿರಲಿಲ್ಲವಂತೆ. ಮೊನ್ನೆ ನಾರಾವಿಯ ಸಂತೆ ದಿವಸ ಎಲ್ಲರ ಬಾಯಲ್ಲೂ ಇದೇ ಸುದ್ದಿಯಂತೆ. ಹಲವಾರು ಜನರು ಹಲವು ರೀತಿಯಲ್ಲಿ ತಾವೇ ಕಂಡಿದ್ದೇವೊ ಎನ್ನುವಂತೆ ಘಟನೆಯನ್ನು ಬಣ್ಣಿಸಿದ್ದೇ ಬಣ್ಣಸಿದ್ದಂತೆ. ಆದರೆ ಹೋಟೇಲಿನ ನಾರಾಯಣ ಕಮ್ತಿಯವರು ಬಹಳ ಪ್ರಾಮಾಣಿಕರು ಮಾತ್ರವಲ್ಲ ವಯಸ್ಸಾದವರೂ ಹೌದು. ಅಲ್ಲಿಗೆ ಕೋಟ್ಯಪ್ಪ ಚಾಯ ಕುಡಿಯಲು ಹೋದವನಿಗೆ ಕಮ್ತಿಯವರೇ ಈ ವಿಚಾರ ವಿವರವಾಗಿ ಹೇಳಿದರಂತೆ. ಉತ್ಪ್ರೇಕ್ಷೆ ಇಲ್ಲದ ಅವರ ವರದಿಗಳು ಯಾವಾಗಲೂ ಸತ್ಯಕ್ಕೆ ಹತ್ತಿರವಾಗಿರುವುದರಿಂದ ಯಾರೂ ನಂಬಬಹುದೆಂಬ ಭಾವ ಎಲ್ಲರಲ್ಲೂ ಇದೆ ಎನ್ನಬಹುದು. ಪೋಲೀಸ್ ಠಾಣೆಯಲ್ಲಿ ತಂಗಚ್ಚನ್ ಬಾಯಿ ಬಿಡಿಸುವ ಪ್ರಕ್ರಿಯೆ ಪ್ರಾರಂಭವಾದಾಗ ಹೆದರಿಯೇ ಎಲ್ಲ ಸತ್ಯವನು ಹೇಳಿ ಬಿಟ್ಟನಂತೆ. ಅಪರಾಧಕ್ಕೆ ಶಿಕ್ಷೆ ಹೇಗೂ ಇದೆ. ಆದರೆ ಪೋಲೀಸ್ ಠಾಣೆಯಲ್ಲಿ ಸತ್ಯ ಹೇಳಿದ್ದರಿಂದ ಅವರ ಮೂರನೇ ದರ್ಜೆಯ ಆತಿಥ್ಯದಲ್ಲಿ ಸ್ವಲ್ಪ ರಿಯಾಯಿತಿ ಸಿಕ್ಕಿತಂತೆ.”

“ಹಾಗಾದರೆ ತಂಗಚ್ಚನ್ ಮತ್ತು ಆತನ ಜೀಪು ಎರಡೂ ಪೋಲಿಸ್ ಸುಪರ್ದಿಯಲ್ಲಿ ಇದೆ ಎಂದಾಯಿತು ಸರಿ.. ಹಾಗಾದರೆ ಸಾಧಾರಣ ಈ ಘಟನೆ ನಡೆದು ಎರಡು ವರ್ಷಗಳೇ ಕಳೆದು ಹೋದವು ಇಲ್ಲಿವರೆಗೆ ಅದರ ಒಂದು ಸುಳಿವು ಕೂಡ ಯಾರಿಗೂ ತಿಳಿಯದಿದ್ದರೂ ಅದು ಹೇಗೆ ಪೋಲೀಸರಿಗೆ ತಿಳಿಯಿತೆಂಬುದೇ ದೊಡ್ಡ ಪ್ರಶ್ನೆ ”

“ಹೌದು ಆದರೆ ಇದನ್ನು ನಮ್ಮಂಥ ಸಾಮಾನ್ಯ ಮನುಷ್ಯರು ಮರೆತು ಹೋಗಿರಬಹುದು ಆದರೆ ಪೋಲಿಸ್ ಇಲಾಖೆಯಾಗಲಿ ಅರಣ್ಯ ಇಲಾಖೆಯಾಗಲಿ ಈ ಪ್ರಕರಣದ ಮೇಲೊಂದು ಕಣ್ಣನ್ನು ಇಟ್ಟಿತ್ತು ಎಂಬುದು ಅವರ ಕಾರ್ಯ ವೈಖರಿಗೆ ಸಾಕ್ಷಿ ಎನ್ನಬಹುದು. ಏನೇ ಇರಲಿ ನಮ್ಮ ಖಾಕಿ ಪಡೆ ಬಹಳಷ್ಟು ಚಾಲಾಕಿತನದಿಂದ ಕೂಡಿದೆ ಎಂದೇ ಹೇಳಬಹುದು. ಅದೆಲ್ಲ ಸರಿ ಅಂದು ಹುಲಿಯನ್ನು ಅಷ್ಟು ಬೇಗ ಅಲ್ಲಿಂದ ನಾಪತ್ತೆಯಾಗಿಸಿದ್ದು ಹೇಗಿರಬಹುದು.” ಇದು ಕಾರ್ತಿಕನ ಮಾತ್ರವಲ್ಲ ಈ ಘಟನೆ ತಿಳಿದವರ ಎಲ್ಲರ ಕುತೂಹಲವೂ ಆಗಿತ್ತು. “ಬಾಯಿ ಬಿಡಿಸಲು ಪ್ರಾರಂಭಿಸಿದ ಮೇಲೆ ಅದನ್ನು ಕೇಳದೆ ಬಿಟ್ಟಾರೇ? ಅದನ್ನು ಕೂಡ ಆತ ಹೇಳಿದ್ದಾನಂತೆ. ಸಂಕ್ರೇ ಗೌಡರು ಹುಲಿಯ ಕಡವೆಯ ಜಗಳಕ್ಕೆ ಹೆದರಿ ಮರದ ಮೇಲೆಯೇ ಕೂತಿದ್ದರು ತಾನೆ. ಅದೇ ವೇಳೆಗೆ ತಂಗಚ್ಚನ್ ಕೂಡ ಕಾಡಿಗೆ ಬೇಟೆಗೆಂದು ಹೋದವನು ವಾಪಸು ಮನಗೆ ಬರುತ್ತಿದ್ದನಂತೆ. ಈ ಹುಲಿ ಕಡವೆಗಳ ಜಗಳದ ಘರ್ಜನೆಗಳ ಸದ್ದಿಗೆ ಆತನೂ ಒಂದು ಸುರಕ್ಷಿತ ಜಾಗದಲ್ಲಿ ಕಾದು ಕೊಂಡಿದ್ದನಂತೆ. ಘರ್ಜನೆಗಳು ಸಂಪೂರ್ಣ
ಮೌನವಾಗಿ ಅರ್ಧ ಗಂಟೆಯ ಮೇಲೆ ನಿಧಾನವಾಗಿ ಮನೆಯ ಕಡೆ ಹೊರಟನಂತೆ ಹೆದರಿಕೆಯ ಜತೆಗೆ. ಒಂದಷ್ಟು ದೂರ ಹೋಗುವಾಗ ಹುಲಿಯು ಸತ್ತು ಬಿದ್ದ ಪರಿಯನ್ನು ನೋಡಿ ಹೆದರಿ ಹೋಗಿದ್ದನಂತೆ. ಆದರೆ ನಿಶ್ಚಲವಾಗಿ ಮಲಗಿದ್ದನ್ನು ನೋಡಿ ಹುಲಿಯು ಸತ್ತಿದೆ ಎಂದು ದೃಢವಾದ ನಂತರ
ಒಂದೆರಡು ಸಲ ಕೆಮ್ಮಿದಂತೆ ಮಾಡಿ ಮನೆಗೆ ಅಂದರೆ ಕುಕ್ಕುಜೆಗೆ ಹೋದನಂತೆ. ಹಾಗೆ ಹೋಗುವಾಗ ಆತನಿಗೊಂದು ಯೋಚನೆ ಬಂದಿತಂತೆ.” ಅಷ್ಟರಲ್ಲಿ ಸ್ಥಳೀಯರೇ ಆದಂಥ ವಿಶ್ವನಾಥ ಭಟ್ಟರು ಅಡಿಕೆಯ ಗಂಟಿನೊಡನೆ ಅಂಗಡಿಗೆ ಬಂದರು. ಅವರ ಲೇವಾದೇವಿ ವ್ಯವಹಾರ ಮುಗಿಸಲು ಒಂದಿಷ್ಟು ವೇಳೆ ಹಿಡಿಯಿತು. ಆದರೆ ಅವರಿಗೂ ಹುಲಿಯ ವಿಚಾರದ ಬಗ್ಗೆ ಒಂದಷ್ಟು ಕುತೂಹಲವಿತ್ತು. ಕಾರ್ತಿಕನವರು ಮಾತಾಡುತ್ತಿದ್ದ ವಿಷಯವೂ ಅದೇ ಆದ್ದರಿಂದ ಅವರೊಡನೆ ಇವರೂ ಸೇರಿಕೊಂಡರು. ಪ್ರಕಾಶ ಮುಂದುವರಿಸುತ್ತ

” ಅದೇ.. ತಂಗಚ್ಚನ್ ಮನೆಗೆ ಹೋಗುತ್ತಿರುವ ವೇಳೆ ಸತ್ತು ಬಿದ್ದಂಥ ಹುಲಿ ಬಹಳ ದೊಡ್ಡದೆನೂ ಅಲ್ಲ. ಸಾಧಾರಣ ಐದಾರು ಜನರಿದ್ದರೆ ಅದನ್ನು ಎತ್ತಿಕೊಂಡು ಹೋಗಬಹುದು. ಇದರ ಚರ್ಮಕ್ಕೆ ಉಗುರುಗಳಿಗೆ ಲಕ್ಷಾಂತರ ಹಣ ಸಿಗಬಹುದೆಂಬ ವಿಚಾರದೊಡನೆ ಮನೆಗೆ ಸೇರುವುದಕ್ಕೆ ಮುಂಚಿತವಾಗಿ ತನ್ನ ಊರಿಗೆ ಹೋಗಿ ಒಂದಷ್ಟು ಜನರನ್ನು ಕರಕೊಂಡು ಬಂದರೆ, ಅರಣ್ಯ ಇಲಾಖೆಯವರಿಗೆ ಗೊತ್ತಾಗಿ ಹುಲಿಯ ವ್ಯವಸ್ಥೆ ಮಾಡದಿದ್ದರೆ, ನಾಳೆಯ ರಾತ್ರಿಯಲ್ಲಿ ನಮ್ಮ ಕಾರ್ಯಾಚರಣೆಯಿಂದ ಯಾರಿಗೂ ತಿಳಿಯದ ರೀತಿಯಲ್ಲಿ ಕೆಲಸ ಮಾಡಿ ಮುಗಿಸಿದರೆ… ಎಂಬ ಯೋಜನೆಗಳನ್ನು ಮನಸ್ಸಿನೊಳಗೆ ಲೆಕ್ಕ ಹಾಕಿಕೊಂಡೇ ಮನೆ ಸೇರಿದ್ದನಂತೆ. ಅಂತೆಯೇ ಅದೇ ರಾತ್ರಿ ತನ್ನೂರಿಗೆ ಹೋಗಿ ಅದಕ್ಕೆ ಬೇಕಾದ ಜನರೊಡನೆ ಮಾತಾಡಿ, ಅವರಿಗೆ ಒಳ್ಳೆಯ ಹಣದ ಆಮಿಷವನ್ನು ನೀಡಿ ಆಳುಗಳ ಜತೆಯಲ್ಲಿಯೇ ವಾಪಸು ಬಂದಿದ್ದನಂತೆ. ಊರಿನ ಜನರಾದರೆ ಎಲ್ಲರಿಗೂ ತಿಳಿಯುತ್ತದೆ. ಮಾತ್ರವಲ್ಲ ಯಾರಾದರೂ ಬಾಯಿ ಬಿಟ್ಟರೆ ಎಲ್ಲರೂ ಜೈಲಿಗೆ ಹೋಗುವುದಂತು ಖಂಡಿತ ಎಂದು ಕೊಂಡು ಈ ಊರಿನವರ ಸಹವಾಸಕ್ಕೇ ಹೋಗಿಲ್ಲವಂತೆ. ಅದೇರೀತಿ ಮರು ದಿನ ಕಳೆದು ತಡ ರಾತ್ರಿಯಲ್ಲಿ ಎಲ್ಲರೂ ಹುಲಿ ಸತ್ತು ಬಿದ್ದಂಥ ಜಾಗಕ್ಕೆ ಹೋಗಿದ್ದಾರಂತೆ. ಹೋಗುವಾಗ ಹುಲಿ ಅಲ್ಲೇ ಇದ್ದುದರಿಂದ ಇವರ ವೃತ್ತಿಪರ ಆಳುಗಳು ಅದನ್ನು ಬಹಳ ಸಲೀಸಾಗಿ ಅಲ್ಲಿಂದ ಸಾಗಿಸಿ ನಿಗೂಢ ಜಾಗದಲ್ಲಿ ಅದರ ಚರ್ಮ ಉಗುರುಗಳನ್ನು ತೆಗೆದು ಉಳಿದ ತ್ಯಾಜ್ಯಗಳ ವಿಲೇವಾರಿ ಮಾಡಿ ರಾತ್ರೋ ರಾತ್ರಿ ಅವರ ಊರಿಗೆ ಮರಳಿದ್ದಾರಂತೆ.. ಇದಿಷ್ಟು ಸ್ಥೂಲವಾಗಿ ನಮಗೆ ತಿಳಿದ ವಿಚಾರ” ಎಂದು ಪ್ರಕಾಶ ತನಗೆ ತಿಳಿದ ವಿಷಯಗಳನ್ನು ಅಣ್ಣನೊಡನೆ ಹಂಚಿಕೊಂಡ.. ಓದಿ.. ಪ್ರಚೋದಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

 

ಅಳಂಬ.. ೨೫
************


ಕುತ್ಲೂರಿನಿಂದ ಅಳಂಬಕ್ಕೆ ತಿರುಗುವ ರಸ್ತೆಯಲ್ಲಿ ಪೋಲೀಸ್ ಜೀಪೊಂದು ಮರಗಳ ಮರೆಯಲ್ಲಿ ನಿಂತು ಕೊಂಡಿತ್ತು. ದೂರದಿಂದ ಬರುವಂಥ ವಾಹನಗಳು ಜೀಪಲ್ಲಿರುವ ಪೋಲೀಸಿನವರಿಗೆ ಕಂಡರೂ ದೂರದಿಂದ ಬರುವ ವಾಹನಗಳಿಗೆ ಜೀಪು ಕಾಣದಿರುವಂಥ ಆಯಕಟ್ಟಿನ ಜಾಗದಲ್ಲಿ ನಿಂತು ಯಾವುದೊ ನಿರೀಕ್ಷೆಯಲ್ಲಿರುವಂತೆ ಕಾಣುತ್ತಿತ್ತು. ನಾರಾವಿಗೆ ಹೋದಂಥ ಕಾರ್ತಿಕ ಬಸ್ಸಲ್ಲಿ ಸುಳ್ಕೇರಿಗೆ ಬರುತ್ತಿದ್ದಾಗ ಈ ಜೀಪನ್ನು ಕಂಡನೇ ಹೊರತು ನಿಂತ ಕಾರಣ ತಿಳಿದಿರಲಿಲ್ಲ. ಯಾಕೆಂದರೆ ಅಳದಂಗಡಿ, ಸುಳ್ಕೇರಿ, ನಾರಾವಿಯ ಸರಹದ್ದುಗಳಲ್ಲಿ ಪೋಲೀಸರಾಗಲಿ ಪೋಲೀಸ್ ಜೀಪಾಗಲಿ ಕಾಣ ಸಿಗುವುದು ಬಹಳವೆ ವಿರಳ. ಕಂಡರೂ ಸಂಚರಿಸುತ್ತಿರುವಂಥ ಸ್ಥಿತಿಯಲ್ಲಿ ಹೊರತು ಈ ರೀತಿಯಲ್ಲಿ ಕಾವಲು ಕಾಯುವ ಸ್ಥಿತಿಯಲ್ಲಲ್ಲ. ಆದ್ದರಿಂದ ಕಾರ್ತಿಕನಂತೆ ಬಸ್ಸಲ್ಲಿದ್ದಂಥ ಎಲ್ಲರಿಗೂ ಏನೋ ಒಂದು ಭಯ ಮಿಶ್ರಿತವಾದ ಕುತೂಹಲ. ಅದೂ ಅಲ್ಲದೆ ಜೀಪಿನ ಎಡಬದಿಯಲ್ಲಿ ಬಂದೂಕುಧಾರಿಯಾದಂಥ ಪೋಲೀಸನೊಬ್ಬನು ಇರುವುದನ್ನು ಕಂಡಾಗ ತಮ್ಮ ಭಯಕ್ಕೆ ಕಾರಣವಿದೆ ಎಂದು ಬಸ್ಸಿನ ಎಲ್ಲ ಪ್ರಯಾಣಿಕರಿಗೂ ಅರ್ಥವಾಗಿತ್ತು. ಬಸ್ಸಿನ ಚಾಲಕನಾದರೊ ಇದೆಲ್ಲ ಮಾಮೂಲಿ ಇದ್ದದ್ದೆ ಎಂಬ ಭಾವದಿಂದ ತನ್ನ ಪಾಡಿಗೆ ತಾನು ಬಸ್ಸನ್ನು ಚಲಾಯಿಸುತ್ತಲೇ ಇದ್ದ. ತಮ್ಮದಲ್ಲದ ವಿಚಾರಗಳು ಒಂದಷ್ಟು ಹೊತ್ತು ನಮ್ಮನ್ನು ಕಾಡುವುದಾದರೂ ಕಾಲಕ್ರಮೇಣ ಮರೆತು ಹೋಗುವುದೇ ಸಹಜ. ಅಂತೆಯೇ ಕಾರ್ತಿಕ ಸುಳ್ಕೇರಿಯಲ್ಲಿ ಬಸ್ಸಿನಿಂದಿಳಿದು ತಲೆಯ ಮೇಲೆ ಹೊರೆಯನ್ನು ಹೊತ್ತುಕೊಂಡು ನೆಲ್ಲಿತಡ್ಕಕ್ಕೆ ಹೋಗುವಾಗ ಅನಪೇಕ್ಷಿತ ವಿಚಾರಗಳೆಲ್ಲ ಅಷ್ಟೇ ಸಹಜವಾಗಿ ತಲೆಯಿಂದ ಹೊರ ಹೋಗಿತ್ತು.

ಹುಟ್ಟು ಸಾವಿನಿಂದ ತೊಡಗಿ ನಾಗರಿಕ ಪ್ರಪಂಚದ ಯಾವುದೇ ಸಮಾಚಾರಗಳು ನೆಲ್ಲಿತಡ್ಕ ಅಥವಾ ಅಳಂಬಕ್ಕೆ ಗೊತ್ತಾಗಬೇಕಾದರೆ ಸಾಧಾರಣ ಒಂದು ವಾರವಾದರೂ ತಡವಾಗುತ್ತದೆ. ಕೆಲವೊಮ್ಮೆ ಸತ್ತ ವ್ಯಕ್ತಿ ಕುಟುಂಬದವನಾದರೂ ಸೂತಕ ಮುಗಿಯುವ ಒಂದೆರಡು ದಿನಕ್ಕೆ ಮುಂಚಿತವಾಗಿ ಅಥವಾ ಸೂತಕ ಮುಗಿದು ಅದೆಷ್ಟೋ ದಿನಗಳ ನಂತರ ಯಾರ್ಯಾರಿಂದಲೊ ಬಾಯಿಯಿಂದ ಬಾಯಿಗೆ ಹರಡಿ ಗೊತ್ತಾಗುವುದೂ ಇದೆ. ಅದೆಷ್ಟೊ ದೇವರ ಕೆಲಸಗಳನ್ನು ಕೂಡ ಸೂತಕದಲ್ಲೇ ಮಾಡಿದಂಥ ಉದಾಹರಣೆಗಳೂ ಬಹಳಷ್ಟಿವೆ ಎಂದೇ ಹೇಳಬಹುದು. ಇದಕ್ಕೆ ಮೂಲ ಕಾರಣವೆಂದರೆ ಪಶ್ಚಿಮ ಘಟ್ಟಗಳ ಹಳ್ಳಿಗಳಿಗೆ ನಾಗರಿಕರೆನಿಸಿದ ಸಮಾಜದ ಸಂಪರ್ಕದ ಕೊರತೆ. ಯಾರಾದರು ಪತ್ರ ಬರೆದರೆ ಅದು ಸುಳ್ಕೇರಿ ಅಂಚೆ ಕಚೇರಿಗೆ ಬಂದರೆ ಅಲ್ಲಿಂದ ನೆಲ್ಲಿತಡ್ಕದಲ್ಲಿ ತಲುಪುವವರಿಗೆ ತಲುಪಬೇಕಾದರೆ ಯಾರಾದರು ನೆಲ್ಲಿತಡ್ಕದಿಂದ ಸುಳ್ಕೇರಿಗೆ ಹೋದರೆ ಮಾತ್ರ. ಇರುವ ನಾಲ್ಕು ಮನೆಯಿಂದ ಯಾರೂ ಹೋಗದಿದ್ದರೆ ಸಮಾಚಾರವು ಗೊತ್ತಾಗುವುದೇ ಇಲ್ಲ. ಇಂತಿರುವ ನೆಲ್ಲಿತಡ್ಕಕ್ಕೆ ಕುತ್ಲೂರಿನ ಪೋಲೀಸರ ವಿಚಾರವೂ ಒಂದು ವಾರದ ನಂತರ ನೆಲ್ಲಿತಡ್ಕಕ್ಕೆ ತಿಳಿದಾಗ ಕಾರ್ತಿಕನ ಆದಿಯಾಗಿ ಎಲ್ಲರೂ ಆಶ್ಚರ್ಯಚಕಿತರಾದದ್ದಂತು ಸತ್ಯವೆ.

“ಅಪ್ಪ ನಿಮಗೊಂದು ಹೊಸ ಸಮಾಚಾರ ಹೇಳುವುದಿದೆ” ಎಂದು ಸುಳ್ಕೇರಿಯಿಂದ ಸಾಮಾನು ತರಲೆಂದು ಹೋದಂಥ ಕಾರ್ತಿಕ ತಲೆಯ ಮೇಲಿದ್ದಂಥ ಗಂಟನ್ನು ಕೆಳಗಿಟ್ಟು ಕುತೂಹಲ ಆಶ್ಚರ್ಯವೇ ಮೊದಲಾದ ಭಾವಗಳಿಂದ ಏಕ ಪ್ರಕಾರವಾಗಿ ಹೇಳಲು ಮುಂದಾದಾಗ ಅಲ್ಲಿಯೇ ಇದ್ದಂಥ ಅಮ್ಮ ಮಿತ್ರವಿಂದಾ “ಸ್ವಲ್ಪ ಸುಧಾರಿಸಿಕೋ ಮಹಾರಾಯಾ. ಒಂದೇ ಉಸಿರಿಗೆ ಎಲ್ಲವನ್ನೂ ಹೇಳುವಂಥದ್ದೇನಿದೆ?” ಎಂದು ಸಹಜವಾಗಿ ಮಗನ ಬಗ್ಗೆ ಕಾಳಜಿ ತೋರಿಸಿದರು. ಆದರೆ ಯುವಕ ಕಾರ್ತಿಕನಿಗೆ ಮೈಯಲ್ಲಿ ಬೆವರು ಸುರಿದಷ್ಟು ಕಾಯ ಕಸುವಲ್ಲಿ ಸೋರಿಕೆ ಇರಲಿಲ್ಲ. ಒಂದು ಲೋಟ ನೀರು ಕುಡಿದು ಮುಂದುವರಿಸುತ್ತ “ಎರಡು ವರ್ಷಗಳ ಹಿಂದೆ ಕುಳ್ಳಾಲಿನಲ್ಲಿ ಕಡವೆಯನ್ನು ಅಟ್ಟಿಸಿಕೊಂಡು ಬಂದಂಥ ಹುಲಿ ಅಚಾನಕ್ಕಾಗಿ ಸತ್ತು ಬಿದ್ದು ಅದು ಎರಡನೇ ದಿವಸಕ್ಕೆ ಕಾಣೆಯಾದದ್ದು ನೆನಪಿದೆಯ” ಎಂದು ಕೇಳಿದ. ಅಷ್ಟರಲ್ಲಿ ತಂಗಿ ವಾರಿಜಾ ಕೂಡ ಇದರಲ್ಲೇನೋ ವಿಶೇಷವಿದೆ ಎಂದು ಅಂದುಕೊಂಡು ” ಹೌದಣ್ಣ ನೆನಪಿಲ್ಲದೆ ಏನು ಸಂಕ್ರೇ ಗೌಡರು ಅಪಾಯದಿಂದ ಪಾರಾದದ್ದು ನಮಗೆ ಈಗಲೂ ನೆನಪಿದೆ. ಯಾಕೆ ಏನಾಯಿತು” ಏಕ ಪ್ರಕಾರವಾಗಿ ಹೇಳುತ್ತಿದ್ದಾಗ ಕಾರ್ತಿಕ ಇನ್ನು ತಡ ಮಾಡುವುದು ಬೇಡವೆಂದುಕೊಂಡು

“ಏನಾಯಿತೆಂದರೆ ಆ ಹುಲಿಯ ಪತ್ತೆಯಾಗಿದೆ.” ಎಂದಾಗ “ಏನೋ ಒಗಟಿನಂತೆ ಮಾತನಾಡಬೇಡ ನೇರವಾಗಿ ಹೇಳು” ಎಂದು ವಾರಿಜಾ ಇನ್ನೂ ಕುತೂಹಲವನ್ನು ಹೆಚ್ಚಿಸಿಕೊಂಡಳು. “ಅಂದು ನಾಪತ್ತೆಯಾದ ಹುಲಿಯ ಕಳೇಬರ ಹುಡುಕಿದರೂ ಸಿಗದೆ ಅರಣ್ಯಾಧಾಕಾರಿಗಳೂ ಹುಡುಕಾಟವನ್ನು ಬಿಟ್ಟು ತಟಸ್ಥರಂತೆ ಇದ್ದರು. ಒಳಗಿಂದೊಳಗೆ ಅವರ ಗಮನ ಹುಲಿಯ ಮೇಲಿತ್ತು ಎನ್ನುವುದು ಮೊನ್ನೆಯ ಪ್ರಸಂಗದಲ್ಲಿ ಕಂಡುಬಂದಿದೆ.” ಎಂದಾಗ ಗಣೇಶ ಹೆಬ್ಬಾರರು “ಹಾಗಾದರೆ ಹುಲಿಯ ಕಳೇಬರ ಸಿಕ್ಕಿದೆಯೇ.. ಅಥವಾ ಪೆಟ್ಟಾದ ಹುಲಿ ಬದುಕಿದ್ದು ಕಂಡುಬಂದಿದೆಯೇ.. ” ಎಂದು ಕೇಳಿದಾಗ ಕಾರ್ತಿಕ ಮುಂದುವರಿಸಿ, ” ಇಲ್ಲ ಅಪ್ಪ ಅದು ಜೀವಂತವಾಗಿ ಅಲ್ಲ ಬದಲಾಗಿ ಅದರ ಚರ್ಮ ಉಗುರು ಇತ್ಯಾದಿ ದೊರಕಿದೆ ಅಂತೆ. ಯಾರಿಗೋ ಮಾರಾಟಕ್ಕೆಂದು ಜೀಪಿನಲ್ಲಿ ಕೊಂಡು ಹೋಗುವಾಗ ಕುತ್ಲೂರಿನ ಹತ್ತಿರ ಕಾದುಕೊಂಡಿರುವ ಪೋಲೀಸರು ಆ ಜೀಪನ್ನು ತಡೆ ಹಿಡಿದು ತಪಾಸಣೆ ಮಾಡಿದಾಗ ಕೇರಳಕ್ಕೆ ಸಾಗಿಸಲೆಂದು ಹುಲಿಯ ಚರ್ಮದ ಜತೆ ಒಂದಷ್ಟು ಉಗುರುಗಳು ಪತ್ತೆಯಾಗಿದೆಯಂತೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಇದನ್ನೆಲ್ಲ ಜೀಪಿನ ಸಹಿತವಾಗಿ ಮುಟ್ಟುಗೋಲು ಹಾಕಿ ಚಾಲಕನನ್ನು ಬಂಧಿಸಿದ್ದಾರಂತೆ. ಯಾರ ಜೀಪು, ಯಾರು ಚಾಲಕ, ಇಷ್ಟು ದಿನ ಅದು ಎಲ್ಲಿತ್ತು ಎನ್ನುವುದು ತನಿಖೆಯಿಂದ ಗೊತ್ತಾಗಬೇಕಷ್ಟೆ. ನಾನು ಒಂದು ವಾರದ ಹಿಂದೆ ನಾರಾವಿಯಿಂದ ಬರುವಾಗ ಕಾದುಕೊಂಡಿದ್ದ ಜೀಪು ಅದೇ ಆಗಿತ್ತು ಎಂದು ನನಗೆ ಇವತ್ತೇ ಗೊತ್ತಾದದ್ದು. ಏನೇ ಇರಲಿ ಇಷ್ಟು ದಿವಸ ಕುತೂಹಲದಿಂದ ನೋಡುತ್ತಿದ್ದ ಅಳಂಬ ನೆಲ್ಲಿತಡ್ಕದಂಥ ಸಣ್ಣ ಹಳ್ಳಿಯಲ್ಲಿ ನಡೆದಂಥ ಕಾಣೆಯಾದ ಹುಲಿಯ ಪ್ರಥಮ ಪ್ರಕರಣ ಹಂತ ಹಂತವಾಗಿ ಬೆಳಕಿಗೆ ಬಂದದ್ದಂತು ಬಹಳ ಖುಷಿಯ ವಿಚಾರ.” ಎಂದು ಕಾರ್ತಿಕ ಹೇಳುತ್ತಿರುವಾಗ ಮನೆಯವರೆಲ್ಲರೂ ಒಂದು ರೀತಿಯ ಸಂತೃಪ್ತ ಭಾವದಿಂದ ಇದ್ದರು.. ಓದಿ… ಪ್ರಚೋದಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ..
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

———————————————————————————————————-

ಅಳಂಬ.. ೨೪
*************

ಮನೆಯಲ್ಲಿ ತುಂಬಾ ಸಮಯದಿಂದ ಪ್ರಾಯಕ್ಕೆ ಬಂದ ಹುಡುಗ ಎಂದು ಎಲ್ಲರೂ ಮದುವೆಗೆ ಒತ್ತಾಯಿಸುತ್ತಿದ್ದರೂ ಕಾರ್ತಿಕ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮುಂದೆ ನೋಡೋಣವೆಂದು ಮುಂದೂಡುತ್ತಲೇ ಇದ್ದ.
ಅಕ್ಕನ ಮದುವೆಯಾದೊಡನೆ ತಾಯಿ ಮಿತ್ರವಿಂದಾ ಕೂಡ ಆಗಾಗ್ಗೆ ಕಾರ್ತಿಕನನ್ನು ಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಲೇ ಇದ್ದರು. ಆದರೆ ಹುಡುಗಿ ಯಾರು ಕೊಡುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿತ್ತು. ಅಂತೆಯೆ ಒಂದು ದಿನ ಅಮ್ಮನಲ್ಲಿ ಕಾರ್ತಿಕ “ಆಗಲಮ್ಮ ನೀನಂದಂತೆ ಮದುವೆ ಮಾಡಿಕೊಳ್ಳುತ್ತೇನೆ. ಆದರೆ ಯಾವ ಊರಲ್ಲಿ ನಮ್ಮ ಹಳ್ಳಿಗೆ ಹೆಣ್ಣು ಕೊಡುವಷ್ಟು ಧೈರ್ಯವಂತರಿದ್ದಾರೆ ಹೇಳು” ಎಂದಾಗ ಮಿತ್ರವಿಂದಾ ಉತ್ತರಿಸುವಲ್ಲಿ ವಿಫಲಳಾಗುತ್ತಿದ್ದಳು. ಹಾಗೆಂದು ಕಾರ್ತಿಕನಿಗೆ ಮದುವೆ ಬೇಡವೆಂಬ ಭಾವವೂ ಅಲ್ಲ ಅಥವಾ ಯಾರೂ ಹೆಣ್ಣು ಕೊಡಲು ಮುಂದಾಗಲಿಲ್ಲವೆಂದಲ್ಲ. ಭಾವ ಅಂದರೆ ವಿನೋದಾಳ ಗಂಡ ರಾಮಚಂದ್ರ ಭಟ್ಟರು ಅವರ ಮನೆಯ ಪಕ್ಕದಲ್ಲೊಬ್ಬ ಹುಡುಗಿಯ ಬಗ್ಗೆ ತಿಳಿಸಿದ್ದರು. ಅಂತೆಯೆ ಅದೊಂದು ದಿನ ಕಾರ್ತಿಕ ಪ್ರಥಮ ಬಾರಿಗೆ ಅಮ್ಮ, ತಂಗಿ ವಿನೋದಾ, ಭಾವ ಮತ್ತು ಸಣ್ಣ ತಂಗಿ ವಾರಿಜಾಳ ಜತೆ ಹುಡುಗಿ ನೋಡಲೆಂದು ಹೋಗಿದ್ದ ಕನಸುಗಳನ್ನು ಕಟ್ಟಿಕೊಂಡು. ಹುಡುಗಿ ಚೆನ್ನಾಗಿಯೂ ಇದ್ದಳು. ಹುಡುಗಿ ನೋಡುವ ಶಾಸ್ತ್ರವಾಗಿ ಫಲಾಹಾರ ಮಾಡಿ ವಾಪಸು ಮನೆಗೆ ಬಂದು ತಿಂಗಳಾದರೂ ಹುಡುಗಿ ಕಡೆಯಿಂದ ಉತ್ತರವಿಲ್ಲದಾಗ ಭಾವ ವಿಚಾರಿಸಲಾಗಿ ನೆಲ್ಲಿತಡ್ಕ ನಾಗರಿಕರ ನಾಡಲ್ಲವೆಂಬ ಕಾರಣಕ್ಕೆ ತಪ್ಪಿ ಹೋಯಿತೆಂದು ಗೊತ್ತಾಯಿತು. ಅದೇ ರೀತಿ ಐದಾರು ಕಡೆಗಳಲ್ಲಿ ಈ ಪ್ರಕ್ರಿಯೆಯು ಮುಗಿಯುವಾಗ ಮತ್ತು ಇದೇ ಕಾರಣಕ್ಕೆ ಸಂಬಂಧಗಳು ಮುರಿಯುವಾಗ ಕಾರ್ತಿಕನಿಗೆ ಯೋಗ್ಯತೆ ಇದ್ದರೂ ಯೋಗವೇ ಇಲ್ಲದಿದ್ದರೆ ತನಗೆ ಮುಂದೆ ಭವಿಷ್ಯದಲ್ಲಿ ಮದುವೆ ಆಗಬಹುದೆಂಬ ಆಸೆಗಳು ಕಡಿಮೆಯಾಗತೊಡಗಿದ್ದು ಅಸಹಜವಲ್ಲ.

ಇನ್ನೇನಿದ್ದರೂ ತಂಗಿ ವಾರಿಜಾಳಿಗೆ ಮದುವೆ ಆಗಲಿ ಆಮೇಲೆ ನೋಡೋಣವೆಂದು ತನ್ನ ಕಾಯಕದಲ್ಲಿ ತೊಡಗಿಕೊಂಡಿದ್ದಾಗಲೆ ಅಲ್ಲವೆ ಬದಲಾದ ಭಾವದಲ್ಲಿ ಕಮಲಿಯ ಪರಿಚಯವಾದದ್ದು. ಹಾಗೆಂದು ಕಾರ್ತಿಕ ಈ ಹಿಂದೆ ಹುಡುಗಿ ನೋಡಲೆಂದೇ ಹೋದ ಕಡೆಗಳಲ್ಲಿ ಹುಡುಗಿ ನೋಡುವಾಗ ಯಾವ ಹುಡುಗಿಯ ಮೇಲೂ ಇಂಥ ಭಾವಗಳು ಉತ್ಪತ್ತಿಯಾಗದೇ ಇದ್ದದ್ದು ಕೂಡ ಕಾಕತಾಲೀಯವೆ ಇರಬಹುದೇ ಎಂಬುದೂ ಗೊಂದಲವೇ ಆಗಿತ್ತು ಕಾರ್ತಿಕನಿಗೆ. ಇಲ್ಲಿ ಜಾತಿಯ ಪ್ರಶ್ನೆ ಇಲ್ಲದಿದ್ದರೆ ಖಂಡಿತ ಕಾರ್ತಿಕನಿಗೆ ಕಮಲಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಅರ್ಹತೆ ಇತ್ತು ಎಂಬುದೂ ಸುಳ್ಳಲ್ಲ. ಆದರೆ ಮದುವೆ ನೆಂಟಸ್ತಿಕೆ ಎಂಬಲ್ಲಿಗೆ ಬಂದಾಗ ಸಂಬಂಧಗಳು ಸ್ವಜಾತಿಯಲ್ಲಿ ಆಗಿ ಹೋಗುವುದೇ ಸಂಪ್ರದಾಯವಾದಾಗ ಅಂತೆಯೇ ಸಮಾಜ ವಿಜಾತಿಯ ಮದುವೆಗಳನ್ನು ಒಪ್ಪದೇ ಇರುವಾಗ ಕಮಲಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುವಲ್ಲಿ ಕಾರ್ತಿಕನಿಗೆ ಯಾವ ಆಶಾಭಾವವೂ ಉಳಿಯದಿದ್ದರೆ ಸಹಜ ತಾನೆ.

ಏನೇ ಇರಲಿ ಈ ವಿಷಯವನ್ನು ಇಲ್ಲಿಗೇ ಬಿಟ್ಟು ಬಿಡುವುದೇ ಒಳ್ಳೆಯದೆಂದು ತೀರ್ಮಾನಿಸಿದಾಗ ಅಂತೆಯೇ ಮೊದಲಾಗಿ ವಾರಿಜಾಳ ಮದುವೆಯ ಜವಾಬ್ದಾರಿ ಇದ್ದುದರಿಂದ ಅಂದಿನ ಕ್ಷಣಿಕವಾದ ಭಾವಕ್ಕೆ ಪ್ರಾಶಸ್ತ್ಯ ಕೊಡಬಾರದೆಂದು ಯೋಚಿಸಿದಾಗ ಒಂದಷ್ಟು ಸಮಾಧಾನವಾಗಿತ್ತು ಕಾರ್ತಿಕನಿಗೆ. ಅಂತೆಯೇ ಕಾರ್ತಿಕ ಪ್ರಾಯದಲ್ಲಿ ಸಣ್ಣವನಾದರೂ ವ್ಯವಹಾರ ಜ್ಞಾನ ಬಹಳಷ್ಟಿತ್ತು. ಅದಕ್ಕೆ ಕಾರಣ ಒಂದು ಸ್ವಾಭಿಮಾನವಾದರೆ ಎರಡನೆಯದು ಬಡತನ. ಆದ್ದರಿಂದ ಹರೆಯದಲ್ಲಿ ಸಹಜ ಆಸೆಗಳುಂಟಾದರೂ ಅದಕ್ಕೆ ಸಂಸ್ಕಾರದ ಚೌಕಟ್ಟು ಇರುವುದರಿಂದ ಅದನ್ನು ಮೀರುವುದು ಸಭ್ಯತನವಲ್ಲವೆಂಬುದೂ ಆತನಿಗೆ ಅರಿವಿತ್ತು. ಮತ್ತೊಂದು ವಿಚಾರವೆಂದರೆ ಪ್ರೀತಿ ಎನ್ನುವುದು ಏಕಮುಖವಾಗಬಾರದು. ಪರಸ್ಪರ ಇಬ್ಬರಿಗೂ ಒಪ್ಪಿಗೆ ಇದ್ದಲ್ಲಿ ಮಾತ್ರ ಅದಕ್ಕೊಂದು ಅರ್ಥವಿದೆ. ಆದರೆ ಇಲ್ಲಿ ಅದೂ ಕಷ್ಟವೆ ಯಾಕೆಂದರೆ ಜಾತಿಯ ಬೇಲಿ ಬಹಳಷ್ಟು ಭದ್ರವಾಗಿರುವುದು. ಮಾತ್ರವಲ್ಲ ಅದನ್ನು ಮೀರುವ ಪ್ರಯತ್ನವನ್ನು ಯಾರೂ ಮಾಡದೇ ಇರುವುದು. ಹಾಗೆಂದು ಈ ಹಿಂದೆ ಇದನ್ನು ಯಾರೂ ಮೀರಿಲ್ಲವೆಂದಲ್ಲ. ಆದರೆ ಅದು ಕದ್ದು ಮುಚ್ಚಿಯೇ ಹೊರತು ನ್ಯಾಯವಾಗಿಯೂ ಅಲ್ಲ, ಜೀವನ ಸಂಗಾತಿಗಾಗಿಯೂ ಅಲ್ಲ. ಬರಿದೆ ತತ್ಕಾಲದ ಅವಶ್ಯಕತೆಗಷ್ಟೆ.

“ಏನು ಕಾರ್ತಿಕ ಭಾರಿ ಯೋಚನೆಯಲ್ಲಿದ್ದ ಹಾಗಿದೆ” ಜೋರಾದ ಮಳೆಗೆ ಅರೆಬರೆ ಒದ್ದೆ ಆಗಿಕೊಂಡು ಬಂದಂಥ ಆದಿತ್ಯ ಜಗಲಿಯಲ್ಲಿ ಕೊಡೆ ಮಡಚುತ್ತ ಕೇಳಿದ. ಅಚಾನಕ್ಕಾಗಿ ಬಂದಂಥ ಮಳೆಗೆ ವೇಳೆ ಕಳೆಯಲೆಂದು ಅಕ್ಕ ಪಕ್ಕದ ಮನೆಯವರು ಹೀಗೆ ಇನ್ನೊಬ್ಬರ ಮನೆಗಳಿಗೆ ಹೋಗುವುದು, ಅಲ್ಲಿ ಚದುರಂಗದಾಟಕ್ಕೆ ತಮ್ಮನ್ನೇ ತಾವು ಮರೆಯುವುದು, ಹೆಚ್ಚು ಜನರಿದ್ದರೆ ಇಸ್ಪೀಟಾಟ.. ಹೀಗೆ ನೆಲ್ಲಿತಡ್ಕದಲ್ಲಿ ಇದೆಲ್ಲ ಸಾಮಾನ್ಯ ವಿಷಯ. ಆದಿತ್ಯನನ್ನು ನೋಡಿದವನೆ ಕಾರ್ತಿಕ ತನ್ನ ಲೋಕದಿಂದ ವಾಸ್ತವಕ್ಕೆ ಬಂದು “ಹ್ಞಾ.. ಬಾರೊ.. ಬಹಳ ಒಳ್ಳೆಯದಾಯಿತು. ನನಗೂ ವೇಳೆ ಹೋಗುತ್ತಿರಲಿಲ್ಲ.” ಎಂದು ಆದಿತ್ಯನನ್ನು ಬರ ಮಾಡಿಕೊಂಡ. ಲೋಕಾಭಿರಾಮದ ಮಾತಿನ ನಂತರ ಹುಡುಗರು ನೇರ ಚದುರಂಗದಾಟದತ್ತ ವಾಲಿದರು. ಚದುರಂಗದಾಟದಲ್ಲಿ ಇಬ್ಬರೂ ಬಹಳ ಚಾಣಾಕ್ಷರೇ ಆಗಿರುವಾಗ ಕೆಲವೊಮ್ಮೆ ಇಟ್ಟಂಥ ಒಂದೇ ಆಟ ಮೂರು ಗಂಟೆಗಳವರೆಗೂ ವಿಸ್ತರಿಸುವುದು ಉಂಟು. ಸುಲಭದಲ್ಲಿ ಯಾರೂ ಬಿಟ್ಟುಕೊಡುವವರಲ್ಲ. ಆದ್ದರಿಂದ ಮಳೆಗಾಲದ ವೇಳೆ ಕಳೆಯಲು ಅಳಂಬದಲ್ಲಿ ಚದುರಂಗ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ಸುಳ್ಳಲ್ಲ. ಅದರಲ್ಲೂ ಕಾರ್ತಿಕನ ಅಜ್ಜನಾದ ಗೋವಿಂದ ಹೆಬ್ಬಾರರು ನೆಲ್ಲಿತಡ್ಕಕ್ಕೆ ಚಾಂಪಿಯನ್ ಎಂದೇ ಹೇಳಬಹುದು. ಅವರನ್ನು ಸೋಲಿಸುವುದೆಂದರೆ ಸಾಧಾರಣವಾಗಿ ಯಾರಿಗೂ ಆಗದೆ ಇರುವಂಥ ವಿಚಾರ. ಎಲ್ಲೊ ಒಂದೆರಡು ಬಾರಿ ಕಾರ್ತಿಕ ಹಾಗೂ ಆದಿತ್ಯ ಅಜ್ಜನನ್ನು ಸೋಲಿಸಿದ್ದೂ ಇದೆ. ಆದರೆ ಅದು ಕಣ್ತಪ್ಪಿನಿಂದ ಅಥವಾ ಔದಾಸೀನ್ಯದಿಂದ ಆಗುತ್ತಿದ್ದ ಸೋಲುಗಳೇ ಹೊರತು ಹುಡುಗರ ಚಾಲಾಕಿತನದಿಂದ ಎಂದು ಹೇಳುವಂತಿಲ್ಲ. ಆದರೆ ಯಾವತ್ತಾದರು ಗೋವಿಂದ ಹೆಬ್ಬಾರರು ಸೋತಾಗ ಹುಡುಗರಿಗೆ ಒಂದು ವಾರಕ್ಕಾಗುವಷ್ಟು ಹುಮ್ಮಸ್ಸು ಬರುತ್ತಿತ್ತು. ಮಾತ್ರವಲ್ಲ ಮುಂದೆ ಹಲವಾರು ಆಟಗಳನ್ನು ಸೋತರೂ ಆ ಒಂದು ಗೆಲುವು ಇನ್ನೊಂದು ಗೆಲುವಿನವರೆಗೆ ಹೆಮ್ಮೆಯ ವಿಷಯವೇ ಆಗಿತ್ತು. ವಂಶ ಪಾರಂಪರ್ಯವಾಗಿ ಬಂದಂಥ ಚದುರಂಗದಾಟ ನೆಲ್ಲಿತಡ್ಕದ ಅಸ್ಮಿತೆಯೂ ಹೌದು. “ಚತುರಂಗ ಆಡೋಣವೆ ” ಎಂದು ಆದಿತ್ಯ ಕೇಳಿದರೆ ಮನಸ್ಸಿಲ್ಲದ ಮನಸ್ಸಿನಿಂದ ಕಾರ್ತಿಕನು “ಹ್ಞೂ.. ” ಅಂದು ಬಿಟ್ಟ. ಆಟ ಪ್ರಾರಂಭವಾಯಿತು. ಹತ್ತು ನಿಮಿಷದಲ್ಲೆ ಕಾರ್ತಿಕನ ರಾಣಿ ಆದಿತ್ಯ ಹೊಡೆದು ಬಿಟ್ಟ. ಹೆಚ್ಚಿನ ಸಲ ಕಾರ್ತಿಕನದೇ ಮೇಲುಗೈ ಆಗುತ್ತಿತ್ತು. ಆ ದಿನವೂ ಆದಿತ್ಯ ಸೋಲುವ ಹಂತಕ್ಕೆ ಬಂದಿದ್ದ. ಆದರೆ ಕಾರ್ತಿಕನ ಚಿತ್ತ ಚದುರಂಗದಲ್ಲಿ ಇರಲಿಲ್ಲವೆಂದು ರಾಣಿ ಕಳಕೊಂಡಾಗ ಆದಿತ್ಯನಿಗೆ ಮನದಟ್ಟಾಗಿತ್ತು. ಅಲ್ಲಿಗೆ ಕಾರ್ತಿಕನೆ ಸೋಲೊಪ್ಪಿಕೊಂಡು ಆಟವನ್ನು ಮುಗಿಸಿದ.. ಓದಿ… ಪ್ರಚೋದಿಸಿ…ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

************
ಬಂದಂಥ ಹಿತೈಷಿಗಳು, ಸಂಬಂಧಿಕರು, ನೆಂಟರಾದಿ ಎಲ್ಲರೂ ಎರಡು ಮನೆತನಗಳನ್ನು ಒಂದು ಮಾಡಿದ ನವ ಜೋಡಿಗೆ ಶುಭ ಹಾರೈಸಿ ಸಂಭ್ರಮದಲ್ಲಿ ಪಾಲ್ಗೊಂಡು ಅದ್ದೂರಿಯ ಊಟವನ್ನು ಮುಗಿಸಿ ಅವರವರ ಮನೆ ಸೇರಲನುವಾದರು. ಇತ್ತ ಚೆಲುವಮ್ಮ ರಾಮಯ್ಯ ಗೌಡರೊಡನೆ ಅಳಂಬದ ಸೊಸೆಯಾಗಿ ಸಂಕ್ರೇ ಗೌಡರ ಮನೆಯನ್ನು ತುಂಬಿಸಿದರೆ ಕಮಲಿಯು ಕಾರ್ತಿಕನ ಮನದೊಳಗೆ ಸೇರತೊಡಗಿದಳು.

ಕಾರ್ತಿಕನಲ್ಲಾದ ಮಾನಸಿಕ ತುಮುಲದ ಯಾವ ಪರಿವೆಯೂ ಇಲ್ಲದೆ ಕಮಲಿಯು ಸಹಜವಾಗಿ ಹಾಗೂ ಹೊಸತಾಗಿ ಬಂದಂಥ ಅತ್ತಿಗೆಯೊಡನೆ ಬೆರೆತು ಅಣ್ಣನ ಹೊಸ ಜೀವನದ ಹಾದಿಯಲ್ಲಿ ತನ್ನ ಪಾತ್ರವನ್ನು ಹುುಡುಕುತ್ತಿದ್ದಳು. ಅದೆಷ್ಟೊ ಕನಸುಗಳನ್ನು ಹೊತ್ತುಕೊಂಡು ಬಂದಂಥ ಅತ್ತಿಗೆ ಚೆಲುವಮ್ಮ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಬಹಳಷ್ಟು ಸಮಯವೇ ಬೇಕೆನ್ನುವುದು ಸತ್ಯ.

ಇತ್ತ ಸುಳ್ಕೇರಿಯಲ್ಲಿ ಪ್ರಕಾಶನ ಅಡಿಕೆ ವ್ಯಾಪಾರ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗತೊಡಗಿ ಜೀವನಕ್ಕೆ ಒಂದು ವ್ಯವಸ್ಥೆ ಆಗಿತ್ತು. ಪುರುಷೋತ್ತಮ ಭಟ್ಟರ ಸಹಕಾರದೊಂದಿಗೆ ಹಾಗೂ ಸುಳ್ಕೇರಿಯ ಆಸುಪಾಸಿನ ಜನರ ವಿಶ್ವಾಸದೊಂದಿಗೆ ಪ್ರಕಾಶ ಬಹಳ ಖುಷಿಯಿಂದ ಅಣ್ಣ ಕಾರ್ತಿಕ ಮಾಡಿಕೊಟ್ಟಂಥ ವ್ಯವಸ್ಥೆಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದ. ವ್ಯಾಪಾರದ ಸೂಕ್ಷ್ಮತೆಗಳನ್ನು ದಿನ ಕಳೆದಂತೆ ಕಲಿತುಕೊಳ್ಳುವಲ್ಲಿ, ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ, ಅಡಿಕೆಯ ಧಾರಣೆಗಳು ಏರಿಳಿತವಾಗಬಹುದಾದ ಕಾಲ ಘಟ್ಟಗಳನ್ನು ಅರ್ಥೈಸುವಲ್ಲಿ ಕೂಡ ಸಾಕಷ್ಟು ಪಳಗಿದ್ದ ಪ್ರಕಾಶ. ನೆಲ್ಲಿತಡ್ಕಕ್ಕೂ ಸುಳ್ಕೇರಿಗೂ ಸಾಧಾರಣ ಎರಡು ಮೈಲುಗಳಷ್ಟು ದೂರವಿದ್ದುದರಿಂದ ಪ್ರಕಾಶ ದಿನಾಲು ನೆಲ್ಲಿತಡ್ಕಕ್ಕೆ ಬರುತ್ತಿರಲಿಲ್ಲ. ವಿಶೇಷ ದಿನಗಳಲ್ಲಿ ಅಥವಾ ವಾರಕ್ಕೊಂದೆರಡು ದಿನ ಬಂದು ಹೋಗುತ್ತಿದ್ದ. ಅಂತೆಯೇ ನೆಲ್ಲಿತಡ್ಕದಲ್ಲಿ ಇರುವಂಥ ಆರು ಮನೆಗಳು ಕೂಡ ಹಿಂದಿನಂತೆ ತುಂಬಿದ ಮನೆಗಳಾಗಿ ಉಳಿದಿಲ್ಲ. ಯುವಕರ ಸಂಖ್ಯೆ ಕಡಿಮೆ. ನೆಲ್ಲಿತಡ್ಕದ ಹುಡುಗಿಯರಿಗೆ ಬಹಳ ಬೇಗ ಯಾವುದೇ ಕಷ್ಟವಿಲ್ಲದೆ ಒಳ್ಳೆಯ ಸಂಬಂಧಗಳು ದೊರಕಿ ಮದುವೆ ಆಗಿ ಹೊರಗೆ ಹೋದರೆ ಉಳಿದಂಥ ಯುವಕರಿಗೆ ಮದುವೆ ಆಗುವುದು ಕಷ್ಟವಾಗಿತ್ತು. ಕಾರಣವೆಂದರೆ ಹಳ್ಳಿಗೆ ಯಾರೂ ಹೆಣ್ಣು ಕೊಡಲು ಒಪ್ಪುತ್ತಿರಲಿಲ್ಲ. ಒಂದು ವೇಳೆ ಬಹಳ ಪ್ರಯತ್ನ ಪಟ್ಟರೆ ಋಣಾನುಬಂಧವೋ ಅದೃಷ್ಟವೋ ಎಂಬಂತೆ ಯೌವನ ಕಳೆಯುವ ಮುಂಚೆ ಮದುವೆಗಳಾದರೆ ಅದೊಂದು ಪವಾಡವೇ ಎನ್ನಬಹುದೊ ಏನೊ. ಆದರೂ ಯಾರೂ ಮದುವೆ ಆಗದೆ ಉಳಿದದ್ದಿಲ್ಲ. ಆದರೆ ಹೆಣ್ಣು ಮಕ್ಕಳೇ ಇದ್ದಂಥ ಮನೆಗಳು ಮಕ್ಕಳ ಮದುವೆಯಾದ ಮೇಲೆ ಖಾಲಿಯಾಗಿ ಉಳಿದಾಗ ಸಹಜವಾಗಿಯೆ ಮನೆಯ ಭವಿಷ್ಯವೇ ಕೊನೆಯಾದಂತೆ. ಅದೇ ರೀತಿ ಗಣೇಶ ಹೆಬ್ಬಾರರ ದೊಡ್ಡಪ್ಪನಾದ ಗೋವಿಂದ ಹೆಬ್ಬಾರರಿಗೆ ಮೂವರು ಹೆಣ್ಣು ಮಕ್ಕಳೇ ಇದ್ದುದರಿಂದ ಅವರ ನಂತರ ಆ ಮನೆ ಖಾಲಿಯಾದಂತೆಯೆ. ಮನೆ ಅಳಿಯನಾಗಿ ಕೂಡ ನೆಲ್ಲಿತಡ್ಕಕ್ಕೆ ಯಾರೂ ಬರಲು ತಯಾರಿಲ್ಲದ ಕಾರಣ ನೆಲ್ಲಿತಡ್ಕದಲ್ಲಿ ಕಾಲಾಂತರದಲ್ಲಿ ಬ್ರಾಹ್ಮಣರ ಮನೆಗಳು ಅವಸಾನದತ್ತ ಸಾಗುತ್ತಿರುವ ಲಕ್ಷಣಗಳು ಕಾಣಲು ಪ್ರಾರಂಭವಾದದ್ದಂತು ಸುಳ್ಳಲ್ಲ.

ಆದರೆ ನೆಲ್ಲಿತಡ್ಕದಲ್ಲಿ ಕೆಲಸ ಮಾಡುವ ಒಂದಷ್ಟು ಯುವಕರು ಇದ್ದುದರಿಂದ ತೋಟದ ಕೆಲಸಗಳಾಗಲಿ, ಮನೆಯಲ್ಲಿ ಸಮಾರಂಭಗಳಾದರೆ ಅಡುಗೆ-ಚಪ್ಪರ ಇತ್ಯಾದಿ ಕೆಲಸಗಳಿಗಾಗಲಿ ಪರಸ್ಪರ ಹೊಂದಾಣಿಕೆಯಿಂದ ನೆರವಾಗುತ್ತ ವ್ಯವಹರಿಸುತ್ತಿರುವುದರಿಂದ ತೋಟದ ಕೆಲಸಗಳು ಕೂಡ ಕಾಲ ಕಾಲಕ್ಕೆ ಸರಿಯಾಗಿ ನಡೆಯುತ್ತಿದ್ದವು. ಗೋವಿಂದ ಹೆಬ್ಬಾರರಿಗೆ ಗಂಡು ಮಕ್ಕಳಿರದ ಕಾರಣ ಹಾಗೂ ಗಂಡ ಹೆಂಡತಿ ಇಬ್ಬರೂ ವೃದ್ಧಾಪ್ಯದಲ್ಲಿರುವ ಕಾರಣ ಅವರ ಎಲ್ಲ ವ್ಯವಹಾರಗಳನ್ನು ಗೋಪಾಲ ಹೆಬ್ಬಾರರ ಮಗನಾದ ಆದಿತ್ಯನೇ ನೋಡಿಕೊಂಡಿದ್ದನು. ಗಣೇಶ ಹೆಬ್ಬಾರ ಮತ್ತು ಗೋಪಾಲ ಹೆಬ್ಬಾರರ ನಡುವೆ ಭಾಸ್ಕರ ಹೆಬ್ಬಾರ ಎಂಬವರೊಬ್ಬರು ಇದ್ದರು. ಅವರಿಗೆ ಮದುವೆಯಾಗದೆ ಸಣ್ಣ ಪ್ರಾಯದಲ್ಲೆ ಯಾವುದೊ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದರಿಂದ ಒಟ್ಟಾರೆಯಾಗಿ ನೆಲ್ಲಿತಡ್ಕದಲ್ಲಿ ಆರು ಮನೆಗಳಲ್ಲಿ ಸದ್ಯ ಉಳಿದುಕೊಂಡ ಮನೆಗಳು ಬರಿದೆ ನಾಲ್ಕು ಮಾತ್ರ. ಇರುವುದು ಲೆಕ್ಕದ ಮನೆಗಳಾದರೂ ಯಾವತ್ತೂ ಅಂದಿನವರೆಗೆ ನಡೆದುಕೊಂಡು ಬಂದಂಥ ವ್ಯವಹಾರಗಳು ಕಷ್ಟವೆಂದೆನಿಸಲಿಲ್ಲ. ಆದರೆ ಮುಂದೆ ಇದೇ ರೀತಿಯಲ್ಲಿ ಮುಂದುವರಿಯಲಾರದು ಎನ್ನುವುದೂ ಸುಳ್ಳಲ್ಲ.

ಗೋಪಾಲ ಹೆಬ್ಬಾರ ಮತ್ತು ಗಣೇಶ ಹೆಬ್ಬಾರರು ಅಣ್ಣ ತಮ್ಮಂದಿರೇ ಆದರೂ ಸ್ವಭಾವದಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದವು. ಗಣೇಶ ಹೆಬ್ಬಾರರು ಧಾರಾಳಿ ಆದರೆ ಗೋಪಾಲ ಹೆಬ್ಬಾರರು ಪ್ರತಿಯೊಂದಕ್ಕೂ ಲೆಕ್ಕಾಚಾರ ಹಾಕಿ ವ್ಯವಹಾರ ಮಾಡುವವರು. ಆದರೂ ಅಣ್ಣ ತಮ್ಮಂದಿರ ಅನ್ಯೋನ್ಯತೆಗೆ ತೊಂದರೆ ಇರಲಿಲ್ಲ. ಅಂತೆಯೇ ಅವರ ಮಕ್ಕಳಾದ ಕಾರ್ತಿಕನಾಗಲಿ ಆದಿತ್ಯನಾಗಲಿ ಸಣ್ಣಂದಿನಿಂದಲೂ ಒಟ್ಟಿಗೇ ಬೆಳೆದವರಾದ್ದರಿಂದ ಮನೆ ಎರಡಾದರೂ ಮನಸ್ಸು ಒಂದೇ ಎನ್ನುವಂತಿದ್ದರು. ಅವರೊಳಗೆ ಕೆಲವು ವಿಚಾರಗಳಲ್ಲಿ ಸಹಜವಾದ ಭಿನ್ನಾಭಿಪ್ರಾಯಗಳಿದ್ದರೂ ಯಾವುದೇ ನಿರ್ಣಯ ಕೈಗೊಳ್ಳುವಲ್ಲಾಗಲಿ, ಯಾವುದೇ ಗುಟ್ಟನ್ನು ಮನಸ್ಸಲ್ಲಿಟ್ಟುಕೊಳ್ಳುವುದಾಗಲಿ, ಗೆಳೆತನದಲ್ಲಾಗಲಿ ಇರುತ್ತಿರಲಿಲ್ಲ. ಇನ್ನೊಂದು ವಿಚಾರವೆಂದರೆ ಲೆಕ್ಕದ ಮನೆಗಳಿದ್ದುದರಿಂದ ಎಲ್ಲಿವರೆಗೆ ಅನ್ಯೋನ್ಯತೆಯಿಂದ ಇರಬಹುದೊ ಅಲ್ಲಿವರೆಗೆ ಮಾತ್ರ ನೆಮ್ಮದಿ ಎಂಬುದು ಎಲ್ಲರಿಗೂ ತಿಳಿದಿದ್ದರಿಂದ ಯಾರೂ ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡದೆ ಅಲ್ಲಿಂದಲ್ಲಿಗೆ ಸರಿ ಮಾಡಿಕೊಳ್ಳುತ್ತಿದ್ದರು.

ರಾಮಯ್ಯ ಗೌಡರ ಮದುವೆಗೆ ಕಾರ್ತಿಕನ ಜತೆಯಲ್ಲಿ ಆದಿತ್ಯನೂ ಹೋಗಿದ್ದನಾದರು ಕಾರ್ತಿಕನು ಅಂದು ಕಮಲಿಯನ್ನು ನೋಡಿದಾಗ ತನಗಾದ ಅನುಭವವನ್ನು ಆದಿತ್ಯನಲ್ಲಿ ತಿಳಿಸಲಿಲ್ಲ. ಅದಕ್ಕೆ ಇನ್ನೊಂದು ಕಾರಣವೆಂದರೆ ತನ್ನ ಮನಸ್ಸಿನ ಭಾವವು ಕ್ಷಣಿಕವೊ, ಅನುಚಿತವೊ, ಪಾಪವೊ, ದೈವ ಸಂಕಲ್ಪವೊ ಎಂಬ ಗೊಂದಲದೊಳಗೆ ಇದ್ದುದರಿಂದ ತನ್ನ ಹೊರತಾಗಿ ಇತರರ್ಯಾರಿಗೂ ಈ ವಿಷಯ ತಿಳಿಯುವುದು ಅಸಂಭವವೇ ಆಗಿತ್ತು. ಕಾರ್ತಿಕನಿಗೆ ಮಾತ್ರ ರಾಮಯ್ಯ ಗೌಡರ ಮದುವೆ ಎನ್ನುವುದು ರಾಮಯ್ಯನಿಗೆ ಹೇಗೆ ಹೊಸ ಅನುಭವಗಳ ಪ್ರಾರಂಭವೊ ಅಂತೆಯೇ ತನಗೂ ಬೇರೆಯದೇ ಆದ ಅನುಭವಗಳನ್ನು ಕಲೆ ಹಾಕಿದ ಸಂಭ್ರಮವಾಗಿತ್ತು. ಅಂತೆಯೆ ಕಾರ್ತಿಕನ ಮನಸ್ಸೊಳಗಿನ ತಳಮಳ ಅಥವಾ ಚಿತ್ತ ಚಾಂಚಲ್ಯ ಆತನನ್ನು ಅಂದಿನಿಂದ ಅಧೀರನನ್ನಾಗಿಸಿದ್ದಂತು ಹೌದು. ಜಗಲಿಯ ಮೇಲೆ ಸುಮ್ಮನೆ ಅನ್ಯಮನಸ್ಕನಾಗಿ ಯೋಚಿಸುತ್ತಿರುವಾಗ ಹಿಂದಿನ ಘಟನೆಗಳು ಮನಸ್ಸಿನ ಚಿತ್ರಪಟದಲ್ಲಿ ಮೂಡಲಾರಂಭಿಸಿತ್ತು.. ಓದಿ ಪ್ರಚೋದಿಸಿ.. ಪ್ರತಿಚ್ರಿಯಿಸಿ.. ಮುಂದೆ ಇನ್ನೂ ಇದೆ.
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅಳಂಬ.. ೨೨
************
ಅಳಂಬದಂಥ ಹಳ್ಳಿಯಲ್ಲಿ ಶುಭ ಕಾರ್ಯಕ್ರಮಗಳಾಗುವುದು ಅಪರೂಪವೆ. ಅದರಲ್ಲೂ ಮದುವೆಯಂಥ ಸಂಭ್ರಮವನ್ನು ಊರಿನ ಎಲ್ಲರೂ ಸೇರಿ ತಮ್ಮ ಸ್ವಂತ ಕಾರ್ಯಕ್ರಮದಂತೆ ಪರಿಗಣಿಸಿ ತೊಡಗಿಸಿಕೊಳ್ಳುವುದರಲ್ಲಿ ಎಲ್ಲರೂ ಇಷ್ಟಪಡುತ್ತಿದ್ದರು. ಅಂತೆಯೇ ಸಣ್ಣ ಮಕ್ಕಳಿಂದ ತೊಡಗಿ ಹಿರಿಯರವರೆಗು ಅವರವರಿಂದ ಆಗುವಂಥ ಎಲ್ಲ ಕೆಲಸಗಳನ್ನು ಸಮರ್ಪಣಾ ಭಾವದಿಂದ ಮಾಡುತ್ತಿದ್ದರು. ಅಂಗಳವನ್ನು ಸಮ ತಟ್ಟು ಮಾಡುವುದು, ಚಪ್ಪರದ ಕಂಬ ಹೂಳಲು ಗುಳಿಗಳನ್ನು ತೋಡುವುದು, ಚಪ್ಪರ ಹಾಕಲು ಅಡಿಕೆ ಮರದ ತುಂಡುಗಳು, ಅಡಿಕೆ ಮರದ ದಬ್ಬೆ, ಅಡಿಕೆ-ತೆಂಗಿನ ಗರಿಗಳನ್ನು ಸಂಗ್ರಹಿಸಿ ಸೊಗಸಾದ ಚಪ್ಪರ ತಯಾರು ಮಾಡುವಂಥ ಕೆಲಸಗಳಲ್ಲಿ ಗಂಡಸರು ತೊಡಗಿಸಿಕೊಂಡರೆ ಮಾವಿನ ಎಲೆಯ ತೋರಣ ಕಟ್ಟುವಿಕೆ, ಅಡಿಕೆಯ ಸಿಂಗಾರ-ಅಡಿಕೆ ಗೊನೆ-ಎಳನೀರಿನ ಹಣ್ಣಡಿಕೆಯ ಗೊಂಚಲುಗಳನ್ನು ಚಪ್ಪರಕ್ಕೆ ಕಟ್ಟಿ ಸುಂದರಗೊಳಿಸುವಿಕೆಯಲ್ಲಿ ಹುಡುಗರು ಹುಡುಗಿಯರು ಪಾಲ್ಗೊಳ್ಳುತ್ತಿದ್ದರು. ಅಂತೆಯೇ ಕಸ ಗುಡಿಸುವುದು ಚಪ್ಪರದಡಿಯಲ್ಲಿ ಅಂಗಳಕ್ಕೆ ಸೆಗಣಿ ಸಾರಿಸುವುದು, ಅಡುಗೆಯ ಪಾತ್ರೆಗಳನ್ನು ತೊಳೆದಿಡುವುದು ಮುಂತಾದ ಕೆಲಸಗಳಲ್ಲಿ ಹಿರಿಯ ಹೆಂಗಸರು ಭಾಗವಹಿಸುತ್ತಿದ್ದರು. ಈ ಗೌಜಿಯಲ್ಲಿ ಸಣ್ಣ ಮಕ್ಕಳು ಆಟವಾಡುವುದು, ಜಗಳ ಮಾಡಿಕೊಳ್ಳುವುದು, ಕಾಲು ಜಾರಿ ಬೀಳುವುದು, ಮೈ ಕೈಗಳಿಗೆ ಸಾರಿಸಿದ ಸೆಗಣಿಯನ್ನು ಮೆತ್ತಿಸಿಕೊಳ್ಳುವುದು, ಆಯಾ ಮಕ್ಕಳ ಅಮ್ಮಂದಿರ ಕಾಳಜಿಯನ್ನು ಹೆಚ್ಚಿಸಿದರೆ ಇತ್ತ ಕೋಳಿಗಳು ನಾಯಿಗಳು ಕುತೂಹಲದಿಂದ ಓಡಾಡುವುದರ ಜತೆಗೆ ಪಕ್ಕದ ಹಟ್ಟಿಯ ಗೋವುಗಳ ಕಣ್ಣುಗಳಲ್ಲೂ ಸಂಭ್ರಮ ಪ್ರತಿಫಲಿಸುವುದು ಸೂಕ್ಷ್ಮ ಗ್ರಾಹಿಗಳಿಗೆ ಕಾಣುತ್ತಿರುವುದೂ ಸುಳ್ಳಲ್ಲ.

ಅರಸ್ಕಟ್ಟೆ ಚಂದು ಗೌಡರ ಮನೆಯಲ್ಲಿ ಗುತ್ತಿನ ಮನೆಯವರು, ಸ್ವಜಾತಿಯ ಹಿರಿಯರು, ಬಂಧು ಬಾಂಧವರೆಲ್ಲ ಸೇರಿ ಬಹಳ ಗೌಜಿಯಿಂದ ಅದ್ದೂರಿಯಾಗಿಯೇ ಮದುವೆಯೆಂಬ ಶುಭ ಕಾರ್ಯವನ್ನು ಇಟ್ಟುಕೊಂಡಿದ್ದರು. ಸಂಕ್ರೇ ಗೌಡರ ಮನೆಯಂತೆ ಚಂದು ಗೌಡರ ಮನೆಯಲ್ಲಿ ಕೂಡ ಎಲ್ಲರೂ ಸಂಭ್ರಮದಲ್ಲಿದ್ದರೆ ಹೆಚ್ಚುವರಿಯಾಗಿ ಮದುವೆ ಮಂಟಪದ ತಯಾರಿ ಕೂಡ ಬಹಳ ಸೊಗಸಾಗಿ ಮಾಡಿದ್ದರು. ವಾಲಗದ ಗೌಜಿ, ಗರ್ನಾಳುಗಳ ಢಂ ಢಂ ಎಂಬ ಶಬ್ದ, ಮದುವೆಗೆ ಇನ್ನೂ ಶೋಭೆಯನ್ನು ತಂದಿತ್ತು. ರಾಮಯ್ಯ ಗೌಡನಿಗೂ ನೆಲ್ಲಿತಡ್ಕಡಕ್ಕೂ ಅವಿನಾಭಾವ ಸಂಬಂಧವಿದ್ದುದರಿಂದ ಗಣೇಶ ಹೆಬ್ಬಾರರೊಡನೆ ನೆಲ್ಲಿತಡ್ಕದ ಎಲ್ಲ ಬ್ರಾಹ್ಮಣರ ಮನೆಯಿಂದಲೂ ಮದುವೆಗೆ ಬಂದಿದ್ದರು. ವಿಶೇಷವಾದ ಸ್ವಾಗತದೊಡನೆ ಹೆಬ್ಬಾರರ ಮನೆಯವರನ್ನು ಬರಮಾಡಿಕೊಂಡ ಗೌಡರ ಕುಟುಂಬದೊಂದಿಗೆ ಎಲ್ಲರೂ ಸೇರಿಕೊಂಡದ್ದರಿಂದ ರಾಮಯ್ಯ ಗೌಡರ ಮದುವೆಗೆ ಹೊಸತನವು ಬಂದಿತ್ತು. ಅಂತೆಯೇ ಮದುವೆಯ ಕಾರ್ಯಕ್ರಮಗಳು ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಸೇರಿದ ಇನ್ನೂರಕ್ಕೂ ಹೆಚ್ಚು ಜನರ ಊಟದ ವ್ಯವಸ್ಥೆ ಪ್ರಾರಂಭವಾಯಿತು. ಇದಕ್ಕೂ ಮುಂಚಿತವಾಗಿ ಹೆಬ್ಬಾರರ ಮನೆಯವರಿಗೆಲ್ಲ ರಾಮಯ್ಯ ಗೌಡರು ದೊಡ್ಡದಾದ ಕೆಂಬಣ್ಣದ ಎಳನೀರು, ಕೆನೆ ಹಾಲು, ಹದವಾಗಿ ಹಣ್ಣಾದ ರಸ ಬಾಳೆಹಣ್ಣು, ಸಕ್ಕರೆ ಮುಂತಾದ ಫಲಾಹಾರದ ವ್ಯವಸ್ಥೆಯನ್ನು ಮಾಡಿದ್ದರು. ಮುತ್ತೇ ಗೌಡ ಮತ್ತು ಕಮಲಿ ಇದರ ವಿಶೇಷ ಕಾಳಜಿ ವಹಿಸಿಕೊಂಡಿದ್ದರು ಹೆಬ್ಬಾರರ ಮನೆ ಎಂಬ ಅಭಿಮಾನದೊಡನೆ. ಕಾರ್ತಿಕನು ಕೂಡ ತಮ್ಮ ಮನೆ ಕೆಲಸದವರೆಂಬ ಕೀಳರಿಮೆ ಇಲ್ಲದೆ ಸ್ನೇಹಿತನಂತೆ ಭಾಗವಹಿಸಿದ್ದನು. ಫಲಾಹಾರವನ್ನು ಸ್ವೀಕರಿಸಲೆಂದು ಹೆಬ್ಬಾರರ ಮನೆಯವರು ಅವರಿಗೆಂದೇ ಮೀಸಲಾದ ಸ್ಥಳಕ್ಕೆ ಹೋದರು. ಅಲ್ಲಿ ಕಮಲಿ ಮತ್ತು ಮುತ್ತೇಗೌಡ ಇವರಿಗಾಗಿ ಕಾದುಕೊಂಡಿದ್ದರು.

ಸಣ್ಣದೊಂದು ಚಪ್ಪರದ ಅಡಿಯಲ್ಲಿ ಕೂತುಕೊಳ್ಳಲು ಬೆಂಚುಗಳನ್ನಿಟ್ಟು, ಮಧ್ಯದಲ್ಲಿಟ್ಟಂಥ ಮೇಜಿನ ಮೇಲೆ ಫಲಾಹಾರದ ವ್ಯಂಜನಗಳನ್ನಿರಿಸಿ, ಕುಡಿಯಲು-ಕೈ ತೊಳೆಯಲು ಪ್ರತ್ಯೇಕವಾದ ನೀರಿನ ವ್ಯವಸ್ಥೆಯನ್ನು ನೋಡಿದರೆ ಹಸಿವಿಲ್ಲದವನೂ ಫಲಾಹಾರ ಸ್ವೀಕರಿಲೇಬೇಕೆಂಬ ಭಾವ ಬರುವುದು ಸುಳ್ಳಲ್ಲ. ಎಲ್ಲರೂ ತಮ್ಮ ತಮ್ಮ ಸ್ಥಳದಲ್ಲಿ ಕೂತು ಕೊಂಡಾಗ ಮುತ್ತೇ ಗೌಡ ಮತ್ತು ಕಮಲಿ ಕೈ ಜೋಡಿಸಿ ಹೆಬ್ಬಾರರೆ ನಿಮಗೆಂದೇ ಇಟ್ಟಂಥ ಈ ಫಲಾಹಾರವನ್ನು ಸ್ವೀಕರಿಸಿ ಎಂದು ವಿನಮ್ರವಾಗಿ ಕೇಳಿಕೊಂಡರು. ಸಹಜವಾಗಿತ್ತು ಈ ಎಲ್ಲ ಪ್ರಕ್ರಿಯೆಗಳು ಕಾರ್ತಿಕನು ಕಮಲಿಯನ್ನು ಗಮನಿಸುವಲ್ಲಿವರೆಗೆ. ಕಾರ್ತಿಕನಿಗೆ ಆ ಕ್ಷಣದಲ್ಲಿ ಅದೇನಾಯಿತೊ ಏನೊ. ಇವಳು ಕಮಲಿಯೆ?? ಇಷ್ಟು ದಿನ ನೋಡುತ್ತಿದ್ದ ಕಮಲಿಗೂ ಇಂದಿನ ಕಮಲಿಗೂ ಅದೆಷ್ಟು ವ್ಯತ್ಯಾಸ?? ಸಾದಾ ಉಡುಪಿನಲ್ಲಿ ಸಾದಾ ರೂಪದ ಕಮಲಿ ಇವಳೇನ?? ಮತ್ತೊಮ್ಮೆ ಸರಿಯಾಗಿ ಗಮನಿಸಿದ ಕಾರ್ತಿಕ. ಹೌದು ಸಂಶಯವೇ ಇಲ್ಲ. ಕಮಲಿಯೇ.. ಈ ರೀತಿಯ ಉಡುಗೆಯಲ್ಲಿ ನಾನು ಇವಳನ್ನು ಕಂಡದ್ದೇ ಇಲ್ಲ. ಅಂದರೆ ಕಮಲಿ ಗೌಡರ ಮಗಳಾದರೂ ಅದೆಷ್ಟು ಲಕ್ಷಣವಂತೆ ಎಂದು ಹದಿ ಹರೆಯದ ಕಾರ್ತಿಕನಿಗೆ ಅನಿಸಿದ್ದೇ ತಡ ಮನಸ್ಸಿನಲ್ಲಿ ಮಿಂಚು ಹೊಡೆದಂತಾಯಿತು. ತಿಳಿ ಹಸಿರು ಸೀರೆ, ಅದಕ್ಕೊಪ್ಪುವ ಕುಪ್ಪಸ, ವಯೋ ಸಹಜವಾದ ಮೈ ಮಾಟ, ಮುಖಕ್ಕೆ ತಕ್ಕಷ್ಟೆ ಹಚ್ಚಿಕೊಂಡ ಪೌಡರು, ಬಿಳಿಯಾದ ದಂತ ಪಂಕ್ತಿ, ನೀಳ ಜಡೆ, ಮುಡಿದಂಥ ಮಲ್ಲಿಗೆ ಕಂಪು, ಯಾವಾಗಲೂ ನೋಡುತ್ತಿದ್ದರೂ ಇವತ್ತೇನೋ ಹೊಸದಾಗಿ ಕಾಣುವ ಕಣ್ಣೋಟ, ಎಲ್ಲಕ್ಕಿಂತಲೂ ಹೆಚ್ಚು ಸೀರೆಯನ್ನು ಉಟ್ಟುಕೊಂಡು ಹತ್ತಿರ ಬಂದು “ಕಾರ್ತಿಕಣ್ಣ ದಾಕ್ಷಿಣ್ಯ ಮಾಡಬೇಡಿ ಬೇಕಾದಷ್ಟು ತೆಗೆದುಕೊಳ್ಳಿ. ಏನು ಮಾಡೋಣ ನೀವು ಊಟ ಮಾಡುವಂತಿದ್ದರೆ ಬಹಳ ಸಂತೋಷವಾಗುತ್ತಿತ್ತು. ಆದರೆ ಬ್ರಾಹ್ಮಣರಾದ ನಿಮಗೆ ನಾವು ಹೇಳುವ ಹಾಗಿಲ್ಲ..” ಎಂದು ಮುಗುಳ್ನಗೆ ಬೀರಿ ಸ್ವಲ್ಪ ವೈಯಾರದಿಂದ ಹೇಳುವಾಗ ಎದೆಯ ಬಡಿತ ಹೆಚ್ಚಾಗಿ ಕಾರ್ತಿಕನಿಗೆ ಏನೂ ಸೇವಿಸದೆ ಹೊಟ್ಟೆ ಮಾತ್ರವಲ್ಲ ಮನಸ್ಸೂ ತುಂಬಿ ಬಂದಿತ್ತು.

ಅರಸ್ಕಟ್ಟೆಯಿಂದ ನೆಲ್ಲಿತಡ್ಕಕ್ಕೆ ಹೋಗುವಲ್ಲಿವರೆಗೆ ಕೂಡ ಕಾರ್ತಿಕನ ಮನಸ್ಸು ಸ್ಥೀಮಿತದಲ್ಲಿರಲಿಲ್ಲ. ಮದುವೆಗೆ ಹೋಗುವಾಗಿನ ಕಾರ್ತಿಕನಿಗೂ ಮದುವೆಯಿಂದ ಹಿಂದಿರುಗಿ ಬರುವಾಗಿನ ಕಾರ್ತಿಕನಿಗೂ ಬಹಳಷ್ಟು ಬದಲಾವಣೆಗಳಾಗಿದ್ದವು. ಮನಸ್ಸು ತರ್ಕಕ್ಕೆ ಒಳಗಾಗಿ ಕಾರ್ತಿಕನಂಥ ಕಾರ್ತಿಕನನ್ನೇ ಯೋಚಿಸುವಂತೆ ಮಾಡಿತ್ತು… ನಾನೇನು ಕಮಲಿಯನ್ನು ಇವತ್ತೇ ನೋಡುವುದಲ್ಲ. ನಮ್ಮಲ್ಲಿ ಅದೆಷ್ಟೋ ವರ್ಷಗಳಿಂದ ಬಂದು ಹೋಗುವುದಲ್ಲದೆ ತಾನು ಕೂಡ ಸಂಕ್ರೇ ಗೌಡರಲ್ಲಿ ಹಲವಾರು ಸಲ ಹೋದದ್ದಿದೆ. ಆದರೆ ನನಗೆ ಆಕೆಯಲ್ಲಿ ಸಹಜ ಭಾವವೇ ಇತ್ತಲ್ಲದೆ ಬೇರೇನೂ ಇರಲಿಲ್ಲ. ಆಕೆಯೂ ನನ್ನನ್ನು ಆತ್ಮೀಯತೆಯಿಂದ ಯಾವುದೇ ಸಂಕೋಚವಿಲ್ಲದೆ ನಾಚಿಕೆ ಪಟ್ಟುಕೊಳ್ಳದೆ ಮಾತನಾಡಿಸುತ್ತಿದ್ದಳು ಮನೆಯ ಸದಸ್ಯನಂತೆ. ಇವತ್ತಿನವರೆಗೆ ಇದ್ದಂಥ ಭಾವವು ನಾಶವಾಗಿ ಕಮಲಿಯಲ್ಲಿ ನನಗೆ ಏನೋ ಆಕರ್ಷಣೆ ಉಂಟಾಗಿದೆ ಎಂದರೆ ಇದನ್ನೇ ಪ್ರೀತಿ ಎನ್ನಬಹುದೆ, ವಯೋ ಸಹಜವಾದ ಆಕರ್ಷಣೆ ಎನ್ನಬಹುದೆ, ಹುಚ್ಚು ಮನಸ್ಸಿನ ಪ್ರಭಾವ ಎನ್ನಬಹುದೆ ಅಥವಾ ನಾನು ಹರೆಯದ ಹುಡುಗನಾದ್ದರಿಂದ ನನ್ನೊಳಗೆ ವಿವೇಕ ಕಡಿಮೆಯಾಗಿ ಕಾಮದ ಕಣ್ಣಿಂದ ನೋಡುತ್ತಿರುವೆನೆ… ಹೀಗೆ ಅನೇಕ ವಿಚಾರಗಳು ಏಕಪ್ರಕಾರವಾಗಿ ಕಾರ್ತಿಕನ ಮನದೊಳಗೆ ದಾಳಿ ಮಾಡುತ್ತಿರಲು ಜತೆಗೆ ತಾನು ದಾರಿ ತಪ್ಪಿದೆನೆ ಎಂಬ ಅಪರಾಧಿ ಭಾವವೂ ಬಂದು ಸೇರಲು ಅಧೀರನಾಗತೊಡಗಿದನು.

ಕಮಲಿಯಂತೆ ಕಾರ್ತಿಕನು ಕೂಡ ಬಿಳಿ ವೇಸ್ಟಿಯನ್ನು ಧರಿಸಿ, ತಿಳಿ ಗುಲಾಬಿ ಬಣ್ಣದ ಅಂಗಿಯನ್ನು ತೊಟ್ಟಿದ್ದರಿಂದ ಜತೆಗೆ ತೋಟದ ಕೆಲಸ ಮಾಡಿಕೊಂಡು ಆರೋಗ್ಯವಂತನಾಗಿದ್ದುದರಿಂದ ಬಹಳ ಚಂದವಾಗಿಯೇ ಕಾಣಿಸುತ್ತಿದ್ದ. ಮನೆಗೆ ಬಂದವನೆ ತನ್ನನ್ನು ತಾನೆ ಕನ್ನಡಿಯಲ್ಲಿ ನೋಡಿಕೊಂಡಾಗ ತನ್ನ ಬಗ್ಗೆ ಅಭಿಮಾನ ಮೂಡುವಷ್ಟು ಸುಂದರನೆ ಆಗಿದ್ದ. ಇದುವರೆಗೆ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡದವನು ಅಂದು ಯಾಕೊ ಅದರ ಬಗ್ಗೆ ಒಲವು ಮೂಡಿದಂತಿದ್ದ. ಬಹುಷ ಇದಕ್ಕೆಲ್ಲ ಕಮಲಿಯ ಬಗ್ಗೆ ತನ್ನಲ್ಲುಂಟಾದ ಭಾವವೇ ಕಾರಣವೆಂಬ ಅರಿವು ಕಾರ್ತಿಕನಿಗೆ ಉಂಟಾದರೆ ಅಸಹಜವಲ್ಲ. ಓದಿ.. ಪ್ರಚೋದಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
****************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅಳಂಬ.. ೨೧
************
ಇಷ್ಟೆಲ್ಲ ಮಾತುಕತೆಗಳಾದಾಗ ಸಹಜವಾಗಿಯೇ ಹೊತ್ತು ಸಾಯಂಕಾಲದತ್ತ ತಿರುಗಿತ್ತು. “ಇಲ್ಲಿಯ ಜನಜೀವನದ ಕ್ರಮ, ಪ್ರಕೃತಿ ವಿಕೋಪಗಳ ಭೀಕರತೆ, ಕಾಡು ಪ್ರಾಣಿಗಳ ಉಪಟಳ, ಬೇಸಿಗೆಯಲ್ಲೂ ತಂಪಾದ ವಾತಾವರಣ ಫಂಜಾಲಿನ ಒಂಟಿ ಮನೆಯಲ್ಲೂ ಭಿನ್ನಾಭಿಪ್ರಾಯ-ಜಗಳ-ಹೊಡೆದಾಟಗಳ ಪ್ರಸಂಗಗಳು.. ಹೀಗೆ ಹಲವಾರು ರೀತಿಯಲ್ಲಿ ಫಂಜಾಲು ಎಂಬುದು ಒಂದೇ ಮನೆಯ ಹಳ್ಳಿಯಾದರೂ ಮಾನವ ಸಹಜವಾದ ದೌರ್ಬಲ್ಯಗಳು ಪ್ರಾಬಲ್ಯಗಳು, ಸುಖ ದುಃಖಗಳು, ಭಯಾಭಯಗಳು ಮುಂತಾದ ಎಲ್ಲದರ ಅನಾವರಣವಾಗುವುದೂ ಅಷ್ಟೆ ಸಹಜ. ಇನ್ನೊಮ್ಮೆ ಯಾವಾಗಲಾದರೂ ಬನ್ನಿ ಮಕ್ಕಳೆ ಈ ಎಲ್ಲ ವಿಷಯಗಳ ಬಹಳಷ್ಟು ಮಾತಾಡುವುದಿದೆ. ಅದರಲ್ಲೂ ನಿಮ್ಮಂಥ ಕುತೂಹಲವಿರುವವರನ್ನು ನಾವಿಲ್ಲಿ ಯಾರೂ ಕಂಡದ್ದಿಲ್ಲ. ಖಂಡಿತ ನಮಗೆಲ್ಲರಿಗೂ ನೀವು ಬಂದದ್ದು ಬಹಳ ಖುಷಿಯಾಗಿದೆ. ನಿಮಗಿನ್ನೂ ನಡೆಯುವ ಹಾದಿ ಬಹಳಷ್ಟಿದೆ. ಕತ್ತಲಾಗುವ ಮುಂಚೆ ಮನೆ ಸೇರಿಕೊಳ್ಳಿ” ಎಂದು ನೀಲಯ ಗೌಡರು, ಯಜಮಾನಿಯಾದ ರುಕ್ಕು ಗೌಡ್ತಿ ಮತ್ತು ಅವರ ಮಕ್ಕಳಾದಿ ಎಲ್ಲರೂ ಹೆಬ್ಬಾರರ ಮಕ್ಕಳನ್ನು ಕಳುಹಿಸಿಕೊಡಲು ಅನುವಾದರು.

ಇತ್ತ ಕಾರ್ತಿಕ ಹಾಗೂ ಆದಿತ್ಯನಿಗೆ ಯಾವುದೊ ಒಂದು ಋಣಾನುಬಂಧ ನಮ್ಮನ್ನು ಇಷ್ಟು ಹೊತ್ತು ಜತೆಯಾಗಿರಿಸಿದೆ ಎಂದೇ ಅನ್ನಿಸಿತ್ತು. ರಾಮಯ್ಯ ಗೌಡರ ಜತೆ ಹೆಬ್ಬಾರರ ಮಕ್ಕಳಿಬ್ಬರೂ ಎದ್ದು ಹೊರಡಲನುವಾದರು. ಕಾರ್ತಿಕ ಎರಡು ಕೈಗಳನ್ನೂ ಜೋಡಿಸಿ “ಗೌಡ್ರೆ ನಿಮ್ಮೊಟ್ಟಿಗೆ ಇಷ್ಟು ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ನಿಜ ಹೇಳಬೇಕೆಂದರೆ ನಮಗೆ ಮುಂದಿನ ಜೀವನಕ್ಕೆ ಬಹಳಷ್ಟು ಪಾಠ ನಿಮ್ಮಿಂದ ದೊರಕಿದೆ ಎಂದೇ ಹೇಳಬಹುದು. ಮಾತ್ರವಲ್ಲ ನಿಮ್ಮ ಅನುಭವಗಳ ಮಾತು ನಮ್ಮ ಯಾವುದೇ ನಾಗರಿಕ ಪ್ರಪಂಚದಲ್ಲಿ ಸಿಗಲಾರದಷ್ಟು ಅತ್ಯಮೂಲ್ಯವಾಗಿವೆ ಎಂದೇ ನಮ್ಮ ಅಭಿಪ್ರಾಯ. ನಿಮ್ಮ ಆದರಾತೀಥ್ಯ, ಮುಗ್ಧವಾದರೂ ಸುಸಂಸ್ಕೃತ ವಿಚಾರಧಾರೆ ಅದರಲ್ಲೂ ನಡೆದ ಘಟನೆಗಳನ್ನು ಕಣ್ಣಿಗೆ ಕಾಣುವಂತೆ ಹೇಳುವ ಪರಿ ನಾವು ಜನ್ಮಪೂರ್ತಿ ಮರೆಯಲಾಗದ ವಿಷಯವೇ ಆಗಿದೆ. ಏನೇ ಇರಲಿ ನಾವು ಇನ್ನೊಮ್ಮೆ ನಿಮ್ಮಲ್ಲಿಗೆ ಬರುವುದಂತು ಖಂಡಿತ” ಎಂದು ಹೇಳಿ ಆದಿತ್ಯನ ಜತೆ ಫಂಜಾಲಿನಿಂದ ಮೂವರೂ ಹೊರಟರು. “ರಾಮಯ್ಯ ಗೌಡ್ರೆ ಈ ಮಕ್ಕಳ ಜತೆ ನಮ್ಮಲ್ಲಿಗೆ ಯಾವಾಗ ಬೇಕಾದರೂ ಬನ್ನಿ. ನಮಗೂ ನಿಮ್ಮೊಡನೆ ಕಳೆದಂಥ ವೇಳೆ ಬಹಳ ಖುಷಿ ಕೊಟ್ಟಿದೆ” ಎಂದು ಹೇಳಿದಾಗ ಗೌಡರಿಗೆ ಕಣ್ಣಂಚಲ್ಲಿ ನೀರು ಬಂದಿತ್ತು. ಇದನ್ನು ಕಂಡಂಥ ಕಾರ್ತಿಕ ಮತ್ತು ಆದಿತ್ಯನಿಗೂ ಮನಸ್ಸು ಭಾರವಾಗಿ “ಗೌಡ್ರೆ ನಮ್ಮ ನೆಲ್ಲಿತಡ್ಕಕ್ಕೂ ಒಂದು ಸಲ ಬನ್ನಿ. ಬಹುಷ ನಮ್ಮಲ್ಲಿಗೆ ಇದುವರೆಗೆ ನೀವು ಯಾರೂ ಬಂದದ್ದಿಲ್ಲ. ಖಂಡಿತ ಬನ್ನಿ” ಎಂದು ಫಂಜಾಲಿನಂಥ ಸ್ವರ್ಗದಿಂದ ಪಶ್ಟಿಮದತ್ತ ಹೊರಟ ಸೂರ್ಯನೊಡನೆ ಗೌಡರಿಂದ ಬೀಳ್ಕೊಂಡು ನೆಲ್ಲಿತಡ್ಕಕ್ಕೆ ಮೂವರೂ ಹೊರಟರು.

ಕಮಲಿಯು ಓದು ಬರಹ ಕಲಿಯಲು ನೆಲ್ಲಿತಡ್ಕಕ್ಕೆ ಹೋಗುತ್ತಿದ್ದಾಗ ಬಹಳ ಖುಷಿಯಿಂದ ಇದ್ದಳು. ತಾನು ಬಹಳ ಕಾಲದ ಹಿಂದೆಯೇ ಆಸೆ ಬಿಟ್ಟಂಥ ವಿಷಯವೊಂದು ಕೈಗೆ ಸಿಗುವಾಗ ಆಗುವ ಆನಂದಕ್ಕೆ ಬೆಲೆ ಕಟ್ಟಲಾದೀತೇ? ಓದು ಬರಹ ಕಲಿತು ತಾನೊಬ್ಬಳು ವಿದ್ಯಾವಂತೆ ಅದು ಕೂಡ ತಮ್ಮ ಕುಟುಂಬದಲ್ಲಿ ಪ್ರಥಮಳಾದಾಗ ಕಮಲಿಗೆ ಹೆಮ್ಮೆಯ ಅನಿಸುವುದು ಅಸಹಜವಲ್ಲ. ಅಂತೆಯೇ ತಂದೆ ಅಥವಾ ಅಣ್ಣಂದಿರ ಜತೆ ನಾರಾವಿ ಸಂತೆಗೋ, ಸಂಬಂಧಿಕರ ಮನೆಗೋ ಹೋಗುವಾಗ ರಸ್ತೆ ಬದಿಯಲ್ಲಿ ಕಾಣುವ ಫಲಕಗಳನ್ನು ಓದುವಾಗ ಅಥವಾ ಕನ್ನಡದಲ್ಲಿರುವ ಯಾವುದೇ ಬರಹಗಳನ್ನು ಓದುವಾಗ ತನಗೆ ವಿದ್ಯೆ ಕಲಿಸಿದ ವಿನೋದಾ, ವಾರಿಜಾ ಇವರ ನೆನಪು ಬಾರದೆ ಇರುವುದಿಲ್ಲ. ಮಾತ್ರವಲ್ಲ ಅವರಿಂದಾಗಿ ತನ್ನ ಜೀವನದ ಮೌಲ್ಯವೇ ಬದಲಾಗಿದೆ ಎಂಬ ಭಾವವೂ ಕಮಲಿಯಲ್ಲಿತ್ತು. ನಾರಾವಿ ಸಂತೆಗೆ ಸಾಧಾರಣ ಪ್ರತಿ ವಾರವೂ ಅಣ್ಣಂದಿರಾಗಲಿ ತಂದೆ ಸಂಕ್ರೇ ಗೌಡರಾಗಲಿ ಹೋಗದೆ ಇರುವುದಿಲ್ಲ. ಆದರೆ ಅವರಲ್ಲಿ ಕಮಲಿಯ ಒಂದೇ ಬೇಡಿಕೆ ಎಂದರೆ ಅಂದಿನ ಅಂದರೆ ಶನಿವಾರದ ವಾರ್ತಾ ಪತ್ರಿಕೆಯನ್ನು ತರಿಸುವುದು. ಇದರಿಂದ ಕಮಲಿಗೆ ಓದುವುದಕ್ಕೆ ಬಹಳ ವಿಷಯಗಳು ದೊರಕುತ್ತಿದ್ದವು ಜತೆಗೆ ಲೋಕಜ್ಞಾನವೂ ಉಂಟಾಗುತ್ತಿತ್ತು. ಅದರಲ್ಲೂ ತಿಂಗಳಿಗೊಂದು ಸಲ ಬರುತ್ತಿದ್ದ ಚಂದಮಾಮ ಎಂಬ ಕಥೆ ಪುಸ್ತಕವಂತು ತಪ್ಪಿಸುತ್ತಲೇ ಇರಲಿಲ್ಲ. ಕಮಲಿಯ ಓದುವ ಆಸೆಗೆ ಹಿರಿಯರೂ ಅಡ್ಡಿ ಬರುತ್ತಿರಲಿಲ್ಲ. ಮನೆಗೆ ತರುವ ಅತ್ಯಾವಶ್ಯಕ ವಸ್ತುಗಳಲ್ಲಿ ಕಮಲಿಯ ಓದುವ ಪತ್ರಿಕೆಗಳೂ ಸೇರಿ ಹೋಗಿತ್ತು. ಮನೆ ಕೆಲಸಗಳಲ್ಲಿ ಜಾಣೆಯಾದ ಕಮಲಿ ಓದು ಬರಹವನ್ನೂ ಕಲಿತಾಗ ಆಕೆ ಅಳಂಬಕ್ಕೆ ಮಾತ್ರವಲ್ಲ ಸುತ್ತಮುತ್ತಲಿನ ಬ್ರಾಹ್ಮಣೇತರರ ಮನೆಗಳಲ್ಲಿ ಪ್ರಥಮ ಸುಶಿಕ್ಷಿತಳಾಗಿದ್ದಳೆನ್ನುವುದು ಕಮಲಿಗೆ ಹೆಮ್ಮೆಯ ವಿಷಯವಾಗಿತ್ತೇ ಹೊರತು ಅಹಂಕಾರವಿರಲಿಲ್ಲ.

ಈ ನಡುವೆ ರಾಮಯ್ಯ ಗೌಡರಿಗೆ ನಾರಾವಿಯ ಬಳಿ ಇರುವ ಅರಸ್ಕಟ್ಟೆ ಎಂಬಲ್ಲಿ ವಾಸಿಸುವ ಚಂದು ಗೌಡ್ರ ಮಗಳಾದ ಚೆಲುವಮ್ಮನೊಡನೆ ಮದುವೆ ನಿಶ್ಚಿತಾರ್ಥವಾಯಿತು. ಸಂಕ್ರೇ ಗೌಡ್ರು ಮತ್ತು ಚಂದು ಗೌಡ್ರು ಬಹಳ ಕಾಲದಿಂದ ಪರಸ್ಪರ ಬಲ್ಲವರೇ ಆಗಿದ್ದರು. ಅಂತೆಯೇ ಪರಸ್ಪರ ಹೋಗಿ ಬಂದು ಲೇವಾ ದೇವಿ ವ್ಯವಹಾರಗಳನ್ನೂ ಮಾಡಿಕೊಂಡಿದ್ದರು. ಹೀಗೆಯೆ ಲೋಕಾಭಿರಾಮ ಮಾತಾಡುವಾಗ ಈ ಸಂಬಂಧ ಕೂಡಿ ಬಂದಿತ್ತು. ಎರಡು ಮನೆತನಗಳೂ ಅತಿಯಾದ ಶ್ರೀಮಂತ ಕುಟುಂಬಗಳಲ್ಲದಿದ್ದರೂ ತಕ್ಕ ಮಟ್ಟಿಗೆ ಅನುಕೂಲವಾಗಿಯೇ ಇದ್ದುದರಿಂದ ಉಭಯತರರಿಗೂ ಈ ಸಂಬಂಧ ಮನಸ್ಸಿಗೆ ಹಿತವಾಗಿತ್ತು. ಹಾಗೆಂದು ರಾಮಯ್ಯ ಗೌಡರಿಗೂ ಚೆಲುವಮ್ಮನ ಪರಿಚಯವಿಲ್ಲದೆ ಇಲ್ಲ. ಆದರೆ ಆಕೆ ತನ್ನ ಜೀವನ ಸಂಗಾತಿಯಾಗಬಹುದೆಂಬ ಕಲ್ಪನೆ ಇರಲಿಲ್ಲ ಅಷ್ಟೆ. ರಾಮಯ್ಯ ಗೌಡರಿಗೂ ಚೆಲುವಮ್ಮಳಿಗೂ ಪರಸ್ಪರ ಒಪ್ಪಿಗೆ ಇದ್ದ ಕಾರಣ ಮದುವೆಯನ್ನು ಶೀಘ್ರವೆ ಮಾಡುವುದೆಂದು ತೀರ್ಮಾನಿಸಿದಾಗ ಉಭಯ ಕುಟುಂಬದಲ್ಲೂ ಹೊಸ ಸಂಚಲನವೊಂದು ಉಂಟಾದದ್ದು ಸುಳ್ಳಲ್ಲ.

ಇತ್ತ ಕಮಲಿ ಅಣ್ಣನ ಮದುವೆ ಎಂದು ಮಾನಸಿಕವಾಗಿ ಬಹಳ ಖುಷಿಯಲ್ಲಿದ್ದಳು. ಬರುವವಳು ತನಗೊಬ್ಬ ಗೆಳತಿಯೂ ಆಗಬಲ್ಲಳು ಎಂಬ ಭಾವವೂ ಜತೆಯಾಗಿ ಸಂಭ್ರಮವು ಇಮ್ಮಡಿಯಾಗಿತ್ತು. ಅಣ್ಣಂದಿರ ಜತೆ ತಾನೂ ಮದುವೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಳು. ಬರುವಂಥ ಅತ್ತಿಗೆಯೊಡನೆ ಹೇಗಿರಬೇಕೆಂಬುದನ್ನೂ ತನ್ನಲ್ಲಿ ತಾನೆ ಕಲ್ಪಿಸಿಕೊಂಡಿದ್ದಳು. ಆಕೆಗೆ ಓದು ಬರಹ ಬರುತ್ತದೊ ಗೊತ್ತಿಲ್ಲ. ಒಂದು ವೇಳೆ ಬಂದರೆ ನನಗೆ ಅತ್ತಿಗೆ ಅನ್ನುವುದಕ್ಕಿಂತಲೂ ಉತ್ತಮ ಒಡನಾಡಿಯಾಗಬಲ್ಲಳು ಎಂದುಕೊಂಡಿದ್ದಳು. ಖುಷಿಯಲ್ಲಿರುವಾಗ ದಿನಗಳುರುಳುವುದು ಬಲು ಬೇಗವೆಂಬ ಭ್ರಮೆ ಆವರಿಸಿದಂತೆ ಅಣ್ಣ ರಾಮಯ್ಯ ಗೌಡರ ಮದುವೆ ದಿವಸವೂ ಬಂದಿತ್ತು. ಓದಿ.. ಪ್ರಚೋದಿಸಿ.. ಪ್ರತಿಕ್ರಿಯಿಸಿ.. ಮುಂದೆ ಇನ್ನೂ ಇದೆ.
*****************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅಳಂಬ.. ೨೦
************

ಆ ಕಾಲದಲ್ಲಿ ನಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಅಂದರೆ ತೊಟ್ಟಿಲಲ್ಲಿ ಮಲಗುವಂಥ ಮಕ್ಕಳು ಹತ್ತೋ ಹನ್ನೆರಡೋ ಜನ ಇದ್ದರಂತೆ. ಅಜ್ಜ ಹೇಳಿದಂತೆ ಹೆಂಗಸರು ಮನೆಯೊಳಗಿನ ಅಕ್ಕಿ, ಸಾಮಾನುಗಳ ದಾಸ್ತಾನು ಹೊರ ಹಾಕುವುದರ ಬದಲು ಮನೆಯೊಳಗೆ ಇದ್ದಂಥ ಎಲ್ಲ ತೊಟ್ಟಿಲುಗಳನ್ನು ಹೊರಗೆ ತಂದು ಅಂಗಳದಲ್ಲಿಟ್ಟರಂತೆ. ಅಂತೆಯೆ ಅವರವರ ಮಕ್ಕಳನ್ನು ಬಗಲಲ್ಲಿಟ್ಟು ಕೊಂಡು ಅಧಿಕಾರಿಗಳ ಮುಂದೆ ಬಂದು ನಿಂತರಂತೆ. ಇದನ್ನೆಲ್ಲ ನೋಡುತ್ತಿದ್ದ ಮನೆಯ ಇತರ ಸದಸ್ಯರಿಗಾಗಲಿ ಬಂದಂಥ ಅಧಿಕಾರಿಗಳಿಗಾಗಲಿ ಇಲ್ಲಿ ಏನು ನಡೆಯುತ್ತದೆ ಎಂದೇ ಅರ್ಥವಾಗಲಿಲ್ಲವಂತೆ. ಬ್ರಿಟೀಷ್ ಅಧಿಕಾರಿಗಳಾದರೊ ಇಂತಹ ಒಂದು ಸನ್ನಿವೇಶವನ್ನು ನಿರೀಕ್ಷಿಸದೇ ಇದ್ದುದರಿಂದ ಆ ಕ್ಷಣದಲ್ಲಿ ಏನು ಮಾಡಬೇಕೆಂಬುದೇ ತಿಳಿಯದೆ ಭಾವಶೂನ್ಯರಾಗಿದ್ದರಂತೆ. ಸಾವರಿಸಿಕೊಂಡಂಥ ಅಧಿಕಾರಿ ಅಜ್ಜನನ್ನು ಹತ್ತಿರ ಕರೆದು ಈ ಮನೆಯಲ್ಲಿರುವ ಜನರೆಷ್ಟು, ದಿನ ಒಂದಕ್ಕೆ ಊಟಕ್ಕೆಷ್ಟು ಅಕ್ಕಿ ಬೇಕು ಎಂದು ವಿಚಾರಿಸಿ ಒಂದು ವೇಳೆ ರೇಷನ್ ತರಬೇಕಾದರು ನಾರಾವಿಗೆ ಹೋಗಿ ತರುವುದು ಅದೆಷ್ಟು ಕಷ್ಟವೆಂದರಿತು ಅಂತೆಯೇ ಈ ತೊಟ್ಟಿಲುಗಳ ಸಂಖ್ಯೆಯೇ ಇಲ್ಲಿನ ಕಥೆ ಹೇಳುತ್ತದೆ ಎಂದು ಅಜ್ಜನಲ್ಲಿ ಹೇಳುತ್ತ ನಿಮ್ಮ ಮನೆಯೊಳಗೆ ಅದೆಷ್ಟು ಅಕ್ಕಿ ಇದ್ದರೂ ಅದು ನಿಮಗೆ ಕಡಿಮೆಯೇ. ಸಾಧಾರಣ ವರುಷಕ್ಕೆ ನೂರು ಮುಡಿ ಅಕ್ಕಿಯೂ ಅಲ್ಲಿಂದಲ್ಲಿಗೆ ಆಗುವಷ್ಟು ಜನರಿರುವ ಈ ಸಂಸಾರಕ್ಕೆ ನಮ್ಮ ಕಾನೂನಿನಿಂದ ರಿಯಾಯಿತಿಯನ್ನು ಕೊಟ್ಟಿದ್ದೇನೆ ಎಂದು ಎಲ್ಲ ಅಧಿಕಾರಿಗಳೂ ಬಂದಂತೆ ವಾಪಸು ಹೋಗಿದ್ದರಂತೆ. ಅಂದರೆ ಯಾರಿಗೂ ಬೆದರದ ಬ್ರಿಟೀಷರು ನಮ್ಮ ಮುಗ್ಧತನಕ್ಕೊ ಅಥವಾ ದೈವಗಳ ಕಾರಣಕ್ಕೊ ಶರಣಾಗಿ ಯಾವುದೇ ಕಾರ್ಯಾಚರಣೆ ಮಾಡದೆ ನಮ್ಮನ್ನು ಅಂದೇ ಸ್ವತಂತ್ರರನ್ನಾಗಿಸಿದ್ದರು.” ಇಷ್ಟು ಹೇಳಿದಾಗ ಪ್ರಪಂಚದಲ್ಲಿ ಹೀಗೂ ಸಾಧ್ಯವೇ ಎಂಬ ಪ್ರಶ್ನೆ ಮಕ್ಕಳ ಮುಂದೆ ಎದುರಾದರೂ ನಡೆದ ಘಟನೆ ಸುಳ್ಳಲ್ಲವೆನ್ನುವುದೂ ಸತ್ಯವೇ ತಾನೆ. ಅಷ್ಟರಲ್ಲಿ ಆದಿತ್ಯ ಗೌಡರನ್ನುದ್ದೇಶಿಸಿ

“ಗೌಡರೆ ಈ ತೊಟ್ಟಿಲುಗಳನ್ನು ಹೊರ ತರುವಂಥ ಪ್ರಕ್ರಿಯೆಗೆ ಯಾರು ಪ್ರೇರಣೆ ನೀಡಿದರು. ಇದು ಕೂಡ ಮುಗ್ಧತೆಯಿಂದ ನಡೆದದ್ದೊ ಅಥವಾ ಯಾರದ್ದಾದರೂ ಜಾಣತನವೊ ಅಥವಾ ದೈವ ಪ್ರೇರಣೆಯೋ” ಎಂದು ಕುತೂಹಲದಿಂದ ಕೇಳಿದನು.

ನೀಲಯ ಗೌಡರು ಮುಂದುವರಿಸುತ್ತ “ಬಹುಷ ಇಲ್ಲಿ ದೈವ ಸಂಕಲ್ಪದಂತೆ ನಮ್ಮ ಹೆಂಗಸರು ವರ್ತಿಸಿದ್ದಾರೆ ಎಂದೇ ನಮ್ಮ ಭಾವನೆ. ನನ್ನ ಅಜ್ಜನಿಗೆ ತುಂಬಾ ಜನ ತಮ್ಮಂದಿರಿದ್ದರಂತೆ ಆದ್ದರಿಂದ ಅವರ ಹೆಂಡತಿಯರು ಸೊಸೆಯಂದಿರಿಗೆಲ್ಲ ನಮ್ಮ ಅಜ್ಜಿಯೇ ಯಜಮಾನಿ. ಅವರ ಮಾತನ್ನು ಯಾವ ಹೆಂಗಸರು ಕೂಡ ವಿರೋಧಿಸುತ್ತಿರಲಿಲ್ಲವಂತೆ. ಮಾತ್ರವಲ್ಲ ಅವರು ಎಲ್ಲರಿಗಿಂತ ಒಂದಷ್ಟು ಹೆಚ್ಚೇ ಬುದ್ಧಿವಂತರಿದ್ದರಂತೆ. ಕೆಲವೊಮ್ಮೆ ಗಂಡಸರಿಗಿಂತಲೂ ಗಟ್ಟಿಗಿತ್ತಿಯಂತೆ. ಇತರ ಹೆಂಗಸರಿಗೆಲ್ಲ ತಾಕೀತು ಮಾಡಿದ್ದರಂತೆ. ಏನೆಂದರೆ.. ಬ್ರಿಟೀಷರ ಜತೆ ನಾವು ಹೋರಾಟ ಮಾಡಲಾಗದು. ಆದರೆ ನಾವು ಒಂದು ಉಪಾಯ ಮಾಡಬೇಕು. ಏನೆಂದರೆ ಯಾವುದೇ ಮನುಷ್ಯ ಆತ ಅಧಿಕಾರಿಯೇ ಆಗಿರಲಿ ಅಥವಾ ದರೋಡೆಕೋರನೇ ಇರಲಿ ಮಕ್ಕಳ ವಿಷಯಕ್ಕೆ ಬಂದಾಗ ತಣ್ಣಗಾಗುತ್ತಾನೆ. ಅಂತೆಯೆ ಬ್ರಿಟೀಷರು ತಪಾಸಣೆಗೆ ಬಂದರೆ ನಮ್ಮಲ್ಲಿರುವ ಎಲ್ಲವನ್ನೂ ದೋಚಬಹುದು. ಅದಕ್ಕಾಗಿ ಮಕ್ಕಳು ಮಲಗುವಂಥ ತೊಟ್ಟಿಲುಗಳೆಲ್ಲವನ್ನು ಅಂಗಳದಲ್ಲಿಡುವ. ಆವಾಗ ನಮ್ಮಲ್ಲಿ ತೊಟ್ಟಿಲ ಮಕ್ಕಳೇ ಇಷ್ಟು ಇರುವಾಗ ಊಟಕ್ಕೆ ಅದಕ್ಕಿಂತ ಹಿರಿಯರು ಎಷ್ಟಿರಬಹುದೆಂಬ ಲೆಕ್ಕಾಚಾರ ಅವರೇ ಹಾಕಿಕೊಳ್ಳಲಿ. ಎಂಬ ಅಜ್ಜಿಯ ತಾರ್ಕಿಕವಾದ
ವಿಚಾರಕ್ಕೆ ಎಲ್ಲರೂ ಸಮ್ಮತಿಸಿದ್ದರಿಂದ ಮಾತ್ರವಲ್ಲದೆ ತಮ್ಮ ನಿರ್ಣಯವನ್ನು ಗಂಡಸರಿಗೆ ಹೇಳದಿರುವಂತೆ ಅಜ್ಜಿಯು ಖಂಡಿತವಾಗಿ ಹೇಳಿರುವಾಗ ಯಾರೂ ಊಹಿಸದ ಪರಿಣಾಮ ಆವತ್ತು ಆದದ್ದಂತು ನಿಜ. ಅಂಗಳದಲ್ಲಿ ಸಾಲಾಗಿ ಇಟ್ಟಂಥ ಪುಟ್ಟ ಕಂದಮ್ಮಗಳು ಮಲಗುವ ತೊಟ್ಟಿಲುಗಳು, ಪಕ್ಕದಲ್ಲಿ ಮಕ್ಕಳನ್ನು ಸೊಂಟದಲ್ಲಿ ಎತ್ತಿಕೊಂಡಿರುವ ತಾಯಂದಿರ ದಯನೀಯ ಸ್ಥಿತಿ, ಸುತ್ತಲೂ ನಿಂತು ಆಶ್ಚರ್ಯಚಕಿತರಾಗಿ ನೋಡುತ್ತಿರುವ ಕುಟುಂಬದ ಇತರ ಸದಸ್ಯರು, ಕಣ್ಣೀರು ಹಾಕದೆ ದೈವ ಇಟ್ಟ ಹಾಗೆ ಆಗುತ್ತದೆ ಎಂಬ ದೃಢ ವಿಶ್ವಾಸದಲ್ಲಿದ್ದಂಥ ನಮ್ಮಜ್ಜ.. ಹೀಗೆ ಅಜ್ಜನೊಡನೆ ಅಧಿಕಾರಿಗಳು ಯಾವ ರೀತಿಯಲ್ಲಿ ವ್ಯವಹರಿಸುತ್ತಾರೆ ಎಂಬ ಕುತೂಹಲಹದೊಡನೆ ಒಂದರೆ ಗಳಿಗೆ ಎಲ್ಲರೂ ಸ್ಥಬ್ಧವಾಗಿದ್ದರಂತೆ. ಈ ಎಲ್ಲ ಘಟನೆಗಳಿಂದ ಹೊರಬಂದಂಥ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ನಾವಿವತ್ತು ಈ ಸ್ಥಿತಿಯಲ್ಲಿದ್ದೇವೆ ಎನ್ನಬಹುದು.”

ಗೌಡರ ಮಾತನ್ನು ಕೇಳುತ್ತಿದ್ದಂತೆ ರಾಮಯ್ಯ ಗೌಡರಾದಿಯಾಗಿ ಎಲ್ಲರಿಗೂ ರೋಮಾಂಚನವಾಗಿತ್ತು. ಜತೆಗೆ ನಾಗರಿಕ ಪ್ರಪಂಚದ ಲವಲೇಶವೂ ಪರಿಚಯವಿರದ ಅಂದಿನ ಹೆಂಗಸರು ಕೂಡ ಅದೆಷ್ಟು ವ್ಯವಹಾರ ಚತುರರಾಗಿದ್ದರು ಎಂಬುದಕ್ಕೆ ಈ ಘಟನೆ ಉದಾಹರಣೆಯೂ ಆಗಿತ್ತು. ಅಂತೆಯೇ ಹೆಬ್ಬಾರರ ಮಕ್ಕಳಿಗೆ ಅಂದಿನ ಜನಜೀವನದ ಪರಿಚಯವೂ ಆಗಿತ್ತು.

“ಗೌಡ್ರೆ ಅಂದು ಒಂದು ವೇಳೆ ನಿಮ್ಮಲ್ಲಿದ್ದಂಥ ಅಕ್ಕಿಯನ್ನು ಅಧಕಾರಿಗಳು ಮುಟ್ಟುಗೋಲು ಹಾಕುತ್ತಿದ್ದರೆ ನಿಮ್ಮ ಜೀವನ ಎಣಿಸಲಾಗದಷ್ಟು ಕಷ್ಟವಾಗುತ್ತಿತ್ತು ಎನ್ನುವುದು ಸ್ಪಷ್ಟ. ಆದರೆ ಅಧಿಕಾರಿಗಳು ಹೇಳಿದಂತೆ ನಿಮ್ಮಲ್ಲಿ ನೂರಾರು ಮುಡಿ ಅಕ್ಕಿ ಇದ್ದದ್ದು ಸತ್ಯವೇ?” ಎಂದು ಕಾರ್ತಿಕ ಕೇಳಲು ಗೌಡರು

“ಹೌದು ಮಕ್ಕಳೆ ನಾವು ವರ್ಷಕ್ಕೆ ಎರಡು ಬೆಳೆಯನ್ನು ಮಾಡುವುದರಿಂದ ಸದಾ ಕಾಲ ನಮ್ಮಲ್ಲಿ ನೂರು ಮುಡಿಗೆ ಹತ್ತಿರ ಅಕ್ಕಿ ಯಾವಾಗಲೂ ಇರುತ್ತಿತ್ತು. ಮತ್ತೆ ನಮಗದು ಅನಿವಾರ್ಯವೂ ತಾನೆ. ಒಂದು ವೇಳೆ ಊಟಕ್ಕೆ ಕಡಿಮೆ ಆದರೆ ಸಾಲ ಸಿಗುವುದೂ ಕಷ್ಟ. ಸಿಕ್ಕಿದರೆ ತಲೆ ಹೊರೆಯಿಂದ ಅಕ್ಕಿ ಮುಡಿಗಳನ್ನು ಫಂಜಾಲಿಗೆ ಹೊತ್ತು ತರುವುದು ಇನ್ನೂ ಕಷ್ಟ. ಒಂದು ವೇಳೆ ಅಂದು ಬ್ರಿಟೀಷ್ ಅಧಿಕಾರಿಗಳು ನಮ್ಮ ಅನ್ನಕ್ಕೆ ಕನ್ನ ಹಾಕಿರುತ್ತಿದ್ದರೆ ಇವತ್ತು ಫಂಜಾಲು ಎನ್ನುವುದು ಇರುತ್ತಿರಲಿಲ್ಲ. ಒಂದೊ ನಾವು ಗುಳೆ ಹೋಗಬೇಕು ಇಲ್ಲ ಹೊಟ್ಟೆಗಿಲ್ಲದೆ ಇಲ್ಲೆ ಸಾಯಬೇಕಿತ್ತು ಅದಕ್ಕೇ ನಾನು ಹೇಳಿದ್ದು ನಾವು ನಂಬಿದ ದೈವ ನಮ್ಮನ್ನು ಇವತ್ತಿನವರೆಗೂ ಕೈ ಬಿಡಲಿಲ್ಲವೆಂದು.” ಇಷ್ಟೆಲ್ಲ ಗೌಡರ ಕಥೆಯನ್ನು ಕೇಳುವಾಗ ಇಬ್ಬರಿಗೂ ಹೊಸ ಲೋಕದೊಳಗೆ ಪ್ರವೇಶಿಸಿ ಬಂದಂತಾದದ್ದಂತು ನಿಜ.


ಅಳಂಬ.. ೧೯
************
“ಗೌಡ್ರೆ ಕುಕ್ಕುಜೆಯ ನಿಮ್ಮ ಅತ್ತೆ ಮನೆಯಲ್ಲಿ ಕೂಡ ಅಂದಿನ ಕಾಲದಲ್ಲಿ ಬಹಳಷ್ಟು ಜಾಗ ಬಹಳಷ್ಟು ಜನ ಇದ್ದಿರಬಹುದಲ್ಲವೆ. ಈಗಲೂ ಅದೇರೀತಿಯ ವ್ಯವಹಾರಗಳು ಇವೆಯೋ ಅಥವಾ ನಿಮ್ಮ ಫಂಜಾಲಿನಂತೆ ಜನಸಂಖ್ಯೆ ಕಡಿಮೆಯಾಗಿದೆಯೊ ಹೇಗೆ.” ಎಂದು ಕಾರ್ತಿಕ ಕೇಳಿದಾಗ.. “ಅದ್ಯಾಕೆ ಕೇಳುತ್ತೀರಿ ಭಟ್ರೆ. ಹಿಂದಿನ ಕಾಲದಂತೆ ಇಂದು ಯಾವ ನಮ್ಮ ಕುಟುಂಬಗಳೂ ಉಳಿಯಲಿಲ್ಲ. ಕುಕ್ಕುಜೆ ಅಂದರೇನು ಇಲ್ಲಿಯೇ ಪಕ್ಕದ ನಂಗಾಜೆ, ಫೆರ್ಞ್ಚ, ಕುರ್ಯಾಡಿ ಬರೆಂಗಾಡಿಗಳಲ್ಲೂ ಜನಸಂಖ್ಯೆ ಕಡಿಮೆಯಾಯಿತು. ಜತೆಗೆ ಕಷ್ಟ ಪಟ್ಟು ದುಡಿಯುವಂಥವರೂ ಊರು ಬಿಟ್ಟು ಪಟ್ಟಣದ ಕಡೆಗೆ ಹೋಗತೊಡಗಿದರು. ನಮ್ಮ ಫಂಜಾಲು ಇದುವರೆಗೆ ಅದರ ಆಕರ್ಷಣೆಯಿಂದ ಸ್ವಲ್ಪ ಹಿಂದಿದೆ. ಆದರೂ ಇಲ್ಲಿಂದ ಒಂದಷ್ಟು ಹುಡುಗರು ನಾರಾವಿ, ಮಂಗಳೂರು ಎಂದು ಹೋಟೆಲು-ಅಂಗಡಿಗಳಿಗೆ ಹೋಗಿರುವುದೂ ಇದೆ. ಏನು ಮಾಡೋಣ ಯುವಕರಿಗೆ ನಮ್ಮಂತೆ ಇಲ್ಲಿಯೇ ಇದ್ದು ದುಡಿಯುವ ಮನಸ್ಸಿಲ್ಲ. ಹಾಗೆಂದು ಹೊರಗೆ ಹೋಗಿ ವ್ಯವಹಾರ ಮಾಡುವಷ್ಟು ವಿದ್ಯೆಯೂ ಇಲ್ಲ. ಅದೇನೋ ಜೀವನ ಸಾಗಿಸಿಕೊಂಡು ಪಟ್ಟಣಕ್ಕೆ ಸೇರಿದ ಹುಡುಗರು ವರುಷಕ್ಕೊಂದೆರಡು ಬಾರಿ ಬಂದು ಹೋಗುವುದೂ ಇದೆ. ಮದುವೆ ಮಕ್ಕಳೆಂಬ ಸಂಸಾರದೊಡನೆ ಏನೊ ಹೊಂದಿಕೊಂಡಿದ್ದಾರೆ ಎನ್ನುವುದೇ ಸಂತೋಷದ ವಿಷಯ.

ಅಂತೆಯೇ ಕುಕ್ಕುಜೆಯಲ್ಲೂ ಮಾವನ ಕಾಲದಲ್ಲಿ ಐವತ್ತು ಏಕರೆಗೂ ಅಧಿಕ ಬೇಸಾಯದ ಭೂಮಿ ಇತ್ತು. ಮನೆಯಲ್ಲಿ ಸಾಧಾರಣ ಮೂವತ್ತರಷ್ಟು ಜನರೂ ಇದ್ದರು. ಕಾಲಾಂತರದಲ್ಲಿ ಅದರ ಸಾಗುವಳಿ ಮಾಡುವಲ್ಲಿ ಕಷ್ಟವಾಗತೊಡಗಿದಾಗ ಸಾಧಾರಣ ಅರ್ಧದಷ್ಟು ಜಾಗವನ್ನು ಕೇರಳದ ತಂಗಚ್ಚನ್ ಎಂಬವನಿಗೆ ಮಾರಾಟ ಮಾಡಿದರು. ಆದರೂ ಉಳಿದ ಜಾಗದ ಬೇಸಾಯವೂ ಇಂದು ಕಷ್ಟಕರವಾಗಿದೆ. ಕಾರಣ ಕುಕ್ಕುಜೆಯಲ್ಲಿರುವ ಕುಟುಂಬದಲ್ಲಿ ಇಂದು ಹತ್ತು ಜನರಷ್ಟೆ ಉಳಿದುಕೊಂಡಿದ್ದು ದುಡಿಯುವ ಕೈಗಳು ಕಡಿಮೆಯಾದುದೇ ಕಾರಣ” ಎಂದಾಗ ಕಾರ್ತಿಕನಿಗೆ ಇನ್ನು ಮುಂದೆ ನಾಗರಿಕ ಪ್ರಪಂಚದ ಆಕರ್ಷಣೆಯಿಂದ ಇಂಥ ಹಳ್ಳಿಗಳ ಚಿತ್ರಣವೇ ಬದಲಾಗಬಹುದು ಎಂಬ ಯೋಚನೆಯೂ ಬಂದಿತ್ತು. ಗೌಡರು ಮುಂದುವರೆದು “ನಮ್ಮವರಿಗೆ ಮಾತ್ರ ಕೃಷಿ, ಬೇಸಾಯ ಕೈ ಹಿಡಿಯದಿದ್ದದ್ದು. ಅದೇ ನೋಡಿ ಕೇರಳದಿಂದ ಬಂದಂಥ ತಂಗಚ್ಚನ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿ ಇಂದು ಜೀಪನ್ನು ಕೂಡ ಇಟ್ಟುಕೊಂಡಿದ್ದಾನೆ. ಜತೆಗೆ ಪರೋಪಕಾರಿಯೂ ಹೌದು.” ಎಂದಾಗ ಕಾರ್ತಿಕ, ಆದಿತ್ಯ ಇಬ್ಬರಿಗೂ ಹೌದೆನ್ನಿಸಿತ್ತು.

ಕುಕ್ಕುಜೆಯಲ್ಲಿ ಮಲಯಾಳಿಗಳ ಜೀಪೊಂದು ಇದೆ ಎಂದು ಕಾರ್ತಿಕನಿಗೆ ಗೊತ್ತಿತ್ತಾದರೂ ಅದು ಯಾರದ್ದೆಂದು ತಿಳಿದದ್ದು ಮಾತ್ರ ನೀಲಯ ಗೌಡರಿಂದ. ಅಷ್ಟರಲ್ಲಿ ಗೌಡರೆ ಸ್ವತಹ “ನಾವು ಚಿಕ್ಕವರಿರುವಾಗ ಅಪ್ಪ ಹೇಳುತ್ತಿದ್ದ ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ. ಅದರಿಂದ ನಮ್ಮಲ್ಲಿದ್ದಂಥ ಜನಸಂಖ್ಯೆ-ಜೀವನ ಎಲ್ಲ ನಿಮಗೆ ತಿಳಿಯಬಹುದು” ಎಂದರು.

ಹುಡುಗರಿಗೆ ಕೇಳುವುದಕ್ಕೆ ಬಹಳ ಆಸಕ್ತಿ ಇದ್ದುದರಿಂದ “ಹೇಳಿ ಗೌಡ್ರೆ ನಿಮ್ಮ ಮಾತಿಂದ ಕೇಳುವುದೆಂದರೆ ಬಹಳ ಖುಷಿಯಾಗುತ್ತದೆ.” ಎಂದು ಹೇಳಿ ಗೌಡರ ವಿಶೇಷ ಅನುಭವ ಕೇಳಲು ಹುಡುಗರು ಅಣಿಯಾದರು.

“ಇದು ಸಾಧಾರಣ ಎಪ್ಫತ್ತು ಎಂಬತ್ತು ವರ್ಷಗಳಿಗೂ ಹಿಂದೆ ನಡೆದ ಘಟನೆ. ಅಂದು ಬ್ರಿಟೀಷರ ಆಳ್ವಿಕೆ ಇತ್ತು. ಯಾವುದೇ ಮನೆಯಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಅಕ್ಕಿ ದಾಸ್ತಾನು ಮಾಡುವಂತಿರಲಿಲ್ಲ. ಬರಗಾಲವೊ, ಯುದ್ಧವೊ, ಅಧಿಕಾರಿಗಳ ದುರಹಂಕಾರವೊ ಏನೋ ಒಂದು ಕಾರಣವಾಗಿರಬಹುದು. ಅಂತು ಯಾರ ಮನೆಯಲ್ಲಿ ಕೂಡ ನೆಮ್ಮದಿಯ ವಾತಾವರಣವಿರದೆ ಭೀತಿಯೆ ಮನೆಮಾಡಿಕೊಂಡಿತ್ತು. ಎಲ್ಲರ ಬಾಯಲ್ಲಿ ಬ್ರಿಟೀಷ್ ಅಧಿಕಾರಿಗಳು ಬರುತ್ತಾರಂತೆ, ಲೆಕ್ಕಕ್ಕಿಂತ ಹೆಚ್ಚಿನ ಯಾವುದೇ ಆಹಾರ ಪದಾರ್ಥಗಳಾಗಲಿ ಸೊತ್ತುಗಳಾಗಲಿ ಮನೆಯಲ್ಲಿರಕೂಡದಂತೆ, ಒಂದು ವೇಳೆ ಇದ್ದರೆ ಜಪ್ತಿ ಮಾಡಿ ಕೊಂಡು ಹೋಗುವುದರ ಜತೆಗೆ ಶಿಕ್ಷೆಯನ್ನೂ ಕೊಡುತ್ತಾರಂತೆ ಎಂಬ ಹಲವು ಊಹಾಪೋಹಗಳಿದ್ದವು. ಆದರೆ ಮನದ ಒಂದು ಮೂಲೆಯಲ್ಲಿ ಈ ಮನೆ ದಟ್ಟಾರಣ್ಯದಲ್ಲಿ ಇರುವುದರಿಂದ ಇಲ್ಲಿಯವರೆಗೆ ಬ್ರಿಟೀಷರು ಬರಲಿಕ್ಕಿಲ್ಲ ಎಂಬ ಧೈರ್ಯವಿದ್ದರೂ ನಮ್ಮಜ್ಜ ಮತ್ತು ಮನೆಯ ಸದಸ್ಯರು ಯಾವ ಕ್ಷಣಕ್ಕಾದರೂ ಬ್ರಿಟೀಷರ ದಾಳಿ ಆಗಬಹುದೆಂಬ ಚಡಪಡಿಕೆಯಲ್ಲೇ ಇದ್ದಾಗ ಅಂತಹ ಒಂದು ದಿನ ಬಂದೇ ಬಿಟ್ಟಿತಂತೆ. ನಮ್ಮ ತಂದೆಯವರು ಆ ಕಥೆಯನ್ನು ಹೇಳುತ್ತಿದ್ದ ಸಂದರ್ಭವನ್ನು ನೆನೆಸಿದಾಗ ನನಗೀಗಲೂ ಕಣ್ಣೀರೇ ಬರುತ್ತದೆ.” ಎಂದಾಗ ಕಾರ್ತಿಕನಿಗಾಗಲಿ ಆದಿತ್ಯನಿಗಾಗಲಿ ಕುತೂಹಲದ ಜತೆಗೆ ಗೌಡರ ಅಂದಿನ ಸ್ಥಿತಿ ಗತಿಗಳು ಹೇಗಿದ್ದಿರಬಹುದೆಂದು ಕಲ್ಪನೆಯನ್ನೂ ಮಾಡಿಕೊಳ್ಳಲಾಗದ ಸ್ಥಿತಿ ಉಂಟಾಗಿತ್ತು. ಗೌಡರು ಮುಂದುವರಿಸಿದರು ಸ್ವಲ್ಪ ಭಾವುಕರಾಗಿಯೆ.

“ಫಂಜಾಲಿನ ಆಗಿನ ಸ್ಥಿತಿ ಹೇಗಿತ್ತೆಂದರೆ ಯಜಮಾನ, ಅವನ ಹಿರಿಯಂದಿರು, ಅಣ್ಣ ತಮ್ಮಂದಿರು, ಸೊಸೆಯಂದಿರು, ಚಿಕ್ಕಪ್ಪ ಚಿಕ್ಕಮ್ಮಂದಿರು, ಮಕ್ಕಳು-ಮೊಮ್ಮಕ್ಕಳು ಹೀಗೆ ಮನೆಯಲ್ಲಿ ನೂರಕ್ಕೆ ಹತ್ತಿರ ಜನರಿದ್ದರಂತೆ. ಬಹಳ ದೊಡ್ಡ ಮನೆಯಾದರೂ ಮೂಲ ಮನೆಗೆ ತಾಗಿಕೊಂಡೆ ಇತರ ಸಣ್ಣ ಸಣ್ಣ ಗುಡಿಸಲಿನಂತಿರುವ ಮನೆಗಳೂ ಇದ್ದವು. ಆದರೂ ಅವಿಭಕ್ತ ಕುಟುಂಬದಂತೆ ಎಲ್ಲರೂ ಜತೆ ಜತೆಯಾಗಿಯೇ ಊಟ ತಿಂಡಿ ಮಾಡಿಕೊಳ್ಳುತ್ತಿದ್ದರು. ಸಾಧಾರಣ ದಿನ ಒಂದಕ್ಕೆ ಒಂದು ಕಳಸಿಗೆಗೂ ಮಿಕ್ಕಿ ಅನ್ನವೊ ಗಂಜಿಯೋ ಬೇಕಾಗುತ್ತಿತ್ತು. ಅಂದರೆ ಈಗಿನ ಹದಿನಾಲ್ಕು ಕಿಲೋ ಎನ್ನಬಹುದು. ಆದ್ದರಿಂದ ಸಹಜವಾಗಿಯೆ ಮನೆಯಲ್ಲಿ ನೂರಾರು ಮುಡಿಗಳಷ್ಟು ಅಕ್ಕಿ ದಾಸ್ತಾನು ಇರುತ್ತಿತ್ತು. ಮಾತ್ರವಲ್ಲ ಅದನ್ನು ನಮ್ಮ ಗದ್ದೆಗಳಲ್ಲೇ ಬೆಳೆಸುತ್ತಿದ್ದರಂತೆ. ಜತೆಗೆ ತೆಂಗಿನಕಾಯಿ ತರಕಾರಿ ಇವೆಲ್ಲವೂ ನಮ್ಮ ಸ್ವಂತ ದುಡಿಮೆಯಿಂದ ಬೆಳೆಸಿ ಒಂದು ರೀತಿಯಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಂಥ ಹಿರಿಯರಿಗೆ ಸರಕಾರದ ರೇಷನ್ ಎಂಬ ವ್ಯವಸ್ಥೆ ಅರಗಿಸಿಕೊಳ್ಳಲಾಗದ ವಿಷಯವಾಗಿತ್ತು.”

ಹಂತ ಹಂತವಾಗಿ ಕುತೂಹಲ ಘಟ್ಟಕ್ಕೆ ಹೋಗುವ ಘಟನೆಗಳ ವಿವರ ಮಕ್ಕಳನ್ನು ಮಂತ್ರಮುಗ್ಧರನ್ನಾಗಿಸಿತ್ತು. ಹಸಿವಾಗಲಿ ಬಾಯಾರಿಕೆಯಾಗಲಿ ಗೌಡರ ಮಾತಿನ ಓಘಕ್ಕೆ ಶರಣಾಗಿ ಹೋಗಿತ್ತು. ನಡು ನಡುವೆ ಗೌಡರಿಗೆ ವೀಳ್ಯವನ್ನು ತಿನ್ನುತ್ತಲೇ ಇರಬೇಕಾಗಿರುವುದರಿಂದ ಅವರ ಮಾತುಗಳು ಆ ಅಲ್ಪ ಸಮಯದಲ್ಲಿ ಮೌನವಾಗುತ್ತವೆ. ಮತ್ತೊಮ್ಮೆ ಅವರ ಮಾತುಗಳಿಗೆ ಕಾಯುತ್ತಿರುವ ಸಮಯ ಮಕ್ಕಳಿಗೆ ಮುಂದೇನು ಎಂಬ ಕಲ್ಪನೆ ಮಾಡಿಕೊಳ್ಳುವಲ್ಲಿ ಈ ಮೌನ ಸಹಕಾರಿಯಾಗುತ್ತದೆ.

ಮತ್ತೊಮ್ಮೆ ಗೌಡರು ಲಹರಿಗೆ ಬಂದರು. “ಅಜ್ಜನವರು ನಿರೀಕ್ಷಿಸಿದ ಆ ಗಳಿಗೆಯು ಬಂದೇ ಬಿಟ್ಟಿತ್ತು. ಒಂದು ಮಧ್ಯಾಹ್ನ ಹತ್ತಾರು ಬ್ರಿಟೀಷ್ ಅಧಿಕಾರಿಗಳು ವಿಚಿತ್ರವಾದ ಹ್ಯಾಟ್ ಬೂಟನ್ನು ಧರಿಸಿಕೊಂಡು ಕೈಯಲ್ಲಿ ಲಾಠಿ, ಚೀಲಗಳಲ್ಲಿ ವಿವಿಧ ಪುಸ್ತಕಗಳು, ಬಾಯಲ್ಲಿ ಯಾರಿಗೂ ಅರ್ಥವಾಗದ ವಿಚಿತ್ರ ಭಾಷೆ, ನೋಡಲು ಮೈಗೆ ಬಿಳಿಯಾದ ಬಣ್ಣ ಬಳಿದವರಂತೆ, ಕ್ರೌರ್ಯ ತುಂಬಿರುವಂತೆ ಕಾಣುವ ಬೆಕ್ಕಿನ ಕಣ್ಣಿನೊಡನೆ ನಮ್ಮ ಮನೆಯ ಅಂಗಳದಲ್ಲಿ ಬಂದು ನಿಂತಾಗ ನಮ್ಮ ಹಿರಿಯರಿಗೆ ಯಮರಾಯನೇ ಎದುರು ಬಂದಂತಾಗಿತ್ತಂತೆ. ಹೆಂಗಸರು ಮಕ್ಕಳು ಯಾರೂ ಮನೆಯಿಂದ ಹೊರ ಬರಲಾಗದೆ ಮನೆಯೊಳಗೆ ಬಂದಿಯಾಗಿದ್ದರೆ ಹಿರಿಯ ಗಂಡಸರು ಅವರೆದುರು ಬಂದು ನಿಂತಿದ್ದರಂತೆ. ಸಾಕ್ಷಾತ್ ಹುಲಿಯೇ ಬಂದರೂ ನಮ್ಮವರು ಹೆದರದೇ ಇರುವಂಥ ಗುಂಡಿಗೆಯುಳ್ಳವರಾದರೂ ಈ ಬಿಳಿ ಜನರನ್ನು ನೋಡಿ ನಮ್ಮವರೆಲ್ಲರೂ ಹೆದರಿಹೋಗಿದ್ದರಂತೆ. ಕಾರಣ ಇಷ್ಟೆ.. ಮನೆಯೊಳಗಿದ್ದಂಥ ಅಕ್ಕಿಯನ್ನು ಕೊಂಡು ಹೋದರೆ ನಮ್ಮ ಬದುಕಿಗೆ ಊಟ ಕೊಡುವವರು ಯಾರೆಂಬ ಯೋಚನೆಯೇ ಅಧೀರರನ್ನಾಗಿಸಿತ್ತಂತೆ. ಅದರಲ್ಲೊಬ್ಬ ಮುಖ್ಯ ಅಧಿಕಾರಿ ಎದುರಿಗೆ ಬಂದು ‘ನಾವು ಸರಕಾರದ ವತಿಯಿಂದ ಬಂದಿದ್ದೇವೆ. ಮಹಾಯುದ್ಧದ ಕಾರಣ ಈಗ ಹೊಸ ಕಾನೂನು ಬಂದಿದೆ. ಏನೆಂದರೆ ಪ್ರತಿಯೊಂದು ಮನೆಯಲ್ಲಿ ಸದಸ್ಯರಿಗೆ ಅನುಗುಣವಾಗಿ ಇಷ್ಟೇ ಆಹಾರ ಸಾಮಗ್ರಿಗಳು ದಾಸ್ತಾನು ಇರಬಹುದೆಂಬ ಆಜ್ಞೆ ಇದೆ. ಅದಕ್ಕಿಂತ ಹೆಚ್ಚಿನದ್ದು ಸರಕಾರದ ವವಶವಾಗುತ್ತದೆ. ಅಂತೆಯೇ ನಿಮ್ಮಲ್ಲಿ ಕೂಡಿಟ್ಟ ದಾಸ್ತಾನು ಬಹಳಷ್ಟಿದೆ ಎಂಬ ವಿಷಯ ನಮಗೆ ಗೊತ್ತಾಗಿದೆ. ಆದ್ದರಿಂದ ನಿಮ್ಮ ಮನೆಯೊಳಗಿರುವ ಎಲ್ಲವನ್ನು ಹೊರಗೆ ತಂದು ತೋರಿಸಿ’ ಎಂದು ಹೇಳಿದಾಗ ಮನೆಯ ಯಜಮಾನನಾದಂಥ ನಮ್ಮಜ್ಜ ಮನೆಯೊಳಗಿನ ಹೆಂಗಸರು ಮತ್ತು ಯುವಕರಿಗೆ ವಿಷಯವನ್ನು ತಿಳಿಸಿದಾಗ ಎಲ್ಲರೂ ಅಧೀರರಾಗಿದ್ದರಂತೆ. ಅದ್ಯಾವ ಶಕ್ತಿಯೊ, ಅಥವಾ ನಾವು ನಂಬಿದ ದೈವವೊ ನಮಗೆ ಬಂದ ಆಪತ್ತನ್ನು ತಪ್ಪಿಸಿತು ಎನ್ನಬಹುದು.” ಎಂದು ಹೇಳಿ ಗೌಡರು ಮತ್ತೊಮ್ಮೆ ವೀಳ್ಯ ಉಗುಳಲು ಅಂಗಳಕ್ಕೆ ಇಳಿದರು. ಆಗ ಕಾರ್ತಿಕನು ಆದಿತ್ಯನನ್ನು ಕಂಡು “ಈ ಅಜ್ಜ ಕಥೆ ಹೇಳುವುದರಲ್ಲಿ ಬಹುಷ ಅವರಿಗೆ ಅವರೇ ಸಾಟಿ ಎನ್ನಬಹುದು. ಯಾಕೆಂದರೆ ಪ್ರತಿಯೊಂದು ವಿರಾಮದಲ್ಲೂ ಕಥೆಯನ್ನು ಕುತೂಹಲ ಘಟ್ಟಕ್ಕೆ ತಲುಪಿಸಿಯೇ ಬಿಡುತ್ತಾರೆ. ಮುಂದಿನ ಅವರ ಮಾತಿಗೆ ಕಾಯುವಂತೆ ಮಾಡುತ್ತಾರೆ.” ಎಂದಾಗ ಆದಿತ್ಯನೂ ಹೌದೆಂಬಂತೆ ತಲೆಯಾಡಿಸಿ ಗೌಡರ ಆಗಮನವನ್ನೇ ಕಾಯುತ್ತಿದ್ದನು.
***************************


ಅಳಂಬ.. ೧೮
*************
ಹೌದು ಮಕ್ಕಳೆ ನೀವಂದಂತೆ ಅದು ನಮಗೆ ಬಹಳ ಕಷ್ಟವೆ. ಆದರೆ ನಮಗೆ ಅದು ಸಹಜವೂ ಹೌದು. ಯಾಕೆಂದರೆ ಸಾಮಾನ್ಯವಾಗಿ ಬರುವಂಥ ಜ್ವರ, ಶೀತ ಬಾಧೆಯಂತ ಸಣ್ಣ ಪುಟ್ಟ ಅನಾರೋಗ್ಯಕ್ಕೆ ನಮ್ಮ ಹಳ್ಳಿ ಔಷಧಿಯೇ ಸಾಕಾಗುತ್ತದೆ. ನಮ್ಮ ಔಷಧಿ ಕೆಲಸ ಮಾಡಲಿಲ್ಲ ಎಂದರೆ ದೊಡ್ಡ ಕಾಯಿಲೆ ಬಂದಿದೆ ಎಂದೇ ಅರ್ಥ. ಆಗ ನಾವು ಅಂಥವರಿಗೆ ನಮ್ಮ ತಿಳಿವಿನ ಮಟ್ಟದಲ್ಲಿ ನಾರು, ಬೇರು, ಸೊಪ್ಪು, ಕಷಾಯ ಎಂದು ಶುಶ್ರೂಷೆ ಮಾಡುತ್ತೇವೆ. ದೈವ ಭೂತಗಳಿಗೆ ನಂಬುತ್ತೇವೆ. ಸೃಷ್ಟಿಸಿದ ದೇವರು ಪ್ರತಿಯೊಂದು ಜೀವಿಗೂ ಒಂದು ಅಂತ್ಯವನ್ನು ಇಟ್ಟಿರುತ್ತಾನೆ. ಅದು ಯಾರಿಂದಲೂ ಬದಲಾಯಿಸಲಾಗುವುದಿಲ್ಲ ಎನ್ನುವುದು ತಲೆತಲಾಂತರದಿಂದ ಬಂದಂಥ ನಮ್ಮ ಜನರ ನಂಬಿಕೆ. ಈ ವ್ಯವಸ್ಥೆಗೆ ನಾವೆಲ್ಲರೂ ಹೊಂದಿಕೊಂಡು ಕಷ್ಟದಲ್ಲೂ ಸುಖವನ್ನು ಅಥವಾ ಸಂತೃಪ್ತಿಯನ್ನು ಕಾಣುತ್ತೇವೆ. ಅಂತೆಯೇ ರೋಗಿಗೆ ಕೂಡ ತನ್ನ ರೋಗದ ಅರಿವು ಇರುತ್ತದೆ. ಹುಟ್ಟಿ ಬದುಕಿದ ಈ ನೆಲವನ್ನು ಬಿಟ್ಟು ಸಾಯಲು ಆಸ್ಪತ್ರೆಗಳಿಗೆ ಹೋಗಲು ನಾವ್ಯಾರು ಬಯಸುವುದಿಲ್ಲ. ಜೀವನವೊ ಮರಣವೊ ಅದು ದೈವೇಚ್ಛೆ ಎಂದು ನಂಬಿದ್ದರಿಂದ ನಮಗೆ ಬದುಕಿನಂತೆ ಮರಣವೂ ಸಹಜವೆ.”

“ಆಹಾ ಅದೆಷ್ಟು ಸುಂದರ ಕಲ್ಪನೆ. ಇದುವೆ ನಿಜವಾದ ಜೀವನ. ನಾವಾದರೊ ಪ್ರತಿಯೊಂದಕ್ಕೂ ವೈದ್ಯರೇ ಪರಿಹಾರ ಎಂದು ನಂಬಿದವರು. ಹುಟ್ಟು, ಸಾವು, ಅನಾರೋಗ್ಯ ಎಂಬುದು ಇಲ್ಲಿಯಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚಾಗಿ ನಾಗರಿಕ ಪ್ರಪಂಚದಲ್ಲಿಯೂ ಇದೆ. ಹಾಗೆ ನೋಡಿದರೆ ನಾಗರಿಕ ಪ್ರಪಂಚದ ವ್ಯವಹಾರ ಆಯುಷ್ಯವನ್ನೇನೂ ಜಾಸ್ತಿ ಮಾಡುವುದಿಲ್ಲ. ಬದಲಾಗಿ ಅಸಹಜತೆಯನ್ನು ಸೃಷ್ಟಿ ಮಾಡುತ್ತದೆ ಎಂದೇ ನನಗನಿಸುತ್ತದೆ. ಏನೇ ಇರಲಿ ಗೌಡ್ರೆ ನಿಮ್ಮ ಜೀವನ ಶೈಲಿಗೆ ನಮ್ಮದೊಂದು ದೊಡ್ಡ ನಮಸ್ಕಾರ” ಎಂದು ಕಾರ್ತಿಕ ಎರಡೂ ಕೈ ಜೋಡಿಸಿದನು.

“ನಮ್ಮ ಪೂರ್ವಜರಿಂದ ತೊಡಗಿ ಇಂದಿನವರೆಗೂ ನಮ್ಮ ಅದರಲ್ಲೂ ಪಶ್ಚಿಮ ಘಟ್ಟದ ಈ ಹಳ್ಳಿಗಳಲ್ಲಿ ಇಂಥದ್ದೇ ಜೀವನ ಕ್ರಮವಿರುವುದು ಅನಿವಾರ್ಯವೊ ಸಹಜವೊ ಅಂತು ನಮಗೆ ಸಂತೃಪ್ತಿ ಇರುವ ವ್ಯವಸ್ಥೆ. ಹಾಗೆಂದು ಕೆಲವೊಮ್ಮೆ ಇದರಿಂದ ತೊಂದರೆಗಳಾದದ್ದೂ ಇದೆ. ಅದು ಹೇಗೆಂದರೆ ಉದಾಹರಣೆಗೆ ವಿಷದ ಹಾವು ಕಡಿದರೆ, ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದರೆ, ಕೆಲಸ ಮಾಡುವ ಕತ್ತಿಯೊ ಕೊಡಲಿಯೊ ತಾಗಿ ಆಳವಾದ ಗಾಯಗಳಾದರೆ, ಹೆರಿಗೆಗಳು ಸಹಜವಾಗಿಯೇ ಆದರೂ ಕೆಲವು ಅಪರೂಪದ ಸಂದರ್ಭಗಳಲ್ಲಿ ತಾಯಿ ಮಗುವಿನ ಪ್ರಾಣಕ್ಕೆ ಅಪಾಯ ಬರುವಂತಿದ್ದರೆ ನಮಗೆ ಹತ್ತಿರ ಆಸ್ಪತ್ರೆಗಳಿರುತ್ತಿದ್ದರೆ ಜೀವ ಉಳಿಯಬಹುದಿತ್ತು ಎಂದು ಅನ್ನಿಸಿದ್ದು ಇದೆ. ಆದರೆ ಅಂತಹ ಸಂದರ್ಭಗಳು ಕೂಡ ಅಪರೂಪವೇ ಆಗಿರುವುದು ನಾವು ನಂಬಿದ ದೈವದ ಅನುಗ್ರಹವೆಂದೇ ತಿಳಿದುಕೊಂಡಿದ್ದೇವೆ. ಹಾಗೆ ನೋಡಿದರೆ ನಮ್ಮ ಮನೆ ಅಥವಾ ನಮ್ಮಂಥ ಹಳ್ಳಿಗಳಲ್ಲಿ ಯಾವುದೇ ವೈದ್ಯರು ಲಭ್ಯವಿಲ್ಲದಿದ್ದರೂ ವೃದ್ಧಾಪ್ಯದವರೆಗೆ ಬದುಕಿರುವವರೆ ಹೆಚ್ಚು ಜನರಿದ್ದೇವೆ. ಅಕಸ್ಮಾತ್ ಆಗಿ ಮಕ್ಕಳ ಅಥವಾ ಹದಿಹರೆಯದವರ ಮರಣಗಳಾಗುವುದು ಇದೆಯಾದರೂ ಅದು ಬಹಳ ಅಪರೂಪ. ಅಂಥ ಮರಣಗಳು ಆಧುನಿಕ ಪ್ರಪಂಚದಲ್ಲೂ ಆಗುತ್ತವೆ. ಆದ್ದರಿಂದ ನಾವಿದನ್ನು ಸಮಸ್ಯೆ ಎಂದು ಪರಿಗಣಿಸುವುದಿಲ್ಲ.”

” ನೀವು ಹೀಗೆಯೆ ಆರೋಗ್ಯವಾಗಿರಿ. ಸಂತೋಷ. ಆದರೆ ಕುತೂಹಲಕ್ಕಾಗಿ ಕೇಳುತ್ತೇನೆ ತಪ್ಪು ತಿಳಿದುಕೊಳ್ಳಬೇಡಿ ”

“ಕೇಳಿ ಭಟ್ರೆ.. ಮನಸ್ಸು ನಿರ್ಮಲವಾಗಿರುವಾಗ ಯಾವುದೂ ತಪ್ಪಲ್ಲ. ಅಂತೆಯೇ ಮನಸ್ಸು ಕೆಟ್ಟಿರುವಾಗ ಯಾವುದೂ ಸರಿ ಅಲ್ಲ.”

“ಆಹಾ ಎಷ್ಟೊಂದು ಅನುಭವದ ಮಾತು. ಬಹುಷ ನಿಮ್ಮ ಜೀವನವೆ ನಿಮಗೆ ಶಾಲೆಯಲ್ಲೂ ಕಲಿಸದ ಪಾಠಗಳನ್ನು ಕಲಿಸಿದೆ ಎನ್ನಬಹುದು.”

“ಖಂಡಿತ.. ಶಾಲೆಗೆ ಹೋಗುವ ಅನುಕೂಲವಿರುತ್ತಿದ್ದರೆ ನಾವು ಕೂಡ ಹೋಗುತ್ತಿದ್ದೆವೋ ಏನೊ. ಆದರೆ ನಮ್ಮ ಹುಟ್ಟು ಇಲ್ಲಿ ಆಗಿದೆ ಎಂದರೆ ಅದು ದೇವರ ನಿರ್ಣಯವೆ ಅಲ್ಲವೆ. ಆತನ ಆಜ್ಞೆಯಂತೆ ನಮ್ಮ ಬದುಕು ಸಾಗುತ್ತಿರುವಾಗ ಸಹಜವಾಗಿಯೇ ನಮಗೆ ಈ ಪ್ರಕೃತಿ, ನಮ್ಮ ನೆರೆಕರೆ, ನಮ್ಮ ವ್ಯವಹಾರವೇ ಗುರುಗಳ ಸ್ಥಾನದಲ್ಲಿರುತ್ತದೆ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು ಅಷ್ಟೆ. ಇರಲಿ ನೀವೇನೋ ಕೇಳಬೇಕೆಂದಿರಲ್ಲ ಕೇಳಿ”

“ಏನಿಲ್ಲ ಗೌಡ್ರೆ. ನಮ್ಮ ಪ್ರಶ್ನೆ ಬಾಲಿಷವಾಗಿರಬಹುದು. ಆದರೆ ಕುತೂಹಲವಿದೆ ಎಂದು ಕೇಳುತ್ತಿದ್ದೇನೆ. ಏನೆಂದರೆ ನಿಮ್ಮ ಸುದೀರ್ಘ ಜೀವನ ಯಾತ್ರೆಯಲ್ಲಿ ಆಸ್ಪತ್ರೆಗೆ ಹೋಗುವ ಪ್ರಸಂಗ ಬಂದದ್ದಿದೆಯೇ”

“ಅಂಥ ಪ್ರಸಂಗಗಳು ಬಹಳ ಸಲ ಬಂದಿವೆ. ಆದರೆ ಆಸ್ಪತ್ರೆಗೆ ಹೋಗದೆ ವ್ಯಾಧಿಗಳು ಗುಣವಾಗುತ್ತಿದ್ದುದರಿಂದ ಇವತ್ತಿನವರೆಗೆ ಆಸ್ಪತ್ರೆ ಔಷಧಿಗಳನ್ನು ಸೇವಿಸಲಿಲ್ಲ. ಇದು ನನ್ನ ಸಾಧನೆ ಎನ್ನುವುದಕ್ಕಿಂತಲೂ ದೇವರ ದಯವೆನ್ನಬಹುದು. ಅದಕ್ಕೆ ಇನ್ನೊಂದು ಕಾರಣವೆಂದರೆ ನಾವು ಯಾರು ಕೂಡ ವ್ಯಾಧಿ ಬಂದಾಗ ಅದು ಸಹಜವಾಗಿ ನಾಟಿ ಔಷಧದಿಂದ ಗುಣವಾಗದಿದ್ದರೆ ಬೇರೆ ವ್ಯವಸ್ಥೆ ಗುಣಪಡಿಸಬಲ್ಲುದು ಅಥವಾ ಬದುಕಿಸಬಲ್ಲುದು ಎಂಬ ವಿಶ್ವಾಸವನ್ನು ಇಟ್ಟವರಲ್ಲ. ಬದುಕು ಅಥವಾ ಸಾವು ಇವೆರಡರ ಮಧ್ಯೆ ಇರುವ ಬದುಕಿಸುವ ಅಥವಾ ಸಾವನ್ನು ಮುಂದೂಡುವ ಯಾವ ಪ್ರಕ್ರಿಯೆಗಳೂ ನಮ್ಮ ಕಾಡು ಜನರಿಗೆ ಅಸಹಜವಾಗಿರುತ್ತವೆ. ನಮಗೆ ಆರೋಗ್ಯವಂತ ಬದುಕಿಗೆ ಹೊಂದಿಕೊಂಡಷ್ಟೆ ಸಹಜವಾಗಿ ಅನಾರೋಗ್ಯಕ್ಕೆ ಹೊಂದಿಕೊಳ್ಳುವುದನ್ನು ಪ್ರಕೃತಿಯೇ ಕಲಿಸಿಕೊಟ್ಟಿದೆ. ಆದ್ದರಿಂದ ಆಸ್ಪತ್ರೆ ಎನ್ನುವುದು ಈ ಕಾಡೊಳಗೆ ವಾಸಿಸುವ ನಮಗ್ಯಾರಿಗೂ ಹೊಂದಿ ಬರುವುದಿಲ್ಲ. ಕೆಲವೊಂದು ಬಾರಿ ಯೋಚಿಸುವಾಗ ಆಸ್ಪತ್ರೆಗಳು ನಮಗೂ ದೊರಕುವಂತಿದ್ದರೆ ನಮ್ಮ ಬದುಕು ಇನ್ನೂ ಸುಂದರವಾಗುತ್ತಿತ್ತೋ ಏನೋ ಎಂದು ಅನ್ನಿಸುವುದಿದೆ. ಹಾಗೆಯೆ ಕೆಲವೊಮ್ಮೆ ಇದು ಹಾಸ್ಯಾಸ್ಪದವೆಂದೂ ಅನಿಸುವುದೂ ಇದೆ. ಕಾರಣವೆಂದರೆ ನನ್ನ ಮಗಳನ್ನು ಕುಕ್ಕುಜೆಗೆ ಮದುವೆ ಮಾಡಿ ಕೊಟ್ಟಿದ್ದೇವೆ. ಅನಾರೋಗ್ಯ ಉಂಟಾದರೆ ಅವರೆಲ್ಲರೂ ನಾರಾವಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ಹೋಗುವುದು ರೂಢಿ. ಹಾಗಾದರೆ ಅವರ ಮನೆಯಲ್ಲಿರುವವರೆಲ್ಲ ನಮಗಿಂತ ಆರೋಗ್ಯವಂತರೇ ಎಂದಾಗ ಖಂಡಿತ ಇಲ್ಲ. ನಾವು ಫಂಜಾಲಿನಲ್ಲಿ ಯಾವ ಮಟ್ಟದಲ್ಲಿದ್ದೇವೊ ಆರೋಗ್ಯದ ವಿಷಯದಲ್ಲಿ ಮಗಳ ಮನೆಯ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಹಾಗೆಂದು ಔಷಧೋಪಚಾರಗಳಿಗೆ ಬೇರೆ ವ್ಯವಸ್ಥೆ ಇಲ್ಲದಾಗ ಆಸ್ಪತ್ರೆಗಳನ್ನು ಮೊರೆ ಹೋಗುವುದೂ ಸಹಜವೆ. ಆದ್ದರಿಂದ ನನಗೆ ಅಥವಾ ನಮಗೆ ಈ ಆಸ್ಪತ್ರೆಗಳು ಅಷ್ಟಾಗಿ ಕಾಡುವುದಿಲ್ಲ.” ಇಷ್ಟು ಹೇಳಿ ನೀಲಯ ಗೌಡ್ರು ಹೆಗಲ ಮೇಲಿನ ಬೈರಾಸಿನಿಂದ ಮುಖವನ್ನು ಒರೆಸಿಕೊಂಡು ಕೂತ ಭಂಗಿಯನ್ನು ಬದಲಿಸಿದರು.

ಕಾರ್ತಿಕ, ಆದಿತ್ಯರ ಜತೆಗೆ ರಾಮಯ್ಯ ಗೌಡರು ಕೂಡ ನೀಲಯ ಗೌಡರ ವಿಚಾರ ಸರಣಿಗೆ ಬೆರಗಾಗಿ ಹೋದರು. ಮುಂದೇನು ಮಾತಾಡುವುದೆಂದೇ ಕಾರ್ತಿಕನಿಗಾಗಲಿ ಆದಿತ್ಯನಿಗಾಗಲಿ ಹೊಳೆಯಲೇ ಇಲ್ಲ. ಆದರೂ ಮನದೊಳಗೆ ನೀಲಯ ಗೌಡರಿಗೆ ಇಬ್ಬರೂ ತಲೆ ಬಾಗಿದ್ದರು. “ಗೌಡರೆ ನಿಮ್ಮ ವಿಚಾರಗಳು ಅದೆಷ್ಟು ತಾರ್ಕಿಕವಾಗಿವೆ. ಬಹುಷ ನಾವು ಈ ದೃಷ್ಟಿಯಿಂದ ಬದುಕನ್ನು ನೋಡಿದ್ದೇ ಇಲ್ಲ. ನಮಗೀಗ ಅರಿವಾಗುತ್ತಿದೆ ನಾವು ನಿಮ್ಮಲ್ಲಿಗೆ ಬಾರದೆ ಇರುತ್ತಿದ್ದರೆ ಜೀವನದ ಒಂದು ಅತ್ಯಮೂಲ್ಯ ಅವಕಾಶವನ್ನು ಕಳಕೊಳ್ಳುತ್ತಿದ್ದೆವು. ಮಾತ್ರವಲ್ಲ ನಿಮ್ಮಂಥವರ ಸ್ನೇಹವನ್ನು ಕೂಡ. ಯಾವುದೇ ನಾಗರಿಕ ಪ್ರಪಂಚದ ಸಹವಾಸವಿರದೆ ಅತ್ಯಂತ ಸುಸಂಸ್ಕೃತ ವಿಚಾರಗಳನ್ನು ಹೊಂದಿರುವ ನಿಮ್ಮ ಮೇಲೆ ನಮಗೆ ಅಭಿಮಾನ ನೂರು ಪಟ್ಟು ಹೆಚ್ಚಾದದ್ದಂತು ಖಂಡಿತ.” ಎಂದು ಆದಿತ್ಯನೂ ಹೇಳುವಾಗ ಸಹಜವಾಗಿ ನೀಲಯ ಗೌಡರಿಗೆ ಈ ಮಕ್ಕಳು ನನ್ನನ್ನು ಯಾಕೆ ಹೊಗಳುತ್ತಾರೆ ಎಂದೇ ಅರಿವಾಗಲಿಲ್ಲ. ಕಪಟವರಿಯದ ಗೌಡರು ಸಹಜ ಬದುಕಿನ ತನ್ನ ಅನುಭವವನ್ನಷ್ಟೆ ಹೇಳಿದ್ದರು. ಆದರೆ ಹುಡುಗರಿಗೆ ನಾಗರಿಕ ಪ್ರಪಂಚದಲ್ಲಿ ಇಷ್ಟೊಂದು ವಿಷಯಗಳನ್ನು ಅರಿತು ಅದನ್ನು ಹೀಗೆ ಹಂಚಿಕೊಳ್ಳುವವರು ವಿರಳವಿರುವುದರಿಂದ ಗೌಡರ ವಿಚಾರಧಾರೆ ಬಹಳ ಎತ್ತರದಲ್ಲಿ ಕಾಣುತ್ತಿತ್ತು. ಓದಿ.. ಪ್ರಚೋದಿಸಿ.. ಪ್ರೋತ್ಸಾಹಿಸಿ.. ಮುಂದೆ ಇನ್ನೂ ಇದೆ.
*****************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಅಳಂಬ.. ೧೭
****
ಗಾಡಿಯೊಳಗೆ ನಾನು ಸುಂದರ ಮತ್ತು ಗಾಡಿ ಹೊಡೆಯುವಂಥ ಮಾವನ ತಮ್ಮನಾದ ಪೂವಪ್ಪ ಮಾವ.. ಹೀಗೆ ಮೂವರೊಡನೆ ಎತ್ತಿನ ಗಾಡಿಯ ಗುಡುಗುಡು ಪ್ರಯಾಣ ಸಾಗುತ್ತಿತ್ತು. ನನಗಾದರೊ ಎಷ್ಟು ಹೊತ್ತಿಗೆ ಮುಖ್ಯ ರಸ್ತೆಗೆ ಹೋದೆನೊ, ವಾಹನಗಳನ್ನು ನೋಡುವೆನೊ ಎಂಬುದೇ ತವಕ. ಒಂದಷ್ಟು ದೂರ ಮಣ್ಣಿನ ರಸ್ತೆಯ ಪ್ರಯಾಣದ ನಂತರ ಮುಖ್ಯರಸ್ತೆಗೆ ಪ್ರವೇಶ ಮಾಡಿತು ನಮ್ಮ ಗಾಡಿ. ಎತ್ತಿನ ಗಾಡಿಯಲ್ಲಿ ಕೂಡ ಈ ಹಿಂದೆ ಒಂದೆರಡು ಸಲ ಕೂತಿದ್ದೆನಾದರೂ ಬಸ್ಸು ಬರುವಂಥ ಮುಖ್ಯ ರಸ್ತೆಯವರೆಗೆ ಹೋದದ್ದಿಲ್ಲ. ಆದ್ದರಿಂದ ಗಾಡಿಯಲ್ಲಿ ಕೂಡ ಇಷ್ಟು ದೂರದ ಪಯಣ ನನಗೆ ಪ್ರಥಮವೇ ಆಗಿತ್ತು. ಮುಖ್ಯ ರಸ್ತೆಯಿಂದ ಬಲಕ್ಕೆ ತಿರುಗಿದರೆ ಒಂದು ಮೈಲಿಯೊಳಗೆ ಅರಸ್ಕಟ್ಟೆ ಸಿಗುತ್ತದೆ. ಅಲ್ಲಿಯವರೆಗೆ ನನಗೆ ಹಿಂದಿನಿಂದ ಅಥವಾ ಮುಂದಿನಿಂದ ಯಾವುದಾದರು ಬಸ್ಸು ಬರಬಹದೆಂಬ ಕುತೂಹಲವಿತ್ತು. ಇಷ್ಟರೊಳಗೆ ಪೂವಪ್ಪ ಮಾವನವರಿಗೂ ನನ್ನ ಕುತೂಹಲದ ಪರಿಚಯವಾಗಿತ್ತು. ಅದಕ್ಕೆ ಪೂರಕವಾಗಿ ನನ್ನನ್ನು ಉದ್ದೇಶಿಸಿ ‘ನೀನು ಬಸ್ಸನ್ನು ನೋಡಿಲ್ಲ ಅಲ್ಲವೆ. ಅರಸ್ಕಟ್ಟೆಯಲ್ಲಿ ನನಗೊಂದಿಷ್ಟು ಕೆಲಸವಿದೆ. ಅದೇ ವೇಳೆಯಲ್ಲಿ
ಕಾರ್ಕಳಕ್ಕೆ ಹೋಗುವ ವೆಸ್ಟ್ ಕೋಸ್ಟ್ ಎಂಬ ಬಸ್ಸು ಬೆಳ್ತಂಗಡಿಯಿಂದ ಬರುತ್ತದೆ. ಅದರಲ್ಲಿ ನೀನು ಮತ್ತು ಸುಂದರ ನಾರಾವಿವರೆಗೆ ಹೋಗಿ ಬನ್ನಿ. ಒಬ್ಬರಿಗೆ ಮೂವತ್ತೈದು ಪೈಸೆ ಟಿಕೇಟು ಇದೆ. ಹಣ ನಾನು ಕೊಡುತ್ತೇನೆ. ಸುಂದರನಿಗೆ ಬಸ್ಸಲ್ಲಿ ಹೋಗಿ ಅಭ್ಯಾಸವಿದೆ. ನಾರಾವಿಯಲ್ಲಿ ಬಸ್ಸಿನಿಂದಿಳಿಯಿರಿ. ಕಾಲು ಗಂಟೆಯಲ್ಲಿ ಬೆಳ್ತಂಗಡಿಗೆ ಹೋಗುವ ಹನುಮಾನ್ ಬಸ್ಸು ಕಾರ್ಕಳದಿಂದ ಬರುವುದಿದೆ. ಅದರಲ್ಲಿ ವಾಪಸು ಅರಸ್ಕಟ್ಟೆಗೆ ಬನ್ನಿ. ಇಲ್ಲಿಂದ ಪುನಹ ಗಾಡಿಯಲ್ಲಿ ಕುಕ್ಕುಜೆಗೆ ಹೋಗಬಹುದ. ಹಾಗೂ ಎರಡು ಬಸ್ಸುಗಳಲ್ಲಿ ಪ್ರಯಾಣವನ್ನೂ ಮಾಡಬಹುದು’ ಎಂದಾಗ ನನಗೆ ನನ್ನ ಆಸೆ ಇಷ್ಟು ಬೇಗ ನೆರವೇರುತ್ತದೆ ಎಂದು ನಂಬಲಾಗಲಿಲ್ಲ. ಅಂತೆಯೆ ಮಾವನವರು ಎಷ್ಟು ಒಳ್ಳೆಯವರು ಎಂಬ ಭಾವವೂ ಬಂದಿತ್ತು.

ಅರಸ್ಕಟ್ಟೆಗೆ ಗಾಡಿ ಹೋದ ನಂತರ ನಾವು ಗಾಡಿಯಿಂದಿಳಿದು ಬಸ್ಸಿನ ನಿರೀಕ್ಷೆಯಲ್ಲಿದ್ದೆವು. ಸುಂದರ ಹೇಳಿದ್ದ.. ಬಸ್ಸಿಗೆ ಹತ್ತಬೇಕಾದರೆ ಬಸ್ಸಿನ ಎಡಭಾಗದಲ್ಲಿ ಮೆಟ್ಟಲುಗಳಿರುತ್ತವೆ. ಬಸ್ಸು ಪೂರ್ಣ ನಿಂತ ಮೇಲೆ ನಿಧಾನವಾಗಿ ಹತ್ತಬೇಕು. ಒಳಗೆ ಹೋದೊಡನೆ ಎಲ್ಲಿ ಜಾಗ ಸಿಗುವುದೊ ಅಲ್ಲಿ ಕೂರಬೇಕೆಂದು. ನನಗಾದರೊ ಸುಂದರನಿರುವಾಗ ಹೆದರಿಕೆ ಇರಲಿಲ್ಲ. ಅವನನ್ನುಸರಿಸಿದರೆ ಆಯಿತೆಂದು ಧೈರ್ಯದಿಂದಲೇ ಇದ್ದೆ. ದೂರದಿಂದ ಬಸ್ಸಿನ ಶಬ್ದ ಕೇಳಲಾರಂಭಿಸಿತು. ಅನುಭವಿ ಸುಂದರ ‘ಅಕೋ ನೋಡು ಬಸ್ಸು ಬರುತ್ತಿದೆ. ಸಾಧಾರಣ ಒಂದೆರಡು ಮೈಲು ದೂರದಿಂದಲೇ ಇದರ ಶಬ್ದ ಗೊತ್ತಾಗುವುದರಿಂದ ಯಾರಿಗೂ ಬಸ್ಸು ತಪ್ಪುವ ಸಾಧ್ಯತೆ ಕಡಿಮೆ ಇರುತ್ತದೆ.’ ಎಂದು ಹೇಳಿದಾಗ ಶಬ್ದ ಇನ್ನೂ ಹತ್ತಿರ ಹತ್ತಿರ ಬಂದಾಗ ನನಗೆ ಎದೆಯಲ್ಲಿ ಏನೋ ಒಂದು ವಿಚಿತ್ರ ಅನುಭವವಾಗತೊಡಗಿತು. ಬಸ್ಸು ದೂರದಿಂದಲೆ ಕಣ್ಣಿಗೆ ಕಂಡಾಗ ಬಹಳ ಸಂತೋಷದ ಜತೆಗೆ ಅದರ ಅಗಾಧ ಆಕಾರ ಕಂಡು ಸ್ವಲ್ಪ ಭೀತಿಯೂ ಉಂಟಾಗಿತ್ತು. ಜತೆಗೆ ಇದ್ದ ಸುಂದರ ನನ್ನ ಮನಸನ್ನು ಅರಿತವನಂತೆ ಏನು ಹೆದರಬೇಡ ಎಂದು ಧೈರ್ಯ ಹೇಳಿದ್ದು ನನಗೆ ಈಗಲೂ ನೆನಪಿದೆ. ನಾವು ನಿಂತಲ್ಲಿ ಬಸ್ಸು ಬರುವಾಗ ಸುಂದರ ಕೈಯನ್ನು ಅಡ್ಡ ಹಿಡಿದ ಅದನ್ನು ಕಂಡು ಬಸ್ಸು ನಮ್ಮ ಹತ್ತಿರ ಬಂದು ನಿಂತಿತು. ಸುಂದರನನ್ನು ಅನುಸರಿಸಿ ನಾನೂ ಬಸ್ಸಿನ ಮೆಟ್ಟಲೇರಿ ಒಳಗೆ ಹೋದರೆ ಇಪ್ಪತ್ತಕ್ಕೂ ಹೆಚ್ಚು ಜನ ಆಗಲೇ ಕೂತುಕೊಂಡಿದ್ದರು. ನಾನು ಮತ್ತು ಸುಂದರ ನೇರ ಚಾಲಕನ ಎಡ ಬದಿಯಲ್ಲಿರುವ ಆಸನದಲ್ಲಿ ಕೂತು ಕೊಂಡೆವು. ಅಷ್ಟರಲ್ಲಿ ಬಸ್ಸು ಚಲಿಸಲಾರಂಭಿಸಿತು.

ಸಾಧಾರಣ ಒಂದು ಮೈಲಿಯಷ್ಟು ದೂರ ಬಸ್ಸಲ್ಲಿ ಕೂತಾಗ ನನಗೆ ಎತ್ತಿನ ಗಾಡಿಗೂ ಬಸ್ಸಿಗೂ ಅದೆಷ್ಟು ವ್ಯತ್ಯಾಸವಿದೆ ಅನ್ನುವುದು ಗೊತ್ತಾಯಿತು. ಅದರಲ್ಲೂ ಬಸ್ಸನ್ನು ಚಲಾಯಿಸುವ ಚಾಲಕನ ಚಾಕಚಕ್ಯತೆಗೆ ನಾನು ದಿಗ್ಭ್ರಾಂತನಾದದ್ದಂತು ಸತ್ಯ. ಯಾಕೆಂದರೆ ಆಷ್ಟು ದೊಡ್ಡ ಬಸ್ಸನ್ನು ಯಾವುದೇ ಕಷ್ಟವಿಲ್ಲದೆ ನಾವು ಆಟಿಕೆಯೊಡನೆ ಆಡುವಂತೆ ಚಲಾಯಿಸುವ ಆತನ ಚಾಲಾಕಿತನ ನೋಡಿದಾಗ ನನಗೆ ಇಂಥ ಬಸ್ಸಿಗೆ ಚಾಲನಾಗುವುದೆಂದರೆ ಅದು ಸಣ್ಣ ವಿದ್ಯೆಯಲ್ಲ ಎಂದು ಅರಿವಾಗಿತ್ತು. ನಾರಾವಿಯಲ್ಲಿ ಬಸ್ಸಿನಿಂದಿಳಿದು ಅರ್ಧ ಗಂಟೆಯಲ್ಲಿ ಬೆಳ್ತಂಗಡಿಗೆ ಹೋಗುವ ಹನುಮಾನ್ ಬಸ್ಸು ಬಂತು. ಅದು ಕೂಡ ಸಾಕಷ್ಟು ದೂರದಿಂದಲೇ ಶಬ್ದ ಮಾಡುತ್ತ ಬರುವಾಗ ಮತ್ತೊಂದು ಬಸ್ಸಲ್ಲಿ ಪ್ರಯಾಣದ ಅನುಭವ ಹೇಗೋ ಎಂಬ ಯೋಚನೆಯೊಂದಿಗೆ ಬಸ್ಸಿನ ಬರವನ್ನು ಕಾಯುತ್ತಿದ್ದೆ. ಹಿಂದಿನ ಬಸ್ಸಿಗೂ ಹನುಮಾನ್ ಬಸ್ಸಿಗೂ ಗಾತ್ರದಲ್ಲಿ ವ್ಯತ್ಯಾಸವಿಲ್ಲದಿದ್ದರೂ ಬಣ್ಣದಲ್ಲಿ ಬಹಳ ವ್ಯತ್ಯಾಸವಿತ್ತು. ಅದಲ್ಲದೆ ಹನುಮಾನ್ ಬಸ್ಸಿನ ಮೇಲ್ಭಾಗದಲ್ಲಿದ್ದಂಥ ಕಿರೀಟದಂಥ ಒಂದು ವಿನ್ಯಾಸ ಬಹಳ ಸುಂದರವಾಗಿ ಕಾಣಿಷುತ್ತಿತ್ತು. ಅದಲ್ಲದೆ ಅದರ ಚಾಲಕ ಬಹಳ ಸುಂದರವಾಗಿದ್ದ. ಕಪ್ಪು ಕನ್ನಡಕ ಧರಿಸಿಕೊಂಡು ಬಸ್ಸಿಗೆ ಶೋಭೆ ತರುವಂತಿದ್ದ. ಯಥಾಪ್ರಕಾರ ನಾರಾವಿಯಿಂದ ಅರಸ್ಕಟ್ಟೆಗೆ ಬಂದಿಳಿದಾಗ ನನಗೆ ನನ್ನ ಜೀವನದಲ್ಲಿ ಹೊಸತೊಂದು ಅನುಭವ ಮಾತ್ರವಲ್ಲ ಎಂದೂ ಮರೆಯಲಾಗದ ಸಾಧನೆಯೇ ಆಗಿತ್ತು.

ಕೋಲ ಮುಗಿಸಿ ಮನೆಗೆ ಬಂದಾಗ ಬಸ್ಸಿನ ಪ್ರಯಾಣದ ಸುದ್ದಿ ತಿಳಿದ ನನ್ನ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಬಸ್ಸು ಪ್ರಯಾಣದ ಅನುಭವಗಳನ್ನು ಕೇಳಿದ್ದೇ ಕೇಳಿದ್ದು. ನಾನಾವತ್ತು ಎಲ್ಲರಿಂದಲೂ ಅದೃಷ್ಟವಂತ ಎನಿಸಿಕೊಂಡಿದ್ದೆ. ಅಂತೆಯೇ ನನಗೆ ಮನೆಗೆ ಬಂದು ಒಂದು ವಾರವಾದರೂ ಈ ಬಸ್ಸಿನ ಗುಂಗಿನಿಂದ ಪೂರ್ತಿ ಹೊರಬರಲಾಗಲಿಲ್ಲ.”

ಇಷ್ಟೆಲ್ಲ ಕತೆಯನ್ನು ಕೇಳಿದಾಗ ಕಾರ್ತಿಕನಿಗೆ ಹಿಂದಿನ ಕಾಲದಲ್ಲಿ ನಾಗರಿಕತೆಯು ಬೆಳೆದು ಬಂದಂಥ ಹಂತಗಳ ಪರಿಚಯವಾಗಿತ್ತು. ಬಹುಷ ನಮ್ಮ ಅಜ್ಜಂದಿರು ಕೂಡ ಇಂಥ ಅನುಭವಗಳನ್ನು ದಾಟಿಯೇ ಬಂದಿರಬೇಕೆಂಬ ಕಲ್ಪನೆಯೂ ಕಾರ್ತಿಕನಿಗೆ ಮೂಡಿತ್ತು. ಅಂತೆಯೇ ನೀಲಯ ಗೌಡರಲ್ಲಿ ಕೇಳುವಂಥ ಹಲವಾರು ಪ್ರಶ್ನೆಗಳು ಕಾರ್ತಿಕನಲ್ಲಿ ಇನ್ನೂ ಉಳಿದಿತ್ತು. ಆದರೆ ಗೌಡರಲ್ಲಿ ಕೇಳುವುದೊ ಬಿಡುವುದೊ ಎಂಬ ಗೊಂದಲವೂ ಇತ್ತು. ಅಷ್ಟರಲ್ಲಿ ನೀಲಯ ಗೌಡರೆ “ಇದಿಷ್ಟು ನನ್ನ ಬಸ್ಸು ಪ್ರಯಾಣದ ಕಥೆ. ಮುಂದೇನಾದರು ಕೇಳಲಿಕ್ಕಿದ್ದರೆ ಕೇಳಿ” ಎಂದಾಗ ಕಾರ್ತಿಕನಿಗೆ ನಿರಾಳವಾಯಿತು. ಇವರೆಲ್ಲರ ಮಾತುಕತೆ ಆಗುವಾಗ ರಾಮಯ್ಯ ಗೌಡ್ರು ಕೂಡ ನೀಲಯ ಗೌಡರ ಅನುಭವಗಳನ್ನು ಕೇಳುತ್ತ ಖುಷಿ, ಆಶ್ಚರ್ಯ, ಭಯ, ವಿನೋದ ಮುಂತಾದ ಭಾವಗಳನ್ನು ತಾನೂ ಅನುಭವಿಸುತ್ತಿದ್ದರು. ಮುಂದೆ ಕಾರ್ತಿಕನು “ಹಾಗೆಯೇ ನಿಮಗೆ ಆರೋಗ್ಯ ಸಮಸ್ಯೆಗಳಾದರೆ ವೈದ್ಯರ ಭೇಟಿಯಾಗಲಿ ಔಷಧವಾಗಲಿ ಬಹಳ ಕಷ್ಟವಲ್ಲವೆ. ಅದನ್ನು ಹೇಗೆ ನಿಭಾಯುಸುತ್ತಿದ್ದೀರಿ” ಎಂದು ಕಾರ್ತಿಕನ ಪ್ರಶ್ನೆಗೆ ನೀಲಯ ಗೌಡರಿಗೆ ಖುಷಿಯಾಯಿತು. ಈ ಮಕ್ಕಳು ಎಲ್ಲ ರೀತಿಯಿಂದ ಆಲೋಚನೆ ಮಾಡುತ್ತಿದ್ದಾರೆ ಎನಿಸಿತ್ತು. ಓದಿ… ಪ್ರಚೋದಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.


ಅಳಂಬ.. ೧೬
*************
ಮತ್ತೂ ಹತ್ತು ನಿಮಿಷದಷ್ಟು ಹುಡುಕಿದಾಗ ಅಜ್ಜ ಉಟ್ಟುಕೊಂಡ ಬಟ್ಟೆ ಕಂಡಿತು. ಅಲ್ಲಿಗೆ ಅಜ್ಜ ನಮ್ಮ ಕೈ ತಪ್ಪಿ ಹೋಗಿದ್ದಾರೆಂಬುದು ನಿಘಂಟಾಯಿತು. ಅಷ್ಟರಲ್ಲಿ ಅಪ್ಪ, ಚಿಕ್ಕಪ್ಪ ಬೊಬ್ಬೆ ಹಾಕಿದ್ದು ಕೇಳಿಸಿತು. ಎಲ್ಲರೂ ಬೊಬ್ಬೆ ಕೇಳಿದಲ್ಲಿ ಓಡಿದೆವು. ನೋಡುವಾಗ ನಮಗೆಲ್ಲರಿಗೂ ಮೂರ್ಛೆ ಹೋಗುವುದೊಂದೇ ಬಾಕಿ. ಚಿರತೆಯೊ ಹುಲಿಯೊ ಅಜ್ಜನನ್ನು ಎಳೆದು ತಂದು ತಿಂದು ಹಾಕಿತ್ತು. ತಲೆ ಹೊಟ್ಟೆ ಕಾಲುಗಳಿಗೆ ಆಳವಾದ ಗಾಯಗಳಾಗಿ ನೋಡಲು ಭೀಭತ್ಸವಾಗಿತ್ತು. ಸುತ್ತಮುತ್ತಲೂ ಒಂದಷ್ಟು ರಕ್ತ, ಚಲ್ಲಾಪಿಲ್ಲಿಯಾದ ಮಾಂಸದ ತುಂಡುಗಳು, ಕಣ್ಣು-ಕಿವಿ-ಮೂಗುಗಳನ್ನು ಗುರುತಿಸಲಾಗದಷ್ಟು ಅಧ್ವಾನವಾಗಿತ್ತು ಶರೀರ. ಇದನ್ನೆಲ್ಲ ನೋಡಿ ಮಕ್ಕಳು, ಹೆಂಗಸರು ಮನೆಯೊಳಗೆ ಸೇರಿದವರು ಆಘಾತಕ್ಕೊಳಗಾಗಿ ಅಳುವುದನ್ನೂ ಮರೆತು ಮೂಕರಾಗಿದ್ದರು. ಮುಂದೆ ಎಲ್ಲರೂ ಧೈರ್ಯ ಮಾಡಿ ಸುತ್ತ ಮುತ್ತ ಹುಲಿಯೊ ಚಿರತೆಯೊ ಹೊಂಚು ಹಾಕುತ್ತಿರಬಹುದೆಂದು ಅಂದುಕೊಂಡು ಕತ್ತಿ, ದೊಣ್ಣೆ, ದೊಂದಿ ಹಿಡಿದುಕೊಂಡು ಬೊಬ್ಬೆ ಹಾಕುತ್ತ ಒಂದಷ್ಟು ಜನ ಸುತ್ತ ಮುತ್ತ ತಿರುಗಿದೆವು. ಎಲ್ಲಿಯೂ ಅದರ ಸುಳಿವಿಲ್ಲವೆಂದು ನಿಘಂಟಾದ ಮೇಲೆ ಹೆಣವನ್ನು ಮನೆಗೆ ತಂದು ಅಂತಿಮ ಕ್ರಿಯೆಯನ್ನು ನಡೆಸಿದೆವು. ಅದರ ನಂತರ ಅಂಥ ಸನ್ನಿವೇಶ ಬಂದದ್ದಿಲ್ಲ.” ಇಷ್ಟು ಹೇಳುವಾಗ ನೀಲಯ್ಯ ಗೌಡ್ರ ಕಣ್ಣಲ್ಲೂ ನೀರು
ಜಿನುಗಲಾರಂಭಿಸಿತ್ತು.

ಕಾರ್ತಿಕ ಮತ್ತು ಆದಿತ್ಯ ಇಬ್ಬರೂ ಬಿಟ್ಟ ಕಣ್ಣು ಮಿಟುಕಿಸಲೇ ಮರೆತಂತಿದ್ದರು. ಇಂಥ ಹಳ್ಳಿಗಳ ಜೀವನ ಅದೆಷ್ಟು ಭೀಕರವೆಂಬ ಸತ್ಯವೂ ಅವರಿಗೆ ಗೋಚರವಾಗಿತ್ತು. ಮಾತ್ರವಲ್ಲ ಗೌಡ್ರಲ್ಲಿ ಮುಂದೇನು ಮಾತಾಡಲಿ ಎಂಬುದೇ ತೋಚದಂತಾಗಿತ್ತು. ಆದರೆ ಸಹಜವಾಗಿಯೇ ನೀಲಯ್ಯ ಗೌಡರು ಮತ್ತೆ ಮುಂದುವರಿಸಿದರು.

“ಒಂದಷ್ಟು ದಿವಸ ಈ ಗುಂಗಿನಿಂದ ನಮಗ್ಯಾರಿಗೂ ಹೊರ ಬರಲಾಗಲಿಲ್ಲ. ಅಂತೆಯೇ ಈ ಘಟನೆಯ ನಂತರ ಎಷ್ಟೇ ಸೆಕೆ ಆದರೂ ರಾತ್ರಿ ಜಗಲಿಯಲ್ಲಿ ಮಲಗುವ ಸಾಹಸವನ್ನು ಯಾರೂ ಮಾಡಲಿಲ್ಲ. ಹಾಗೆಂದು ಕಾಡು ಪ್ರಾಣಿಗಳು ಆಗೊಮ್ಮೆ ಈಗೊಮ್ಮೆ ಮನುಷ್ಯರ ಮೇಲೆ ಈ ರೀತಿ ದಾಳಿ ಮಾಡುತ್ತವೆ. ಅದಕ್ಕಂಜಿ ಕೂರಬಾರದು ಅಷ್ಟೆ.

“ಗೌಡ್ರೆ ನನಗೊಂದು ಗೊಂದಲವಿದೆ ಏನೆಂದರೆ ರಾತ್ರಿಯಲ್ಲಿ ಏನೇ ಅಸಹಜವಾದ ಪ್ರಕ್ರಿಯೆ ನಡೆದರೂ ನಾಯಿಗಳು ಬೊಗಳುತ್ತವೆ. ಆದರೆ ನಿಮ್ಮ ಅಜ್ಜನನ್ನು ಕಾಡು ಪ್ರಾಣಿ ಕೊಂಡು ಹೋಗುವಾಗ ಇಷ್ಟು ನಾಯಿಗಳಿಗೂ ಗೊತ್ತಾಗದೆ ಇದ್ದದ್ದು ಹೇಗೆ”

“ಹೌದು ಇದೊಂದು ನಿಗೂಢ ಪ್ರಶ್ನೆ ನಮಗೆ ಆವತ್ತಿನಿಂದ ಇವತ್ತಿನವರೆಗೂ ಪ್ರಶ್ನೆಯಾಗಿಯೇ ಉಳಿದಿದೆ. ಸಾಮಾನ್ಯವಾಗಿ ಸುತ್ತ ಮುತ್ತ ನಡೆಯುವ ಎಲ್ಲ ವಿಷಯಗಳು ನಾಯಿಗಳಿಗೆ ತಿಳಿಯುತ್ತವೆ. ಒಂದು ಸಣ್ಣ ಬದಲಾವಣೆ ಆದರೂ ನಾಯಿಗಳು ಊರಿಡೀ ಕೇಳುವಂತೆ ತಾರಕ ಸ್ವರದಲ್ಲಿ ಬೊಗಳುತ್ತವೆ. ಮಾತ್ರವಲ್ಲ ಹುಲಿ ಬಂದದ್ದು ಗೊತ್ತಾದರೆ ಹಟ್ಟಿಯಲ್ಲಿ ಜಾನುವಾರುಗಳು ಕೂಡ ಗಾಬರಿಯಿಂದ ಬೊಬ್ಬೆ ಹೊಡೆಯಲು ಪ್ರಾರಂಭಿಸುತ್ತವೆ. ಇಂತಿರುವಾಗ ಅಜ್ಜನನ್ನು ಹೊತ್ತುಕೊಂಡು ಹೋಗುವಾಗ ಯಾಕೆ ಇವು ಮೌನವಾಗಿದ್ದವು ಎಂದೇ ತಿಳಿಯದು. ಅಂತೆಯೆ ಅಜ್ಜ ಕೂಡ ಸಹಜವಾಗಿ ಏಳುವ ಸಮಯವಾದರೆ ಚಾಪೆ ಮಡಚದೆ ಇರುವುದೇ ಇಲ್ಲ. ಆ ದಿನ ಚಾಪೆ ಮಡಚಿಲ್ಲವೆಂದರೆ ಅಜ್ಜ ಪುನಹ ಬಂದು ಮಲಗುವ ಯೋಚನೆಯಲ್ಲಿದ್ದರೆಂದೇ ಹೇಳಬಹುದು. ಹಾಗಾದರೆ ಅಜ್ಜನಿಗೆ ಮೂತ್ರ ವಿಸರ್ಜನೆಗೋ, ಮಲ ವಿಸರ್ಜನೆಗೋ ಹೋಗಬೇಕಾಗಿ ಬಂದಿರಬೇಕು. ಅದಕ್ಕೆಂದು ಹೊರಗೆ ಹೋಗುವಾಗ ನಾಯಿಗಳಿಗಾಗಿ ಹೊಂಚು ಹಾಕುತ್ತಿದ್ದ ಹುಲಿಯೊ ಚಿರತೆಯೊ ಹಸಿವನ್ನಿಂಗಿಸಲು ಬಾಯಿಗೆ ಬಂದಂಥ ತುತ್ತಾದ ಅಜ್ಜನನ್ನೇ ಕೊಂಡೊಯ್ದಿರಬೇಕು… ಇದು ನಮ್ಮ ಊಹೆಯಷ್ಟೆ.”

“ಇರಬಹುದು ಗೌಡ್ರೆ. ನಿಮ್ಮ ಅನುಭವ ಕೇಳುವಾಗಲೆ ನಮಗೆ ರೋಮಾಂಚನವಾಗುತ್ತದೆ. ಹಾಗಾದರೆ ನಿಮ್ಮ ಆ ದಿನಗಳು ಹೇಗಿರಬಹುದೆಂದು ನಮಗೆ ಊಹಿಸುವುದೂ ಕಷ್ಟವೆ.”

ಅಷ್ಟರಲ್ಲಿ ನೀಲಯ್ಯ ಗೌಡರ ಧರ್ಮಪತ್ನಿಯಾದ ರುಕ್ಕು ಗೌಡ್ತಿಯು ಮನೆಯೊಳಗಿಂದ ಹೊರ ಬಂದು “ಮಧ್ಯಾಹ್ನ ಊಟದ ಹೊತ್ತಾಯಿತು. ನೀವು ಬ್ರಾಹ್ಮಣರು ನಮ್ಮಲ್ಲಿ ಊಟ ಮಾಡಲಾರಿರಿ. ಬಾಳೆ ಹಣ್ಣು, ಅವಲಕ್ಕಿ, ಎಳನೀರು ಇದೆ. ತೆಗೆದು ಕೊಳ್ಳಿ” ಎಂದು ಹೇಳಿದಾಗ ಕಾರ್ತಿಕನಿಗೆ ಸಂಕೋಚವೂ ಆಯಿತು. ಜತೆಗೆ ಮನದೊಳಗೆ ‘ನಮ್ಮ ಬ್ರಾಹ್ಮಣ್ಯ ನಮ್ಮ ಮನೆಯೊಳಗಿದ್ದರೆ ಚಂದ. ಈ ರೀತಿ ಹೊರಗೆ ಬಂದಾಗ ಬ್ರಾಹ್ಮಣೇತರರು ಕೊಡುವುದು ಗೌರವವಾದರೂ ಅದಕ್ಕಿಂತ ಅವರ ಮನೆಯಲ್ಲಿ ಗಂಜಿ ಊಟ ಮಾಡಿದರೆ ಅದಕ್ಕಿಂತ ಹೆಚ್ಚಿನ ವಿಶ್ವಾಸ, ಅನ್ಯೋನ್ಯತೆ ಬೆಳೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಮಗೆ ಸಮಸ್ಯೆಯಾಗುವುದು ಇದೇ ಆಹಾರ ಪದ್ಧತಿಯಲ್ಲಿ. ಮಾಂಸಾಹಾರ ನಮಗೆ ಆಗದ ಕಾರಣ ಊಟದ ವಿಷಯದಲ್ಲಿ ನಾವು ಸೋಲುತ್ತೇವೆಯೇ ಹೊರತು ಬೇರೆಲ್ಲವನ್ನೂ ಹೊಂದಾಣಿಕೆ ಮಾಡಿಕೊಳ್ಳಬಹುದು’ ಈ ರೀತಿಯ ವಿಚಾರದಲ್ಲಿ ಕಾರ್ತಿಕ ಅಂತರ್ಮುಖಿಯಾದಾಗ ನೀಲಯ್ಯ ಗೌಡ್ರು ಮುತ್ತಯ್ಯ ಗೌಡ್ರನ್ನು ಊಟಕ್ಕೆ ಕರೆದು ಕಾರ್ತಿಕ ಮತ್ತು ಆದಿತ್ಯನಿಗೆ ಫಲಾಹಾರದ ವ್ಯವಸ್ಥೆ ಮಾಡಿಕೊಟ್ಟರು. ಎಲ್ಲರ ಮಧ್ಯಾಹ್ನದ ವ್ಯವಸ್ಥೆ ಆದ ನಂತರ ಮತ್ತೊಮ್ಮೆ ಕಾರ್ತಿಕನಿಗೆ ಫಂಜಾಲಿನ ಜನಜೀವನದ ವಿಶೇಷತೆಗಳನ್ನು ಅರಿತು ಕೊಳ್ಳುವ ಮನಸ್ಸಾಯಿತು. ಅಂತೆಯೇ ನೀಲಯ್ಯ ಗೌಡರಿಗೂ ಈ ಮಕ್ಕಳ ಜತೆ ಮಾತಾಡುವ ಹುಮ್ಮಸ್ಸಿನ ಜತೆಗೆ ಒಂದು ಲಹರಿಯೂ ಮೂಡಿತ್ತು.

“ಗೌಡ್ರೆ ನಿಮ್ಮ ಬಾಲ್ಯದಲ್ಲಿ ಇನ್ನೇನಾದರು ಘಟನೆಗಳಾದಲ್ಲಿ ಹೇಳಬಹುದೆ” ಎಂದಾಗ ನೀಲಯ್ಯ ಗೌಡರಿಗೆ ಈ ಮಕ್ಕಳ ಮೇಲೆ ಅಭಿಮಾನ ಮೂಡಿತ್ತು. ಅಂತೆಯೇ ಹೇಳತೊಡಗಿದರು. “ನಾವು ಸಣ್ಣವರಿರುವಾಗ ಈ ಫಂಜಾಲನ್ನು ಬಿಟ್ಟು ಹೋದವರಲ್ಲ. ನಮ್ಮ ಮನೆಯೂ ಆಯ್ತು ನಾವಾಯ್ತು ಎನ್ನುವಂತಿದ್ದೆವು. ಆ ಕಾಲದಲ್ಲಿ ನಮ್ಮ ಮನೆಯಲ್ಲಿದ್ದಂಥ ಹಲವಾರು ದನಕರುಗಳ ಚಾಕರಿಯೊಡನೆ ತೋಟದ ಕೆಲಸ, ಗದ್ದೆಯ ಕೆಲಸಗಳಲ್ಲಿ ಹಿರಿಯರಿಗೆ ನೆರವಾಗುವ ಜತೆಗೆ ನಮ್ಮ ಆಟಗಳೇ ನಮಗೆ ಮನರಂಜನೆಯಾಗಿತ್ತು. ಮರ ಹತ್ತುವುದು, ತೋಡಿನ ನೀರಿನಲ್ಲಿ ಆಡುವುದು, ಮಣ್ಣಿನ ರಾಶಿಗಳಲ್ಲಿ ಹೊರಳಾಡುವುದು, ದನ ಕರುಗಳ ಜತೆ ಆಡುವುದು.. ಹೀಗೆ ನಮ್ಮ ದಿನಗಳು ಉರುಳುತ್ತಿದ್ದವು. ನಾವು ಬಸ್ಸು ಕಾರುಗಳನ್ನು ನೋಡಿದ್ದು ಸಾಧಾರಣ ನನಗೆ ಹದಿನೈದೋ ಹದಿನೇಳೋ ವರ್ಷಗಳಾದಾಗ. ಅದು ಕೂಡ ಒಂದು ಕಥೆಯೆ.” ಇಷ್ಟು ಹೇಳುವಾಗ ಕಾರ್ತಿಕನಿಗೆ ಹಾಗೂ ಆದಿತ್ಯನಿಗೆ ಕುತೂಹಲ ಇನ್ನೂ ಜಾಸ್ತಿಯಾಯಿತು.. ಓದಿ.. ಪ್ರಚೋದಿಸಿ.. *ಪ್ರತಿಕ್ರಿಯಿಸಿ* ಮುಂದೆ ಇನ್ನೂ ಇದೆ
*****************************
—————————————-

ಅಳಂಬ.. ೧೫
************
ನೋಡಿ ಮಕ್ಕಳೆ ನನಗೀಗ ಪ್ರಾಯ ಅರ್ವತ್ತರ ಮೇಲಾಗಿದೆ. ಆದ್ದರಿಂದ ಕೆಲವಷ್ಟು ಅನುಭವಗಳು ಅದರಲ್ಲೂ ನಿಮ್ಮ ನಾಗರಿಕ ಪ್ರಪಂಚದಲ್ಲಿ ಸಿಗದ ವಿಷಯಗಳು ನಮಗರಿವಿದೆ. ನಿಮಗೆ ಕೇಳುವ ಆಸಕ್ತಿ ಇದ್ದರೆ ಖಂಡಿತ ಹೇಳುವೆ” ಎಂದು ಗೌಡರು ಬಾಯಲ್ಲಿದ್ದಂಥ ವೀಳ್ಯವನ್ನು ಉಗಿದು ಬಂದು ಒಂದು ಲಹರಿಯಿಂದ ಹೇಳತೊಡಗಿದರು.

“ನಿಮ್ಮ ಕುತೂಹಲ ಹುಲಿ ಕರಡಿಗಳ ಬಗ್ಗೆ.. ಸಹಜ. ನಿಮ್ಮೂರಲ್ಲಿ ಅದು ಕೂಡ ನಿಮ್ಮ ಕಾಲದಲ್ಲಿ ಅದರ ಅನುಭವ ನಿಮಗಿರಲಿಕ್ಕಿಲ್ಲ. ಆದರೆ ನಿಮ್ಮ ಹಿರಿಯರು ಹುಲಿ ನೋಡಿದ್ದಿರಬಹುದು. ಆದರೆ ನಮಗೆ ಇದು ಅಪರೂಪವಲ್ಲ. ಈ ಫಂಜಾಲಿನಲ್ಲಿ ಸಾಧಾರಣ ವರುಷಕ್ಕೆ ಐದಾರು ದನಗಳು ಹುಲಿಯ ಪಾಲಾಗುವುದು ಸಹಜ ಕ್ರಿಯೆ. ಹುಲಿಗಳು ಹಿಂದಿನಷ್ಟಲ್ಲದಿದ್ದರೂ ಈಗಲೂ ಇವೆ ಅನ್ನುವುದು ಸತ್ಯ. ಈಗಲೂ ನಮಗೆ ವಾರಕ್ಕೊಂದೆರಡು ಸಲವಾದರೂ ಅದರ ಘರ್ಜನೆ ಕೇಳುವುದಿದೆ. ಹಾಗೆಂದು ನಮಗೆ ಅದರಿಂದ ಯಾವುದೇ ಅಪಾಯಗಳಿಲ್ಲ. ಮಾತ್ರವಲ್ಲ ಮನುಷ್ಯರ ಮಾಂಸವನ್ನು ಅದು ಬಯಸುವುದೂ ಇಲ್ಲ. ಕರಡಿಗಳು ಹಿಂದೆ ಇದ್ದವಂತೆ. ಆದರೆ ನಮಗೆ ಅದರ ಅರಿವಿಲ್ಲ. ಇನ್ನು ಕಾಡು ಹಂದಿ, ಜಿಂಕೆ-ಕಡವೆ, ಕಾಡು ಕೋಣಗಳು, ನರಿ, ತೋಳಗಳು ಕೆಲವೊಮ್ಮೆ ಚಿರತೆಗಳು.. ಹೀಗೆ ಅನೇಕ ಪ್ರಾಣಿಗಳ ದರ್ಶನಗಳಾಗುವುದೂ ಉಂಟು. ಆದರೆ ಅದ್ಯಾವುದೂ ಮನುಷ್ಯರ ತಂಟೆಗೆ ಬರುವುದು ಬಹಳ ಕಡಿಮೆ ಎಂದೇ ಹೇಳಬಹುದು. ಹಾಗೆಂದು ಹುಲಿ ಮನುಷ್ಯರನ್ನು ತಿನ್ನುವುದೇ ಇಲ್ಲವೆಂದಲ್ಲ.”

ಅಷ್ಟರಲ್ಲಿ ಕಾರ್ತಿಕನಿಗೆ ಕುತೂಹಲ ಇನ್ನೂ ಜಾಸ್ತಿಯಾಗಿ ಗೌಡರಲ್ಲಿ “ನಿಮಗೆ ಮನುಷ್ಯರನ್ನು ತಿಂದ ಹುಲಿಯ ವಿಚಾರಗಳೇನಾದರೂ ಗೊತ್ತಿದೆಯೇ” ಎಂದು ಭಯ ಮಿಶ್ರಿತವಾಗಿ ಕೇಳಿದ.

“ಯಾಕಿಲ್ಲ.. ನಾವು ಸಣ್ಣವರಿರುವಾಗ ನಡೆದ ಘಟನೆ ನಮಗೀಗಲೂ ಕಣ್ಣ ಮುಂದೆ ನಡೆದಂತೆ ಇದೆ.” ಇಷ್ಟು ಹೇಳುವಾಗ ಕಾರ್ತಿಕ ಮತ್ತು ಆದಿತ್ಯ ಗೌಡರ ಕಥೆಯನ್ನು ಕೇಳಲು ಉತ್ಸುಕರಾದರು. ಗೌಡರು ಮುಂದುವರಿಸಿ

“ಆ ಕಾಲದಲ್ಲಿ ಅಂದರೆ ಸುಮಾರು ಐವತ್ತು ವರ್ಷಗಳಷ್ಟು ಹಿಂದೆ ನಮ್ಮ ಮನೆಯಲ್ಲಿ ಸಾಧಾರಣ ಇಪ್ಪತ್ತೈದರಷ್ಟು ಜನರಿದ್ದೆವು. ಅದಕ್ಕೆ ತಕ್ಕಂತೆ ಮನೆಯೂ ದೊಡ್ಡದಾಗಿತ್ತು. ಈಗಿನ ಈ ಮನೆಗೆ ಬಲ ಭಾಗದಲ್ಲಿ ಅಂದರೆ ನೀವು ಬಂದಂಥ ದಾರಿಯ ಎಡ ಬದಿಯಲ್ಲಿತ್ತು. ಈಗ ನಾವಿರುವ ಮನೆ ಹೊಸತಾದರೂ ಸಾಧಾರಣ ನಲವತ್ತರಷ್ಟು ವರ್ಷಗಳಾಗಬಹುದು. ನಾನಾಗ ಹನ್ನೆರಡು ವರ್ಷ ಪ್ರಾಯದವನು. ಆಟವಾಡಿಕೊಂಡಿರುವ ಪ್ರಾಯ. ಆದರೂ ಹಗಲಿಡೀ ದನ ಕರುಗಳನ್ನು ಮೇಯಿಸಿಕೊಂಡು ಬರುವ ಜವಾಬ್ದಾರಿ ಇತ್ತು. ಹಾಗೆಂದು ನಾನೊಬ್ಬನೇ ಅಲ್ಲ ನನ್ನೊಡನೆ ನನ್ನ ಅಕ್ಕ, ಅಣ್ಣ, ತಮ್ಮಂದಿರೂ ಇರುತ್ತಿದ್ದುದರಿಂದ ದನ ಮೇಯಿಸುವ ಕೆಲಸ ನಮಗೆ ಬಹಳಷ್ಟು ಖುಷಿಯನ್ನೇ ಕೊಡುತ್ತಿತ್ತು. ಆದರೆ ಮನದ ಮೂಲೆಯಲ್ಲಿ ಹುಲಿಯ ಹೆದರಿಕೆಯೂ ಇರುತ್ತಿತ್ತು. ಯಾಕೆಂದರೆ ನಾವು ದನ ಕಾಯುತ್ತಿದ್ದಾಗಲೂ ಅದ್ಯಾವುದೊ ಕ್ಷಣದಲ್ಲಿ ಹುಲಿ ಬಂದು ದನವನ್ನು ಎತ್ತಿಕೊಂಡು ಹೋದ ಉದಾಹರಣೆಗಳು ಬಹಳಷ್ಟಿದ್ದವು. ಹಾಗೆಂದು ನಾವು ಹೆದರಿ ಕೂರುತ್ತಿರಲಿಲ್ಲ. ಯಾಕೆಂದರೆ ಒಂದು ಸಲ ಹುಲಿ ದನವನ್ನು ಹಿಡಿದರೆ ಸಾಧಾರಣ ಒಂದು ತಿಂಗಳ ಅವಧಿಯವರೆಗೆ ಈಚೆ ತಿರುಗಿ ನೋಡುವುದಿಲ್ಲ. ಅದಕ್ಕೆ ಕಾಡಿನಲ್ಲಿ ಜಿಂಕೆಗಳೊ, ಕಡವೆಗಳೊ, ಕಾಡುಕೋಣಗಳೊ ದೊರಕುತ್ತವೆ. ಅದ್ಯಾವುದೂ ದೊರಕದಿದ್ದಾಗ ಮಾತ್ರ ಮೇಯುತ್ತಿರುವ ದನಗಳ ಮೇಲೆ ದಾಳಿ ಮಾಡುತ್ತದೆ. ಆದ್ದರಿಂದ ಹುಲಿಯ ಬಗ್ಗೆ ಭಾರಿ ಹೆದರಿಕೆಯ ಅವಶ್ಯಕತೆ ಬೇಕಿಲ್ಲವೆಂದು ನಾವು ಅಂದು ಕಂಡು ಕೊಂಡ ಸತ್ಯವಾಗಿತ್ತು. ಆದರೆ ಆ ಸಣ್ಣ ಅಜಾಗರೂಕತೆಯೆ ನಮ್ಮ ಅಜ್ಜನ ಪ್ರಾಣಕ್ಕೆ ಸಂಚಕಾರ ತಂದಿತ್ತು.” ಮತ್ತೊಮ್ಮೆ ಅಳಿದುಳಿದ ವೀಳ್ಯದ ತ್ಯಾಜ್ಯವನ್ನು ಉಗಿಯಲು ಗೌಡ್ರು ಅಂಗಳಕ್ಕೆ ಇಳಿದಾಗ ಹುಡುಗರಿಗೆ ಕಥೆಯ ಮುಂದಿನ ಭಾಗ ಹೇಗಿರಬಹುದೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ನೀಲಯ್ಯ ಗೌಡ್ರು ವಾಪಸು ಬಂದು ಒಂದು ಚೆಂಬು ನೀರು ಕುಡಿದು ಮತ್ತೊಮ್ಮೆ ಹೇಳಲು ಪ್ರಾರಂಭಿಸಿದರು.

“ಬೇಸಿಗೆಯ ಆ ದಿನಗಳ ಅತಿಯಾದ ಸೆಕೆ ರಾತ್ರಿ ಹತ್ತಾದರೂ ಕಡಿಮೆ ಆಗುತ್ತಿರಲಿಲ್ಲ. ಆಗ ನಾವು ಹೆಚ್ಚಾಗಿ ಮಲಗುತ್ತಿದ್ದದ್ದು ಮನೆಯ ಜಗಲಿಯಲ್ಲಿ. ಹಳೆ ಮನೆಯ ಜಗಲಿಯಾದರೊ ಅದು ಸಾಧಾರಣ ಹತ್ತು ಜನಕ್ಕೂ ಅಧಿಕವಾಗಿ ಕಾಲು ನೀಡಿ ಮಲಗುವಷ್ಟು ವಿಶಾಲವಾಗಿತ್ತು. ಆದರೆ ಅಂಗಳಕ್ಕೂ ಜಗಲಿಗೂ ನಡುವೆ ಯಾವುದೇ ಭದ್ರತೆ ಇರಲಿಲ್ಲ. ಗಾಳಿ ಮಳೆಯ ಪರಿಣಾಮಗಳು ನೇರವಾಗಿ ಜಗಲಿಗೆ ಎರಗುತ್ತಿದ್ದುದರಿಂದ ರಾತ್ರಿಯ ಹಿತವಾದ ಗಾಳಿ ಬೇಸಿಗೆಯ ರಾತ್ರಿಗಳನ್ನು ತಂಪಾಗಿಸುತ್ತಿತ್ತು.

ಅಂತೆಯೇ ಆ ಒಂದು ರಾತ್ರಿಯಲ್ಲಿ ಮನೆಯವರೆಲ್ಲ ಊಟ ಮಾಡಿ ಎಲ್ಲರೂ ಮಲಗುವ ತಯಾರಿಯಲ್ಲಿದ್ದೆವು. ಜಗಲಿಯಲ್ಲಿ ನಾನು, ಅಜ್ಜ, ಚಿಕ್ಕಪ್ಪ, ತಮ್ಮಂದಿರು.. ಹೀಗೆ ನಾಲ್ಕೈದು ಜನ ಸಾಲಾಗಿ ಚಾಪೆ ಹಾಕಿ ಪಟ್ಟಾಂಗ ಹೊಡೆಯುತ್ತ ಮಲಗುವುದು ನಮ್ಮ ನಿತ್ಯದ ರೂಢಿ. ಅಂತೆಯೇ ಅಂಗಳದ ಮೂಲೆಯಲ್ಲಿರುವ ಸ್ನಾನದ ಕೊಟ್ಟಿಗೆಯಲ್ಲಿ ಐದಾರು ನಾಯಿಗಳು ಕೂಡ ಒಲೆಯ ಬೂದಿಯಲ್ಲಿ ಹೊರಳಾಡಿಕೊಂಡು, ನಡುನಡುವೆ ಬೊಗಳಿಕೊಂಡು ಮಲಗುತ್ತಿದ್ದವು. ಸಾಧಾರಣ ಹತ್ತು ಗಂಟೆಯೊಳಗೆ ಎಲ್ಲರೂ ನಿದ್ದೆಗೆ ಜಾರುತ್ತಿದ್ದೆವು. ಆದರೆ ಅಜ್ಜನಿಗೆ ನಿದ್ದೆ ಬರಬೇಕಾದರೆ ತಡ ರಾತ್ರಿಯಾಗುತ್ತಿತ್ತು. ಹಾಗೆ ಮಲಗಿದರೆ ಅಜ್ಜ ಮತ್ತೆ ಏಳುತ್ತಿದ್ದದ್ದು ಬೆಳಗ್ಗಿನ ಜಾವ ಕೋಳಿ ಕೂಗುವ ಹೊತ್ತಿಗೆಯೆ. ಅಂದು ಕೂಡ ನಾವೆಲ್ಲ ಮಲಗಿದ ನಂತರ ಅಜ್ಜ ಒಂದು ವೀಳ್ಯ ಹಾಕಿ ಅದು ಚಪ್ಪೆಯಾದಾಗ ಅಂಗಳದ ಇನ್ನೊಂದು ಮೂಲೆಗೆ ಹೋಗಿ ಉಗುಳಿ ಬಂದು ಮಲಗಿದ್ದಾರೆ.” ಅಣ್ಣ ತಮ್ಮಂದಿರಿಬ್ಬರೂ ಬಹಳ ಕುತೂಹಲದಿಂದ ಕಥೆಯನ್ನು ಕೇಳುತ್ತಿರಬೇಕಾದರೆ ಕಾರ್ತಿಕ ಮನದೊಳಗೇ ಅಂದು ಕೊಂಡ ಈ ಅಜ್ಜ ಕಥೆ ಹೇಳುವುದರಲ್ಲಿ ಬಹಳ ನಿಪುಣರಿದ್ದಾರೆ. ಕಣ್ಣೆದುರೇ ಘಟನೆ ನಡೆದಂತೆ ಹೇಳುವಾಗ ನಮಗೂ ಇಲ್ಲೇ ಏನೊ ನಡೆಯುತ್ತದೆ ಎಂದು ಭಾಸವಾಗುತ್ತದೆ. ಇರಲಿ ಮುಂದೆ ಬಹಳ ಕುತೂಹಲವಿರಬಹುದು ಎಂದು ಕೂತಂಥ ಭಂಗಿಯನ್ನು ಬದಲಿಸಿ ಪುನಹ ಕೇಳಲಾರಂಭಿಸಿ “ಮುಂದೇನಾಯಿತು ಗೌಡ್ರೇ..” ಎಂದ.

“ಎಂದಿನಂತೆ ಬೆಳಗ್ಗೆ ಎದ್ದಾಗ ಅಸಹಜತೆ ಕಂಡಿತ್ತು. ಯಾಕೆಂದರೆ ಪ್ರತಿ ದಿನವೂ ಅಜ್ಜನೇ ಮೊದಲು ಏಳುವುದು. ಆದರೆ ಆ ದಿನ ಅವರು ಎದ್ದು ಹೋಗಿದ್ದರಾದರೂ ಅವರು ಮಲಗಿದ ಚಾಪೆ ಮಡಚಿಡಲಿಲ್ಲ. ಹಾಗೆ ಅವರೆಂದೂ ವರ್ತಿಸಿದ್ದಿಲ್ಲ. ಯಾವಾಗಲೂ ನಾವು ಏಳುವಾಗ ಚಾಪೆಯನ್ನು ಮಡಚಿಟ್ಟು ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನಾನು ಎದ್ದವನೆ ತಮ್ಮನನ್ನು ಎಬ್ಬಿಸಿ ವಿಚಾರ ತಿಳಿಸಿದೆ. ಅವನಿಗೂ ಆಶ್ಚರ್ಯವಾಗಿ ಅಜ್ಜನನ್ನು ಒಂದೆರಡು ಬಾರಿ ಕರೆದನು. ಅಜ್ಜನ ಮರು ಉತ್ತರವಿಲ್ಲ. ಆಗ ನಾನೇ ಹೇಳಿದೆ ಬಹಿರ್ದೆಸೆಗೆ ಹೋಗಿರಬಹುದು ಬಂದಾರು ನೋಡುವ ಎಂದು ಮುಖ ತೊಳೆಯಲು ಹೋಗಿ ಬಂದರೂ ಅಜ್ಜನ ಪತ್ತೆ ಇಲ್ಲ. ಆಗ ನಮಗೆ ಸ್ವಲ್ಪ ಗಾಬರಿ ಆಗಲು ಪ್ರಾರಂಭವಾಯಿತು. ಅಷ್ಟರೊಳಗೆ ಮೂಡಣ ಕಡೆಯಿಂದ ಸಣ್ಣಗೆ ಬೆಳಕು ಮೂಡಲಾರಂಭಿಸಿತು. ಮನೆಯಲ್ಲಿ ಎಲ್ಲರೂ ಗಾಬರಿಯಿಂದ ಹುಡುಕಲಾರಂಭಿಸಿದೆವು. ಅಜ್ಜನ ಪತ್ತೆಯಾಗಿಲ್ಲ. ಅಷ್ಟರಲ್ಲಿ ಮನೆಯ ಹೊರಗಡೆ ಒಂದೆರಡು ಜನ ಹುಡುಕಲಾರಂಭಿಸಿದರು. ನಾನೂ ಅವರ ಜತೆ ಸೇರಿಕೊಂಡೆ. ಎಲ್ಲರೂ ಗಟ್ಟಿಯಾಗಿ ಅಜ್ಜನನ್ನು ಕರೆಯುತ್ತ ಕರೆಯುತ್ತ ಹುಡುಕಿದೆವು. ಹೊತ್ತು ಹೋದಂತೆ ಬೆಳಕು ಹೆಚ್ಚಾಗುತ್ತಿತ್ತು. ಆದರೆ ಅಜ್ಜನ ಆಸೆ ಕಡಿಮೆ ಆಗುತ್ತಿತ್ತು. ಓದಿ.. ಪ್ರೋತ್ಸಾಹಿಸಿ.. ಪ್ರತಿಕ್ರಿಯಿಸಿ.. ಮುಂದೆ ಇನ್ನೂ ಇದೆ.
—————–*****************************————————————————————————————————————————————————-

ಅಳಂಬ… ೧೪
*************
ಅಷ್ಟರಲ್ಲಿ ನಾಯಿಗಳು ಬೊಗಳಲಾರಂಭಿಸಿದವು. ಹತ್ತಾರು ನಾಯಿಗಳ ವಿವಿಧ ಲಯ ಶುೃತಿಯ ಬೊಗಳುವಿಕೆಗೆ ಒಂದು ಕ್ಷಣ ಮೂವರೂ ಅಂಗಳದ ಪ್ರವೇಶಕ್ಕಿರುವ ಸರಗೋಲಿನ (ತುಳುವಿನಲ್ಲಿ ಉರ್ವೊಳು ಎನ್ನುತ್ತಾರೆ) ಹತ್ತಿರ ಭೀತರಾಗಿ ನಿಂತಾಗ ನಾಯಿಗಳನ್ನು ಹಚ್ ಹಚ್ ಎಂದು ಗದರಿಸುತ್ತ ಹುಡುಗನೊಬ್ಬ ಮನೆಯೊಳಗಿಂದ ಹೊರಬಂದು ನಿಂತಂಥ ಮೂವರನ್ನು ನೋಡಿ ಒಳಗೆ ಬರುವಂತೆ ಸೂಚಿಸಿದ. ಯಜಮಾನನ ಗದರಿಕೆಗೆ ನಾಯಿಗಳು ಆಗಂತುಕರ ಕಡೆಗೆ ನೋಡುತ್ತ ನೋಡುತ್ತ ಅಸಮಾಧಾನದಿಂದ ಗುರ್ ಗುರ್ ಎನ್ನುತ್ತಲೆ ದೂರಕ್ಕೆ ಹೋಗಲಾರಂಭಿಸಿದವು. ನೇರವಾಗಿ ಮೂವರೂ ವಿಶಾಲವಾದ ಅಂಗಳವನ್ನು ದಾಟಿ ಮನೆಯ ಜಗುಲಿಯ ಮೇಲೆ ಕುಳಿತುಕೊಂಡರು. ಅಷ್ಟರಲ್ಲಿ ಮನೆಯ ಯಜಮಾನರಾದ ನೀಲಯ ಗೌಡರು ತಲೆಯ ಮುಂಡಾಸನ್ನು ತೆಗೆದು ಮೈಮೇಲಿನ ಬೆವರನ್ನು ಒರೆಸುತ್ತ ಬಂದಂಥವರಲ್ಲಿ ರಾಮಯ್ಯ ಗೌಡರನ್ನುದ್ದೇಶಿಸಿ “ಕೂತುಕೊಳ್ಳಿ.. ಜಗಲಿ ಯಾಕೆ ಒಳಗೇ ಬನ್ನಿ” ಎಂದು ಉಪಚರಿಸಿದರು. ರಾಮಯ್ಯ ಗೌಡ್ರು “ಇಲ್ಲ ಇಲ್ಲಿಯೇ ಒಳ್ಳೆ ಗಾಳಿ ಬರುತ್ತದೆ ಅಲ್ಲದೆ ಹಲಸಿನ ಮರದ ನೆರಳು ಕೂಡ ಬಹಳ ಹಿತವಾಗಿದೆ” ಎಂದು ಜಗಲಿಯಲ್ಲೇ ಕೂತಾಗ ನೀಲಯ ಗೌಡರು ಒಳಗೆ ಹೋಗಿ ಬೆಲ್ಲದ ಜತೆಗೆ ತಾಮ್ರದ ಚೊಂಬಲ್ಲಿ ತಣ್ಣನೆಯ ನೀರನ್ನು ತಂದು ಅತಿಥಿಗಳ ಮುಂದಿಟ್ಟರು. ಆದಿತ್ಯ ಮತ್ತು ಕಾರ್ತಿಕ ಬೆಲ್ಲದ ತುಂಡಿನೊಡನೆ ತಣ್ಣನೆಯ ನೀರನ್ನು ದೇವತೆಗಳು ಅಮೃತವನ್ನು ಕುಡಿದಂತೆ ಕುಡಿದಾಗ ಬೆಟ್ಟವನ್ನು ಹತ್ತಿ ಬಂದಂಥ ಸುಸ್ತು ಕಡಿಮೆಯಾಗತೊಡಗಿತ್ತು. ಎಲ್ಲರೂ ಸಾವರಿಸಿಕೊಂಡ ಮೇಲೆ ಅವರೊಡನೆ ನೀಲಯ ಗೌಡರು ಸೇರಿಕೊಂಡರು. ರಾಮಯ್ಯ ಗೌಡರು ಕಾರ್ತಿಕ ಮತ್ತು ಆದಿತ್ಯರ ಪರಿಚಯವನ್ನು ಮಾಡಿ ಇವರು ನಿಮ್ಮ ಊರನ್ನು ನೋಡಬೇಕೆಂಬ ಆಸೆಯಿಂದ ಬಂದಿದ್ದಾರೆ ಎಂದಾಗ ನೀಲಯ ಗೌಡರಿಗೆ ಖುಷಿಯಾಗಿತ್ತು.

“ಈ ಹಳ್ಳಿಗೆ ಈ ರೀತಿ ಯಾರೂ ಬರುವುದಿಲ್ಲ. ನಿಮ್ಮ ಆಸಕ್ತಿ ಒಳ್ಳೆಯದು. ನಮಗೂ ನಿಮ್ಮ ಪರಿಚಯವಾದದ್ದು ಖುಷಿಯಾಗಿದೆ”

ಹಿರಿಯನಾದ ಕಾರ್ತಿಕನು ಗೌಡರನ್ನುದ್ದೇಶಿಸಿ “ನಮಸ್ಕಾರ ಗೌಡ್ರೆ. ನಾನು ಕಾರ್ತಿಕ ಇವನು ನನ್ನ ಚಿಕ್ಕಪ್ಪನ ಮಗ ಆದಿತ್ಯ ಎಂದು ಹೆಸರು. ನಾವು ಇದೇ ಗ್ರಾಮದ ನೆಲ್ಲಿತಡ್ಕ ಎಂಬಲ್ಲಿ ವಾಸಿಸುವವರು. ಫಂಜಾಲಿನ ಬಗ್ಗೆ ನಮಗೆ ಸಣ್ಣಂದಿನಿಂದಲೂ ಕುತೂಹಲವಿತ್ತು. ನಮ್ಮ ತಂದೆ, ಅಜ್ಜಿ ಇಲ್ಲಿಯ ವಿಷಯಗಳನ್ನು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಸುತ್ತ ಮುತ್ತ ಗುಡ್ಡಗಳು, ಒಂದೇ ಮನೆಯಲ್ಲಿ ನೂರಾರು ಜನರ ವಾಸ, ಪರಿಶುದ್ಧವಾದ ಪರಿಸರ, ಹೇರಳವಾದ ನೀರು, ಕಪಟವರಿಯದ ಮುಗ್ಧ ಜನರು, ಆತ್ಮಾಭಿಮಾನದ ಜತೆ ಸ್ವಾವಲಂಬಿಗಳಾದ ದೃಢಕಾಯದ ಜನಾಂಗ.. ಹೀಗೆ ಅನೇಕ ವಿಷಯಗಳನ್ನು ಹಿರಿಯರಿಂದ ಕೇಳಿದಾಗ ಎಂದಾದರು ಒಂದು ದಿನ ನಿಮ್ಮಲ್ಲಿಗೆ ಬರಲೇಬೇಕೆಂದು ಮನಸ್ಸಲ್ಲಿ ಸಂಕಲ್ಪ ಮಾಡಿಕೊಂಡಿದ್ದೆವು. ಅಂತೆಯೇ ನಮಗೆ ಆತ್ಮೀಯರಾದ ರಾಮಯ್ಯ ಗೌಡರ ಜತೆಗೆ ಇವತ್ತು ನಿಮ್ಮ ಈ ಭೂಮಿಯನ್ನು ನೋಡುವ ಭಾಗ್ಯ ನಮಗೆ ಒದಗಿ ಬಂತು.”

“ಒಳ್ಳೆಯ ವಿಷಯ. ನೀವು ತಿಳಿದುಕೊಂಡದ್ದು ಸರಿ. ಇದೇ ಮನೆಯಲ್ಲಿ ನಾವು ಸಣ್ಣವರಿರುವಾಗ ಎಪ್ಫತ್ತೈದರಷ್ಟು ಜನರಿದ್ದೆವು. ಮತ್ತೆ ನೀವಂದಂತೆ ನೂರೈವತ್ತರಷ್ಟು ಜನರಿದ್ದದ್ದೂ ಹೌದು ಆದರೆ ಅದು ನಾವು ಹುಟ್ಟುವುದಕ್ಕೂ ಹಿಂದಿನ ಕಾಲ ಅಂದರೆ ಸಾಧಾರಣ ನೂರು ವರ್ಷಕ್ಕೂ ಹಿಂದೆ ಇರಬಹುದು.”

ತುಂಡು ಪಂಚೆಯೊಂದು ಸೊಂಟಕ್ಕೆ ಅಂಟಿಕೊಂಡಂತಿದ್ದುದರ ಹೊರತು ಬರಿದೆ ಮೈಯಲ್ಲಿ ಆಜಾನು ಬಾಹುವಿನಂತಿದ್ದ ನೀಲಯ ಗೌಡರು ಆದಿತ್ಯ ಮತ್ತು ಕಾರ್ತಿಕನನ್ನು ಆಕರ್ಷಿಸುವುದರ ಜತೆಗೆ ಅವರ ಮಾತಿನ ಮುಗ್ಧತೆ, ಕಪಟವರಿಯದ ಆತ್ಮಾಭಿಮಾನದ ಗಾಂಭೀರ್ಯ, ಯಾರನ್ನೂ ಹಿಡಿದು ನಿಲ್ಲಿಸುವಂಥ ತೀಕ್ಷ್ಣ ಕಣ್ಣುಗಳು, ಆರೋಗ್ಯವಂತ ಕ್ರೀಡಾಪಟುವಿಗೆ ಇರುವಂಥ ಆರಡಿ ಎತ್ತರದ ನೀಳ ಕಾಯ, ಕೃಷ್ಣ ವರ್ಣ, ಎಲೆ ಅಡಿಕೆ ತಿಂದು ಕೆಂಪಾದರೂ ಆಕರ್ಷಕವಾದ ದಂತ ಪಂಕ್ತಿ, ಮಾತಾಡಿದರೆ ಇನ್ನೂ ಕೇಳುತ್ತಿರಬೇಕು ಎನ್ನುವಂಥ ಮಾತಿನ ಓಘ.. ಇಂಥ ಅನೇಕ ವಿಷಯಗಳಿಂದ ಕಾರ್ತಿಕನಿಗೂ ಆದಿತ್ಯನಿಗೂ ಗೌರವಾನ್ವಿತರಂತೆ ಕಂಡದ್ದು ವಿಶೇಷವಲ್ಲ.

“ಗೌಡ್ರೆ ನಿಮಗೆ ತೊಂದರೆ ಇಲ್ಲದಿದ್ದರೆ ನಿಮ್ಮ ಜೀವನಾನುಭವದ ಕೆಲವು ವಿಷಯಗಳನ್ನು ನಮ್ಮೊಡನೆ ಹಂಚಿಕೊಳ್ಳಬಹುದೇ”

ಎಂದು ಕಾರ್ತಿಕನು ವಿನಮ್ರವಾಗಿ ಕೇಳಿದನು. ಅದಕ್ಕೆ ಗೌಡರು ಕೂಡ ಅಷ್ಟೇ ವಿನಯದಿಂದ

“ಅದಕ್ಕೇನಂತೆ ಹೇಳುತ್ತ ಹೋದರೆ ಬಹಳಷ್ಟು ಇದೆ. ನೀವು ಸಣ್ಣವರು ನಿಮಗೆ ಈಗಿನ ಪ್ರಪಂಚದ ಅರಿವಿದೆ. ರಾಮಯ್ಯ ಗೌಡರಿಗಾಗಲಿ ಅಥವಾ ನಿಮ್ಮ ಮನೆಯ ಹಿರಿಯರಿಗಾಗಲಿ ನಮ್ಮ ಹಿಂದಿನ ಜೀವನದ ಅರಿವು ಇರಲೂ ಬಹುದು. ಆದರೆ ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ನಮ್ಮ ಕ್ಷೇಮ ಸಮಾಚರಾಗಳನ್ನಾಗಲಿ, ಕಷ್ಟ ಸುಖಗಳನ್ನಾಗಲಿ, ನಮ್ಮ ಸ್ನೇಹವನ್ನಾಗಲಿ ಕೇಳಿಕೊಂಡು ಯಾರೂ ಬಂದದ್ದಿಲ್ಲ. ಅಥವಾ ನಾವು ಕೂಡ ವ್ಯವಹಾರದ ಹೊರತು ಇತರರ ಮನೆಗಳಿಗೆ ಹೋಗುತ್ತಲೂ ಇರಲಿಲ್ಲ. ಕಾರಣಗಳು ಅನೇಕವಿರಬಹುದು. ಅದರಲ್ಲಿ ನಮ್ಮ ಅಸ್ತಿತ್ವವನ್ನು ಮನಗಂಡು ನಮ್ಮನ್ನೇ ನೋಡಬೇಕೆಂಬ ಆಸಕ್ತಿಯಿಂದ ಇಲ್ಲಿವರೆಗೆ ನಡೆದುಕೊಂಡು ಬಂದದ್ದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ಅದರಲ್ಲೂ ನಿಮ್ಮಂಥ ಸಣ್ಣ ಪ್ರಾಯದ ಹುಡುಗರಿಗೆ ಇಂಥ ಮನಸ್ಸಿದೆ ಎಂದರೆ ನಿಜವಾಗಿಯೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ.”

“ಹೌದು ಗೌಡ್ರೆ ಇವರು ಇಬ್ಬರೂ ಬಹಳ ಗುಣವಂತ ಹುಡುಗರು. ಮಾತ್ರವಲ್ಲ ಎಲ್ಲದರಲ್ಲೂ ಕುತೂಹಲವಿರುವವರು. ನಾನು ಇವರಲ್ಲಿ ಆಗಾಗ್ಗೆ ಕೆಲಸಕ್ಕಾಗಿ ಅಥವಾ ಬೇರೇನಾದರು ಆರ್ಥಿಕ ವಿಚಾರಗಳಿಗೆ ಹೋಗುತ್ತಲೇ ಇರುತ್ತೇನೆ. ಇವರು ತಮ್ಮ ಹಿರಿಯರಿಂದ ನಿಮ್ಮ ಫಂಜಾಲಿನ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡ ದಿನದಿಂದ ನನ್ನಲ್ಲಿ ಹಲವಾರು ಸಲ ಫಂಜಾಲನ್ನು ನೋಡಬೇಕೆಂದು ಒತ್ತಾಯಿಸುತ್ತಲೇ ಇದ್ದರು. ನೋಡಿ ಕಾಲ ಇಂದು ಕೂಡಿ ಬಂದಿದೆ.” ಎಂದು ರಾಮಯ್ಯ ಗೌಡರು ಈ ಭೇಟಿಯ ಹಿನ್ನೆಲೆಯನ್ನು ವಿವರಿಸಿದರು.

ನೀಲಯ್ಯ ಗೌಡರು ಮಗನನ್ನು ಕರೆದು ತೋಟಕ್ಕೆ ಹೋಗಿ ನಾಲ್ಕು ಎಳನೀರನ್ನು ತರುವಂತೆ ಸೂಚಿಸಿದರು. ಅಷ್ಟರಲ್ಲಿ ಕಾರ್ತಿಕನು “ಪರವಾಗಿಲ್ಲ ಗೌಡ್ರೆ. ನಿಮಗ್ಯಾಕೆ ತೊಂದರೆ” ಎಂದಾಗ “ತೊಂದರೆ ಏನಿಲ್ಲ. ನೀವು ಅಷ್ಟು ದೂರದಿಂದ ನಮ್ಮ ಮೇಲೆ ಅಭಿಮಾನದಿಂದ ಬಂದಿದ್ದೀರಿ. ನಮ್ಮ ಮನೆಗೆ ಬಂದಂಥ ಅತಿಥಿಗಳನ್ನು ಅವರವರ ಸಂಪ್ರದಾಯಕ್ಕೆ ಉಚಿತವಾಗಿ ಸತ್ಕರಿಸುವುದು ನಮ್ಮ ಧರ್ಮ.” ಎಂದು ಹೇಳಿದಾಗ ಕಾರ್ತಿಕನಿಗೆ ವಾಪಸು ಹೇಳಲು ಏನೂ ಉಳಿದಿರಲಿಲ್ಲ. ಮತ್ತೊಮ್ಮೆ ಫಂಜಾಲಿನ ಗತ ಕಾಲದ ವಿಚಾರಗಳ ಬಗ್ಗೆ ಪರಸ್ಪರ ಮಾತು ಹೊರಳಿತು.

“ಇಲ್ಲಿ ಹುಲಿ ಕರಡಿ ಮುಂತಾದ ಪ್ರಾಣಿಗಳು ನಿಮಗೆ ಕಾಣ ಸಿಗುತ್ತವೆಯೋ ಅಥವಾ ಅದರಿಂದ ಏನಾದರೂ ಅಪಾಯಗಳು ಆದದ್ದಿದೆಯೊ” ಎಂದು ಕಾರ್ತಿಕನ ಕುತೂಹಲಕಾರಿಯಾದ ಪ್ರಶ್ನೆಗೆ ನೀಲಯ ಗೌಡರು ನಿಟ್ಟುಸಿರೊಂದನ್ನು ಬಿಟ್ಟು ಮುಗುಳ್ನಗೆಯೊಂದಿಗೆ ತಮ್ಮ ಅನುಭವವನ್ನು ವಿವರಿಸಲು ಮುಂದಾದರು. ಅಷ್ಟರಲ್ಲಿ ನೀಲಯ್ಯ ಗೌಡರ ಮಗ ಎಳನೀರನ್ನು ತಂದಿಟ್ಟನು. ಕೆಂಬಣ್ಣದ ಎರಡು ಕೈಯಲ್ಲೂ ಹಿಡಿಯಬೇಕಾದಂಥ ಬೃಹತ್ ಗಾತ್ರದ ಎಳನೀರು ನೋಡುವಾಗಲೆ ಬಾಯಾರಿಕೆ ಇನ್ನೂ ಹೆಚ್ಚಾದಂತೆ ಅನ್ನಿಸುವ ಭಾವ ಬಂದದ್ದಂತು ಸುಳ್ಳಲ್ಲ. ಲೀಟರಿನಷ್ಟು ಇದ್ದಂಥ ಸಿಹಿಯಾದ ನೀರು, ನೀರು ದೋಸೆಯಂತಿದ್ದ ತೆಂಗಿನ ಒಳಪದರ ಇದೆಲ್ಲವೂ ಉದರ ಸೇರಿದಾಗ ಬಾಯಾರಿಕೆಯೊಡನೆ ಹಸಿವೂ ಇಲ್ಲದಂತಾಗಿ ಹೊಸ ಲವಲವಿಕೆ ಎಲ್ಲರಲ್ಲೂ ಉಂಟಾಗಿತ್ತು.
ಎಳನೀರನ್ನು ಕುಡಿದು ಮತ್ತೆ ನೀಲಯ್ಯ ಗೌಡರ ಮಾತುಗಳನ್ನು ಕೇಳಲು ಎಲ್ಲರೂ ತಯಾರಾದರು.. ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
****************************

(ಮೇಲಿನ ಪ್ರಕೃತಿಯ ಭಾವಚಿತ್ರ ಇವತ್ತಿನ ಫಂಜಾಲಿನ ನೈಜತೆಯ ಸೊಬಗನ್ನು ತೋರಿಸುತ್ತದೆ. ಈ ಕಾದಂಬರಿಗಾಗಿಯೇ ಅಲ್ಲಿಗೆ ಹೋಗಿ ಮೊಬೈಲಿನಲ್ಲಿ ಸೆರೆ ಹಿಡಿದ ದೃಶ್ಯ. ಫಂಜಾಲಿನ ಸೊಬಗು ಅದನ್ನು ನೋಡಿದವರಿಗೆ ಮಾತ್ರ ತಿಳಿದೀತು… ಪ್ರಕೃತಿ ಪ್ರಿಯರಿಗೆ ಇಂಥ ಹಲವಾರು ದೃಶ್ಯಗಳು ಇಲ್ಲಿವೆ..)

————————————————————————————————————————————————————————————————————

ಅಳಂಬ.. ೧೩
************
ಕಾರ್ತಿಕನಿಗೆ ಹುಲಿಯ ಹೆದರಿಕೆ ಇರಲಿಲ್ಲ. ಆದರೆ ರಾಮಯ್ಯ ಗೌಡ ಹೇಳುವುದರಲ್ಲಿ ಸತ್ಯವಿದೆ ಎಂಬುದನ್ನು ಒಪ್ಪಿಕೊಂಡ. ಮುಂದಿನ ಶನಿವಾರ ನಾರಾವಿಗೆ ಹೋಗಿ ಬೇಕಾದ ಸಾಮನುಗಳನ್ನು ಖರೀದಿಸಿ ಆದಿತ್ಯವಾರ ಫಂಜಾಲಿಗೆ ಹೋಗುವುದೆಂದು ರಾಮಯ್ಯ ಗೌಡ ಮತ್ತು ಕಾರ್ತಿಕ ನಿರ್ಧರಿಸಿದರು. ರಾಮಯ್ಯ ಗೌಡನ ಜತೆಗೆ ಕಾರ್ತಿಕನೂ ನಾರಾವಿ ಸಂತೆಗೆ ಹೋಗಿ ತನಗೂ ಮನೆಗೂ ಬೇಕಾದ ಸಾಮಾನುಗಳನ್ನು ತರುವುದೆಂದೂ ನಿರ್ಧಾರವಾಯಿತು. ಪ್ರತಿ ವಾರವು ಅಲ್ಲದಿದ್ದರೂ ತಿಂಗಳಿಗೊಂದೆರಡು ಸಾರಿ ಕಾರ್ತಿಕನೂ ಅಳಂಬಕ್ಕಾಗಿ ಸಂಕ್ರೇ ಗೌಡರ ಮನೆಯವರೊಡನೆ ಸಂತೆಗೆ ಹೋಗಿ ಬರುವ ಕ್ರಮವಿತ್ತು. ತುಳು ಜನರಂತೆ ತಾನು ಕೂಡ ತಲೆ ಹೊರೆಯಲ್ಲಿ ಬೇಕಾದಂಥ ಸಾಮಾನುಗಳನ್ನು ತರುವುದು ಹಿಂದಿನಿಂದಲೂ ಇದ್ದಂಥ ರೂಢಿಯಾಗಿತ್ತು.

ಅಂತೆಯೇ ಶನಿವಾರದಂದು ಪೂರ್ವ ತಯಾರಿ ಮಾಡಿಕೊಂಡು ಆದಿತ್ಯವಾರ ಬೆಳಗ್ಗೆ ರಾಮಯ್ಯ ಗೌಡ, ಕಾರ್ತಿಕ, ಜತೆಗೆ ನೆರೆಕರೆಯವನಾದ ಕಾರ್ತಿಕನ ಚಿಕ್ಕಪ್ಪ ಗೋಪಾಲ ಹೆಬ್ಬಾರರ ಮಗನಾದ ಆದಿತ್ಯ ಹೀಗೆ ಮೂವರು ಫಂಜಾಲನ್ನು ಗುರಿಯಾಗಿಸಿಕೊಂಡು ಕುತೂಹಲ ಮಿಶ್ರಿತ ಭಾವದಿಂದ ಪಶ್ಚಿಮ ಘಟ್ಟಗಳನ್ನು ಹತ್ತ ತೊಡಗಿದರು. ಹಸಿವಾದಾಗ ತಿನ್ನಲೆಂದು ಅವಲಕ್ಕಿ-ಬೆಲ್ಲ-ತೆಂಗಿನ ಕಾಯಿ ಜತೆಗೆ ರಕ್ಷಣೆಗೆಂದು ಕೈಯಲ್ಲೊಂದು ಹರಿತವಾದ ಕತ್ತಿ-ದೊಣ್ಣೆಯನ್ನೂ ಇಟ್ಟುಕೊಂಡಿದ್ದರು. ಹೀಗೆ ದಾರಿಯಲ್ಲಿ ಮೊದಲಾಗಿ ಸಿಗುವಂಥ ಕುಳ್ಳಾಲಿಗೆ ಕಾರ್ತಿಕನಾಗಲಿ ಆದಿತ್ಯನಾಗಲಿ ಹಲವಾರು ಸಲ ಬಂದು ಹೋಗಿದ್ದರಿಂದ ಎಲ್ಲವೂ ಪರಿಚಯದ ಜಾಗಗಳೇ ಆಗಿದ್ದವು. ಆದರೆ ನಿಜವಾದ ಪಶ್ಚಿಮ ಘಟ್ಟಗಳ ಪರಿಚಯವಾಗಬೇಕಾದರೆ ಕುಳ್ಳಾಲು ದಾಟಿ ಮುಂದೆ ಹೋಗಬೇಕು..

ಮಧ್ಯಾಹ್ನವಾದರೂ ಬಿಸಿಲು ನೆಲವನ್ನು ಮುಟ್ಟದಿರುವಂಥ ದಟ್ಟವಾದ ಮರಗಳು, ನೋಡಿಯೆ ಅನುಭವಿಸಬೇಕೆನ್ನುವ ಅಗಾಧವಾದ ಹಾಗೂ ಶತಮಾನಗಳಿಗೆ ಸಾಕ್ಷಿಯಾದ ಹೆಮ್ಮರಗಳು, ಅಂಥ ಹೆಮ್ಮರಗಳನ್ನು ಸದಾ ಆಶ್ರಯಿಸಿರುವ ಬಳ್ಳಿಗಳು, ಅಲ್ಲಲ್ಲಿ ಅಲ್ಲಲ್ಲಿ ಸಹಜವಾಗಿಯೋ ಗಾಳಿ ಮಳೆಗೋ ಬಿದ್ದಂಥ ಮರದ ಟೊಂಗೆಗಳು, ದೊಡ್ಡ ದೊಡ್ಡ ಕಲ್ಲುಗಳೊಳಗೆ ಪ್ರಕೃತಿ ಸಹಜವಾದ ಗವಿಯಂತಿರುವ ಮಾಟೆಗಳು, ಹಾವುಗಳು ತಿರುಗಿದುದಕ್ಕೆ ಸಾಕ್ಷಿಯಾದ ಹಾವಿನ ಹಾದಿಗಳು, ಎರಡು ಬೆಟ್ಟಗಳ ಸಂದುಗಳಲ್ಲಿ ಹರಿಯುವ ಸಣ್ಣ ಸಣ್ಣ ನೀರಿನ ಝರಿಗಳು, ನೀರ ಪಸೆ ಇರುವಲ್ಲಿ ಸದಾಕಾಲ ವಾಸಿಸುವ ಜಿಗಣೆ (ಇಂಬುಳ) ಎಂಬ ರಕ್ತ ಹೀರುವ ಜೀವಿಗಳು, ಮರದಿಂದ ಮರಕ್ಕೆ ಹಾರಾಡುವ ಚಿಟ್ಟೆ-ಹಕ್ಕಿ-ಓತಿಕ್ಯಾತವೇ ಮುಂತಾದ ಪ್ರಕೃತಿಯ ಮಡಿಲ ಶಿಶುಗಳು, ಅರಣ್ಯವೇ ನಮ್ಮದು ಎನ್ನುವಂತೆ ಸ್ವಚ್ಛಂದವಾಗಿ ಹಾರುವ ಕೋತಿಗಳು, ಅಲ್ಲೊಮ್ಮೆ ಇಲ್ಲೊಮ್ಮೆ ಸಿಗುವ ಮೊಲ, ಅಳಿಲು ಮುಂತಾದ ಮುದ್ದು ಜೀವಿಗಳು, ಕಣ್ಣಿಗೆ ಕಾಣದಿರುವ ಆದರೆ ಕಿವಿಗಳಿಗೆ ಸದಾ ಕೇಳಿಸುತ್ತಿರುವ ವಿಧವಿಧದ ಶಬ್ದಗಳಿಂದ ತಮ್ಮ ಇರುವನ್ನು ಜಗತ್ತಿಗೆ ತೋರಿಸುವ ಜೀರುಂಡೆಗಳು-ಕೀಟಗಳು, ಎಲ್ಲೆಲ್ಲೂ ಇದ್ದರೂ ಅಪರೂಪಕ್ಕೆ ಕಾಣುವಂಥ ಹಾವುಗಳು, ಈಗ ತಾನೆ ಕಾಡು ಕೋಣಗಳೋ ಕಡವೆ ಜಿಂಕೆಗಳೋ ನೀರಲ್ಲಿ ಉರುಳಿ ಹೊರಳಿಕೊಂಡು ಹೋಗಿರುವುದಕ್ಕೆ ಸಾಕ್ಷಿಯಾಗಿ ಇರುವಂಥ ಕೆಂಪಾದ ನೀರಿನ ಕೊಳಗಳು, ಪಕ್ಕದಲ್ಲೆ ನಡೆದಾಡಿದ ಹುಲಿ ಹೆಜ್ಜೆಯ ಗುರುತುಗಳು, ಎಲ್ಲಿಯೂ ಸಮತಟ್ಟಾಗಲಿ-ಇಳಿಯುವುದಾಗಲಿ ಇರದೆ ಏಕ ಪ್ರಕಾರವಾಗಿ ಹತ್ತಿಕೊಂಡೇ ಹೋಗಬೇಕಾದ ಕಾಲು ದಾರಿಯ ಕುರುಹುಗಳು, ಮನುಷ್ಯ ಸಂಚಾರದ ಹಾದಿಯಂತೆ ವನ್ಯ ಜೀವಿಗಳು ನಿರಂತರ ಸಾಗುವ ಗುಪ್ತವಾದ ಹಾಗೂ ಸೂಕ್ಷ್ಮವಾದ ರಾಜ ಪಥಗಳು, ಯಾವುದೋ ವನ್ಯ ಜೀವಿಗಳ ಕಾದಾಟದಲ್ಲಿ ಹುಡಿಯಾದ ಗಿಡಗಳು-ತುಂಡಾದ ಬಳ್ಳಿ-ಮಗುಚಿದ ಕಲ್ಲುಗಳ ರಾಶಿ, ದೀರ್ಘಕಾಲ ದಾಂಪತ್ಯದಲ್ಲಿದ್ದಂಥ ಜೋಡಿಯಲ್ಲಿ ಯಾವೊಂದು ಜೀವ ಕಳಚಿದರೂ ಉಳಿದ ಜೀವ ಸೊರಗುವಂತೆ ಅಲ್ಲಲ್ಲಿ ಅಲ್ಲಲ್ಲಿ ಜೀವ ಕಳಕೊಂಡ ಮರದೊಡನೆ ಉಳಿದಂಥ ಜೀವಂತ ಬಳ್ಳಿಗಳು, ಸಹಜವೋ ಅಸಹಜವೋ ಯವುದೋ ಕಾಲದಲ್ಲಿ ಸತ್ತು ಬಿದ್ದಂಥ ಪ್ರಾಣಿಗಳ ಕಳೇಬರಗಳು.. ಹೀಗೆ ಅನೇಕ ಕಾಡಿನೊಳಗಷ್ಟೆ ಕಾಣುವ ದೃಶ್ಯಗಳನ್ನು ಕುತೂಹಲದಿಂದ ನೋಡುತ್ತ, ಭಯದಿಂದ ಅನುಭವಿಸುತ್ತ ರಾಮಯ್ಯ ಗೌಡನ ನೇತೃತ್ವದಲ್ಲಿ ಮೂವರು ಕಾಡಿನೊಳಗೊಂದಾಗಿ ನಡೆಯುತ್ತಿದ್ದರು.

ದಾರಿಯಲ್ಲಿ ಸಿಗುವ ಬರೆಂಗಾಡಿ, ಕುರ್ಯಾಡಿ.. ಮುಂತಾದ ಸಣ್ಣ ಸಣ್ಣ ಊರುಗಳ ಹೊರಗಿನಿಂದಲೇ ಇರುವಂಥ ದಾರಿಯಲ್ಲಿ ನಡೆದು ಹೋಗುವಾಗ ಆ ಊರುಗಳ ದರ್ಶನದ ಜತೆ ಅವರ ಮನೆಗಳು, ಓಡಾಡುವ ಮಕ್ಕಳು, ಕೆಲಸಗಳಲ್ಲಿ ನಿರತರಾದ ಹೆಂಗಸರು, ಅಪರೂಪಕ್ಕೆ ಇರುವಂಥ ಗಂಡಸರು (ಅಪರೂಪಕ್ಕೆ ಯಾಕೆಂದರೆ ಇಂಥ ಹಳ್ಳಿಗಳಲ್ಲಿ ಗಂಡಸರು ರಾತ್ರಿಗೆ ಮಾತ್ರ ಮನೆಗೆ ಬರುವುದು. ಹಗಲಿಡೀ ಅವರವರ ಕೆಲಸಗಳಲ್ಲಿ ನಿರತರಾಗಿಯೇ ಇರುತ್ತಾರೆ.) ಮನೆಗಳ ಹಿಂದೆ ಮುಂದೆ ಇರುವ ಸಣ್ಣ ಸಣ್ಣ ಬೆಟ್ಟಗಳಲ್ಲಿ ಹುಲ್ಲು ಮೇಯುತ್ತಿರುವ ಜಾನುವಾರುಗಳು, ಸದಾ ಬೊಗಳಿಕೊಂಡೇ ಇರುತ್ತವೋ ಏನೊ ಎಂಬಂತೆ ಭಾವ ಬರಿಸುವ ಹಿಂಡು ಹಿಂಡು ನಾಯಿಗಳು, ಮರಿಗಳೊಡನೆ ಆಹಾರ ಹುಡುಕಿಕೊಂಡು ಹೋಗುತ್ತಿರುವ ದೊಡ್ಡ ದೊಡ್ಡ ಕೋಳಿಗಳ ಮೆರವಣಿಗೆಯ ದೃಶ್ಯಗಳು, ಹಸಿರು ಗದ್ದೆಗಳು, ಅಡಿಕೆ ತೆಂಗಿನ ತೋಟಗಳು, ತರಕಾರಿ ಬೆಳೆಸುವ ಗದ್ದೆಗಳು, ಗದ್ದೆಗಳ ಸುತ್ತಲೂ ಹರಿಯುವ ಶುಭ್ರ ನೀರಿನ ಸಣ್ಣ ಸಣ್ಣ ತೋಡುಗಳು.. ಹೀಗೆ ನೋಡುತ್ತ ಸಾಗುವಾಗ ಯಾವ ದಣಿವು ಕೂಡ ಹತ್ತಿರವೂ ಸುಳಿಯದೇ ಇರುವ ಲವಲವಿಕೆ ಮಾತ್ರ ಎಲ್ಲರಲ್ಲೂ ಇದ್ದದ್ದು ವಿಶೇಷವೂ ಹೌದು ಸಹಜವೂ ಹೌದು.

ಮತ್ತಷ್ಟು ಮೇಲೆ ಹತ್ತಿದಾಗ ಕೈಗೆ ಸಿಗುವುದೋ ಏನೊ ಎನ್ನುವಂಥ ಪಶ್ಚಿಮ ಘಟ್ಟಗಳ ಕಿರೀಟದಂತಿರುವ ಹುಲ್ಲು ಗುಡ್ಡೆಗಳ ಸರಣಿಗಳು ಪ್ರಾರಂಭವಾಗುತ್ತವೆ. ಇನ್ನಷ್ಟು ಹತ್ತಿರ ಹೋದಂತೆ ಮತ್ತೆ ಪರ್ವತದ ಇಳಿಜಾರು ಪ್ರಾರಂಭವಾಗುತ್ತದೆ. ಆ ಇಳಿಜಾರಿನ ಕೊನೆಯೇ ಫಂಜಾಲು ಎಂಬ ಸ್ವರ್ಗ. ಅಲ್ಲಿಂದ ಇನ್ನೊಂದು ಪರ್ವತ ಪ್ರಾರಂಭಕ್ಕೆ ಮುನ್ನ ಇರುವಂಥ ಭೂಮಿ ಫಂಜಾಲಿನ ಮೂಲನಿವಾಸಿಗಳ ಫಲವತ್ತಾದ ಕರ್ಮ ಭೂಮಿ. ದೂರದಿಂದಲೇ ರಾಮಯ್ಯ ಗೌಡ “ನೋಡಿ ಭಟ್ರೆ ಮುಂದೆ ಕಾಣುವುದೇ ಫಂಜಾಲು” ಎಂದಾಗ ಕಾರ್ತಿಕ ಮತ್ತು ಆದಿತ್ಯ ಇಬ್ಬರಿಗೂ ರೋಮಾಂಚನವಾಗಿತ್ತು. ಕಾರ್ತಿಕ ಮನದೊಳಗೇ ಅಂದುಕೊಂಡ. ‘ಆಹಾ ಅದೆಂಥ ಸೊಗಸು. ಬಹುಷ ದೇವ ಭೂಮಿಯಾದ ಬದರಿ, ಕೇದಾರ ಬಿಟ್ಟರೆ ಮತ್ತೊಂದು ಈ ಫಂಜಾಲೇ ಇರಬಹುದೊ ಏನೊ ಎಂಬಷ್ಟು ಸೌಂದರ್ಯ ಈ ಫಂಜಾಲಿನಲ್ಲಿದೆ ಎಂದು ಇಬ್ಬರಿಗೂ ಅನ್ನಿಸಿತ್ತು. ಭಾರತ ಮಾತೆಗೆ ಉತ್ತರದ ಭಾಗದಲ್ಲಿ ಹಿಮಾಲಯವು ರಕ್ಷಿಸುವಂತೆ ಈ ಫಂಜಾಲಿಗೆ ನಾಲ್ಕು ದಿಕ್ಕುಗಳಲ್ಲೂ ಈ ಪರ್ವತ ಶ್ರೇಣಿ ರಕ್ಷಣೆ ಕೊಡುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಫಂಜಾಲಿನ ಬಹಳ ದೊಡ್ಡದಾದ ಈ ಮನೆಯಲ್ಲಿ ಒಂದೇ ಕುಟುಂಬದ ಇಪ್ಪತ್ತಕ್ಕೂ ಮಿಕ್ಕಿ ಸದಸ್ಯರಿರುವುದು ವರ್ತಮಾನವಾದರೂ ಹಿಂದೆ ಇದೇ ಅವಿಭಕ್ತ ಕುಟುಂಬದಲ್ಲಿ ನೂರಕ್ಕೂ ಹೆಚ್ಚು ಜನರು ವಾಸವಾಗಿರುತ್ತಿದ್ದದ್ದೂ ಸತ್ಯವೆ. ಇದನ್ನು ರಾಮಯ್ಯ ಗೌಡ ಈ ಹಿಂದೆಯೇ ಹೇಳಿದ್ದರೂ ಕಾರ್ತಿಕನಾಗಲಿ ಆದಿತ್ಯನಾಗಲಿ ಇದನ್ನು ಪೂರ್ತಿ ನಂಬಿರಲಿಲ್ಲ. ಆದರೆ ದೂರದಿಂದ ಈ ಮನೆಯನ್ನು, ಅಲ್ಲಿಯ ಅಗಾಧ ಗದ್ದೆಗಳನ್ನು, ತೋಟಗಳನ್ನು ನೋಡುವಾಗ ಇಬ್ಬರಿಗೂ ನಂಬಿಕೆ ಬರಲಾರಂಭಿಸಿತು. ನೂರಾರು ಜಾನುವಾರುಗಳು ಒಟ್ಟಿಗೆ ಮೇಯುವುದೇ ಒಂದು ಸುಂದರ ನೋಟ. ಅದರಲ್ಲೂ ಸಣ್ಣ ಕರುಗಳು ತುಂಟಾಟದಿಂದ ಬಯಲು ಪ್ರದೇಶದಂತಿರುವ ವಿಶಾಲವಾದ ಹಸಿರು ಹುಲ್ಲಿನ ಗುಡ್ಡಗಳ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿಕೊಂಡು, ಒಂದಕ್ಕೊಂದು ಹಾದು ಕೊಂಡು, ಕುತೂಹಲದಿಂದ ಎಲ್ಲೊ ನೋಡಿಕೊಂಡು, ಹಟಾತ್ತನೆ ದಿಕ್ಕನ್ನು ಬದಲಿಸಿಕೊಂಡು, ಬಾಲವನ್ನು ಏರಿಸಿಕೊಂಡು ಜಿಗಿಯುತ್ತಿರುವುದನ್ನು ನೋಡುವಲ್ಲಿ ಕಣ್ಣುಗಳು ಸೋಲದಿರಬಹುದೆ ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ..
*****************************
————————————————————————————————————————————————————————————————-

ಅಳಂಬ.. ೧೨
************
ಸಂಕ್ರೇ ಗೌಡರ ಮನೆಯಲ್ಲಿ ಓದು ಬರಹ ಕಲಿತಿರುವ ಪ್ರಥಮ ಸದಸ್ಯೆಯೇ ಕಮಲಿ. ಯಾವುದೇ ಪತ್ರ ವ್ಯವಹಾರಕ್ಕೆ ಅಥವಾ ಹೊರಗಿನ ಪ್ರಪಂಚದ ಕನ್ನಡ ಭಾಷೆಗೆ ಸಂಕ್ರೇಗೌಡರ ಮನೆಯವರು ಹೆಬ್ಬಾರರ ಮನೆಯವರನ್ನೇ ಆಶ್ರಯಿಸಬೇಕಿತ್ತು. ಅಂತೆಯೇ ಕುತ್ಲೂರು ಗ್ರಾಮದ ಒಳಗಿರುವ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಎಲ್ಲ ಸಣ್ಣ ಪುಟ್ಟ ಹಳ್ಳಿಗಳೂ ಅವಿದ್ಯಾವಂತರಿಂದಲೇ ತುಂಬಿಕೊಂಡಿರುವುದು ಅಸಹಜವೇನಲ್ಲ. ಅಂತಿರುವಾಗ ಕಮಲಿ ನಿಜವಾಗಿಯೂ ಅವರೊಳಗೆ ಹೆಚ್ಚಿನವಳಾಗುತ್ತಾಳೆ. ಅಂತೆಯೇ ವಿದ್ಯೆ ಕಲಿಯದಿದ್ದರೂ ಈ ಜನರು ಸುಸಂಸ್ಕೃತರಾಗಿದ್ದರು ಎನ್ನುವುದೂ ವಿಶೇಷವೆ.
ಕಮಲಿ ಈಗ ವಿದ್ಯಾವಂತೆ ಮಾತ್ರವಲ್ಲ ಮದುವೆಗೆ ಸಿದ್ಧಳಾದವಳು ಕೂಡ ಹೌದು. ಸಂಕ್ರೇ ಗೌಡರು ಹುಡುಗನನ್ನು ಹುಡುಕುತ್ತಲೇ ಇದ್ದರೂ ಯಾವುದೂ ಕೂಡಿ ಬರಲಿಲ್ಲ. ಅಕ್ಕ ಗುಲಾಬಿಗೆ ಇಪ್ಪತ್ತನೇ ವರ್ಷಕ್ಕೆ ಮದುವೆ ಆಗಿ ಒಂದು ಮಗುವೂ ಆಗಿತ್ತು. ರಾಮಯ್ಯ ಗೌಡನಿಗೂ ಮದುವೆ ವಯಸ್ಸು ಮೀರುತ್ತಿದೆ. ಆದರೆ ಆತನೂ ಕಮಲಿಗೆ ಸಂಬಂಧ ಕೂಡಿ ಬಂದರೆ ಒಟ್ಟಿಗೆ ಅಣ್ಣ ತಂಗಿಯರ ಮದುವೆ ಮಾಡಿಬಿಡಬಹುದು ಎಂಬ ಯೋಚನೆಯಲ್ಲಿದ್ದನು. ಸಂಕ್ರೇ ಗೌಡರಿಗೂ ಇದು ಸರಿಯೆಂದು ಕಂಡಿತ್ತು.

ಅಂತೆಯೆ ಸಂಕ್ರೇ ಗೌಡರು ಒಂದು ದಿನ ಕಮಲಿಯಲ್ಲಿ “ಮಗಳೆ ಕಮಲಿ.. ಅಣ್ಣನಿಗೆ ಮದುವೆ ವಯಸ್ಸು ಮೀರುತ್ತಿದೆ. ಈ ವರ್ಷವಾದರೂ ಮದುವೆ ಆಗಬೇಕು. ಜತೆಗೆ ನಿನಗೂ ಒಪ್ಪಿಗೆ ಇದ್ದರೆ ಗಂಡು ನೋಡೋಣ ಆಗದೆ. ಒಟ್ಟಿಗೇ ಇಬ್ಬರದೂ ಆದರೆ ನಮಗೂ ಖರ್ಚು ಕಡಿಮೆ ಮಾತ್ರವಲ್ಲ ನಿನಗೂ ಮದುವೆ ಎಂಬ ಸಂಸ್ಕಾರ ಆಗುತ್ತದೆ. ನಾವಾದರೊ ಇನ್ನು ವೃದ್ಧಾಪ್ಯದ ಕಡೆ ಸರಿದವರು. ನಾವಿರುವಾಗಲೆ ನಿನಗೊಂದು ಮದುವೆ ಆದರೆ ನಮ್ಮ ಜವಾಬ್ದಾರಿಯೂ ಈಡೇರಿದಂತಾಗುತ್ತದೆ.” ಎಂದಾಗ ಕಮಲಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. “ಅಪ್ಪ ನನಗೆ ಈಗ ಮದುವೆ ಬೇಡ. ಅಣ್ಣನಿಗೆ ಆಗಲಿ. ನನಗೂ ಬಹಳ ಖುಷಿಯೇ. ಅತ್ತಿಗೆ ಮನೆಗೆ ಬಂದರೆ ಅವರೊಟ್ಟಿಗೆ ಒಂದೆರಡು ವರ್ಷ ಕಳೆದು ನಿಧಾನವಾಗಿ ಸಾಕು. ನನಗೀಗಲೆ ನಿಮ್ಮನ್ನೆಲ್ಲ ಬಿಟ್ಟಿರಲು ಮನಸ್ಸಿಲ್ಲ. ಅಷ್ಟಾಗಿ ನನಗೇನು ಮದುವೆ ಮಕ್ಕಳು ಎಂಬ ವಿಚಾರದಲ್ಲಿ ಯೋಚಿಸುವಷ್ಟು ಪ್ರಾಯವೂ ಆಗಿಲ್ಲ. ಯಾಕಪ್ಪ ನಾನು ನಿಮಗೆ ಇಲ್ಲಿರುವುದು ಇಷ್ಟವಿಲ್ಲವೆ” ಎಂದ ಕಮಲಿಗೆ “ಛೆ!! ಛೇ!! ಹಾಗೇನಿಲ್ಲ ಮಗಳೆ. ನೀನು ನಮಗೊಂದು ಹೊರೆಯೇ? ಖಂಡಿತ ಇಲ್ಲ. ಹಾಗೆ ತಿಳಿದುಕೊಳ್ಳಬೇಡ. ನಿನಗೆ ಒಪ್ಪಿಗೆ ಇಲ್ಲದಿದ್ದರೆ ನಮ್ಮದೇನು ಒತ್ತಾಯವಿಲ್ಲ. ನಿನಗೆ ಯಾವಾಗ ಬೇಕೊ ಆವಾಗಲೇ ಆಗಲಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಿನ್ನ ಒಳ್ಳೆಯ ಭವಿಷ್ಯಕ್ಕಾಗಿ ನಮ್ಮ ಮನಸ್ಸು ಮಿಡಿಯುತ್ತಿರುವುದರಿಂದ ನಿನಗೊಬ್ಬ ಒಳ್ಳೆಯ ವರ ಸಿಗುವಲ್ಲಿವರೆಗೆ ಕಾಯುವ ತಾಳ್ಮೆಯೂ ನಮಗಿದೆ. ಸರಿ ಮಗಳೆ ಹೀಗೆ ಕೇಳಿದೆನೆಂದು ಬೇಸರಿಸಬೇಡ. ಎಷ್ಟಾದರು ನೀನು ನಮ್ಮೆಲ್ಲರ ಮುದ್ದಿನ ಕೂಸು ತಾನೆ” “ಬೇಸರ ಇಲ್ಲಪ್ಪ. ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ.” ಹೀಗೆ ಆ ಮಾತುಕತೆ ಅಲ್ಲಿಗೇ ಮುಗಿದಿತ್ತು.

Advertisement:

ಕಾರ್ತಿಕನಿಗೆ ತೋಟದ ಕೆಲಸಗಳೆಂದರೆ ಪಂಚ ಪ್ರಾಣ. ಅದೆಷ್ಟು ಕಷ್ಟದ ಕೆಲಸಗಳೇ ಇರಲಿ ವೃತ್ತಿಪರರಂತೆ ಲೀಲಾಜಾಲವಾಗಿ ಮಾಡುತ್ತಿದ್ದ. ಅವನೊಡನೆ ಕೆಲಸಕ್ಕೆ ಬರುವ ರಾಮಯ್ಯ ಗೌಡನಾಗಲಿ ಪಕ್ಕದ ಮನೆಯಲ್ಲಿರುವ ಲೋಕೇಶ ಪೂಜಾರಿಯಾಗಲಿ ಮಟ್ಕ್ಯೆಯಲ್ಲಿರುವ ಚೆನ್ನಯ ಗೌಡನಾಗಲಿ ಯಾರೇ ಬಂದರು ಅವರಿಂದ ಎಲ್ಲ ಕೆಲಸಗಳ ಸೂಕ್ಷ್ಮತೆಗಳನ್ನು ಅರಿತು ಅವರಂತೇ ಕೌಶಲ್ಯದಿಂದ ಮುಂದುವರಿಯುವಷ್ಟು ಕಾರ್ತಿಕನು ಚಾಣಾಕ್ಷನಾಗಿದ್ದನು. ಅಂತೆಯೇ ಕಾಡಿನಲ್ಲಿ ಸಿಗುವಂಥ ಜೇನನ್ನು ತರಲು ಕೆಲಸದವರ ಜತೆಗೆ ತಾನೂ ಹೋಗುತ್ತಿದ್ದ ಮಾತ್ರವಲ್ಲ ಜೇನನ್ನು ಹೇಗೆ ಪತ್ತೆ ಮಾಡುವುದು, ಹೇಗೆ ನೊಣಗಳನ್ನು ಓಡಿಸುವುದು, ಪುನಹ ಆ ನೊಣಗಳು ವಾಪಸು ಬರುವುದರೊಳಗೆ ಹೇಗೆ ಉಪಾಯದಿಂದ ಜೇನನ್ನು ತೆಗೆಯುವುದು ಮುಂತಾದ ವಿಷಯಗಳನ್ನು ಅದರಲ್ಲು ಜೇನು ಸಾಕಣೆಯಲ್ಲಿ ವಿಶೇಷ ಪರಿಣಿತಿ ಇದ್ದ ಮುತ್ತೇ ಗೌಡನಿಂದ ತಿಳಿದು ಕೊಂಡಿದ್ದ. ಆದರೆ ಈ ಜ್ಞಾನ ಕಾರ್ತಿಕನಿಗೆ ಇತ್ತೇ ಹೊರತು ಮರ ಹತ್ತಿ ಜೇನು ತೆಗೆಯುವ ಕಾಯಕ ಮಾತ್ರ ಆತನಿಂದ ಆಗುತ್ತಿರಲಿಲ್ಲ. ಕಾರಣ ಕಾರ್ತಿಕನಿಗೆ ಮರ ಹತ್ತುವ ಕಲೆ ಸಿದ್ಧಿಸಲಿಲ್ಲ. ಸಿದ್ಧಿಸಲಿಲ್ಲ ಎನ್ನುವುದಕ್ಕಿಂತಲೂ ಆತನಿಗೆ ಮರ ಹತ್ತುವಲ್ಲಿ ಹೆದರಿಕೆ ಆಗುತ್ತಿದ್ದುದರಿಂದ ಆ ಸಾಹಸಕ್ಕೇ ಕೈ ಹಾಕಲಿಲ್ಲ. ಅದಕ್ಕೂ ಒಂದು ಕಾರಣವಿದೆ. ಕೆಲಸದವರೆಲ್ಲ ಮರಕ್ಕೆ ಹತ್ತುವುದನ್ನು ನೋಡಿ ಕಲಿತಂಥ ಕಾರ್ತಿಕ ತನ್ನ ತೋಟದೊಳಗಿರುವ ಸಣ್ಣ ಪುಟ್ಟ ಮರಗಳಿಗೆ ಹತ್ತುತ್ತಿದ್ದ. ಅಷ್ಟೇನೂ ಹೆದರಿಕೆ ಆಗುತ್ತಿರಲಿಲ್ಲ. ಒಂದು ಸಲ ಮಳೆಗಾಲದಲ್ಲಿ ಹಲಸಿನ ಹಣ್ಣು ಕೊಯ್ಯಲೆಂದು ಮರ ಹತ್ತಿದಾಗ ಅದ್ಯಾವುದೊ ಅಚಾತುರ್ಯದಲ್ಲಿ ಸಾಧಾರಣ ಇಪ್ಪತ್ತು ಅಡಿ ಎತ್ತರದಿಂದ ಕಾಲು ಜಾರಿದವನು ಮರದ ಬುಡದವರೆಗೂ ಜಾರಿಕೊಂಡೇ ಬಂದಾಗ ಕೈ, ಕಾಲು, ತೊಡೆ, ಎದೆಗೆಲ್ಲ ಮರ ಉಜ್ಜಿದಂತಾಗಿ ಚರ್ಮವೆಲ್ಲ ಎದ್ದು ಹೋಗಿತ್ತು. ಮೈಯೆಲ್ಲ ರಕ್ತ ಸೋರುತ್ತಿರುವಂತೆ ಮನೆಗೆ ಬರುವಾಗ ಮನೆಯವರೆಲ್ಲ ಗಾಬರಿಯಿಂದ ಆಸ್ಪತ್ರೆಗೆ ಹೋಗುವ ತಯಾರಿಯಲ್ಲಿದ್ದರು. ಆದರೆ ಆ ಕ್ಷಣ ಯಾವುದೊ ಕೆಲಸದ ನಿಮಿತ್ತ ಮಟ್ಕ್ಯೆಯ ಚೆನ್ನಯ ಹೆಬ್ಬಾರರ ಮನೆಗೆ ಬಂದದ್ದರಿಂದ ನಾಟಿ ಔಷಧ ಕೊಡುವಲ್ಲಿ ಸಿದ್ಧ ಹಸ್ತನಾದ ಆತ ಕಾರ್ತಿಕನಿಗೆ ದೊಡ್ಡ ಮಟ್ಟದ ಗಾಯಗಳೇನು ಆಗಿಲ್ಲವೆಂದರಿತು ತಾನೇ ಇದಕ್ಕೆ ಔಷಧ ಕೊಡುತ್ತೇನೆ ಆಸ್ಪತ್ರೆ ಹೋಗುವುದು ಬೇಡವೆಂದಾಗ ಕಾರ್ತಿಕನಿಗೆ ಧೈರ್ಯವೂ ಬಂದಿತ್ತು. ಕೂಡಲೆ ಕಾಡಿಗೆ ಹೋಗಿ ಅದೇನೋ ಔಷಧಿಯನ್ನು ತಂದು ಗಾಯಗಳಿಗೆ ಹಚ್ಚುವುದರ ಜತೆಗೆ ನೋವು ಕಡಿಮೆಯಾಗಲು ಕಷಾಯವೊಂದನ್ನು ಕೊಟ್ಟಿದ್ದ. ಒಂದು ವಾರದೊಳಗೇ ಕಾರ್ತಿಕ ಹುಷಾರಾಗಿ ಗಾಯಗಳ ಕಲೆಗಳ ಹೊರತಾಗಿ ಮುಂಚಿನಂತೆ ಆಗಿದ್ದ. ಅಂದಿನಿಂದ ಈ ಮರ ಹತ್ತುವ ಸಾಹಸಕ್ಕೆ ಕಾರ್ತಿಕ ಹೊರಡಲೇ ಇಲ್ಲ.

ಇಲ್ಲಿ ಚೆನ್ನಯನ ಬಗ್ಗೆ ಹೇಳುವುದಾದರೆ ಆತ ಬೇಸಾಯಗಾರನೂ ಹೌದು ನಾಟಿ ಔಷಧ ಕೊಡುವ ನಾಟಿ ವೈದ್ಯನೂ ಹೌದು. ಅದರಲ್ಲೂ ವಿಶೇಷವಾಗಿ ಕಣ್ಣಿನ ಸಂಬಂಧಿ ಸಮಸ್ಯೆಗಳಿಗೆ ಚೆನ್ನಯನ ಔಷಧಿ ನೂರಕ್ಕೆ ನೂರರಷ್ಟು ಪರಿಣಾಮಕಾರಿ ಎಂದರೆ ಆತನ ನಾಟಿ ಔಷಧದ ಜ್ಞಾನ ಅದೆಷ್ಟಿರಬಹುದು ಎಂದು ಹೇಳಬಹುದು. ನುರಿತ ವೈದ್ಯರು ಆಗದು ಎಂದು ಕೈ ಬಿಟ್ಟಂಥ ಪ್ರಕರಣಗಳು ಚೆನ್ನಯನ ಔಷಧಿ ಸೇವಿಸಿ ಗುಣಮುಖಾಗಿ ರೋಗಿಗಳು ಪ್ರಪಂಚವನ್ನು ಮತ್ತೊಮ್ಮೆ ಕಾಣುವಂತಾದ ಉದಾಹರಣೆಗಳು ಹಲವಾರಿವೆ. ಆದರೂ ಜನ್ಮತಃ ಕುರುಡಾದರೆ ಸರಿ ಮಾಡಲಾಗದು ಎಂದು ಗೌಡರು ಹೇಳುತ್ತಿದ್ದರು. ಚೆನ್ನಯ ಗೌಡರಲ್ಲಿ ಕಣ್ಣಿನ ಸಮಸ್ಯೆ ಎಂದು ಬಂದವರಿಗೆ ಅವರ ಪರೀಕ್ಷೆಯು ವಿಶಿಷ್ಟ ರೀತಿಯದ್ದು ಮತ್ತು ಸರಳ. ರೋಗಿಯ ಕಣ್ಣಿನ ಒಳಗೆ ಪ್ರತಿಬಿಂಬ ಕಂಡರೆ ಮಾತ್ರ ಗೌಡರು ಔಷಧಿ ಕೊಡುತ್ತಿದ್ದರು ಮತ್ತು ಅದು ಪರಿಣಾಮಕಾರಿಯೂ ಆಗುತ್ತಿತ್ತು. ಯಾರ ಕಣ್ಣಲ್ಲಿ ಪ್ರತಿಬಿಂಬ ಕಾಣುವುದಿಲ್ಲವೊ ಅವರಿಗೆ ಮತ್ತೆ ದೃಷ್ಟಿ ಬರುವ ಸಾಧ್ಯತೆ ಇಲ್ಲವೆಂಬ ಅಭಿಪ್ರಾಯ ಗೌಡರದ್ದು. ಅದೇರೀತಿ ಹಲವಾರು ರೋಗಗಳಿಗೆ ಅವರದ್ದೇ ಆದ ವಿವಿಧ ರೀತಿಯ ಪರೀಕ್ಷೆಗಳೊಂದಿಗೆ ಪರಿಹಾರ ನೀಡುವ ಚೆನ್ನಯ ಗೌಡರು ಮಾತ್ರ ಒಂದು ತಪ್ಪು ಮಾಡಿದ್ದರು. ಮತ್ತು ಅದು ಭಾರಿ ಬೆಲೆಯನ್ನು ತೆರೆಯಬೇಕಾದದ್ದೂ ಹೌದು. ಅದೇನೆಂದರೆ ಅವರಿಗೆ ಗೊತ್ತಿದ್ದಂಥ ಅತ್ಯಮೂಲ್ಯವಾದ ಗಿಡಮೂಲಿಕೆಗಳ ಪರಿಚಯವಾಗಲಿ, ಮಾಡುವ ಪರೀಕ್ಷೆಯ ಗುಟ್ಟಾಗಲಿ, ಕೊಡುವ ಔಷಧಿಯಾಗಲಿ ಇದರ ರಹಸ್ಯವನು ಯಾರಲ್ಲೂ ಹೇಳದೆ ಗೌಪ್ಯ ಕಾಪಾಡಿಕೊಂಡು ಬಂದದ್ದರಿಂದ ಮುಂದೆ ಈ ಎಲ್ಲ ಜನೋಪಯೋಗಿ ವಿಷಯಗಳು ಅವರೊಡನೆಯೇ ಸಮಾಧಿಯಾಗುತ್ತದೆ ಎನ್ನುವುದು ಬಹಳ ಬೇಸರದ ವಿಷಯವೆ.

ಅಂತೆಯೇ ಕಾರ್ತಿಕನಿಗೆ ಕಾಡಿನೊಳಗಿರುವ ಮೂಲನಿವಾಸಿಗಳಾದ ಈ ಗೌಡ್ರುಗಳ ಜನಜೀವನ, ಅವರ ವೇಷ ಭೂಷಣಗಳು, ಭಾಷೆ, ಆಚಾರ ವಿಚಾರಗಳು, ಅವರ ದೈವಾರಾಧನೆ, ನಂಬಿಕೆಗಳು.. ಹೀಗೆ ಅನೇಕ ವಿಷಯಗಳ ಬಗ್ಗೆ ಕುತೂಹಲವೂ ಇತ್ತು ನೋಡಿ ತಿಳಿಯಬೇಕೆಂಬ ಆಸೆಯೂ ಇತ್ತು. ನೆಲ್ಲಿತಡ್ಕಕ್ಕೆ ಹತ್ತಿದಲ್ಲಿರುವ ಮಟ್ಕ್ಯೆ, ಅಳಂಬ, ಬರೆಂಗಾಡಿ ಮುಂತಾದ ಕಡೆಗೆ ಹಲವು ಸಲ ಹೋಗಿದ್ದನಾದರೂ ಕುತ್ಲೂರು ಗ್ರಾಮದ ಕೊನೆಯ ಮನೆಯಾದ ಫಂಜಾಲಿಗೆ ಒಂದು ಬಾರಿ ಹೋಗಬೇಕೆನ್ನುವ ಆಸೆ ಬಹಳಷ್ಟಿತ್ತು. ರಾಮಯ್ಯ ಗೌಡನಲ್ಲಿ ಒಂದು ದಿನ ತನ್ನಾಸೆಯನ್ನು ಹೇಳಿಕೊಂಡಾಗ “ಅದಕ್ಕೇನು ಅಡ್ಡಿ.. ನಾಳೆಯೇ ಬೇಕಾದರೆ ಹೋಗೋಣ. ಆದರೆ ಐದು ಮೈಲಿಗಳಷ್ಟು ಕಾಡುದಾರಿಯಲ್ಲಿ ಅದು ಕೂಡ ಹತ್ತಿಕೊಂಡು ಹೋಗುವಂಥ ಕಲ್ಲು-ಮುಳ್ಳು-ಗಿಡಗಂಟಿಗಳ ಮಧ್ಯದಲ್ಲಿ ಹೋಗಬೇಕಾಗುವುದು. ನಾವು ಕೂಡ ವರುಷಕ್ಕೊಂದೆರಡು ಸಾರಿ ಹೋಗುತ್ತೇವೆ. ಅದಲ್ಲದೆ ಬುಟ್ಟಿಗೆ ಬೆತ್ತ ತರಬೇಕಾದರೆ ಅದೇ ದಾರಿಯಿಂದ ಹೋಗಬೇಕಾಗುವುದರಿಂದ ಘಟ್ಟದ ತಪ್ಪಲಿನಲ್ಲಿರುವ ಎಲ್ಲ ಮನೆಗಳೂ ನಮಗೆ ಪರಿಚಿತವೆ.” ಎಂದಾಗ ಕಾರ್ತಿಕನಿಗೆ ಬಹಳ ಖುಷಿಯಾಗಿ “ಹಾಗಾದರೆ ನಾಳೆಯೇ ಹೋಗೋಣ” ಎಂದು ಕಾರ್ತಿಕ ಹೊರಡಲು ತಯಾರಾದ. ಆಗ ರಾಮಯ್ಯ ಗೌಡರು.
“ನಾನು ನಾಳೆಯೇ ಹೋಗೋಣ ಎಂದು ಮಾತಿಗೆ ಹೇಳಿದೆ. ಆದರೆ ನಾಳೆಯೇ ಹೋಗಬೇಕಾದರೆ ಒಂದಷ್ಟು ತಯಾರಿಗಳು ಬೇಕು. ಉದಾಹರಣೆಗೆ ಅಲ್ಲಿ ನೀವು ಊಟ ಮಾಡಲಾರಿರಿ. ಹೋಗಿ ಬರಬೇಕಾದರೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಆಗುತ್ತದೆ. ಆದ್ದರಿಂದ ಹಸಿವಿಗೆ ಅವಲಕ್ಕಿ ಬೆಲ್ಲವೊ ಅಥವಾ ಇನ್ನೇನಾದರು ಬುತ್ತಿ ಕೊಂಡು ಹೋಗಬೇಕು. ಅಂತೆಯೇ ನನ್ನಲ್ಲಿ ಕೋವಿ ಇದೆ ಅದಕ್ಕೆ ಔಷಧಿ ತರಬೇಕಷ್ಟೆ ಅದನ್ನು ನಾರಾವಿಯಿಂದ ತರಬೇಕು. ದಾರಿಯಲ್ಲಿ ಎಲ್ಲಾದರು ಕಾಡುಬೆಕ್ಕೊ, ಹಂದಿಯೋ ಸಿಕ್ಕಿದರೂ ಸಿಗಬಹುದು”

” ಈ ನಡುವೆ ನಿಮಗೆ ಇದೂ ಆಗಬೇಕೆ ” ಎಂದು ಕಾರ್ತಿಕ ತಮಾಷೆ ಮಾಡಿದ.

“ಹಾಗೇನಿಲ್ಲ ಭಟ್ರೆ. ಆದರೆ ಕೋವಿಯೊಂದು ಕೈಯಲ್ಲಿದ್ದರೆ ನಮಗೆ ಧೈರ್ಯವೆ. ಕೆಲವೊಮ್ಮೆ ಹುಲಿ ಸಿಕ್ಕಿದರೂ ಸಿಗಬಹುದು. ಯಾತಕ್ಕೂ ಇರಲಿ ಕೋವಿಯೊಡನೆ ಹೋಗುವುದು ಒಳಿತು” ಎಂದು ರಾಮಯ್ಯ ಗೌಡ ಆತನ ಅನುಭವವನ್ನು ಹೇಳಿದ. ಓದಿ… ಪ್ರಚೋದಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
*****************************
————————————————————————————————————————————————————————————————————————–

ಅಳಂಬ.. ೧೧
************
ವಾರದಲ್ಲಿ ಮೂರು ನಾಲ್ಕು ದಿನ ಕಮಲಿಯ ಜತೆಯಲ್ಲಿ ರಾಮಯ್ಯ ಗೌಡ ಅಳಂಬದಿಂದ ನೆಲ್ಲಿತಡ್ಕಕ್ಕೆ ಕೆಲಸಕ್ಕೆ ಬರುತ್ತಿದ್ದ. ದಿನ ಒಂದಕ್ಕೆ ಐದು ರೂಪಾಯಿ ಕೂಲಿ ಮಜೂರಿ. (ಅದು ಮಣ್ಣಿನ ಕೆಲಸವಿರಲಿ, ಗೊಬ್ಬರ ಹೊರುವುದಿರಲಿ, ತೆಂಗಿನ ಮರ ಏರುವುದಿರಲಿ, ತೋಟದ ಕೆಲಸವಿರಲಿ, ಸೊಪ್ಪು ಹುಲ್ಲು ಮಾಡುವುದಿರಲಿ ಸಂಬಳದಲ್ಲಿ ಏರು ಪೇರಿಲ್ಲ.) ಪ್ರತಿ ಶನಿವಾರವೂ ನಾರಾವಿ ಪೇಟೆಯಲ್ಲಿ ಸಂತೆ ಇರುತ್ತಿತ್ತು. ಅಂದಿಗಾಗುವಾಗ ಸಾಧ್ಯವಾದಷ್ಟು ಹಣ ಒಟ್ಟು ಮಾಡಿ ಜತೆಗೆ ತಾವು ಕಾಡಿನಿಂದ ಸಂಗ್ರಹಿಸಿದ ದ್ರವ್ಯಗಳನ್ನು ವಿಕ್ರಯಿಸಿ ಬಂದ ಹಣವನ್ನೂ ಸೇರಿಸಿ ಸಂತೆಯಿಂದ ದಿನಸಿ, ಹೊಗೆಸೊಪ್ಪು, ಮೀನು, ಸೊಸೈಟಿಯಿಂದ ದೊರಕುವ ಚಿಮಿಣಿ ಎಣ್ಣೆ-ಸಕ್ಕರೆ ಇತ್ಯಾದಿಗಳನ್ನು ಮನೆಗೆ ತರುವುದು ವಾಡಿಕೆ. ಸಾಧಾರಣವಾಗಿ ಕುತ್ಲೂರು ಗ್ರಾಮದ ಎಲ್ಲ ಮನೆಗಳ ಸದಸ್ಯರು ನಾರಾವಿ ಸಂತೆಯನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ಸಂತೆ ಎಂದ ಮೇಲೆ ಅಲ್ಲಿ ಏನುಂಟು ಏನಿಲ್ಲ.. ಎಲ್ಲವೂ ಲಭ್ಯವಿತ್ತು. ಮಣ್ಣಿನ ಪಾತ್ರೆಗಳು, ಅಲ್ಯುಮಿನಿಯಂ ಪಾತ್ರೆಗಳು, ಬಟ್ಟೆ ಅಂಗಡಿಗಳು, ಹಳ್ಳಿ ಔಷಧಿಗಳು, ತರಕಾರಿಗಳು, ಕೊಡೆ ರಿಪೇರಿ-ಚಪ್ಪಲಿ ರಿಪೇರಿ-ಲೈಟು ರಿಪೇರಿ ಮುಂತಾದ ಸಣ್ಣ ಸಣ್ಣ ವ್ಯವಹಾರಗಳ ಜತೆ ಹಳ್ಳಿಯಿಂದ ತಂದಂಥ ಜೇನು, ಕಾಳುಮೆಣಸು, ಬೆತ್ತದ ಬುಟ್ಟಿ ಮುಂತಾದ ಕಾಡುತ್ಪತ್ತಿಯ ವಿಕ್ರಯ, ಕೋಳಿ ಅಂಕ, ಬೇಸಿಗೆಯಲ್ಲಾದರೆ ಸೈಕಲ್ ಸರ್ಕಸ್, ಡೊಂಬರಾಟ, ಶೇಂದಿ ಶರಾಬು ಕುಡಿದವರ ತೂರಾಟ, ಹಳೆ ದ್ವೇಷಗಳು ನೆನಪಾಗಿ ಹೊಡೆದಾಟ, ಹೊಸ ಸ್ನೇಹಗಳ ಸಂಪಾದನೆ, ಹದಿ ಹರೆಯದವರು ಪರಸ್ಪರ ಆಕರ್ಷಣೆಯಿಂದ ಹಿರಿಯರ ಕಣ್ತಪ್ಪಿಸಿ ಗುಸುಗುಸು ಪಿಸಪಿಸ ಮಾತುಗಳನ್ನು ವಿನಿಮಯ ಮಾಡಿಕೊಂಡು ಮನದೊಳಗೇ ಖುಷಿ ಪಡುವ ಪರಿ…. ಹೀಗೆ ಹಲವಾರು ವಿಷಯಗಳು ಶನಿವಾರ ಸಂತೆಯಲ್ಲಿ ಇರುತ್ತಿದ್ದ ಕಾರಣ ಕುತ್ಲೂರಿನಲ್ಲಿ ಶನಿವಾರ ಯಾರೂ ಕೆಲಸ ಮಾಡುತ್ತಿರಲಿಲ್ಲ. ಅಂತೆಯೇ ಮದುವೆ, ಆಸ್ತಿ, ಜಾನುವಾರು ಮುಂತಾದ ವ್ಯವಹಾರಗಳ ಮಾತುಕತೆಗಳೂ ಸಂತೆಯ ದಿನವೇ ಆಗಿ ಹೋಗುತ್ತಿದ್ದವು. ಅಂದರೆ ವಾರಕ್ಕೊಂದು ಸಲ ಪ್ರಪಂಚ ದರ್ಶನವಾಗುವ ಅವಕಾಶ. ಸಾಯಂಕಾಲಕ್ಕಾಗುವಾಗ ಸಂತೆಯಿಂದ ಮನೆಗೆ ತೆರಳುವ ಸಂದರ್ಭ ಕುಡಿತದ ದಾಸರಾಗಿರುವ ಕೆಲವರು ದಾರಿ ಮಧ್ಯದಲ್ಲಿ ಅತ್ತ ಮನೆಗೂ ಹೋಗಲಾಗದೆ ಇತ್ತ ನಿಲ್ಲಲೂ ಆಗದೆ ದಾರಿ ಮಧ್ಯದಲ್ಲೇ ಅಮಲು ಇಳಿಯುವಲ್ಲಿವರೆಗೆ ಮಲಗಿ ಮರುದಿವಸ ಬೆಳಗ್ಗಿನ ಜಾವ ಎದ್ದು ಮನೆಗೆ ಹೋಗುವವರು ಕೂಡ ಬಹಳಷ್ಟು ಜನರಿರುವುದು ವಿಶೇಷವಲ್ಲ. ಹಾಗೆಂದು ಅವರಲ್ಲಿದ್ದಂಥ ಸಾಮಾನುಗಳನ್ನು ಯಾರೂ ಮುಟ್ಟದಿರುವುದೂ ಸುಳ್ಳಲ್ಲ.

ಕಮಲಿಯೂ ಕೆಲವೊಮ್ಮೆ ಅಣ್ಣನ ಜತೆಗೋ ತಂದೆಯ ಜತೆಗೋ ಸಂತೆಗೆ ಹೋಗುವುದಿದೆ.
ಅಣ್ಣಂದಿರ ಜತೆ ತಾನು ಕೂಡ ತಲೆ ಹೊರೆಯಲ್ಲಿ ಕೂಡಿದಷ್ಟು ಕಾಳುಮೆಣಸೊ, ರಾಮಪತ್ರೆಯೊ ಹೊತ್ತು ಕೊಂಡು ಹೋಗುತ್ತಿದ್ದಳು. ಅದೇರೀತಿ ಸಂತೆಯಿಂದ ಬಳೆ, ಚಪ್ಪಲಿ, ರಿಬ್ಬನ್.. ಹೀಗೆ ಅವಳಿಗೆ ಬೇಕಾದುದನ್ನು ಪಡಕೊಂಡು ಬರುವುದು ಅಂತೆಯೇ ಸಂತೆಯಲ್ಲಿ ರಾಜಣ್ಣನ ಅಂಗಡಿಯ ಕಬ್ಬಿನಹಾಲು, ಕಮ್ತಿಯವರ ಹೋಟೇಲಿನ ಚಹಾ ತಿಂಡಿ ಇದನ್ನು ತಪ್ಪಿಸುತ್ತಿರಲೂ ಇಲ್ಲ. ಅದರಲ್ಲೂ ಕಮ್ತಿಯವರ ಮಸಾಲೆ ದೋಸೆ ಎಂದರೆ ಕಮಲಿಗೆ ಮಾತ್ರವಲ್ಲ ಸಂತೆಗೆ ಬರುವ ಎಲ್ಲರಿಗೂ ಬಾಯಲ್ಲಿ ನೀರೂರಿಸುವ ತಿನಿಸೇ ಆಗಿತ್ತು. ಹಾಗೆಯೇ ಅಂಗಡಿ ಸುತ್ತುವುದು ಕೂಡ ಕಮಲಿಗೆ ಬಹಳ ಇಷ್ಟವಾದ ಸಂಗತಿಗಳಾಗಿದ್ದವು. ಇತ್ತೀಚೆಗೆ ಓದು ಬರಹ ಕಲಿತಿದ್ದರಿಂದ ಪುಸ್ತಕದ ಅಂಗಡಿಗಳಿಂದ ಕಥೆ ಪುಸ್ತಕಗಳೊ, ರಂಗೋಲಿ ಪುಸ್ತಕಗಳೊ, ಹಾಡಿನ ಪುಸ್ತಕಗಳೊ ಇವಳ ಸಂಗಾತಿಗಳಾಗಿದ್ದವು. ಅಣ್ಣಂದಿರಾಗಲಿ ತಂದೆ ಸಂಕ್ರೇ ಗೌಡರಾಗಲಿ ಕಮಲಿಯ ಆಸೆಗಳನ್ನು ಈಡೇರಿಸುವಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ.

ಸಾಧಾರಣವಾಗಿ ಸಂತೆಗೆ ಹೋದವರು ಮನೆಗೆ ವಾಪಸು ಬರುವುದು ರಾತ್ರಿಯೇ. ಬೆಳಗ್ಗೆ ಮನೆಯ ಕೆಲಸಗಳನ್ನೆಲ್ಲ ಮಾಡಿ ಹೊರಡುವಾಗಲೇ ಹನ್ನೊಂದು ಗಂಟೆಯಾಗುತ್ತದೆ. ಎರಡರಿಂದ ಐದು ಮೈಲಿಗಳಷ್ಟು ದೂರವಿರುವ ನಾರಾವಿಗೆ ಹೋಗುವಾಗಲೇ ಮಧ್ಯಾಹ್ನವಾಗುವುದರಿಂದ ಮುಂದಿನ ಅರ್ಧ ದಿನ ಸಂತೆಗೆಂದೇ ಮೀಸಲು. ಆದರೆ ಕಮಲಿ ಜತೆಗಿದ್ದರೆ ಗೌಡರ ಮನೆಯವರು ಸಾಯಂಕಾಲದೊಳಗೆ ಮನೆ ಸೇರುವುದು ಕೂಡ ಸಹಜವಾಗಿತ್ತು. ಸಂತೆಗೆ ಹೋಗುವಾಗ ಮತ್ತು ಬರುವಾಗ ತಲೆ ಹೊರೆ ಇದ್ದೇ ಇರುತ್ತಿತ್ತು. ಆದರೆ ಅದು ಅನಿವಾರ್ಯವಾದ್ದರಿಂದ ಯಾರಿಗೂ ಬೇಸರವಾಗಲಿ ಸುಸ್ತಾಗಲಿ ಆಗುತ್ತಿರಲಿಲ್ಲ.

ಅಂತೆಯೇ ರಾಮಯ್ಯ ಗೌಡನಿಗೆ ಕುಡಿತದ ಚಟವಿಲ್ಲದಿದ್ದರೂ ಶನಿವಾರ ಆತನಿಗೆ ಒಂದಷ್ಟು ಬೇಕಾಗುತ್ತದೆ. ಆದರೆ ಅದು ಅಳತೆ ಮೀರದಂತಿರುವುದು ಕೂಡ ಸತ್ಯವೆ. ಆದರೆ ಕಮಲಿ ಜತೆಯಲ್ಲಿದ್ದರೆ ರಾಮಯ್ಯ ಗೌಡ ಸಂತೆಯಿಂದ ನೇರವಾಗಿ ಮನೆಗೆ ಯಾವುದೇ ಕುಡಿತದ ಮೋಹಕ್ಕೆ ಒಳಗಾಗದೆ ಬರುತ್ತಿದ್ದನಾದರೂ ಮನೆಯಲ್ಲಿ ಊಟವಾದ ಮೇಲೆ ಅದನ್ನು ಪೂರೈಸಿಕೊಳ್ಳುತ್ತಿದ್ದ. ಯಾಕೆಂದರೆ ಆಗೊಮ್ಮೆ ಈಗೊಮ್ಮೆ ಕಮಲಿಯನ್ನು ಸಂತೆಯಲ್ಲಿ ಕಂಡವರು ರಾಮಯ್ಯ ಗೌಡನಲ್ಲಿ ಆಕೆಯ ಮದುವೆ ಪ್ರಸ್ತಾಪ ಮಾಡಿದ್ದೂ ಇದೆ. ಆದರೆ ಕಮಲಿಯು ಸದ್ಯ ಮದುವೆಯ ಯೋಚನೆ ತನಗಿಲ್ಲವೆಂದು ಮನೆಯವರಲ್ಲಿ ಖಂಡಿತವಾಗಿ ಹೇಳಿದ್ದರಿಂದ ಅಂತೆಯೇ ಕಮಲಿ ಇನ್ನೂ ಸಣ್ಣವಳೆ ಆದ್ದರಿಂದ ಮನೆಯಲ್ಲೂ ಆಕೆಗೆ ಯಾರೂ ಈ ವಿಷಯದಲ್ಲಿ ಬಲವಂತ ಮಾಡುತ್ತಿರಲಿಲ್ಲ. ಆದರೆ ಮನೆಯವರಿಗೆ ಆಕೆ ಚಿಕ್ಕವಳಾದರೂ ಲೋಕದ ದೃಷ್ಟಿಗೆ ಆಕೆ ಹರೆಯದ ಹೆಣ್ಣು. ಆದ್ದರಿಂದ ಆಕೆಯ ರಕ್ಷಣೆ ತಮ್ಮ ಹೊಣೆಯೆಂದರಿತ ರಾಮಯ್ಯಗೌಡನಾಗಲಿ ಮುತ್ತೇ ಗೌಡನಾಗಲಿ ಕಮಲಿ ತಮ್ಮೊಡನೆ ಇರುವಾಗ ಗಂಭೀರವಾಗಿಯೇ ಇರುತ್ತಿದ್ದರು. ಮಾತ್ರವಲ್ಲ ಅಪರೂಪದ ಕುಡಿತ, ಕೋಳಿ ಅಂಕಕ್ಕೂ ದಾಸರಾಗುತ್ತಿರಲಿಲ್ಲ. ಆದ್ದರಿಂದ ಕಮಲಿಗೂ ಇವರ ಮೇಲೆ ಗೌರವವಿತ್ತು.

ಸಂತೆಯಿಂದ ಬಂದವರು ಹೆಚ್ಚಿನವರು ಮೀನು ತರುತ್ತಿದ್ದುದರಿಂದ ಆ ದಿವಸ ಎಲ್ಲರ ಮನೆಯಲ್ಲೂ ಮೀನಿನ ಭರ್ಜರಿ ಊಟವೇ ತಯಾರಾಗುತ್ತಿತ್ತು. ಆದರೆ ಕಮಲಿ ಹೆಬ್ಬಾರರ ಮನೆಗೆ ಹೋಗುತ್ತಿದ್ದುದರಿಂದ ಅಥವಾ ಬ್ರಾಹ್ಮಣರ ಮನೆಯ ಸಹವಾಸದಿಂದ ಮೀನು ಮಾಂಸದೂಟವೆಂದರೆ ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲ. ಮುಂಚಿನಿಂದಲೂ ಕಮಲಿಗೆ ಸಸ್ಯಾಹಾರದಲ್ಲಿದ್ದಂಥ ಪ್ರೀತಿ ಇತರ ಆಹಾರದಲ್ಲಿರಲಿಲ್ಲ. ಹಿರಿಯರ ಒತ್ತಾಯಕ್ಕೊ ಅಥವಾ ಬೇರೇನೂ ವ್ಯಂಜನಗಳಿಲ್ಲದಿರುವಾಗ ಅನಿವಾರ್ಯವೊ ಎಂಬಂತೆ ಸ್ವೀಕರಿಸುತ್ತಿದ್ದಳಷ್ಟೆ. ಹೆಬ್ಬಾರರ ಮನೆಯಲ್ಲಿಯೂ ವಿನೋದಾ ಅಥವಾ ವಾರಿಜಾ ಕೂಡಾ ಕಮಲಿಯಲ್ಲಿ ತಮಾಷೆಗೆಂದು “ನಿನಗೆ ಮಾಂಸದೂಟ ಇಷ್ಟವೊ ತರಕಾರಿಯೋ” ಎಂದು ಕೇಳಿದಾಗಲೂ ಕಮಲಿ ತನಗೆ ತರಕಾರಿಯೇ ಇಷ್ಟವೆನ್ನುತ್ತಿದ್ದಳು ಮಾತ್ರವಲ್ಲ ನಿಮ್ಮಲ್ಲಿ ಮಾಡುವ ಸಾಂಬಾರು, ಪಲ್ಯ, ಪಾಯಸಗಳೆಂದರೆ ನನಗೆ ಭಾರಿ ಇಷ್ಟವೆಂದು ಹೇಳುತ್ತಿದ್ದಳು. ಇದರಿಂದ ಹೆಬ್ಬಾರರ ಮನೆಯವರಿಗೂ ಕಮಲಿಯಲ್ಲಿ ಒಂದು ಆತ್ಮೀಯತೆ ಉಂಟಾಗಿತ್ತು.

ಇದರ ನಡುವೆ ವಿನೋದಾಳ ಮದುವೆ ಮಾಡುವುದೆಂದು ಹೆಬ್ಬಾರರ ಮನೆಯವರು ನಿಶ್ಚಯಿಸಿದರು. ಹೊಸ್ಮಾರಿಗೆ ಹತ್ತಿರದ ಕೊಪ್ಪಲ ಎಂಬಲ್ಲಿ ಗೋವಿಂದ ಭಟ್ಟರ ಮಗನಾದ ರಾಮಚಂದ್ರ ಭಟ್ಟ ಎನ್ನುವ ಹುಡುಗ. ತೋಟ, ಗದ್ದೆ ಇತ್ಯಾದಿ ಸಮೃದ್ಧಿಯಿಂದ ಕೂಡಿದ ಮನೆತನ. ಮತ್ತೊಂದು ವಿಶೇಷವೆಂದರೆ ಸಂಕ್ರೇ ಗೌಡರ ಮಗಳಾದ ಗುಲಾಬಿಯ ಮನೆಗೆ ಹತ್ತಿರದಲ್ಲೇ ಗೋವಿಂದ ಭಟ್ಟರ ಮನೆಯೂ ಇರುವುದರಿಂದ ಆ ಮನೆಯ ಎಲ್ಲ ವಿಚಾರಗಳೂ ಗುಲಾಬಿಗೆ ಗೊತ್ತಿದ್ದವು. ತವರಿಗೆ ಹೋದಂಥ ಗುಲಾಬಿ ಹೆಬ್ಬಾರರ ಮನೆಗೆ ಹೋಗಿ ಈ ಸಂಬಂಧ ಬಿಡಬೇಡಿ ಬಹಳ ಒಳ್ಳೆಯ ಮನೆತನ. ಮಾತ್ರವಲ್ಲ ಹುಡುಗನೂ ಬಹಳ ಬುದ್ಧಿವಂತನಿದ್ದು ಮನೆ ವಾರ್ತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾನೆ. ಎಂದು ಹೇಳಿದ್ದರಿಂದ ವಿನೋದಾಳ ಮನೆಯವರಿಗೂ ಬಹಳ ಧೈರ್ಯದ ಜತೆಗೆ ಖುಷಿಯೂ ಆಗಿತ್ತು.
****************************
————————————————————————————————————————————————————————————————————–

ಅಳಂಬ… ೧೦
*************
“ನನಗೆ ಬಹಳ ಖುಷಿಯಾಗುತ್ತಿದೆ ಅಣ್ಣ. ಆದರೆ ಅಪ್ಪನಲ್ಲೊಂದು ಮಾತು ಕೇಳಬೇಕು ತಾನೆ”

“ಅದರ ಬಗ್ಗೆ ಯೋಚನೆ ಬೇಡ ಕಮ್ಲಿ. ಅವರು ಅದಕ್ಕೆಲ್ಲ ಖಂಡಿತ ಬೇಡವೆನ್ನಲಾರರು. ಹಾಗೊಂದು ವೇಳೆ ಹೇಳಿದರೆ ನಾನೆ ಒಪ್ಪಿಸುತ್ತೇನೆ”

ಎಂದಾಗ ಕಮಲಿಗೆ ಹೊಸ ಆತ್ಮವಿಶ್ವಾಸ ಮೂಡಿ ತನ್ನ ಜೀವನದಲ್ಲಿ ಏನೋ ಒಂದು ಹೊಸತನ ಉಂಟಾಗುತ್ತಿದೆ ಎಂದು ಸುಪ್ತ ಪ್ರಜ್ಞೆಯೊಂದು ನುಡಿದಂತಾಗಿತ್ತು.

ಅಷ್ಟರಲ್ಲಿ ಮುತ್ತೇ ಗೌಡನ ಜತೆಗೆ ಸಂಕ್ರೇ ಗೌಡರೂ ಮನೆ ಸೇರಿದರು. ಹೆಬ್ಬಾರರಲ್ಲಿ ಹೇಳಿದ ವಿಚಾರಗಳು ಅವರ ಕಿವಿಗೂ ಬಿತ್ತು. ಕಮಲಿ ವಿದ್ಯೆ ಕಲಿಯಬಹುದೆಂಬ ಕಲ್ಪನೆಯೇ ಸಂಕ್ರೇ ಗೌಡರ ಜತೆ ಸುಂದ್ರಿಗೂ ಬಹಳ ಆನಂದದಾಯಕವೇ ಆಗಿತ್ತು. ಕಮಲಿಗಂತು ತಾನು ಬಾಲ್ಯದಲ್ಲಿ ಕಳಕೊಂಡದ್ದನ್ನು ಈ ರೀತಿಯಾಗಿ ಪಡೆಯಬಹುದೆಂಬ ಕಲ್ಪನೆಗೂ ಸಿಗದ ವಿಷಯಕ್ಕೆ ದೇವರ ಕರುಣೆಯೇ ಕಾರಣವೆಂದು ಅಂದುಕೊಂಡಳು.

ಮರುದಿವಸದಿಂದಲೇ ಕಮಲಿ ಅಣ್ಣ ರಾಮಯ್ಯ ಜತೆ ಹೆಬ್ಬಾರರ ಮನೆಗೆ ಹೋಗಲು ಪ್ರಾರಂಭಿಸಿದಳು. ಮನದಲ್ಲಿ ಏನೋ ಭೀತಿ, ಕುತೂಹಲದ ಜತೆಗೆ ಅದು ಹೇಗೆ ಅಕ್ಷರ-ಒದು ಕಲಿಯುವುದು ಎಂಬುದೆ ಮನಸ್ಸು ಯೋಚಿಸುತ್ತಿತ್ತು. ಜತೆಗೆ ತನಗಿಂತ ಹಿರಿಯರಾದ ವಿನೋದಕ್ಕ ನನ್ನಷ್ಟೇ ಪ್ರಾಯದ ವಾರಿಜಾ ಇದುವರೆಗೆ ತನ್ನೊಡನೆ ಸಲುಗೆಯಿಂದಿದ್ದರೆ ಇನ್ನು ಹೇಗೆ ವರ್ತಿಸಬೇಕು, ಹೆಬ್ಬಾರರ ಮನೆಯಲ್ಲಿ ನಿತ್ಯವೂ ಊಟ ತಿಂಡಿ ಮಾಡುವಾಗ ಮುಜುಗರವಾಗದೆ, ಬೆಳಗ್ಗಿನಿಂದ ಸಂಜೆವರೆಗೂ ಪಾಠವಿರುತ್ತದೊ, ಒಂದು ವೇಳೆ ಪಾಠವಿಲ್ಲದ ಸಮಯ ತಾನು ಹೇಗೆ ಕಳೆಯಬೇಕು.. ಹೀಗೆ ಅನೇಕ ಗೊಂದಲಗಳ ಜತೆಗೆ ಕಮಲಿ ಹೆಬ್ಬಾರರ ಮನೆಗೆ ಪ್ರವೇಶಿಸಿದಳು.

ರಾಮಯ್ಯ ಗೌಡ ಕಾರ್ತಿಕನ ಜತೆ ಕೆಲಸಕ್ಕೆ ಹೋದರೆ ಕಮಲಿ ಮನೆಯೊಳಗೆ ಹೋದಳು. ಮಿತ್ರವಿಂದಾರನ್ನು ನೋಡಿ ಕಮಲಿ ಅನುಮಾನದಿಂದ ಚಾವಡಿಗೆ ಹೋದರೆ

“ಬಾಮ್ಮ ಕಮಲಿ ಕೂತುಕೊಳ್ಳು”

ಎಂದು ಬೆಂಚನ್ನು ತೋರಿಸಿದಾಗ ಕಮಲಿ ಸಂಕೋಚದಿಂದ ಬೆಂಚಿನ ಮೂಲೆಯಲ್ಲಿ ಕುಳಿತು ಕೊಂಡಳು. ಅಷ್ಟರಲ್ಲಿ ವಿನೋದಾ ಬಂದು ಕಮಲಿಗೆ ಮುಂದಿನ ಕಲಿಕೆ ಯಾವ ರೀತಿ, ಪುಸ್ತಕ ಪೆನ್ಸಿಲಿನ ಬಳಕೆ ಹೇಗೆ, ಅಕ್ಷರಾಭ್ಯಾಸ ಮಾಡುವುದು ಹೇಗೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿ ಜತೆಗೆ ಮನಸ್ಸಿಗೆ ಧೈರ್ಯ ತುಂಬಿಸಿ ಅಂದಿನ ಪಾಠ ಪ್ರಾರಂಭಿಸಿದಳು.

ವಿನೋದಾಳಿಗೆ ಹದಿನೆಂಟು ವಯಸ್ಸಾದರೆ ಹದಿನಾರರ ವಾರಿಜಾ ಮತ್ತು ಕಮಲಿ ಒಂದೇ ಪ್ರಾಯದವರು. ಆದ್ದರಿಂದ ಅವರೊಳಗೆ ಸಹಜವಾದ ಗೆಳೆತನವೂ ಇತ್ತು. ವಾರಕ್ಕೆ ನಾಲ್ಕೈದು ದಿನ ಕಮಲಿ ಹೆಬ್ಬಾರರ ಮನೆಗೆ ಬಂದು ಓದು ಬರಹ ಕಲಿಯುವುದರಲ್ಲಿ ಮಗ್ನಳಾಗುತ್ತಿದ್ದಳು. ಆದರೆ ಆಕೆಯಲ್ಲಿ ಸ್ವಾಭಿಮಾನವೂ ಬಹಳಷ್ಟಿತ್ತು. ತಾನು ವಿದ್ಯೆ ಕಲಿಯುವ ನೆಪದಲ್ಲಿ ಹೆಬ್ಬಾರರ ಮನೆಯಲ್ಲಿ ಊಟ ತಿಂಡಿಯನ್ನು ಮಾಡುವಾಗ ತಾನು ಅವರಿಗೆ ಹೊರೆಯಾಬಾರದೆಂಬ ಪ್ರಜ್ಞೆಯೂ ಇತ್ತು. ಅದಕ್ಕಾಗಿ ಹೆಬ್ಬಾರರ ಮನೆಯಲ್ಲಿ ಕಲಿಕೆಯ ವೇಳೆಯ ಹೊರತಾಗಿ ಇದ್ದಂಥ ಸಮಯದಲ್ಲಿ ಹೆಬ್ಬಾರಮ್ಮನಿಗೆ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದಳು. ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು.. ಇತ್ಯಾದಿ. ಹೆಬ್ಬಾರರ ಮನೆಯವರು ಇದನ್ನೆಲ್ಲ ಹೇಳದಿದ್ದರೂ ಕಮಲಿ ತಾನೆ ಇದರಲ್ಲಿ ತೊಡಗಿಕೊಳ್ಳುತ್ತಿದ್ದಳು. ಹೀಗೆ ಮುಂದುವರಿದಿತ್ತು ಕಮಲಿಯ ವಿದ್ಯಾಭ್ಯಾಸ.

ದಿವಸಗಳು ಮುಂದೆ ಹೋದಂತೆ ಓದು ಬರಹ ಕಲಿಯುವ ಹುಮ್ಮಸ್ಸು ಕಮಲಿಗೆ ಹೆಚ್ಚುತ್ತಿತ್ತೇ ಹೊರತು ಉದಾಸೀನವಾಗುತ್ತಿರಲಿಲ್ಲ. ಸಾಧಾರಣ ಒಂದು ವರ್ಷದಷ್ಟು ಕಾಲದಿಂದ ಹೆಬ್ಬಾರರ ಮನೆಗೆ ಬರುತ್ತಿದ್ದ ಕಮಲಿಗೆ ಒಂದು ಹಂತದ ಅಕ್ಷರಾಭ್ಯಾಸದ ಜತೆಗೆ ಒಂದಷ್ಟು ವಾಕ್ಯಗಳನ್ನು ಜೋಡಿಸಿ ಓದುವಷ್ಟು ಜ್ಞಾನ ಬಂದಿತ್ತು. ಇದೇ ರೀತಿ ಇನ್ನೂ ಒಂದೆರಡು ವರ್ಷಗಳು ಸಾಧನೆ ಮಾಡಿದರೆ ಸಣ್ಣ ಸಣ್ಣ ಪುಸ್ತಕಗಳನ್ನು ಓದಬಹುದೆಂಬ ಧೈರ್ಯವೂ ಕಮಲಿಗೆ ಬಂದಾಗ ಬದುಕು ಅದೆಷ್ಟು ಸುಂದರ ಎಂದೆನಿಸಿತ್ತು. ಮಾತ್ರವಲ್ಲ ಕಮಲಿಯು ಬುದ್ಧಿವಂತಳಾದ್ದರಿಂದ ಬ್ರಾಹ್ಮಣರ ಮನೆಗಳಿಗೂ ತಮ್ಮ ಮನೆಗೂ ಇರುವ ಅಗಾಧ ವ್ಯತ್ಯಾಸಗಳ ಅರಿವೂ ಆಗಿತ್ತು. ಅನುಕೂಲದಲ್ಲಿ ತಮಗಿಂತಲೂ ಕಡಿಮೆ ಆದಾಯವಿರುವ ಬ್ರಾಹ್ಮಣರ ಮನೆತನಗಳು ತಮಗಿಂತಲೂ ಶಿಸ್ತು ಬದ್ಧವಾಗಿರುವುದು ಹೇಗೆಂಬ ಸೂಕ್ಷ್ಮವನ್ನೂ ಕಮಲಿಯು ಗುರುತಿಸಿದ್ದಳು. ಮಾತ್ರವಲ್ಲ ಇದೆಲ್ಲದಕ್ಕೂ ವಿದ್ಯೆಯೇ ಕಾರಣವೆಂಬ ಸತ್ಯವೂ ಆಕೆಗೆ ತಿಳಿದಿತ್ತು. ಆದ್ದರಿಂದ ತಾನು ಕೂಡ ವಿದ್ಯೆ ಕಲಿತು ಇಂಥ ಸಂಸ್ಕಾರಗಳನ್ನು ಜೀವನದಲ್ಲಿ ಸಾಧ್ಯವಾದಷ್ಟು ಅಳವಡಿಸಿಕೊಂಡರೆ ಹೇಗಿರಬಹುದು ಎಂದು ಕಲ್ಪಿಸಿಕೊಂಡಾಗ ಕಮಲಿಗೆ ಮನದೊಳಗೆ ಅದೆಂಥದೊ ಸುಖದ ಅನುಭವವಾಗಿತ್ತು.

Advertisement:

ನೆಲ್ಲಿತಡ್ಕದಲ್ಲಿರುವ ಬ್ರಾಹ್ಮಣರ ಮನೆಗಳು ಬರಿದೆ ಆರು ಮಾತ್ರ. ಅದರಲ್ಲಿ ಗಣೇಶ ಹೆಬ್ಬಾರರದ್ದು ಮೂಲ ಮನೆ. ಇವರು ಮಹಾರಾಷ್ಟ್ರದಿಂದ ವಲಸೆ ಬಂದವರಾದರೂ ಸ್ಥಳೀಯರೊಂದಿಗೆ ಬೆರೆತು ಒಂದೇ ಮನೆಯಾಗಿದ್ದಲ್ಲಿಂದ ಐದು ಮನೆಗೆ ವಿಸ್ತಾರಗೊಂಡು ನೆಲ್ಲಿತಡ್ಕ ಎಂಬುದು ಬ್ರಾಹ್ಮಣರೇ ಹೆಚ್ಚಿರುವ ವಠಾರವಾಯಿತು. ಹಾಗೆಂದು ಇತರರು ಯಾರೂ ಇರಲಿಲ್ಲವೆಂದಲ್ಲ. ಒಂದೇ ಕೂಗಳತೆಯಲ್ಲಿ ಮಟ್ಕ್ಯೆ ಎಂಬಲ್ಲಿ ನಾಲ್ಕೈದು ಮನೆಗಳ ಗುಂಪು ಇದ್ದರೆ ನೆಲ್ಲಿತಡ್ಕದಲ್ಲೇ ಎರಡು ಮನೆ ಬಿಲ್ಲವರದ್ದೂ ಇದ್ದವು. ಸುತ್ತ ಮುತ್ತ ಇತರ ಬ್ರಾಹ್ಮಣರ ಮನೆಗಳಿಲ್ಲದ್ದರಿಂದ ಬ್ರಾಹ್ಮಣೇತರರು ನಾಗ-ಭೂತಾರಾಧನೆ ಮುಂತಾದ ದೇವತಾ ಕಾರ್ಯಕ್ರಮಗಳ ಪೂಜೆ ಪನಸ್ಕಾರಗಳಿಗೆ ಚಿತ್ಪಾವನ ಬ್ರಾಹ್ಮಣರನ್ನೇ ಆಶ್ರಯಿಸಿದ್ದರಿಂದ ನೆಲ್ಲಿತಡ್ಕದ ಬ್ರಾಹ್ಮಣರಿಗೆ ಅದ್ಯಾವ ಕಾಲದಲ್ಲೊ ಹೆಬ್ಬಾರರೆಂಬ ಪಟ್ಟ ಬಂದಿತ್ತು. ಅಂದಿನಿಂದ ಇಂದಿನವರೆಗೂ ಇಲ್ಲಿರುವ ಎಲ್ಲ ಕುಟುಂಬಗಳೂ ಹೆಬ್ಬಾರರೆಂದೇ ಪ್ರಖ್ಯಾತಿ. ಸಾಧಾರಣ ಇಪ್ಪತ್ತೈದು ಏಕರೆಯಷ್ಟು ವಿಸ್ತಾರವಾದ ಕೃಷಿಗೆ ಯೋಗ್ಯವಾದ, ನೀರಿನಿಂದ ಸಮೃದ್ಧಿಯಾದ ತೋಟ ಅಥವಾ ಭತ್ತದ ಗದ್ದೆಗಳಿಗೆ ಸುತ್ತಲೂ ಹೊರ ಆವರಣದಲ್ಲಿ ಈ ಮನೆಗಳಿದ್ದವು. ಪ್ರತಿಯೊಂದು ಮನೆಯೂ ಒಂದಕ್ಕೊಂದು ಕಾಣುವಷ್ಟು ಹತ್ತಿರವಿದ್ದುದರಿಂದ ಯಾರಿಗೂ ತಮ್ಮ ಮನೆ ಒಂಟಿಯೆಂದೆನಿಸುತ್ತಿರಲಿಲ್ಲ. ಆದರೆ ಸುತ್ತಲೂ ಕಾಡು ಇದ್ದುದರಿಂದ ಸಹಜವಾಗಿ ಒಂದಷ್ಟು ಕಾಡು ಪ್ರಾಣಿಗಳ ಭಯ ಇದ್ದೇ ಇರುತ್ತಿತ್ತು. ಅದರ ಹೊರತು ಭದ್ರತೆಗೆ ಯಾವ ಕೊರತೆಯೂ ಇರದ ಸುಂದರ ಬದುಕಿಗೆ ಸಾಕ್ಷಿಯಾದ ಹಳ್ಳಿಯೇ ಈ ನೆಲ್ಲಿತಡ್ಕ. ಓದಿ.. ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ.. ಮುಂದೆ ಇನ್ನೂ ಇದೆ..
*****************************

ಅಳಂಬ.. ೯
**********
ಅದು ಹೇಗೋ ಹೆಬ್ಬಾರರ ಮಕ್ಕಳಾದ ವಾರಿಜಾ ಮತ್ತು ವಿನೋದಾಳಿಗೆ ಈ ವಿಷಯ ತಿಳಿದಾಗ ಹೌದಲ್ಲ ಕಮಲಿಯ ಆಸೆಯನ್ನು ನಾವ್ಯಾಕೆ ತೀರಿಸಬಾರದು ಎಂದು ಅಂದುಕೊಂಡರು. ಅಂತೆಯೇ ಸೋದರಿಯರಿಬ್ಬರೂ ಮಾತಾಡಿಕೊಂಡು ಒಂದು ದಿನ ಅಮ್ಮನಲ್ಲಿ

“ಅಮ್ಮ.. ಸಂಕ್ರೇ ಗೌಡರ ಮಗಳು ಕಮಲಿ ಇದ್ದಾಳಲ್ಲ ಅವಳಿಗೆ ಶಾಲೆಗೆ ಹೋಗಬೇಕೆಂದು ಬಹಳ ಆಸೆ ಇದೆಯಂತೆ ರಾಮಯ್ಯ ಗೌಡ್ರು ಮೊನ್ನೆ ಅಡಿಕೆ ಕೊಯ್ಲಿಗೆ ಬಂದವರು ಹೇಳಿದರು. ಪಾಪ ಅವಳ ಆಸೆಯನ್ನು ಹೇಗೆ ತೀರಿಸುವುದೆಂದು ನಾವು ಮಾತಾಡಿಕೊಂಡು ಒಂದು ತೀರ್ಮಾನಕ್ಕೆ ಬಂದಿದ್ದೇವೆ ನೀವು ಹೂಂ ಎಂದರೆ ಹೇಳುತ್ತೇವೆ”

ಎಂದಾಗ ಮಿತ್ರವಿಂದಾ

“ಹೇಳಿ ಮಕ್ಕಳೆ ಸಂಕ್ರೇ ಗೌಡರಾಗಲಿ ಅಥವಾ ಅವರ ಮನೆಯವರಾಗಲಿ ನಮಗೆ ಭೇದವೆಲ್ಲಿದೆ? ಹೇಳಿ ಮಕ್ಕಳೆ ನಮ್ಮಿಂದ ಏನು ಸಹಾಯ ಆಗುವುದೊ ಅದನ್ನು ಮಾಡುವ”

ಎಂದು ಹೇಳಿದರು.

“ಏನಿಲ್ಲ.. ಹೇಗೂ ಬೆಳಗ್ಗೆ ಸಂಕ್ರೇ ಗೌಡರಾಗಲಿ ರಾಮಯ್ಯ ಗೌಡರಾಗಲಿ ನಮ್ಮ ವಠಾರಕ್ಕೆ ಕೆಲಸಕ್ಕೆ ಬರುತ್ತಾರೆ. ಯಾರ ಮನೆಗೆ ಬಂದರೂ ನಮ್ಮ ಮನೆಗೆ ಹತ್ತಿರವೇ ಇದೆ ತಾನೆ. ಅವರ ಜತೆ ಕಮಲಿ ಬಂದರೆ ನಮ್ಮಿಂದ ಸಾಧ್ಯವಾದಷ್ಟು ಅಥವಾ ಕಮಲಿಗೆ ಉತ್ಸಾಹ ಇದ್ದಷ್ಟು ಕಾಲ ಅಕ್ಷರಾಭ್ಯಾಸ, ಓದು ಬರಹ ಮುಂತಾದ ವಿಷಯಗಳನ್ನು ಕಲಿಸಬಹುದು ತಾನೆ. ಪಾಪ ಅವಳಿಗೆ ವಿದ್ಯೆ ಕಲಿಯುವ ಹಸಿವಿರುವಾಗ ನಮ್ಮಿಂದ ಕೂಡಿದ ಪಾಠ ಮಾಡಿದರೆ ಹೇಗೆ”

ಎಂದು ಮಕ್ಕಳು ತಮ್ಮ ಅಭಿಪ್ರಾಯ ತಿಳಿಸಿದರು.

“ಯಾರು ಬೇಡವೆನ್ನುತ್ತಾರೆ ಮಕ್ಕಳೆ. ಅವಳೂ ನಿಮ್ಮಂತೆಯೆ ಹುಡುಗಿ ತಾನೆ. ನಿಮ್ಮಂತೆ ಆಸೆ ಆಕಾಂಕ್ಷೆಗಳು ಅವಳಿಗಿದ್ದರೆ ಅದು ಸಹಜವಷ್ಟೆ. ಖಂಡಿತ ಬರಲಿ. ವಿದ್ಯೆಯನ್ನು ಕಲಿಸುವ ಅವಕಾಶ ಎಲ್ಲರಿಗೂ ಸಿಗಲಾರದು. ನಿಮ್ಮಿಂದಾಗಿ ಒಂದು ಹೆಣ್ಣು ಮಗು ವಿದ್ಯೆ ಕಲಿತು ಜಾಣೆಯಾದರೆ ನಮಗೂ ಹೆಮ್ಮೆಯೇ.”

ಎಂದು ಮಿತ್ರವಿಂದಾ ಹೇಳುವಾಗ ವಿನೋದಾ ವಾರಿಜಾಳಿಗೂ ಭಾರಿ ಖುಷಿಯಾಗಿತ್ತು. ಅಂತೆಯೇ ಮರುದಿವಸ ರಾಮಯ್ಯ ಗೌಡ ತೋಟದ ಕೆಲಸಕ್ಕೆ ಬಂದಾಗ ಮಿತ್ರವಿಂದಾ

“ರಾಮಯ್ಯ ನಿನ್ನ ತಂಗಿಗೆ ಕಲಿಯಬೇಕೆಂಬ ಆಸೆ ಇದೆ ಎಂದು ಹೇಳಿದ್ದಿಯಲ್ಲ. ಅದಕ್ಕಾಗಿ ಒಂದು ವ್ಯವಸ್ಥೆ ಇದೆ. ಅದೇನೆಂದರೆ ನೀನು ನಿತ್ಯವೂ ಕೆಲಸಕ್ಕೆ ಬರುವಾಗ ಕಮಲಿಯನ್ನು ಜತೆಗೆ ಕರಕೊಂಡು ಬಾ. ಒಂದು ವೇಳೆ ನಿತ್ಯ ಆಗದಿದ್ದರೆ ಪುರುಸೊತ್ತಿದ್ದ ದಿನಗಳಲ್ಲಿ ಬಂದರೂ ಸಾಕು. ವಿನೋದಾ ಅಥವಾ ವಾರಿಜಾ ಇವರಲ್ಲಿ ಯಾರಾದರೊಬ್ಬರು ಕಮಲಿಗೆ ಅಕ್ಷರಾಭ್ಯಾಸ ಮಾಡಿಸಿ ಓದು ಬರಹ ಬರುವಲ್ಲಿವರೆಗೆ ಕಲಿಸುತ್ತಾರೆ. ಬೇಡವೆನ್ನಬೇಡ ಆ ಮಗುವಿನ ಸಣ್ಣ ಆಸೆಯನ್ನು ನಾವೆಲ್ಲ ಸೇರಿ ನೆರವೇರಿಸೋಣ”

ಎಂದಾಗ ರಾಮಯ್ಯ ಗೌಡನಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ.

“ಅಮ್ಮ ನನಗೆ ಏನು ಹೇಳಬೇಕೆಂದೇ ತಿಳಿಯುವುದಿಲ್ಲ. ನೀವು ಅಷ್ಟು ಹೇಳುವಾಗ ಬೇಡವೆನ್ನಲೂ ಆಗದು. ನೋಡೋಣ ಕಮಲಿ ಒಪ್ಪಿದರೆ ನಮ್ಮಿಂದೇನೂ ಅಭ್ಯಂತರವಿಲ್ಲ. ಅಪ್ಪನೂ ಬೇಡವೆನ್ನಲಿಕ್ಕಿಲ್ಲ. ನಮ್ಮಲ್ಲಿ ಯಾರಿಗೂ ವಿದ್ಯಾಭ್ಯಾಸದ ಯೋಗವಿಲ್ಲ. ಕಮಲಿಯಾದರೂ ಕಲಿಯಲಿ. ನನಗಂತು ಬಹಳ ಸಂತೋಷವೆ.”

ಎಂದು ಹೊಸ ಹುರುಪಿನೊಂದಿಗೆ ರಾಮಯ್ಯ ಗೌಡ ತೋಟದ ಕಡೆ ಹೊರಟನು.

ರಾಮಯ್ಯ ಗೌಡ ಕೆಲಸ ಬಿಟ್ಟು ಮನೆಗೆ ಹೋದವನೆ ಕಮಲಿಯನ್ನು ಹತ್ತಿರ ಕರೆದನು.

“ಏನಣ್ಣ ಏನಾದರು ತಿಂಡಿ ತಂದೆಯಾ”

ಎಂದು ಅಣ್ಣನ ಬಳಿಗೆ ಬಂದು ಚೀಲ ಹುಡುಕಾಡತೊಡಗಿದಳು. ಯಾಕೆಂದರೆ ಹೆಬ್ಬಾರರ ಮನೆಯಲ್ಲಾಗಲಿ ವಠಾರದ ಯಾರ ಮನೆಗಳೇ ಆಗಲಿ ಏನಾದರು ವಿಶೇಷವಿದ್ದಾಗ ಸಂಕ್ರೇ ಗೌಡರ ಮನೆಗೆ ಒಂದು ಪಾಲು ಇದ್ದೇ ಇರುತ್ತಿತ್ತು. ಆದ್ದರಿಂದ ವಾರದಲ್ಲಿ ಒಂದೆರಡು ದಿನವಾದರೂ ಕಮಲಿಗೆ ಬ್ರಾಹ್ಮಣರ ಮನೆಯ ತಿಂಡಿ ತಿನಿಸುಗಳ ಸವಿಯು ಸಿಗುತ್ತಿತ್ತು ಮಾತ್ರವಲ್ಲ ಅದಕ್ಕಾಗಿ ಅವಳು ಕಾದುಕೊಂಡೂ ಇರುತ್ತಿದ್ದಳು. ಅಂತೆಯೇ ಸಂಕ್ರೇ ಗೌಡರ ಮನೆಯಲ್ಲಿ ಕಮಲಿಯು ಎಲ್ಲರಿಗಿಂತ ಸಣ್ಣವಳಾದ್ದರಿಂದ ಎಲ್ಲರ ಮುದ್ದಿನ ಕೂಸಾಗಿದ್ದಳು. ಯಾವುದೇ ವಿಷಯದಲ್ಲಿ ಅವಳಿಗೆ ಯಾರು ಕೂಡ ಬೇಸರ ಬರುವಂತೆ ವರ್ತಿಸುತ್ತಿರಲಿಲ್ಲ. ಅದಕ್ಕೆ ತಕ್ಕಂತೆ ಕಮಲಿ ಕೂಡ ಬಹಳ ಗುಣವಂತೆಯಾಗಿದ್ದಳು. ಯಾರೊಂದಿಗೂ ಸಿಡುಕದೆ ಎಲ್ಲರಿಗೂ ಎಲ್ಲ ಕೆಲಸಗಳಲ್ಲೂ ಸಹಾಯ ಮಾಡುತ್ತ ಮನೆಗೊಂದು ಶೋಭೆಯಂತಿದ್ದಳು. ಅದಕ್ಕಾಗಿ ಎಲ್ಲರೂ ಆಕೆಯೊಂದಿಗೆ ಆತ್ಮೀಯವಾದ ಸಲುಗೆಯೊಂದಿಗೆ ರೇಗಿಸುತ್ತ, ತಮಾಷೆ ಮಾಡುತ್ತ, ಕೀಟಲೆ ಕೊಡುತ್ತ ಇರುತ್ತಿದ್ದರು. ಆದರೆ ಅದರಿಂದ ಕಮಲಿಗೆ ಖುಷಿಯಾಗುತ್ತಿತ್ತೇ ಹೊರತು ಯಾರೊಡನೆಯೂ ಬೇಸರಿಸುತ್ತಿರಲಿಲ್ಲ.

ಚೀಲದಲ್ಲಿ ಎಲೆ ಅಡಿಕೆಯ ಪೆಟ್ಟಿಗೆಯ ಹೊರತು ಏನೂ ಇರಲಿಲ್ಲ. ಆದನ್ನು ಅಲ್ಲಿಗೇ ಕುಕ್ಕಿ

“ತಿಂಡಿಯೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ. ಮತ್ಯಾಕೆ ಕರೆದದ್ದು”

ಎಂದು ಅಣ್ಣನ ಬೆನ್ನಿಗೊಂದು ಗುದ್ದು ಕೊಟ್ಟು ಹೊರಡಲನುವಾದಾಗ

“ಕಮ್ಲಿ ಎಲ್ಲಿಗೆ ಓಡುತ್ತಿ ಬಾ ಇಲ್ಲಿ ನಿನಗೊಂದು ಶುಭ ಸಮಾಚಾರ ಹೇಳಲಿಕ್ಕಿದೆ”

ಎಂದು ಕಮಲಿಯ ಕೈ ಹಿಡಿದು ಜಗಲಿಯ ಪಕ್ಕದಲ್ಲೇ ಕೂರಿಸಿಕೊಂಡ

“ಶುಭ ಸಮಾಚಾರ.. ಏನೋ ಅದು”

“ನಿನಗೆ ಶಾಲೆಗೆ ಸೇರಿಸೋಣವೆಂದು ಅಂದುಕೊಂಡಿದ್ದೇನೆ.. ಹೇಗೆ?”

“ಹೋಗಣ್ಣ ಶಾಲೆಗೆ ಹೋಗುವ ಪ್ರಾಯದಲ್ಲಿ ಹೋಗಲಾಗಲಿಲ್ಲ. ಈಗ ತಮಾಷೆ ಮಾಡುತ್ತೀಯ..”

“ತಮಾಷೆ ಅಲ್ಲ ಕಮ್ಲಿ. ನಿನಗೆ ಓದು ಬರಹ ಕಲಿಯುವ ಮನಸ್ಸು ಇನ್ನೂ ಇದ್ದರೆ ಅದಕ್ಕೊಂದು ವ್ಯವಸ್ಥೆ ಇದೆ”

ಇಷ್ಟು ಹೇಳುವಾಗ ಕಮಲಿಗೆ ತನ್ನಲ್ಲಿ ಸುಪ್ತವಾಗಿದ್ದ ಆಸೆಗೆ ನೀರೆರೆಚಿದಂತಾಗಿ ಅದು ಚಿಗುರೊಡೆಯಬಹುದೆ ಎಂಬ ಸಂಶಯವೂ ಬಲವಾಗತೊಡಗಿತು.

“ಕುತೂಹಲ ಹೆಚ್ಚಿಸಬೇಡ ಬೇಗನೆ ಹೇಳಿಬಿಡು”

ಎಂದು ಕಮಲಿ ಚಡಪಡಿಸಿದಾಗ

“ಶಾಲೆಯೂ ಇಲ್ಲ ಏನೂ ಇಲ್ಲ ತಮಾಷೆಗೆ ಹೇಳಿದೆ. ಆದರೆ ನಿರಾಶಳಾಗಬೇಡ ಹೆಬ್ಬಾರರ ಮನೆಗೆ ಇಂದು ಕೆಲಸಕ್ಕೆ ಹೋಗಿದ್ದೆ. ನಿನಗೆ ವಿದ್ಯೆ ಕಲಿಯುವ ಆಸೆ ಬಹಳಷ್ಟಿದೆ ಎಂದು ನಾನು ಯಾವತ್ತೋ ಒಂದು ದಿನ ಹೆಬ್ಬಾರಮ್ಮನಲ್ಲಿ ಹೇಳಿದ್ದೆ. ಇವತ್ತು ನನ್ನನ್ನು ಕಂಡವರೆ ಹೆಬ್ಬಾರಮ್ಮ ‘ಕಮಲಿಗೆ ನನ್ನ ಮಕ್ಕಳು ಓದು ಬರಹ ಕಲಿಸಬೇಕೆಂದುಕೊಂಡಿದ್ದಾರೆ ಆದ್ದರಿಂದ ನೀನು ಕೆಲಸಕ್ಕೆ ಬರುವಾಗ ಕರಕೊಂಡು ಬಾ. ಮತ್ತೆ ನಿನ್ನೊಡನೆಯೇ ವಾಪಸು ಹೋಗಬಹುದು
ಊಟ ತಿಂಡಿ ಎಲ್ಲ ನಮ್ಮಲ್ಲೇ ಆಗುತ್ತದೆ. ಅದರ ಬಗ್ಗೆ ಯೋಚಿಸಬೇಡ.’ ಎಂದು ಹೇಳಿದರು. ನನಗಾದರೊ ಬಹಳ ಖುಷಿಯಾಗಿತ್ತು. ನಿನ್ನಲ್ಲಿ ಕೇಳಿ ನಾಳೆ ಹೇಳುತ್ತೇನೆ ಎಂದು ಮಾತು ಕೊಟ್ಟು ಬಂದಿದ್ದೇನೆ. ಇನ್ನು ನಿನ್ನ ನಿರ್ಧಾರ”

ಎಂದು ಹೇಳಿ ರಾಮಯ್ಯ ಗೌಡ ಕಮಲಿಯ ಮುಖವನ್ನು ನೋಡಿದನು. ಕಮಲಿಗಾದರೊ ಇದು ಕನಸೊ ಅಥವಾ ವಾಸ್ತವವೊ ಎಂದೇ ತಿಳಿಯಲಿಲ್ಲ. ನನ್ನ ಜೀವನದಲ್ಲಿ ಹೊಸ ಯುಗ ಪ್ರಾರಂಭವಾದ ಅನುಭವದೊಂದಿಗೆ ಕೂಡಲೆ ತನ್ನ ಒಪ್ಪಿಗೆಯನ್ನು ಕೊಟ್ಟಳು ಕಮಲಿ… ಓದಿ.. ಪ್ರೋತ್ಸಾಹಿಸಿ.. ಪ್ರತಿಕ್ರಿಯಿಸಿ.. ಮುಂದೆ ಇನ್ನೂ ಇದೆ..
***************************
————————————————————————

ಅಳಂಬ.. ೭
*****


ಹುಲಿ ಕಾಣೆಯಾದ ಪ್ರಕರಣ ನಡೆದು ವರುಷ ಎರಡಾದರೂ ಒಂದಿಷ್ಟೂ ಸುಳಿವು ತಿಳಿಯದಿದ್ದುದರಿಂದ ಇದರ ತೀವ್ರತೆ ಕಡಿಮೆಯಾದರೂ ಒಳಗಿಂದೊಳಗೆ ಅನ್ವೇಷಣೆಯು ಯಾರಿಗೂ ತಿಳಿಯದೆ ಮುಂದುವರಿದಿತ್ತು. ಇತ್ತ ಗಣೇಶ ಹೆಬ್ಬಾರರ ಕೊನೆಯ ಮಗನಾದ ಪ್ರಕಾಶನ ವಿದ್ಯಾಭ್ಯಾಸವೂ ಮುಗಿದಿತ್ತು. ಆದರೆ ಆತನಿಗೆ ಮನೆಯಲ್ಲಿ ವಿದ್ಯೆ ಇಲ್ಲದೆ ಕೂರುವಲ್ಲಿ ಮನಸ್ಸಿರಲಿಲ್ಲ. ತಾನು ಏನಾದರೊಂದು ಸಾಧನೆ ಮಾಡಬೇಕು ಮತ್ತು ಮನೆಗೆ ಸಹಾಯಕನಾಗಬೇಕೆಂಬ ಹಂಬಲವಿತ್ತು. ಆದರೆ ಏನು ಮಾಡಬೇಕೆನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ವ್ಯಾಪಾರ ಮಾಡಲು ಬಂಡವಾಳ, ಅನುಭವದ ಕೊರತೆ. ಹೊಸತಾದ ಜಮೀನು ಕೊಳ್ಳಲು ಉತ್ತಮವಲ್ಲದ ಆರ್ಥಿಕ ಸ್ಥಿತಿ. ಸಂಗೀತ ಸಾಹಿತ್ಯದ ಬಗ್ಗೆ ಒಲವಿದ್ದರೂ ಅನ್ನ ಕೊಡುವಲ್ಲಿ ಅದು ಪ್ರಯೋಜನವಿಲ್ಲವೆಂಬ ಭಾವ ಅಥವಾ ವರ್ತಮಾನದ ವಾಸ್ತವ. ಹೋಟೇಲು-ಅಂಗಡಿ ಮಾಡೋಣವೆಂದರೆ ನೆಲ್ಲಿತಡ್ಕದಂಥ ಹಳ್ಳಿಯಲ್ಲಿ ಅದು ಉಪಯೋಗವಿಲ್ಲದ ವಿಚಾರ. ಹಾಗೆಂದು ಕುತ್ಲೂರು ಅಥವಾ ನಾರಾವಿಯಂಥ ಸಣ್ಣ ಊರುಗಳಲ್ಲಿ ಅಂಗಡಿ-ಹೋಟೆಲುಗಳು ಹಲವಾರು ಇದ್ದುದರಿಂದ ಹೊಸತಾಗಿ ಪ್ರಾರಂಭಿಸಿದವನಿಗೆ ಅದರಲ್ಲಿ ಮುಂದೆ ಬರಬೇಕಾದರೆ ವರುಷಗಳೇ ಬೇಕಾಗಬಹುದಾದ ಪರಿಸ್ಥಿತಿ. ಮುಂದೆ ಅಡುಗೆಯೋ ಪೌರೋಹಿತ್ಯವೊ ಕಲಿಯೋಣವೆಂದರೆ ನೆಲ್ಲಿತಡ್ಕದಲ್ಲಿ ಕಲಿಸುವವರು ಯಾರೂ ಇಲ್ಲ. ಹೊರಗೆ ಅಂದರೆ ಸೂಳಬೆಟ್ಟು-ಫಂಡಿಜೆ ಮುಂತಾದ ಊರುಗಳಿಗೆ ಹೋಗಿ ಕಲಿತು ಬಂದರೂ ನೆಲ್ಲಿತಡ್ಕದಂಥ ಊರಿಗೆ ಹತ್ತಾರು ಮೈಲು ನಡೆದುಕೊಂಡು ಬಂದು ಯಾರೂ ಹೇಳುವವರಿಲ್ಲ. ಹೀಗೆ ತೋಟದಲ್ಲಿ ದುಡಿಯುವ ಹೊರತಾದ ಯಾವುದೇ ದಾರಿಗಳು ಕಾಣುತ್ತಿರಲಿಲ್ಲ. ಆದರೂ ಏನಾದರು ಮಾಡಬೇಕೆಂಬ ಬಯಕೆ ಇದ್ದುದರಿಂದ ಪ್ರಕಾಶನು ತನ್ನ ಅಣ್ಣ ಕಾರ್ತಿಕನೊಡನೆ ಸಮಾಲೋಚಿಸುತ್ತಲೇ ಇದ್ದನು. ಕಾರ್ತಿಕನಿಗೆ ತಮ್ಮನ ವಿಚಾರದಲ್ಲಿ ಸಹಮತವಿತ್ತಾದರೂ ಏನು ಮಾಡಬಹುದೆಂಬ ಪ್ರಶ್ನೆಯೂ ಭೂತಾಕಾರದಂತೆ ಕಾಣುತ್ತಿತ್ತು.

“ಸ್ವಲ್ಪ ಸಮಯ ಮನೆಯಲ್ಲೇ ಕೃಷಿ ಕಾರ್ಯಗಳಲ್ಲಿ ಸಹಾಯಕನಾಗಿರು. ಮುಂದೆ ಏನಾದರೂ ಅವಕಾಶಗಳನ್ನು ಹುಡುಕೋಣ” ಎಂದು ಪ್ರಕಾಶನಿಗೆ ಅಣ್ಣ ಕಾರ್ತಿಕನು ಧೈರ್ಯ ಹೇಳಿದಾಗ. ಅಣ್ಣ ಹೇಳುವುದು ಸರಿ. ನಾನಿನ್ನೂ ಸಣ್ಣವನು ಒಂದೆರಡು ವರ್ಷ ಮನೆಯಲ್ಲೇ ಇದ್ದರೆ ವ್ಯವಹಾರದ ಸೂಕ್ಷ್ಮತೆಗಳ ಅರಿವಾಗುತ್ತದೆ. ನಂತರ ನನ್ನ ಆಯ್ಕೆ ಏನೆಂದು ನಿರ್ಧರಿಸಬಹುದೆಂದು ಅಣ್ಣ, ತಂದೆಯೊಡನೆ ತಾನೂ ತೋಟದ ಕೆಲಸಗಳಲ್ಲಿ ತೊಡಗಿಸಿಕೊಂಡನು. ಆದರೆ ಕಾರ್ತಿಕನಿಗೆ ತಮ್ಮನಿಗೆ ಸ್ವಂತ ಕಾಲ ಮೇಲೆ ನಿಲ್ಲುವಂಥ ಯಾವುದಾದರೊಂದು ವ್ಯವಸ್ಥೆ ಮಾಡಿಕೊಡಬೇಕೆಂಬ ವಿಚಾರ ಸದಾ ತಲೆಯೊಳಗೆ ಮನೆ ಮಾಡಿಕೊಂಡಿತ್ತು.

ಮನೆಗೆ ಬೇಕಾದ ದಿನಸಿಯಾಗಲಿ, ಸೊಸೈಟಿಯಿಂದ ಸಿಗುವ ಸಕ್ಕರೆ-ಚಿಮಿಣಿ ಎಣ್ಣೆ-ಕೃಷಿ ಸಾಲವೇ ಆಗಲಿ, ಇನ್ನಿತರ ಯಾವುದೇ ವ್ಯವಹಾರವಾಗಲಿ ನೆಲ್ಲಿತಡ್ಕದಿಂದ ಎರಡು ಮೈಲಿಗಳಷ್ಟು ನಡೆದುಕೊಂಡೇ ಹೋಗಿ ಬರಬೇಕು. ಸಾಧಾರಣವಾಗಿ ವಾರಕ್ಕೆ ನಾಲ್ಕಾರು ಬಾರಿ ಕಾರ್ತಿಕನ ಸವಾರಿ ಸುಳ್ಕೇರಿಗೆ ಇದ್ದೇ ಇರುತ್ತಿತ್ತು. ಆದ್ದರಿಂದ ಸುಳ್ಕೇರಿಯಲ್ಲಿದ್ದವರೆಲ್ಲರೂ ಕಾರ್ತಿಕನಿಗೆ ಪರಿಚಯದವರೇ ಆಗಿದ್ದರು. ಅಂತೆಯೇ ಸುಳ್ಕೇರಿಗೆ ಹೋದರೆ ಕಾರ್ತಿಕ ಪುರುಷೋತ್ತಮ ಭಟ್ರ ಹೋಟೇಲಿಗೆ ಹೋಗದೆ ಬರುತ್ತಿರಲಿಲ್ಲ. ಮೂವತ್ತು ಪೈಸೆಗೆ ಎರಡು ಇಡ್ಲಿ, ಇಪ್ಪತ್ತು ಪೈಸೆಗೆ ಒಂದು ಗ್ಲಾಸ್ ಕಾಫಿ ಸೇವಿಸಿದಾಗಲೆ ನೆಲ್ಲಿತಡ್ಕದಿಂದ ನಡೆದು ಬಂದ ಸುಸ್ತು ನಿವಾರಣೆಯಾಗುವುದು. ಅಂತೆಯೆ ಒಂದು ದಿನ ಹೋಟೇಲಿನಲ್ಲಿ ಲೋಕಾಭಿರಾಮ ಮಾತಾಡುವಾಗ ಹೋಟೇಲಿನ ಪಕ್ಕದಲ್ಲಿ ಅಂಗಡಿಗಾಗುವಂಥ ಕಟ್ಟಡವೊಂದು ಖಾಲಿ ಇದೆ. ಇಲ್ಲಿ ಯಾರಾದರು ವ್ಯಾಪಾರ ಮಾಡಬಹುದೆಂದು ಪುರುಷೋತ್ತಮ ಭಟ್ಟರೆಂದಾಗ ಕಾರ್ತಿಕನಿಗೆ ಯಾಕೆ ಇಲ್ಲೊಂದು ಅಡಿಕೆ ವ್ಯಾಪಾರ ಪ್ರಾರಂಭಿಸಬಾರದು ಎಂಬ ಯೋಚನೆಯೊಂದು ಬಂದದ್ದೇ ತಡ “ಪುರುಷೋತ್ತಮಣ್ಣ ನನ್ನ ತಮ್ಮ ಪ್ರಕಾಶನಿಗೆ ಒಂದು ಉದ್ಯೋಗದ ಅವಶ್ಯಕತೆ ಇದೆ. ಇದೇ ಕಟ್ಟಡದಲ್ಲಿ ಅಡಿಕೆ ಮಂಡಿ ಪ್ರಾರಂಭಿಸಿದರೆ ಹೇಗೆ” ಎಂದನು. ಪುರುಷೋತ್ತಮ ಭಟ್ಟರಿಗೆ ಇದು ಖಂಡಿತ ಆಗಬಹುದೆಂದು ತೋರಿದ್ದರಿಂದ ಕಾರ್ತಿಕನಿಗೆ ಪ್ರೋತ್ಸಾಹಿಸಿದ್ದು ಮಾತ್ರವಲ್ಲ “ಖಂಡಿತ ಮುಂದುವರಿಸು. ಇಲ್ಲಿ ಸುತ್ತಮುತ್ತ ಎಲ್ಲಿಯೂ ಅಡಿಕೆ ವ್ಯಾಪಾರಿಗಳಿಲ್ಲ. ಒಂದು ವೇಳೆ ಹಣದ ಅವಶ್ಯಕತೆ ಇದ್ದರೆ ನನ್ನಲ್ಲಿ ಕೇಳು. ಸಹಾಯ ಮಾಡುತ್ತೇನೆ. ಸ್ವಲ್ಪ ಸಮಯ ಅನುಭವಕ್ಕೆ ಬೇಕಾಗುತ್ತದೆ. ಬಾಡಿಗೆ ಕಷ್ಟವಾದರೆ ಎರಡು ತಿಂಗಳ ನಂತರ ಕೊಟ್ಟರೂ ಸಾಕು. ನಮ್ಮವರೆ ಜತೆಗಿದ್ದರೆ ನನಗೂ ಅನುಕೂಲ. ಯೋಚನೆ ಮಾಡು. ಅಡಿಕೆ ವ್ಯಾಪಾರಕ್ಕೆ ಮುಂದೆ ಒಳ್ಳೆಯ ಭವಿಷ್ಯವಿದೆ.” ಎಂದಾಗ ಕಾರ್ತಿಕನಿಗೂ ತನ್ನ ಅಭಿಪ್ರಾಯ ಸರಿಯೆನಿಸಿತ್ತು.

ಹಾಗೆಂದು ಸುಳ್ಕೇರಿ ಎಂಬುದು ಸಣ್ಣ ಹಳ್ಳಿಯೇ. ಕಾರ್ಕಳ-ಬೆಳ್ತಂಗಡಿ ಟಾರು ರಸ್ತೆಯ ಹೆದ್ದಾರಿ ಹಾದು ಹೋಗುವುದರಿಂದ ದಿನಕ್ಕೆ ಹತ್ತಾರು ಬಸ್ ಸರ್ವೀಸ್, ಹತ್ತಾರು ಲಾರಿಗಳು, ಅಪರೂಪಕ್ಕೆ ಕಾರುಗಳು, ಸೈಕಲ್ಲುಗಳು, ಒಂದೆರಡು ಮೋಟಾರ್ ಬೈಕುಗಳು, ಎತ್ತಿನ ಗಾಡಿಗಳು ಹೀಗೆ ಹಲವು ವಾಹನಗಳ ಓಡಾಟವಿತ್ತು. ಪೇಟೆಯೂ ಅಲ್ಲದ ಹಳ್ಳಿಯೂ ಅಲ್ಲದ ಇಲ್ಲಿ ಮೂರು ನಾಲ್ಕು ಗೂಡಂಗಡಿಗಳು, ಒಂದು ಪೋಸ್ಟ್ ಆಫೀಸು, ಕತ್ತಲಿನಿಂದ ಆವರಿಸಿದ ಶರಾಬಿನ ಅಂಗಡಿ, ಇದರ ಪಕ್ಕದಲ್ಲೇ ಸೈಕಲ್ ರಿಪೇರಿಯ ತಾಣ, ಪುರುಷೋತ್ತಮ ಭಟ್ರ ಹೋಟೆಲು ಅಲ್ಲದೆ ಒಂದೆರಡು ತಟ್ಟಿ ಮತ್ತು ಮುಳಿ ಮಾಡಿನ ಚಾಯ ಕೇಂದ್ರಗಳು, ಸುತ್ತಮುತ್ತ ಹಳ್ಳಿಗಳಿಂದ ಬಸ್ಸಿಗೆ ಹೋಗಲೊ, ದಿನಸಿ ಸಾಮಾನು ಕೊಂಡುಹೋಗಲೋ ಕಾಲ್ನಡಿಗೆಯಲ್ಲಿ ಬರುವಂಥ ಜನರು.. ಅಂತೆಯೇ ಹಳ್ಳಿಗಳಿಂದ ತಲೆಹೊರೆಯಲ್ಲಿ ತೆಂಗಿನಕಾಯಿ, ಅಡಿಕೆ, ಭತ್ತ, ಬಾಳೆಗೊನೆ ಮುಂತಾದವುಗಳನ್ನೂ ಮಾರಾಟಕ್ಕಾಗಿ ತರುವಂಥ ಕೃಷಿಕರು. ಅಂತು ಸದಾ ಚಟುವಟಿಕೆಯಿಂದಿರುವ ಈ ಜಾಗದಲ್ಲಿ ಕಾರ್ತಿಕನಿಗೆ ತಮ್ಮನಿಗೊಂದು ಅಂಗಡಿ ಹಾಕಿಕೊಡುವುದು ಸೂಕ್ತವೆಂದು ಕಂಡದ್ದು ಸರಿಯೇ ಆಗಿತ್ತು. ಪುರುಷೋತ್ತಮ ಭಟ್ಟರೂ “ಪ್ರಕಾಶ ಸಣ್ಣವನಾದರೂ ಪರವಾಗಿಲ್ಲ. ನಾನು ಪಕ್ಕದಲ್ಲೇ ಇರುವುದರಿಂದ ವ್ಯಾಪಾರದ ಸೂಕ್ಷ್ಮತೆಗಳನ್ನು ಕಲಿಸುತ್ತೇನೆ” ಎಂದಾಗ ತನ್ನ ನಿರ್ಧಾರಕ್ಕೆ ಬಲ ಬಂದಂತಾಗಿತ್ತು ಕಾರ್ತಿಕನಿಗೆ.

ಮುಂದೆ ಇನ್ನೂ ಇದೆ.
**********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

——————————————————————————————————————————————————————————————————————————

ಅಳಂಬ.. ೬
****
ಅಪ್ಪಾ ಅಪ್ಪಾ ನಿನ್ನೆ ರಾತ್ರಿ ಕುಳ್ಳಾಲಿನ ಹತ್ತಿರ ಹುಲಿ ಸತ್ತು ಬಿದ್ದಿದೆಯಂತೆ. ಸಂಕ್ರೇ ಗೌಡರು ಕೂದಲೆಳೆಯಿಂದ ಪಾರಾದರಂತೆ. ಪಾಪ ಕಾಳುಮೆಣಸು ಕೊಯ್ಯುತ್ತಿದ್ದರಂತೆ ಅದ್ಯಾವುದೊ ಕಡವೆ ಮತ್ತು ಹುಲಿಗೆ ಜಗಳ ಆಗಿ ಹುಲಿಯೇ ಸತ್ತು ಬಿದ್ದಿದೆಯಂತೆ.. ಹೀಗೆ ಅನೇಕ ಅಂತೆಗಳ ಸಮಾಚಾರಗಳನ್ನು ತಂದೆಯಲ್ಲಿ ಕಾರ್ತಿಕ ಒಪ್ಪಿಸುವಾಗ ಆತನಲ್ಲಿ ಭಯ ಮಿಶ್ರಿತವಾದ ಕುತೂಹಲವಿತ್ತು. ಅಂತೆಯೆ ತಾನೂ ಒಂದು ಸಲ ನೋಡಿ ಬರಬೇಕೆನ್ನುವ ಆಸೆಯೂ ಇತ್ತು. ಆದರೆ ತಂದೆ ಗಣೇಶ ಹೆಬ್ಬಾರರು ವ್ಯವಹಾರಗಳನ್ನು ಬಲ್ಲವರಾದ್ದರಿಂದ ಈ ಸುದ್ದಿಯನ್ನು ಕೇಳಿ ಈ ಕ್ಷಣ ಅಲ್ಲಿಗೆ ಹೋಗುವುದು ಸೂಕ್ತವಲ್ಲವೆಂದು ಮಗನಿಗೆ ಹೇಳಿದರು. ಕಾರ್ತಿಕನಾದರೊ ಬಿಸಿ ರಕ್ತದ ಯುವಕ. ಜೀವಂತ ಹುಲಿಯೆ ಎದುರು ಬಂದರೂ ನೋಡಿಯೇ ಬಿಡೋಣವೆಂಬ ಧೈರ್ಯ. ಆದರೆ ತಂದೆಯ ಮಾತನ್ನು ಮೀರುವ ದಾರ್ಷ್ಟ್ಯತನವೂ ಆತನಲ್ಲಿಲ್ಲ. ಇರಲಿ ಹಿರಿಯರ ಮನ ನೋಯಿಸುವುದು ಬೇಡ. ಹಾಗೆಂದು ತಾನು ನೋಡುವುದಾದರೂ ಹುಲಿಯ ಹೆಣ ಹೊರತು ಜೀವಂತವಲ್ಲವಲ್ಲ. ಅಲ್ಲಿಗೆ ಆ ವಿಷಯವನ್ನು ಅಲ್ಲಿಗೇ ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿಸಿಕೊಂಡ. ಗಣೇಶ ಹೆಬ್ಬಾರರಿಗೆ ನಾಲ್ಕು ಜನ ಮಕ್ಕಳು. ಎರಡು ಗಂಡು ಎರಡು ಹೆಣ್ಣು. ನೆಲ್ಲಿತಡ್ಕದಲ್ಲಿ ಶಾಲೆ ಇಲ್ಲದ್ದರಿಂದ ತಮ್ಮ ಮಕ್ಕಳನ್ನು ಹೆಂಡತಿ ಮಿತ್ರವಿಂದಾಳ ಮನೆಯಲ್ಲಿ ಅಂದರೆ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗಲು ಬಿಟ್ಟಿದ್ದರು. ಆದ್ದರಿಂದ ಎಲ್ಲ ನಾಲ್ಕು ಮಕ್ಕಳಿಗೂ ಹತ್ತನೆ ತರಗತಿಯವರೆಗೆ ಶಾಲೆಗೆ ಹೋಗುವ ವ್ಯವಸ್ಥೆ ಇತ್ತು. ಹಿರಿಯನಾದ ಕಾರ್ತಿಕನಿಗೆ ಈಗ ಇಪ್ಪತ್ತರ ಹರೆಯ. ಕೊನೆಯ ತಮ್ಮನಾದ ಪ್ರಕಾಶನ ಇನ್ನೆರಡು ವರ್ಷಗಳ ವಿದ್ಯಾಭ್ಯಾಸವಾದರೆ ಎಲ್ಲರೂ ಹತ್ತನೆ ತರಗತಿಯವರೆಗೆ ಕಲಿತು ಲೋಕಜ್ಞಾನ ಪಡಕೊಳ್ಳುವಷ್ಟು ಸುಶಿಕ್ಷಿತರಾಗುವುದು ನೆಲ್ಲಿತಡ್ಕದಂಥ ಹಳ್ಳಿಯಲ್ಲಿ ವಿಶೇಷವೇ ಆಗಿತ್ತು. (ಅಳಂಬ, ಮಟ್ಕ್ಯೆ, ನೆಲ್ಲಿತಡ್ಕ ಎಂಬ ಮೂರು ಜನವಸತಿಗಳು ಬೇರೆ ಬೇರೆಯಾದರೂ ಹೊರಗಿನ ಪ್ರಪಂಚಕ್ಕೆ ಪರಸ್ಪರ ಕೂಗಳತೆಯಷ್ಟು ದೂರದಲ್ಲಿರುವ ಈ ಮೂರು ಜನವಸತಿ ಪ್ರದೇಶಗಳು ಅಳಂಬವೆಂದೇ ಪ್ರಖ್ಯಾತವಾಗಿತ್ತು.)

ಹೆಣ್ಣು ಮಕ್ಕಳು ದೊಡ್ಡವರಾದಂತೆ ಗಣೇಶ ಹೆಬ್ಬಾರರಿಗೆ ಮಕ್ಕಳ ಮದುವೆ ಯೋಚನೆಯೂ ಬರತೊಡಗಿತ್ತು. ಹೆಣ್ಣು ಮಕ್ಕಳಿಗೆ ಹೇಗಾದರೂ ಸಾಲ ಸೋಲ ಮಾಡಿ ಮದುವೆ ಮುಗಿಸಬಹುದು. ಆದರೆ ಕಾರ್ತಿಕನಿಗೆ ಹೆಣ್ಣು ಸಿಗುವುದು ಅಷ್ಟು ಸುಲಭವಲ್ಲವೆಂಬ ಸಣ್ಣ ಕೊರಗು ಹೆಬ್ಬಾರರಲ್ಲಿ ಜಾಗೃತವಾಗಿತ್ತು. ಯಾಕೆಂದರೆ ಗಣೇಶ ಹೆಬ್ಬಾರರಿಗೆ ಹೆಣ್ಣು ಹುಡುಕುವ ಕಾಲದಲ್ಲಿ ಅಂದರೆ ಸುಮಾರು ಇಪ್ಪತ್ತೇಳು ವರ್ಷಗಳಷ್ಟು ಹಿಂದೆ ಸುಮಾರು ಹತ್ತಿಪ್ಪತ್ತು ಕಡೆ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದೊಡನೆ ಶಿರ್ಲಾಲು ಎಂಬಲ್ಲಿಂದ ಸಂಬಂಧ ಕೂಡಿ ಬಂದಿದೆ ಎಂದರೆ ಅಲ್ಲಿಯೂ ಬಹಳಷ್ಟು ಬಡತನದ ಜತೆಗೆ ತುಂಬಾ ಮಕ್ಕಳಿದ್ದುದೇ ಕಾರಣವಾಗಿತ್ತು. ಋಣಾನುಬಂಧ.. ಗಣೇಶ ಹೆಬ್ಬಾರರು ಮಿತ್ರವಿಂದಾಳನ್ನು ಮೆಚ್ಚಿ ಮದುವೆ ಆಗಿ ಅಳಂಬದಲ್ಲಿಯೂ ಸುಖ ಜೀವನವಿದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಅಂತೆಯೇ ಹೆಬ್ಬಾರರ ಪತ್ನಿಯಾದ ಮಿತ್ರವಿಂದಾ ಕೂಡ ಮಕ್ಕಳೊಡನೆ ಸಂಪೂರ್ಣ ಸಂತೃಪ್ತಿಯಿಂದಲೇ ಇದ್ದರು.

ಕುಳ್ಳಾಲಿನಲ್ಲಿ ಬಿದ್ದಂಥ ಹುಲಿಯ ಕಳೆಬರ ಸಿಗದಿರುವಾಗ ಸಂಕ್ರೇ ಗೌಡರ ಜತೆ ಅರಣ್ಯ ಸಿಬ್ಬಂದಿಗೆ ಕೂಡ ಆಶ್ಚರ್ಯ ಕಾದಿತ್ತು. ಆದರೆ ಗೌಡರು “ಇದೇ ಜಾಗದಲ್ಲಿ ಕಡವೆ ಮತ್ತು ಹುಲಿಗೆ ನಡೆದ ಜಗಳವನ್ನು ನಾನೇ ನೋಡಿದ್ದೇನೆ. ಮಾತ್ರವಲ್ಲ ಹುಲಿಯ ಉಸಿರು ನಿಂತ ಮೇಲೆಯೇ ನಾನು ಅದೊ ನೋಡಿ ಆ ಮರದ ಮಧ್ಯದಲ್ಲಿರುವ ಬಾಗಿದ ಟೊಂಗೆಯ ಮೇಲಿಂದ ಕೆಳಗಿಳಿದದ್ದು. ವಾಪಸು ಮನೆಗೆ ಹೋಗುವಾಗಲೂ ಹೆದರಿ ಹೆದರಿ ಹುಲಿಯ ಕಳೆಬರವನ್ನು ನೋಡಿ ನೋಡಿ ಹೋಗಿರುವಾಗ ಈಗ ಅದು ಕಾಣೆಯಾದದ್ದಾದರು ಹೇಗೆಂದೇ ತಿಳಿಯದು” ಎಂದು ಆಶ್ಚರ್ಯ ವ್ಯಕ್ತ ಪಡಿಸಿದರಾದರೂ ಯಾರಾದರು ಹುಲಿಯ ಹಲ್ಲು, ಚರ್ಮಕ್ಕಾಗಿ ಹುಲಿಯನ್ನೇ ಹೊತ್ತೊಯ್ದಿರಬಹುದೆ ಎಂಬ ಸಂಶಯವು ಅರಣ್ಯಾಧಿಕಾರಿಗಳಂತೆ ಸಂಕ್ರೇ ಗೌಡರಿಗೂ ಬಂದದ್ದು ಸಹಜವಾಗಿಯೇ ಇತ್ತು. ಹಾಗೆಂದು ಇದು ಅಳಂಬದ ಯಾವ ಮನೆಯವರಿಂದಲೂ ನಡೆದ ಕೃತ್ಯವಲ್ಲವೆಂಬುದೂ ಅರಣ್ಯ ಅಧಿಕಾರಿಗಳಿಗೆ ತಿಳಿದ ವಿಷಯವೆ. ಅಷ್ಟರ ಮಟ್ಟಿಗೆ ಅಳಂಬ ಅಥವಾ ಪಶ್ಚಿಮ ಘಟ್ಟದ ಗರ್ಭದೊಳಗಿರುವ ಇರುವ ಬರೆಂಗಾಡಿ, ಫಂಜಾಲು, ನಂಗಾಜೆ, ಕೇಡೇಲು, ಫೆರ್ಞ್ಚ, ಕುರ್ಯಾಡಿ ಮೊದಲಾದ ಕಡೆಗಳಲ್ಲಿ ಇರುವ ಎಲ್ಲ ಕುಟುಂಬಗಳೂ ಪ್ರಾಮಾಣಿಕರು ಮಾತ್ರವಲ್ಲ ಹುಲಿಯನ್ನು ಕದ್ದು ವಿಲೆವಾರಿ ಮಾಡುವಷ್ಟು ಚಾಲಾಕಿಗಳೂ ಅಲ್ಲವೆಂಬುದು ಅನುಭವದಿಂದ ಅರಣ್ಯಾಧಿಕಾರಿಗಳಿಗೆ ವಿಶ್ವಾಸವಿದ್ದುದರಿಂದ ಇದು ಯಾರ ಕೃತ್ಯವಾಗಿರಬಹುದೆಂಬುದು ಯಕ್ಷಪ್ರಶ್ನೆಯೇ ಆಗಿ ಹೋಯಿತು. ಅಂತೆಯೇ ಅಧಿಕಾರಿಗಳಿಗೆ ಇದೊಂದು ಸವಾಲೂ ಆಗಿತ್ತು. ಆದರೆ ಕಾನೂನು ಪ್ರಕಾರ ಸಂಕ್ರೇ ಗೌಡನಿಂದ ನಡೆದ ಘಟನೆಯ ವಿವರ ತಿಳಿದು ಎಫ್.ಐ ಆರ್. ಮಾಡಿ ಮುಂದಿನ ಕ್ರಮಗಳನ್ನು ಅರಣ್ಯಾಧಿಕಾರಿಗಳು ಕೈಗೊಂಡಾಗ ಅಳಂಬದಲ್ಲಿ ಕೂಡಾ ಕಾಣದ ಯಾವುದೊ ಕೈಗಳು ಕೆಲಸ ಮಾಡುತ್ತಿವೆ ಎನ್ನುವ ಸಂಶಯ ಬಲವಾಗತೊಡಗಿತ್ತು.

ಹುಲಿಯು ಸತ್ತು ಬಿದ್ದ ಜಾಗ ಕುಳ್ಳಾಲು. ಇದು ಕೂಡ ಒಂದು ಕಾಲದಲ್ಲಿ ಹತ್ತಿಪ್ಪತ್ತರಷ್ಟು ಜನರಿರುವಂಥ ದೊಡ್ಡ ಕುಟುಂಬವಾಗಿತ್ತು. ಎಲ್ಲ ಕಾಡು ಜನರಂತೆ ಬೇಸಾಯ, ತೋಟ ಮುಂತಾದ ಪ್ರಕ್ರಿಯೆಗಳಿಂದ ಸಂತೃಪ್ತಿಯಿಂದ ಬದುಕಿತ್ತು ಎಂಬುದಕ್ಕೆ ಈಗಲೂ ಸಾಕ್ಷಿಗಳಿವೆ. ಅಳಿದುಳಿದ ಅಡಿಕೆ-ತೆಂಗು-ಹಲಸು-ಮಾವಿನ ಮರಗಳು, ಜಾಗದ ಸುತ್ತಲೂ ಇರುವ ಕಲ್ಲಿನ ಅಗಳುಗಳು, ಮನೆ-ಹಟ್ಟಿಯ ಅಡಿಪಾಯಗಳು, ಜರಿದ ಗೋಡೆಗಳು, ಕಡಿಯುವ ಕಲ್ಲು-ಭತ್ತ ಕುಟ್ಟುವ ಕಲ್ಲು-ಅಕ್ಕಿ ಹಿಟ್ಟು ಮಾಡುವ ಕಲ್ಲುಗಳು, ದನ ಕರುಗಳು ಅಕ್ಕಚ್ಚು ಕುಡಿಯುವ ಮರಿಗೆಗಳು, ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು, ಪಾಳುಬಿದ್ದ ಕೆರೆಯ ಅವಶೇಷಗಳು, ದೈವದ-ನಾಗನ ಕಲ್ಲುಗಳು.. ಹೀಗೆ ಹತ್ತು ಹಲವಾರು ಅವಶೇಷಗಳನ್ನು ಕಂಡಾಗ ಇಲ್ಲಿಯ ಕುಟುಂಬದವರು ಏನಾದರು ಎಲ್ಲಿಗೆ ಹೋದರು ಎನ್ನುವುದಕ್ಕೆ ನಂಬಲರ್ಹವಾದ ಯಾವ ಮಾಹಿತಿಗಳೂ ಇಲ್ಲದುದರಿಂದ ಸಾಧಾರಣ ಇಲ್ಲಿಂದ ವಲಸೆ ಹೋದವರ ಕಾಲಮಾನ ಶತಮಾನಕ್ಕೂ ಮೊದಲಿರಬಹುದೆಂಬ ಅನುಮಾನ ಬಾರದೆ ಇರದು. ಸಂಕ್ರೇ ಗೌಡರ ಅಜ್ಜಿಯ ಕಾಲದಲ್ಲಿ ಕೂಡ ಕುಳ್ಳಾಲಿನಲ್ಲಿ ಜನವಸತಿ ಇರಲಿಲ್ಲವಂತೆ. ಆದರೆ ಅಲ್ಲಿಯ ಅಧೋಗತಿಗೆ ಕಾರಣಗಳು ಕೆಲವಷ್ಟು ಅಜ್ಜಿಗೆ ಗೊತ್ತಿದ್ದದ್ದೇ ಈಗ ಉಳಿದ ಸಾಕ್ಷಿ ಎನ್ನಬಹುದು. ಸಂಕ್ರೇ ಗೌಡರ ಅಜ್ಜಿ ಬದುಕಿರುವಾಗ ಹೇಳುತ್ತಿದ್ದಂತೆ ಕುಳ್ಳಾಲಿನಲ್ಲಿ ಅದ್ಯಾವುದೊ ಕಾಲಘಟ್ಟದಲ್ಲಿ ಕುಟುಂಬದಲ್ಲಿ ಒಂದೊಂದೇ ಅಸಹಜ ಸಾವುಗಳು ಸಂಭವಿಸತೊಡಗಿತಂತೆ. ಆ ಕಾಲದಲ್ಲಿ ವೈದ್ಯರಿಗಿಂತ ಮಾಟ-ಮಂತ್ರ-ಜ್ಯೋತಿಷ್ಯ-ಪರಿಹಾರ-ಹಳ್ಳಿ ಔಷಧ-ಭೂತ-ಬ್ರಹ್ಮರಾಕ್ಷಸ.. ಎಂಬ ವರ್ತುಲದಲ್ಲಿ ಜನರ ಮನಸ್ಥಿತಿ ಇದ್ದುದರಿಂದ ಅಥವಾ ಸಕಾಲದಲ್ಲಿ ವೈದ್ಯರ ಅಲಭ್ಯತೆಯಿಂದ ಈ ಸಾವುಗಳು ಹೆಚ್ಚಾಗತೊಡಗಿದವೆ ಹೊರತು ಪರಿಹಾರ ಕಾಣಲಿಲ್ಲ. ಅದ್ಯಾವುದೊ ಸಾಂಕ್ರಾಮಿಕ ರೋಗ, ಆಹಾರ ದೋಷ, ಮಾನಸಿಕ ದೌರ್ಬಲ್ಯವೇ ಮುಂತಾದ ವೈಜ್ಞಾನಿಕ ಕಾರಣಗಳಿದ್ದರೂ ಕುಟುಂಬದ ಅಸಹಜ ಸಾವುಗಳಿಗೆ ಬ್ರಹ್ಮರಾಕ್ಷಸನ ಉಪಟಳವೇ ಕಾರಣವೆಂದು ಸರ್ವರ ಅಭಿಪ್ರಾಯವಿದ್ದುದರಿಂದ ಮತ್ತು ಇದು ಎಲ್ಲರನ್ನೂ ಬಲಿ ಪಡೆವ ಮುಂಚೆ ಕುಳ್ಳಾಲನ್ನು ಬಿಡುವುದೇ ಸೂಕ್ತವೆಂದು ಪರಿಗಣಿಸಿ ಅಳಿದುಳಿದ ಕುಟುಂಬ ಅಲ್ಲಿಂದ ವಲಸೆ ಹೋಗಿದೆಯಂತೆ. ಅದು ಯಾವ ಕುಟುಂಬ ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ನಿಖರ ಮಾಹಿತಿಗಳು ವರ್ತಮಾನದಲ್ಲಿ ಯಾರಿಗೂ ತಿಳಿಯದೆ ನಿಗೂಢವಾಗಿರುವುದು ಮಾತ್ರ ಸತ್ಯ. ಆದರೆ ಇಂದಿಗೂ ಉಳಿದುಕೊಂಡದ್ದೇನೆಂದರೆ ಕುಳ್ಳಾಲಿನಲ್ಲಿ ಬ್ರಹ್ಮ ರಾಕ್ಷಸನಿದ್ದಾನೆಂಬ ವಿಚಾರ. ಹಲವರು ಇದನ್ನು ಅನುಭವಿಸಿದ್ದಾರೆ ಎಂಬ ಕಥೆಗಳು. ಅಂತೆಯೇ ಅಮಾವಾಸ್ಯೆಯ ರಾತ್ರಿಗಳಲ್ಲಿ ಸಂಕ್ರಾಂತಿ-ಗ್ರಹಣ ಮೊದಲಾದ ವಿಶೇಷ ದಿನಗಳಲ್ಲಿ ಅರಣ್ಯದ ಈ ಹಾದಿಯಲ್ಲಿ ಸಂಚರಿಸುವಾಗ ಬ್ರಹ್ಮರಾಕ್ಷಸನ ಚಲನೆಗಳನ್ನು-ಕರ್ಕಶ ಧ್ವನಿಗಳನ್ನು ಕೇಳಿದ್ದೇವೆ ಎನ್ನುವವರಿಗೂ ಕೊರತೆಯಿಲ್ಲ. ಏನೆ ಇರಲಿ ಇಂಥ ನಿಗೂಢಗಳು ಪಶ್ಚಿಮ ಘಟ್ಟದ ಮಡಿಲಲ್ಲಿ ಸಾವಿರಾರು ಇರುವುದು ಕೂಡ ಸುಳ್ಳಲ್ಲ. ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ…. ಇನ್ನೂ ಇದೆ.
***********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

——————————————————————————————————————————————————————————————————————-

ಅಳಂಬ..೫
***
“ಹೇಳುವುದೇನು ಕಡವೆಯ ಓಡುವ ಹಾದಿಗೆ ಬೃಹತ್ ಹೆಬ್ಬಲಸಿನ ಅವಳಿ ಮರಗಳು ಅಡ್ಡವಾದದ್ದರಿಂದ ಅದು ಹಟಾತ್ತನೆ ಹಿಂದೆ ತಿರುಗುವಾಗ ಹಿಂದಿನಿಂದ ಅದರ ದುಪ್ಪಟ್ಟು ವೇಗದಿಂದ ಹುಲಿಯು ಕಡವೆಯ ಕುತ್ತಿಗೆಯನ್ನು ಗುರಿಯಾಗಿಸಿ ಹಾರಿದ್ದೊಂದೇ ಗೊತ್ತು. ಕಡವೆಯು ತಿರುಗಿದ್ದರಿಂದ ಚೂಪಾದ ಕೊಂಬು ಕುತ್ತಿಗೆಯ ಭಾಗಕ್ಕೆ ಬಂದದ್ದರಿಂದ ಹುಲಿಯ ನೆಗೆತ ಕೊಂಬಿಗೆ ಬಡಿದಾಗ ಚೂಪಾದ ಕೊಂಬುಗಳು ಹುಲಿಯ ಕುತ್ತಿಗೆ ಮತ್ತು ಕಿಬ್ಬೊಟ್ಟೆಯನ್ನು ಭೇದಿಸಿದವು. ಅಷ್ಟರಲ್ಲಿ ಅರಣ್ಯದಲ್ಲಿ ಎರಡು ಪ್ರಾಣಿಗಳ ಮರಣ ಕಾಲದಲ್ಲುಂಟಾದ ಘರ್ಜನೆಗಳು ಪ್ರತಿಧ್ವನಿಸಿ ಒಂದು ಕ್ಷಣ ಸಂಪೂರ್ಣ ಕಾಡನ್ನೇ ಮೌನವಾಗಿಸಿತು. ಇತ್ತ ಹುಲಿಯು ಸಾಯದೆ, ಅತ್ತ ಕಡವೆ ತಾನು ಇನ್ನೂ ಜೀವಿಸಿದ್ದೇನೆ ಎಂಬ ಸತ್ಯ ತಿಳಿಯದೆ ಒಂದರ್ಧ ಗಂಟೆ ಒದ್ದಾಡುವಾಗ ಕಡವೆಯ ಕೊಂಬಿನಿಂದ ದೂರಕ್ಕೆ ಬಿದ್ದಂಥ ಹುಲಿಯು ಬದುಕಿನ ಅಂತಿಮ ಕ್ಷಣದಲ್ಲಿದ್ದಂತೆ ಕಡವೆಯು ಪುನರ್ಜನ್ಮವನ್ನು ಪಡಕೊಂಡಿತ್ತು. ನಾನಾದರೊ ಇದನ್ನು ನಂಬದ ಸ್ಥಿತಿಯಲ್ಲಿದ್ದರೂ ಕಣ್ಣಾರೆ ಕಂಡದ್ದನ್ನು ನಂಬಲೇಬೇಕಾದ ಸ್ಥಿತಿಯೂ ನನ್ನದಾಗಿತ್ತು. ಏನೇ ಇರಲಿ ಹುಲಿಯ ಸಾವಿನ ಪೂರ್ಣ ಅನುಭವವಾಗದೆ ಇಲ್ಲಿಂದ ಹೊರಡುವುದು ಕ್ಷೇಮವಲ್ಲ ಎಂದುಕೊಂಡು ಹುಲಿಯನ್ನೇ ನೋಡುತ್ತಿದ್ದೆ. ಕಡವೆಯಾದರೊ ಎದ್ದು ಓಡಿತ್ತು. ಇತ್ತ ಹುಲಿಯ ಸ್ಥಿತಿಯೂ ಗಂಭೀರವಾಗಿ ಕ್ರಮೇಣ ಒಂದಷ್ಟು ಹೊರಳಾಡಿ ಪ್ರಾಣವನ್ನು ಕಳಕೊಂಡಿತೆಂದು ದೃಢವಾದ ಮೇಲೆ ಹೆದರಿ ಹೆದರಿ ಹೇಗಾದರೂ ಇಲ್ಲಿಗೆ ಬಂದಾಗ ಕಡವೆಯ ಸ್ಥಿತಿಯೇ ನನ್ನದಾಗಿತ್ತು ಎನ್ನುವುದು ನಾನು ಬೇರೆ ಹೇಳಬೇಕಾಗಿಲ್ಲ.” ಇಷ್ಟು ಹೇಳಿದಾಗ ಸಂಕ್ರೇ ಗೌಡನಿಗಿಂತಲೂ ಮನೆಯವರೆಲ್ಲ ಹೆದರಿ ನಡುಗುತ್ತಿದ್ದರು.

“ಹಾಗಾದರೆ ಹುಲಿಯ ಕಳೆಬರ ಅಲ್ಲೇ ಇರಬಹುದಲ್ಲವೆ” ಎಂದು ಸುಂದ್ರಿ ಕೇಳಿದಳು. “ಖಂಡಿತ ಇದೆ. ಅದನ್ನು ಅರಣ್ಯಾಧಿಕಾರಿಗಳು ಬಂದು ವಿಲೆವಾರಿ ಆಗಬೇಕಷ್ಟೆ. ನಾಳೆ ಹೋಗಿ ನಾನೇ ತಿಳಿಸಿ ಬರಬೇಕು” ಎಂದು ಸಂಕ್ರೇ ಗೌಡರು ಹೇಳುವಾಗ ಕಮಲಿಗೆ ಹುಲಿಯ ಕಳೆಬರವನ್ನು ನೋಡುವ ಆಸೆಯಾದರೂ ಮನದೊಳಗೆ ಹುಲಿ ಸಾಯದೆ ಇದ್ದರೆ ಎಂಬ ಭೀತಿಯೂ ಉಂಟಾಗಿತ್ತು. ಒಂದು ವಿಶೇಷವಾದ ಅನುಭವದೊಂದಿಗೆ ಆ ದಿನವು ಸಾಕ್ಷಿಯಾದದ್ದಂತು ನಿಜ.

ಮರುದಿವಸ ಬೆಳಗ್ಗೆ ಎದ್ದವರೆ ಸಂಕ್ರೇ ಗೌಡರು ಹಿರಿಯ ಮಗನಾದ ರಾಮಯ್ಯ ಗೌಡನನ್ನು ಕರಕೊಂಡು ನೇರವಾಗಿ ನಾರಾವಿ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿ ಬಂದರು. ಕಾಡುತ್ಪತ್ತಿಗೆಂದು ಯಾವಾಗಲೂ ಹೋಗುತ್ತಿರುವ ಅಳಂಬದ ಆಸುಪಾಸಿನವರೆಲ್ಲ ಕೆಲವೊಮ್ಮೆ ಬೇಟೆಯಾಡಿ ಕಡವೆಗಳನ್ನು ಕೊಲ್ಲುವುದೂ ಇದೆ. ಆದರೆ ಇದು ಅರಣ್ಯಾಧಿಕಾರಿಗಳಿಗೆ ತಿಳಿದರೆ ಈ ಅಪರಾಧಕ್ಕೆ ಶಿಕ್ಷೆಯಾಗುವುದೂ ಇದೆ. ಆದರೂ ಕೆಲವರು ಯಾರಿಗೂ ತಿಳಿಯದಂತೆ ಬೇಟೆಯಾಡಿ ಕಾಡುಹಂದಿ, ಕಡವೆಗಳ ಮಾಂಸ ತಿನ್ನುವುದೂ ಇದೆ. ಅಂಥದ್ದರಲ್ಲಿ ಹುಲಿಯಂಥ ಪ್ರಾಣಿಗಳು ಜನವಸತಿಯ ಸಮೀಪ ಸತ್ತಾಗ, ಅಂತೆಯೇ ನಿತ್ಯವೂ ಜನರಿಗೆ ಕಾಡಿನ ಸಂಪರ್ಕವಿರುವಾಗ ಅದನ್ನು ಅರಣ್ಯಾಧಿಕಾರಿಗಳಿಗೆ ತಿಳಿಸದಿದ್ದರೂ ತಪ್ಪಾಗುತ್ತದೆ ಎಂಬುದೂ ಸತ್ಯವೆ. ಆದ್ದರಿಂದ ಅಳಂಬದಲ್ಲಿ ಇಂತಹ ಕಾಡುಪ್ರಾಣಿಗಳ ಸಾವುಗಳಾದದ್ದು ಗೊತ್ತಾದ ಕೂಡಲೆ ಸಂಬಂಧ ಪಟ್ಟವರಿಗೆ ತಿಳಿಸುವುದು ರೂಢಿ. ಅಲ್ಲಿಗೆ ತಮ್ಮ ಜವಾಬ್ದಾರಿಯು ಮುಗಿದಂತೆ. ಆದ್ದರಿಂದ ಸಂಕ್ರೇ ಗೌಡರು ಈ ವಿಶೇಷವಾದ ಅನುಭವವನ್ನು ಹೇಳದೆ ಇರಲಾಗದು.

ಎರಡು ದಿವಸದ ನಂತರ ಅರಣ್ಯಾಧಿಕಾರಿಗಳು ಸಿಬ್ಬಂದಿಯವರೊಡನೆ ಬಂದಾಗ ಕಮಲಿ ಕೂಡ ಹುಲಿ ನೋಡುವ ಆಸೆಯನ್ನು ಅಣ್ಣ ರಾಮಯ್ಯ ಗೌಡನಲ್ಲ್ಲಿ ಹೇಳಿಕೊಂಡಿದ್ದಳು. ಅದಕ್ಕೆ ಸಂಕ್ರೇ ಗೌಡರು “ನೋಡೋಣ ಅರಣ್ಯಾಧಿಕಾರಿಗಳಲ್ಲಿ ಕೇಳುತ್ತೇನೆ ಒಪ್ಪಿಗೆ ಕೊಟ್ಟರೆ ಹೋಗೋಣ” ಎಂದಿದ್ದರು. ಅಂತೆಯೆ ಅರಣ್ಯಾಧಿಕಾರಿಗಳಲ್ಲಿ ಸಂಕ್ರೇ ಗೌಡರು ಮಗಳ ಆಸೆಯನ್ನು ಹೇಳಿದಾಗ ಅನುಮೋದನೆಯನ್ನು ನೀಡಿದ ಅರಣ್ಯಾಧಿಕಾರಿ “ನೋಡಮ್ಮ ಹುಲಿಯನ್ನು ನೋಡಿ ಹೆದರಬಾರದು. ಹಾಗೇನಾದರು ಹೆದರಿಕೆ ಇದ್ದರೆ ಬರುವುದು ಬೇಡ” ಎಂದಾಗ ಕಮಲಿಗೆ ಧೈರ್ಯವೇ ಬಂದಿತ್ತು. ಎಲ್ಲರೊಡನೆ ಆಕೆಯೂ ಹೊರಟಳು. ಒಂದು ಜೀಪಿನ ತುಂಬ ಬಂದೂಕು ಸಹಿತ ಬಂದಂಥ ಸಿಬ್ಬಂದಿಗಳೊಂದಿಗೆ ಸಂಕ್ರೇ ಗೌಡರು ಒಂದು ವೇಳೆ ಕಮಲಿಗೆ ವಾಪಸು ಬರಬೇಕಾದರೂ ಮನೆ ಹತ್ತಿರವಿದ್ದುದರಿಂದ ಹೆದರುವ ಅವಶ್ಯಕತೆ ಇಲ್ಲವೆಂದುಕೊಂಡು ಸಿಬ್ಬಂದಿಯ ಜತೆ ಹೊರಟರು ಕಾಡಿಗೆ. ಆದರೆ ಮೊನ್ನೆ ಹುಲಿ ಬಿದ್ದಂಥ ಜಾಗದಲ್ಲಿ ಹುಲಿ ಮತ್ತು ಕಡವೆಯ ಜಗಳದ ಕುರುಹು ಇದ್ದಿತೇ ಹೊರತು ಹುಲಿಯ ಕಳೇಬರವಿರವಿಲ್ಲ. (ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ…)

————————————————————————————————————————————————————————————————————————-

ಅಳಂಬ.. ೪
*****


ಮನೆಯವರೆಲ್ಲರೂ ಸಂಕ್ರೇಗೌಡರು ಹೋದಂಥ ದಿಕ್ಕಿನಿಂದ ಏನಾದರೂ ಅಸಹಜತೆಯ ಶಬ್ದಗಳೊ ಘರ್ಜನೆಗಳೊ ಕೇಳಿಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾಗ ಅರ್ಧ ತಾಸಿನಲ್ಲಿ ತಲೆಯಲ್ಲಿ ದೊಡ್ಡ ಹೊರೆಯೊಂದನ್ನು ಹೊತ್ತುಕೊಂಡು ಸಂಕ್ರೇ ಗೌಡರು ಬಿರಬಿರನೆ ನಡೆದುಕೊಂಡು ಬರುವುದು ಅಸ್ಪಷ್ಟವಾಗಿ ಕಾಣತೊಡಗಿದಾಗ ಮನೆಯವರೆಲ್ಲರಿಗೂ ಮರುಜೀವ ಬಂದಂತಾಯಿತು. ಮನೆಗೆ ಹತ್ತಿರವಾಗುತ್ತಿದ್ದಂತೆ ಸಂಕ್ರೇಗೌಡರು ತಲೆ ಮೇಲಿದ್ದಂಥ ಹೊರೆಯನ್ನು ಕೆಳಗೆ ಹಾಕಿ ಉಸ್ಸೆಂದು ಗೋಡೆಗೊರಗಿಕೊಂಡು “ಕಮಲಿ ಒಂದು ಚೆಂಬು ನೀರು ತಾ” ಎಂದು ಮಗಳಲ್ಲಿ ಹೇಳಿದಾಗ ಅಪ್ಪ ಇಂದು ಯಾಕೊ ಲೆಕ್ಕದಿಂದ ಹೆಚ್ಚು ಬೆವರಿದ್ದಾರೆ ಹಾಗೂ ಎಂದಿನಂತಿಲ್ಲವೆಂದು ತನ್ನೊಳಗೆ ಅಂದುಕೊಂಡಳು.

ನೀರು ತಂದವಳೇ ಕಮಲಿ “ಯಾಕಪ್ಪ ಇಷ್ಟು ತಡವಾಯಿತು. ಏನೋ ಮುಖದಲ್ಲಿ ಅಸಹಜತೆ ಇದೆ. ಯಾಕಿಷ್ಟು ಬೆವರಿದ್ದೀಯ” ಎಂದು ಪ್ರಶ್ನಿಸಿದಳು.

ನೀರು ಕುಡಿದು ಚೊಂಬನ್ನು ಕೆಳಗಿಟ್ಟು ಸಂಕ್ರೇ ಗೌಡರು, ಸ್ವಲ್ಪ ತಾಳಿ ಹೇಳುತ್ತೇನೆ ಎನ್ನುವಂತೆ ಕೈ ಸನ್ನೆಯಿಂದ ಹೇಳಿ ಕಂಬಕ್ಕೊರಗಿ ಕೂತು ಕೊಂಡರು. ಸ್ವಲ್ಪಹೊತ್ತು ಸುಧಾರಿಸಿದ ಮೇಲೆ ಮಾತಿಗಾರಂಭಿಸಿದರು ಸಂಕ್ರೇಗೌಡರು “ಇವತ್ತು ನನ್ನ ಆಯುಷ್ಯ ಗಟ್ಟಿಯಾಗಿತ್ತು ಇಲ್ಲದಿದ್ದರೆ ಯಾವ ಕಾರಣಕ್ಕೂ ನಾನು ಜೀವಂತವಾಗಿ ಬರಲು ಸಾಧ್ಯವಿರಲಿಲ್ಲ.”

ಅಷ್ಟರಲ್ಲಿ ಕಮಲಿಯ ಜತೆ ಸುಂದ್ರಿ ಕೂಡ ಸೇರಿಕೊಂಡು “ಅದೇನಾಯಿತು ಹೇಳ್ರಿ” ಎಂದಾಗ ಇಬ್ಬರೂ ಭಯ ಭೀತರಾಗಿದ್ದರು.

ಸಂಕ್ರೇ ಗೌಡರು ನಡೆದ ಘಟನೆಯನ್ನು ವಿವರಿಸತೊಡಗಿದರು.

“ಇದೇ ಹಳ್ಳ ದಾಟಿ ಮೇಲೆ ಹೋದಾಗ ಕುಳ್ಳಾಲ್ ಎಂಬಲ್ಲಿ ಕಾಳುಮೆಣಸು ಇರುವುದನ್ನು ಕಂಡಿದ್ದೆ. ಅದನ್ನೆಲ್ಲ ಕೊಯ್ದು ಕೆಳಗಿಳಿಯಬೇಕೆನ್ನುವಷ್ಟರಲ್ಲಿ ದೂರದಿಂದ ಭಾರಿ
ಶಬ್ದ ಕೇಳತೊಡಗಿತು. ಅನುಭವದಿಂದ ಇದು ಹುಲಿ ಕಡವೆಗಳ ಜಗಳದಂತೆ ಭಾಸವಾಯಿತು. ಏನೇ ಇರಲಿ ಈಗ ನಾನು ಮರದಿಂದ ಇಳಿಯುವುದು ಸುರಕ್ಷಿತವಲ್ಲ ಎಂದೆಣಿಸಿ ಸುಮ್ಮನೆ ಎರಡು ಗೆಲ್ಲುಗಳ ಮಧ್ಯೆ ಶಬ್ದ ಬರುವ ಕಡೆ ಗಮನವಿರಿಸಿ ಕುಳಿತುಕೊಂಡೆ. ಕ್ಷಣ ಕ್ಷಣಕ್ಕೂ ಶಬ್ದ ಹತ್ತಿರವಾದಂತೆ ನನ್ನ ನಿರ್ಧಾರ ಸರಿ ಎಂಬ ಭಾವದಿಂದ ಭಯದೊಳಗೂ ಒಂದು ಭದ್ರತೆಯಲ್ಲಿದ್ದೆ. ಅಷ್ಟರೊಳಗೆ ನಾನೆಣಿಸಿದಂತೆ ಕಡವೆಯೊಂದನ್ನು ಅಟ್ಟಿಸಿಕೊಂಡು ಹುಲಿರಾಯ ಬರುತ್ತಿದ್ದ. ಕಡವೆ ಕೂಡ ಅಸಾಧ್ಯ ವೇಗದಿಂದ ಗಿಡ ಗಂಟಿ ಕಲ್ಲು ಮುಳ್ಳೆನ್ನದೆ ಓಡುತ್ತಿತ್ತು. ಹುಲಿಯಾದರೊ ಇನ್ನೂ ಹೆಚ್ಚಿನ ವೇಗದಿಂದ ಕಡವೆಯ ಬೆನ್ನು ಬೆನ್ನಿಗೇ ಬರುತ್ತಿತ್ತು. ನಾನು ಹಲವಾರು ಸಲ ಹುಲಿಯನ್ನು ನೋಡಿದ್ದೆನಾದರೂ ಬೇಟೆಯ ವೇಳೆಯಲ್ಲಿ ಹುಲಿಯ ಗಾಂಭೀರ್ಯ, ಅದರ ಕ್ರೌರ್ಯ, ಓಟದ ವೇಗ ಇದನ್ನೆಲ್ಲ ಇದೇ ಮೊದಲ ಬಾರಿ ನೋಡಿದಾಗ ನನಗೆ ಈ ಕಾಡು ಪ್ರಾಣಿಗಳನ್ನು ಹೋಲಿಸಿದರೆ ಮಾನವ ಬರಿದೆ ಹುಲ್ಲಿಗೂ ಸಮವಲ್ಲ ಎಂಬ ಸತ್ಯ ಗೊತ್ತಾಯಿತು. ಒಂದು ವೇಳೆ ನಾವದರ ನಡೆಗೆ ಅಡ್ಡ ಬಂದರೆ ಅಥವಾ ಅದರ ವೇಗಕ್ಕೆ ಸಿಲುಕಿದರೆ ಅದರ ಒಂದೇ ಹೊಡೆತ ನಮ್ಮನ್ನು ಯಮಲೋಕಕ್ಕೆ ಅಟ್ಟುವುದಂತು ಖಂಡಿತ. ನಾನು ಹತ್ತಿದ ಮರದ ಬುಡದಿಂದಲೆ ಈ ಎರಡು ಪ್ರಾಣಿಗಳು ಸಾವು ಬದುಕಿನ ಹೋರಾಟದ ಅಂತಿಮ ಹಂತಕ್ಕೆ ತಲುಪುವತ್ತ ಹೊರಟಿದ್ದನ್ನು ನೋಡುತ್ತಿದ್ದಂತೆಯೆ ಹುಲಿಯು ಕಡವೆಯ ಬೆನ್ನ ಮೇಲೆ ಹಾರಿತಾದರೂ ಸಮತೋಲನ ತಪ್ಪಿ ಕೆಳಗೆ ಜಾರಿತು. ಅಷ್ಟರೊಳಗೆ ಕಡವೆಯ ವೇಗ ಇನ್ನೂ ಜಾಸ್ತಿಯಾಯಿತು. ನಾನು ಎತ್ತರದಲ್ಲಿದ್ದುದರಿಂದ ಇದೆಲ್ಲವೂ ನನಗೆ ಕಣ್ಣೆದುರು ಸ್ಪಷ್ಟವಾಗಿ ಕಾಣುತ್ತಿತ್ತು. ಅಂತೆಯೇ ಮತ್ತಷ್ಟು ದೂರ ಈ ಓಟ ಮುಂದುವರೆದಾಗ ಕಡವೆ ಹಟಾತ್ತನೆ ಹಿಂದಿರುಗುವುದಕ್ಕೂ ಹುಲಿಯು ಕಡವೆಯ ಮೇಲೆ ಹಾರುವುದಕ್ಕೂ ಆ ಒಂದು ಕ್ಷಣ ಸಾಕ್ಷಿಯಾದಾಗ ಅಲ್ಲಿ ಏನು ನಡೆಯುತ್ತದೆ ಎಂದೇ ನನಗೆ ಗೊತ್ತಾಗಲಿಲ್ಲ. ನಾನೆಣಿಸಿದ್ದೇ ಬೇರೆ ಅಲ್ಲಿ ನಡೆದದ್ದೇ ಬೇರೆ. ಅರಣ್ಯವೆಂಬ ಪ್ರಪಂಚದಲ್ಲಿ ಹೀಗೂ ಆಗುತ್ತದೆ ಎಂಬ ಅರಿವುಂಟಾದದ್ದೇ ನನ್ನ ಆಗಿನ ಸ್ಥಿತಿಯಾಗಿತ್ತು. ಮಾತ್ರವಲ್ಲ ಕಾಲ ಬಾರದಿದ್ದರೆ ಯಮನೂ ಮುಟ್ಟಲಾರ ಎಂಬ ಸತ್ಯವೂ ತಿಳಿಯಿತು.”

ಅಷ್ಟರಲ್ಲಿ ಸುಂದ್ರಿ, ಕಮಲಿ, ರಾಮಯ್ಯ ಗೌಡ, ಮುತ್ತೇ ಗೌಡ ಅಮ್ಮು ಗೌಡ್ತಿ ಅಲ್ಲದೆ ಪಕ್ಕದ ಮನೆಗಳಿಂದ ಬಂದಂಥ ಯುವಕರೆಲ್ಲ ಕಣ್ಣು ಕಣ್ಣು ಬಿಟ್ಟು ಇಲ್ಲೇ ಹುಲಿ ಬಂತೇನೋ ಎಂಬ ಭೀತಿಯ ಭಾವದಿಂದ ಸಂಕ್ರೇ ಗೌಡರ ಕಥೆಯನ್ನು ಕೇಳುತ್ತಿದ್ದರು. “ಮುಂದೇನಾಯಿತು ಹೇಳಪ್ಪ. ನಮಗೂ ಇಲ್ಲಿ ಭಾರಿ ಭೀಕರವಾದ ಪ್ರಾಣಿಗಳ ಕೂಗು ಕೇಳಿಬಂತು. ನಮಗಾದರೊ ನಿನ್ನದೇ ಚಿಂತೆ. ಇನ್ನೊಂದು ಘಳಿಗೆ ನೀನು ಬರುವುದು ತಡವಾಗುತ್ತಿದ್ದರೆ ಇಷ್ಟು ಜನರೂ ನಿನ್ನನ್ನು ಹುಡುಕಲು ಬರುವುದೆಂದು ತೀರ್ಮಾನಿಸಿದ್ದರು.” ಎಂದು ಕಮಲಿ ಕುತೂಹಲ ವ್ಯಕ್ತ ಪಡಿಸಿದಾಗ ಸಂಕ್ರೇ ಗೌಡರು ಮೈಯ ಬೆವರನ್ನೆಲ್ಲ ಬೈರಾಸಿನಿಂದ ಒರೆಸಿಕೊಂಡು ಮುಂದುವರಿಸಿದರು.
**********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅಳಂಬ..೩
****


ವಿಶೇಷವೆಂದರೆ ಅಳಂಬದಲ್ಲಿ ಇವತ್ತಿರುವಂಥ ಗೌಡರ ಮನೆಗಳೆಲ್ಲವೂ ಸಂಕ್ರೇಗೌಡರ ಮೂಲ ಮನೆಯವರಿಗೆ ಸಂಬಂಧ ಪಟ್ಟವೇ ಆಗಿವೆ. ಅಂತೆಯೇ ಪಕ್ಕದ ಹಳ್ಳಿಗಳಲ್ಲಿರುವ ಬಿಲ್ಲವರ ಮನೆಗಳು, ಬ್ರಾಹ್ಮಣರ ಮನೆಗಳು ಕೂಡ ಮೂಲತಹ ಒಂದೇ ಮನೆಯವರಾಗಿದ್ದು ನಂತರ ಕವಲುಗಳಾದ್ದರಿಂದ ಈ ಎಲ್ಲ ಪಂಗಡಗಳು ಮದುವೆಯಂಥ ಸಂಬಂಧಗಳಿಗೆ ತಮ್ಮ ಕಾಡಿನ ಪ್ರಪಂಚದ ಹಳ್ಳಿಗಳ ಹೊರತಾದ ಊರುಗಳನ್ನೂ ಹುಡುಕಬೇಕಾಗುತ್ತದೆ ಎನ್ನುವುದೂ ಸತ್ಯವೆ. ಇನ್ನು ಅಳಂಬದ ಪ್ರಕೃತಿ ಅತ್ಯಂತ ಸಿರಿತನದಿಂದ ಕೂಡಿದರೂ ಕುಟುಂಬಗಳ ಆರ್ಥಿಕ ಸ್ಥಿತಿ ಮಾತ್ರ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿಲ್ಲ. ಆದರೆ ಅಳಂಬದವರ ದೃಷ್ಟಿಯಿಂದ ಯಾರೂ ಬಡವರಲ್ಲ. ಕಾರಣವೆಂದರೆ ಹೊಟ್ಟೆ ಪಾಡಿನ ಹೊರತಾಗಿ ಇತರ ಜೀವನಾವಶ್ಯಕತೆಗಳು ಅಳಂಬದವರಿಗೆ ನಾಗರಿಕ ಪ್ರಪಂಚದವರಿಗಿಂತ ಬಹಳಷ್ಟು ಕಡಿಮೆ ಇರುತ್ತಿದ್ದುದರಿಂದ ಒಂದು ರೀತಿಯಲ್ಲಿ ಮಾನಸಿಕವಾಗಿ ಸಿರಿವಂತರೆ ಆಗಿದ್ದರು. ಇನ್ನು ಅಳಂಬದ ಭೂಸ್ಥಿತಿಯೂ ಘಟ್ಟಗಳ ಪ್ರದೇಶವಾದದ್ದರಿಂದ ಬೇಸಾಯ ಮಾಡುವಷ್ಟು ಸಮತಟ್ಟಾದುದಲ್ಲ. ಆದರೆ ಇದ್ದ ಜಾಗವನ್ನು ಸಮತಟ್ಟಾಗಿ ಮಾಡಿ ಒಂದಷ್ಟು ಭತ್ತ ಬೆಳೆಸುವುದರ ಜತೆಗೆ ಅಡಿಕೆ-ತೆಂಗು-ಬಾಳೆಯಂಥ ಮಿಶ್ರ ಬೆಳೆಗಳಿಂದ ತಮ್ಮ ತಮ್ಮ ಜೀವನಕ್ಕೆ ಆದಾಯವನ್ನು ಕಂಡುಕೊಂಡಿದ್ದರು. ಹಾಗೆಂದು ಕೃಷಿ ಕಾರ್ಯಗಳಿಗೆ ಆಗಲಿ ಬೇಸಾಯಕ್ಕಾಗಲಿ ಕುಡಿಯುವುದಕ್ಕಾಗಲಿ ನೀರಿನ ಕೊರತೆ ಎಂಬುದು ಪಶ್ಚಿಮ ಘಟ್ಟದ ಯಾವ ಹಳ್ಳಿಯಲ್ಲೂ ಉಂಟಾಗುವುದಿಲ್ಲ. ಕಾರಣವೆಂದರೆ ಹಿಂದಿನ ಮೂಲ ನಿವಾಸಿಗಳು ನೀರಿನ ಒರತೆಗನುಗುಣವಾಗಿ ವಾಸ್ತವ್ಯಗಳನ್ನು ಹುಡುಕಿದ್ದರು. ಅಂತೆಯೇ ಇವರು ಪೂರ್ತಿಯಾಗಿ ಬೇಸಾಯವನ್ನೇ ನೆಚ್ಚಿಕೊಂಡವರಲ್ಲ. ಅಪರೂಪಕ್ಕಿರುವ ಬ್ರಾಹ್ಮಣರ ಮನೆಗಳ ಹೊರತಾಗಿ ಇತರ ಪಂಗಡಗಳ ಯುವಕರು ವರುಷಕ್ಕೆ ಆರು ತಿಂಗಳಿಗಾಗುವಷ್ಟು ಕಾಡುತ್ಪತ್ತಿಯನ್ನು ನಂಬಿಕೊಂಡವರು. ಉದಾಹರಣೆಗೆ ಕಾಡಲ್ಲಿ ಸಿಗುವಂಥ ಬೆತ್ತ ತಂದು ಬುಟ್ಟಿ ಮಾಡುವುದು, ರಾಮಪತ್ರೆ, ಕರಿಮೆಣಸು, ಕೆತ್ತೆ ಹುಳಿ, ದಾಲ್ಚಿನಿ, ಶೀಗೆ, ನೊರೆಕಾಯಿ ಮುಂತಾದ ಹಲವಾರು ದ್ರವ್ಯಗಳನ್ನು ಯುವಕರು ಲಾಗಾಯ್ತಿನಿಂದಲೂ ತಂದು ಮಾರಾಟ ಮಾಡುವುದು ತಮ್ಮ ಹಕ್ಕೆಂದೇ ತಿಳಿದಿದ್ದರು.

avdvertisement:


ಇಲ್ಲಿಯ ಜನರಿಗೆ ಮನೆ, ಜಮೀನುಗಳು ಎಷ್ಟು ಸಹಜವೋ ಅಂತೆಯೇ ಅವರವರ ಜಮೀನಿನ ಬಳಿ ಇರುವಂಥ ಕಾಡು ಕೂಡ ಅಷ್ಟೇ ಸಹಜವಾಗಿರುತ್ತದೆ. ಕಾಡಿಗೆ ಹೋದವರು ಅಕ್ಕಿ, ಉಪ್ಪು, ಮೆಣಸು, ಪಾತ್ರೆ, ವೀಳ್ಯಕ್ಕೆ ಬೇಕಾದ ವೀಳ್ಯದೆಲೆ-ಹೊಗೆಸೊಪ್ಪು-ಅಡಿಕೆ.. ಇತ್ಯಾದಿ ಪ್ರಾಥಮಿಕ ಅವಶ್ಯಕತೆಗಳಿಗೆ ಬೇಕಾದ ಸಾಮಗ್ರಿಗಳ ಜತೆಗೇ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಬೆತ್ತ ತರಲೊ, ಜೇನಿನ ಅನ್ವೇಷಣೆಯೊ, ಕಾಡು ಪ್ರಾಣಿಗಳ ಬೇಟೆಯೊ, ಕಾಡುತ್ಪತ್ತಿಯ ಶೇಖರಣೆಯೊ.. ಹೀಗೆ ಹಲವಾರು ವಿಷಯಗಳಿರುತ್ತವೆ. ಆದ್ದರಿಂದ ಕಾಡಿಗೆ ಹೋದವರು ಬಂದ ಮೇಲೆ ಬಂದರೆನ್ನಬಹುದು. ಇವತ್ತು ಬಾರದಿದ್ದರೆ ನಾಳೆ. ನಾಳೆ ಬಾರದಿದ್ದರೆ ನಾಡಿದ್ದು. ಹೀಗೆ ಕಾಡಿಗೆ ಹೋಗುವ ದಿನದಂತೆ ವಾಪಸು ಬರುವ ದಿನಕ್ಕೆ ನಿರ್ದಿಷ್ಟತೆ ಇಲ್ಲ. ಹೋದಂಥ ಕೆಲಸವಾಗಬೇಕೆನ್ನುವುದೇ ಮುಖ್ಯ.

“ಯಾಕಮ್ಮ ಇನ್ನೂ ಅಪ್ಪ ಬಂದಿಲ್ಲ” ಎಂದು ಕಮಲಿ ಅಮ್ಮನನ್ನು ಕೇಳಿದಳು. ಯಾವಾಗಲು ಸಂಕ್ರೇ ಗೌಡರು ಎಲ್ಲೇ ಹೋದರೂ ಕತ್ತಲಾಗುವ ಮುನ್ನ ಮನೆ ಸೇರುತ್ತಿದ್ದರು. ಹಾಗೆಂದು ಅಮಾವಾಸ್ಯೆಯ ಕತ್ತಲಲ್ಲೂ ಯಾವ ಬೆಳಕಿಲ್ಲದೆ ನಡೆಯುವುದು ಸಂಕ್ರೇ ಗೌಡರಿಗೆ ಕಷ್ಟವಲ್ಲ. ಆದರೆ ವಯಸ್ಸಾದಂತೆ ಹಾಗು ಮನೆಯವರ ಒತ್ತಡ ಹೆಚ್ಚಾದಂತೆ ಅನಿವಾರ್ಯತೆಯ ಹೊರತಾಗಿ ಇತ್ತೀಚೆಗಿನ ದಿನಗಳಲ್ಲಿ ರಾತ್ರಿ ಯಾವುದೇ ಸಂಚಾರಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ಇಂದು ತಡ ರಾತ್ರಿಯಾದರೂ ಗೌಡ್ರು ಬಾರದಿದ್ದುದರಿಂದ ಸಹಜವಾಗಿ ಮನೆಯಲ್ಲಿ ಸಣ್ಣದೊಂದು ಆತಂಕವುಂಟಾದದ್ದು ಸಹಜ.

“ಇಷ್ಟರಲ್ಲೇ ಬರಬೇಕಿತ್ತು ಮಗಳೆ. ‘ಇವತ್ತು ಬಹಳ ದೂರ ಹೋಗಲಿಕ್ಕಿಲ್ಲ ಇಲ್ಲೇ ಹತ್ತಿರ ಒಂದಷ್ಟು ಕಾಳು ಮೆಣಸು ನೋಡಿ ಬಂದಿದ್ದೇನೆ ಹೀಗೆ ಹೋಗಿ ಹಾಗೆ ಬರುತ್ತೇನೆ’ ಎಂದು ಹೋಗಿದ್ದರಿಂದ ನನಗೂ ಗಾಭರಿಯಾಗುತ್ತದೆ” ಎಂದು ಸಂಕ್ರೇ ಗೌಡರ ಹೆಂಡತಿ ಸುಂದ್ರಿ ಹೇಳಿದರು.

“ಅಪ್ಪನಿಗೆ ಅದೆಷ್ಟು ಬಾರಿ ಹೇಳಿದ್ದೇನೆ. ನಿಮಗೆ
ಪ್ರಾಯವಾಗುತ್ತ ಇದೆ. ಕಾಡಿಗೆ ಹೋಗುವುದು ಸಾಕು ಎಂದರೆ ಕೇಳಲಾರರು” ಎಂದು ಕಮಲಿ ಅಮ್ಮನಲ್ಲಿ ತನ್ನ ಅಳಲನ್ನೂ ಹಂಚಿಕೊಂಡಳು.

ಸಂಕ್ರೇ ಗೌಡರ ತಾಯಿ ಅಮ್ಮು ಗೌಡ್ತಿ. ಅಳಂಬದ ಮನೆಯಲ್ಲಿರುವ ಹಿರಿಯ ಜೀವ. ಮನೆಯೊಳಗಿಂದಲೇ “ಕಮಲೀ ಸ್ವಲ್ಪ ನೀರು ಕೊಡೆ” ಎಂದು ಕೇಳಿದರು.

“ತಂದೆ ಅಜ್ಜಿ” ಎಂದು ಕಮಲಿ ನೀರು ಕೊಂಡು ಹೋದಳು. ನೀರನ್ನು ಪಡಕೊಂಡ ಅಮ್ಮು ಗೌಡ್ತಿ “ಸಂಕ್ರು ಬರ್ಲಿಲ್ವೆ” ಎಂದು ಕೇಳಿದಳು.

ಅಷ್ಟರಲ್ಲಿ ಕಾಳ ಬೊಗಳಲು ಪ್ರಾರಂಭಿಸಿತು. “ಬಹುಷ ಅಪ್ಪ ಬಂದರೆಂದು ಕಾಣುತ್ತದೆ” ಎಂದು ಕಮಲಿ ಹೊರಗೋಡಿದಳು.

ಕಾಳನ ಜೊತೆ ಇತರ ನಾಯಿಗಳೂ ಜೋರಾಗಿ ಬೊಗಳುತ್ತಿದ್ದುವೇ ಹೊರತು ಯಾರೂ ಬರುವುದು ಕಾಣಿಸಲಿಲ್ಲ. ಆದರೆ ಅದೇವೇಳೆ ದೂರದಲ್ಲೆಲ್ಲೊ ಅರಣ್ಯವನ್ನೇ ನಡುಗಿಸುವಂತೆ ಕಡವೆಯ ಆರ್ಭಟದ ಜತೆಗೆ ಹುಲಿಯ ಘರ್ಜನೆಯೂ ಕೇಳುತ್ತಿತ್ತು. ಅಳಂಬದಲ್ಲಿ ಇದು ಅಪರೂಪವಲ್ಲ. ಆಗಾಗ್ಗೆ ಕಡವೆ, ಹುಲಿ, ಚಿರತೆಗಳ ನಡುವೆ ಜಗಳಗಳು ಆಗುವುದು ಅಂತೆಯೇ ಪ್ರಾಣೋತ್ಕರ್ಷದ ವೇಳೆಯಲ್ಲಿ ಕಾಡನ್ನೇ ನಡುಗಿಸುವಷ್ಟು ಘರ್ಜನೆಗಳ ಭೀಕರತೆ ಎಲ್ಲರಿಗೂ ಅನುಭವವಿರುವಂಥದ್ದೇ ಆದರೂ ಇವತ್ತು ಸಂಕ್ರೇ ಗೌಡರು ಕಾಡಿನಿಂದ ಬಾರದೇ ಇದ್ದಾಗ ಈ ಘರ್ಜನೆಗಳು ಒಳ್ಳೆಯ ಲಕ್ಷಣವಲ್ಲವೆಂಬುದು ಅರಿವಿದ್ದುದರಿಂದ ಎಲ್ಲರೂ ಭಯಭೀತರಾದದ್ದಂತು ಸತ್ಯ. ಇತ್ತ ನಾಯಿಗಳು ಸ್ಥಬ್ದವಾಗದೆ ಏಕಪ್ರಕಾರ ಬೊಗಳುತ್ತಿದ್ದವು. ಪ್ರತಿಯೊಂದು ಕ್ಷಣವನ್ನೂ ಭೀತಿಯಲ್ಲೇ ಕಳೆಯುತ್ತಿರಲು ಹೊರಗೆ ಹೋದಂಥ ರಾಮಯ್ಯ ಗೌಡ ಮತ್ತು ಮುತ್ತೇ ಗೌಡ ಮನೆಗೆ ಬಂದರು. ಅಷ್ಟರಲ್ಲಿ ಮನೆಯವರೆಲ್ಲ ಭೀತಿಯಲ್ಲಿದ್ದದ್ದನ್ನು ಕಂಡು ಏನೋ ನಡೆಯಬಾರದ್ದು ನಡೆದಿದೆ ಎಂದುಕೊಂಡಾಗ ಕಮಲಿಯು ಎಲ್ಲವನ್ನೂ ತಿಳಿಸಿದಳು. ನಾಯಿಗಳ ನಿರಂತರ ಬೊಗಳುವಿಕೆಯಲ್ಲಿ ಕಾಡೊಳಗಿನ ಯಾವುದೇ ಘರ್ಜನೆಗಳಾಗಲಿ ಯಾರಾದರೂ ಬೊಬ್ಬೆ ಹೊಡೆಯುವುದಾಗಲಿ ಕೇಳುವಂತಿರಲಿಲ್ಲ. ಗಂಡಸರು ಮನೆಗೆ ಬಂದದ್ದರಿಂದ ಎಲ್ಲರಿಗೂ ಒಂದಷ್ಟು ಧೈರ್ಯ ಬಂದರೂ ಸಂಕ್ರೇ ಗೌಡರ ಮುಖ ನೋಡದೆ ಯಾರಿಗೂ ಸಮಾಧಾನವಿಲ್ಲವೆಂಬುದು ಸುಳ್ಳಲ್ಲ. “ಸ್ವಲ್ಪ ಹೊತ್ತು ನೋಡೋಣ.. ಆಗಲೂ ಅಪ್ಪ ಬಾರದಿದ್ದರೆ ಕಾಡಿಗೆ ಹೋಗುವುದೇ ಒಳ್ಳೆಯದು” ಎಂದು ರಾಮಯ್ಯ ಗೌಡ್ರು ನಿರ್ಧರಿಸಿದರು. ಅಂತೆಯೇ ಪಕ್ಕದಲ್ಲಿರುವ ಮನೆಗಳಿಗೆ ಹೇಳಿ ಅಲ್ಲಿಂದ ನಾಲ್ಕೈದು ಯುವಕರನ್ನೂ ಬರಹೇಳಿ ಬ್ಯಾಟರಿ ಲೈಟು, ಕತ್ತಿ, ದೊಣ್ಣೆಗಳೊಂದಿಗೆ ಹೊರಡುವುದೆಂದು ನಿರ್ಧರಿಸಿದರು. (ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ.. ಮುಂದೆ ನೋಡೋಣ)
**********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

————————————————————————————————————————————————————————

ಅಳಂಬ..೨
*********


ಪಶ್ಚಿಮ ಘಟ್ಟಗಳ ಹೆಬ್ಬಾಗಿಲಿನಂತಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಲ್ಲಿ ಇರುವಂಥ ಸುಂದರವಾದ ‘ಅಳಂಬ’ ಎಂಬ ಊರಲ್ಲಿ ಅನಾದಿ ಕಾಲದಿಂದ ವಾಸವಾಗಿದ್ದಂಥ ಆದಿ ವಾಸಿಗಳ ಹತ್ತಾರು ಕುಟುಂಬಗಳು ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡಿವೆ. ಕಾರ್ಕಳ ಬೆಳ್ತಂಗಡಿಯ ಹೆದ್ದಾರಿಯಲ್ಲಿ ನಾರಾವಿ ಎಂಬ ಸಣ್ಣ ಪೇಟೆಯಿದೆ. ಅಲ್ಲಿಂದ ಮುಂದೆ ಅರಸ್ಕಟ್ಟೆ ಎಂಬಲ್ಲಿಂದ ಎಡಕ್ಕೆ ಪಶ್ಚಿಮ ಘಟ್ಟಗಳತ್ತ ಹೊರಟರೆ ಮೊದಲಾಗಿ ಸಿಗುವ ಹಳ್ಳಿಯೇ ಕುಕ್ಕುಜೆ. ಈ ಕುಕ್ಕುಜೆ ಎನ್ನುವ ನಾಲ್ಕೈದು ಮನೆಗಳಿರುವ ಹಳ್ಳಿಯ ತೋಟ ಗದ್ದೆಗಳನ್ನು ದಾಟಿ ಮುನ್ನಡೆದಾಗ ಪಶ್ಚಿಮ ಘಟ್ಟಗಳ ಸಾಲುಗಳು ಪ್ರಾರಂಭವಾಗುತ್ತವೆ. ನಿತ್ಯ ಹರಿದ್ವರ್ಣದ ಈ ಕಾಡುಗಳಲ್ಲಿ ಇರುವಂಥ ಪ್ರತಿಯೊಂದು ಹಳ್ಳಿಯಿಂದ ಹಳ್ಳಿಗೂ ಮಾನವರು ಅದರಲ್ಲೂ ಕಾಡು ಜನರು ನಿತ್ಯವೂ ತಿರುಗಾಡುವ ಕಾಲು ದಾರಿಗಳಿವೆ. ಅಂತೆಯೇ ಮುಖ್ಯವಾದ ದಾರಿಗೆ ಅಲ್ಲಲ್ಲಿ ಕೆಲವು ಸೂಕ್ಷ್ಮ ದಾರಿಗಳೂ ಬಂದು ಸೇರುತ್ತವೆ. ಕಾಡಿನ ಪರಿಚಯವಿಲ್ಲದವರಿಗೆ ಇವು ದಾರಿಗಳೆಂದೇ ಗೊತ್ತಾಗದಿರುವಷ್ಟು ನಾಜೂಕು. ಇಂಥ ಏರಿಳಿತದ ಈ ದಾರಿಯಲ್ಲಿ ಎರಡು ಮೈಲು ನಡೆದಾಗ ಸಿಗುವುದೇ ಈ ಅಳಂಬ. ರಕ್ಷಿತಾರಣ್ಯದ ಮಧ್ಯದಲ್ಲಿರುವ ಈ ಹಳ್ಳಿಗಳ ಸೌಂದರ್ಯವನ್ನು ಬಲ್ಲವರೆ ಬಲ್ಲರು. ಪ್ರತಿಯೊಂದು ಹಳ್ಳಿಯ ಪರಿಧಿಯೂ ಅರಣ್ಯಗಳೇ ಆಗಿರುವುದು ಈ ಹಳ್ಳಿಗಳ ವಿಶೇಷ. ಅಂತಹ ಅರಣ್ಯದ ಸೆರಗಿನಲ್ಲಿ ಬಚ್ಚಿಕೊಂಡಿರುವ ಅಳಂಬವೆಂಬ ಪುಟ್ಟ ಹಳ್ಳಿಗೆ ಸ್ವಾಗತವನ್ನು ಕೊಡುವುದು ಗೇರು ಬೀಜದ ಹಾಡಿ. ಅಳಂಬ ಮಾತ್ರವಲ್ಲ ಈ ಘಟ್ಟದ ವ್ಯಾಪ್ತಿಯಲ್ಲಿ ಬರುವಂಥ ಎಲ್ಲ ಹಳ್ಳಿಗಳ ಚಿತ್ರಣವೂ ಸಾಮಾನ್ಯವಾಗಿ ಹೀಗೆಯೇ ಇರುತ್ತದೆ…

ಹಾಡಿ ಕಳೆದ ಮೇಲೆ ಗದ್ದೆಗಳು, ಗದ್ದೆಯ ಹುಣಿಗಳಲ್ಲಿ ತೆಂಗಿನ ಸಾಲುಗಳು, ಮುಳಿ ಹುಲ್ಲಿನ ಅಥವಾ ಸೋಗೆಯ ಮಾಡಿನ ಮನೆಗಳು, ಅಲ್ಲೇ ಪಕ್ಕದಲ್ಲಿ ಹರಿಯುವ ಶುದ್ಧ ನೀರಿನ ತೋಡುಗಳು, ನೀರಿನಲ್ಲಿ-ಗದ್ದೆಗಳಲ್ಲಿ-ಅಂಗಳದಲ್ಲಿ ಕೆಲವರು ಲಂಗೋಟಿ ಧರಿಸಿಕೊಂಡು ಕೆಲವರು ನಗ್ನವಾಗಿ ಕೆಲವರು ಲಂಗೋಟಿ ಧರಿಸಿಯೂ ಅರೆನಗ್ನವಾಗಿ ಆಡಿಕೊಂಡಿರುವ ಮಕ್ಕಳು, ಮನೆಗಂಟಿಕೊಂಡೇ ಇರುವ ಜಾನುವಾರುಗಳ ಹಟ್ಟಿ, ಅಂಗಳದ ಬದಿಯಲ್ಲೊಂದು ಕೋಳಿಗಳ ಗೂಡು, ಜಗಲಿ ಮೂಲೆಯಲ್ಲಿ ನಾಯಿಗಳ ವಾಸ್ತವ್ಯ, ಸಮತಟ್ಟಲ್ಲದ ಜಾಗಗಳಲ್ಲಿ ಅಡಿಕೆಯ ತೋಟಗಳು, ಅಂಗಳ ಮತ್ತು ತೋಟದ ನಡುವಿಗೆ ಹಲಸಿನ ಮತ್ತು ಮಾವಿನ ಮರಗಳು, ಗದ್ದೆಯ ನಡುವಲ್ಲೊಂದು ರಾತ್ರಿ ಹಂದಿಗಳನ್ನು ಕಾಯಲು ಕಟ್ಟಿದ ಚಪ್ಪರದಂಥ ಮಾಡಿನ ರಚನೆಯುಳ್ಳ ಸಣ್ಣದಾದ ತಟ್ಟಿ ಮನೆ, ಮನೆಯಂಗಳದಲ್ಲಿ ನಿಂತು ನೋಡಿದಾಗ ಕಾಡಿನ ಆಚೆಗೆ ದಿಗಂತದಲ್ಲಿ ಕಾಣುವ ಹಸಿರು ಬೆಟ್ಟಗಳು, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಕಾಗೆ, ಗುಬ್ಬಚ್ಚಿ, ಕೋಗಿಲೆಯಂಥ ಹಕ್ಕಿಗಳು, ಎಲ್ಲೋ ದೂರದಲ್ಲಿ ಇನ್ನೊಂದು ಹಳ್ಳಿಯ ಬೊಗಳುವ ನಾಯಿಗಳ ಕ್ಷೀಣ ಶಬ್ದಗಳು, ಮತ್ತೆಲ್ಲೋ ಕಾಡೊಳಗೆ ಊಳಿಡುವ ನರಿಗಳು, ಅದೆಲ್ಲೋ ಕಾಡಿನಲ್ಲಿ ಜೇನು ಪಡೆಯಲೆಂದು ಹಾಕಿದ ಬೆಂಕಿಯ ಹೊಗೆಯ ಬಿಳಿಯಾದ ಹೊಗೆಯ ಮಾಲೆಗಳು, ಮೋಟಾರು ವಾಹನಗಳ ಪರಿಚಯವಿಲ್ಲದಿದ್ದರೂ ದಿನಾಲೂ ನಿರ್ದಿಷ್ಟ ವೇಳೆಯಲ್ಲಿ ಆಕಾಶ ಮಾರ್ಗದಲ್ಲಿ ಹೊಟ್ಟೆಯನ್ನಷ್ಟೇ ತೋರಿಸಿಕೊಂಡು ಓಡುತ್ತಿರುವ ವಿಮಾನಗಳು.. ಹೀಗೆ ಅನೇಕ ವಿಚಾರಗಳು ಈ ಹಳ್ಳಿಗಳ ಏಕಸಾಮ್ಯತೆಯ ಲಕ್ಷಣಗಳನ್ನು ತೋರಿಸುತ್ತವೆ. ಮಾತ್ರವಲ್ಲ ಇದರಿಂದಲೇ ಹಳ್ಳಿಗಳನ್ನು ಇವು ಒಂದು ಗೂಡಿಸಿವೆ ಎಂದೇ ಹೇಳಬಹುದು.
ಅಲ್ಲಿಂದ ಮುಂದೆ ಘಟ್ಟಗಳಿಗೆ ಸಮಾನಾಂತರವಾರಗಿ ಹೋದಾಗ ಅಳಂಬದಿಂದ ಅರ್ಧ ಮೈಲು ದೂರದಲ್ಲಿ ‘ಮಟ್ಕ್ಯೆ’ ಎಂಬ ಗೌಡರೆ ಹೆಚ್ಚಿರುವಂಥ ನಾಲ್ಕೈದು ಮನೆಗಳ ಜತೆಗೆ ಒಂದೆರಡು ಬಿಲ್ಲವರ ಮನೆಗಳು ಇರುವಂಥ ಸಣ್ಣ ಹಳ್ಳಿ. ಇಲ್ಲಿಯ ವೈಶಿಷ್ಟ್ಯವೆಂದರೆ ಎರಡು ತೋಡುಗಳ ಸಂಗಮ. ಕೆಲವೊಮ್ಮೆ ದೊಡ್ಡ ನೆರೆ ಬಂದರೆ ಒಂದಷ್ಟು ಕಾಲ ಮಟ್ಕ್ಯೆ ಎಂಬ ಹಳ್ಳಿಯ ಮನೆಗಳು ದ್ವೀಪದಂತಾಗುವುದೂ ಇದೆ. ಅಲ್ಲಿಂದ ಮತ್ತೆ ಒಂದು ಮೈಲು ದೂರದಲ್ಲಿ ನೂರಾರು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ವಲಸೆ ಬಂದಂಥ ಚಿತ್ಪಾವನಿ ಬ್ರಾಹ್ಮಣ ಕುಟುಂಬಗಳೇ ಹೆಚ್ಚಾಗಿರುವ ಜತೆಗೆ ಬಿಲ್ಲವರ ಒಂದೆರಡು ಮನೆಗಳಿರುವ ಮತ್ತೊಂದು ಹಳ್ಳಿ ಇದುವೆ ನೆಲ್ಲಿತಡ್ಕ. ಮುಂದೆ ಇದೇ ಸರಣಿಯಲ್ಲಿ ಮುಂದುವರೆದಾಗ ಸಿಗುವಂಥ ಎರಡು ಮೂರು ನಾಲ್ಕು ಮನೆಗಳಿರುವ ಕೇಡೇಲು, ಮಾಳಿಗೆ ಎಂಬಂಥ ಸಣ್ಣ ಸಣ್ಣ ಹಳ್ಳಿಗಳಂತೆ ಈ ಪಶ್ಚಿಮ ಘಟ್ಟದ ಮಡಿಲಲ್ಲಿ ಇಂಥ ನೂರಾರು ಹಳ್ಳಿಗಳು ಕಾಣಸಿಗುತ್ತವೆ. ಹೀಗೆ ಬೇರೆ ಬೇರೆ ಪಂಗಡಗಳ ಮನೆಗಳು ಒಂದೇ ಭಾವದಲ್ಲಿ, ಒಂದೇ ಮನೆಯವರಂತೆ ಪರಸ್ಪರ ಸಹಕಾರದೊಡನೆ ಹಾಗೂ ಸ್ವಾತಂತ್ರ್ಯದೊಡನೆ ನೂರಾರು ವರ್ಷಗಳಿಂದ ಈ ಪಶ್ಚಿಮ ಘಟ್ಟದ ಮಡಿಲಲ್ಲಿ ತಮ್ಮ ತಮ್ಮ ಬದುಕು ಕಟ್ಟಿಕೊಂಡು ಹಿತಾನುಭವದಲ್ಲಿರುವುದೇ ಈ ಹಳ್ಳಿಗಳ ವಿಶೇಷತೆ.

ಇಂತಿರುವ ಈ ಅಳಂಬದಲ್ಲಿ ಸಂಕ್ರೇ ಗೌಡರ ಮನೆಯೇ ಈಗಿರುವ ಮನೆಗಳಲ್ಲಿ ಅತ್ಯಂತ ಹಳೆಯದಾದ ಮನೆ ಎನ್ನಬಹುದು. ಸಂಕ್ರೇ ಗೌಡರು ಹೇಳುವಂತೆ ಈ ಮನೆಗೆ ಸಾಧಾರಣ ನೂರೈವತ್ತು ವರುಷಗಳೇ ಆಗಿರಬಹುದು. ಸಂಕ್ರೇ ಗೌಡರ ಮನೆಯ ಪಕ್ಕದಲ್ಲಿ ಪಶ್ಚಿಮ ಘಟ್ಟದಿಂದ ಇಳಿಯುವಂಥ ಸಣ್ಣ ಹಳ್ಳವೊಂದಿದೆ. ಸಂಕ್ರೇ ಗೌಡರ ಎಲ್ಲಾ ನೀರಿನ ಅವಶ್ಯಕತೆಗಳನ್ನು ಆ ಹಳ್ಳ ಅನಾದಿ ಕಾಲದಿಂದಲೂ ಪೂರೈಸುತ್ತಲೇ ಇದೆ. ಸಂಕ್ರೇ ಗೌಡರ ಮನೆ ಅಂತಲ್ಲ ಪಶ್ಚಿಮ ಘಟ್ಟದ ಗರ್ಭದೊಳಗಿರುವ ಎಲ್ಲ ಹಳ್ಳಿಗಳೂ ಇಂಥ ಸಣ್ಣ ಸಣ್ಣ ಹಳ್ಳಗಳೊಂದಿಗೇ ಬದುಕುವುದು ಸಹಜ. ಪ್ರಕೃತಿಯ ಕೆಲವೊಂದು ವಿಸ್ಮಯಗಳು ಯಾವ ತರ್ಕಕ್ಕೂ ನಿಲುಕದಂತಿರುವುದು ಸಹಜ ತಾನೆ. ಅಂತೆಯೆ ಗೌಡರ ಮನೆಯ ಹತ್ತಿರದಲ್ಲಿ ಹಳ್ಳವೊಂದಿತ್ತು. ಯಾವ ಮಹಾಮಾರಿ ಪ್ರವಾಹಕ್ಕೂ ಮನೆಯ ಅಂಗಳಕ್ಕೆ ಕೂಡ ನೀರು ಬಾರದಿರುವಷ್ಟು ಸರಾಗವಾಗಿ ಇದರ ನೀರು ಹರಿಯುತ್ತಿತ್ತು. ಅದೊಂದು ರಾತ್ರಿಯಲ್ಲಿ ಅಂದರೆ ಸಂಕ್ರೇ ಗೌಡರ ಮುತ್ತಜ್ಜನ ಕಾಲದಲ್ಲಿ ಯಾವುದೊ ಕೆಟ್ಟ ಗಳಿಗೆಯಲ್ಲಿ ನಿರ್ದಿಷ್ಟ ಕಣಿವೆಯಲ್ಲಿ ಅಸಾಧ್ಯವಾದ ಮಳೆ ಬಂದು ಕಣಿವೆ ಜರಿದುದರ ಪರಿಣಾಮವಾಗಿ ಮಣ್ಣು ನೀರು ಏಕಪ್ರಕಾರವಾಗಿ ಹರಿದು ಬಂದು ಸಂಕ್ರೇ ಗೌಡರ ಮನೆಯನ್ನು ಜಲ ಸಮಾಧಿ ಮಾಡಿತ್ತಂತೆ. ಪುಣ್ಯವಶಾತ್ ಸಂಕ್ರೇ ಗೌಡರ ಮುತ್ತಜ್ಜ ಮನೆಯಲ್ಲಿ ಒಬ್ಬರೇ ಇದ್ದರಂತೆ. ಅಂತೆಯೇ ನೆರೆಯ ನೀರು ಏರುತ್ತಿದ್ದಂತೆ ಮನೆಯ ಹಿಂದುಗಡೆ ಇದ್ದಂಥ ಗುಡ್ಡಕ್ಕೆ ಸಂಕ್ರೇ ಗೌಡರ ಅಜ್ಜ ಅದ್ಹೇಗೋ ರಾತ್ರಿಯ ಕತ್ತಲಲ್ಲಿ ತಡವರಿಸಿ ಏರಿದ್ದರಿಂದ ಹಾಗೂ ಇತರರು ಅದ್ಯಾವುದೊ ಕಾರಣಗಳಿಂದ ಊರ ಹೊರಗಿದ್ದುದರಿಂದ ಯಾರ ಪ್ರಾಣಗಳಿಗೂ ಅಪಾಯ ಮಾಡದೆ ಆ ನೆರೆಯ ನೀರು ಮನೆಯನ್ನು ಮಾತ್ರ ಮಗುಚಿ ಬಿಟ್ಟಿತಂತೆ. ಸಾಧಾರಣ ಈ ಮಾತಿಗೆ ನೂರೈವತ್ತರಷ್ಟು ವರುಷಗಳಾದವು. ಹಾಗೆ ಆ ಕಾಲದಲ್ಲಿ ಊರವರೆಲ್ಲ ಸೇರಿ ಕಟ್ಟಿದ ಹೊಸ ಮನೆಯೆ ಇಂದು ಅಳಂಬದಲ್ಲಿರುವ ಮನೆಗಳ ಪೈಕಿ ಹಳೆಯದಾದ ಮನೆ. ಇತರ ಮನೆಗಳೆಲ್ಲ ಆಯಾಯಾ ಕಾಲಕ್ಕೆ ಹೊಸತಾಗಿ ಕಟ್ಟಿದ ಮನೆಗಳೇ ಆಗಿವೆ. (ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ)
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

————————————————————————————————————————

 

 

ಅಳಂಬ..೧
**********
(ಇದೊಂದು ಕಾಲ್ಪನಿಕ ಕಾದಂಬರಿ. ಇದರಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು, ಕಾಲ, ವ್ಯವಹಾರ ಲೇಖಕನ ಕಲ್ಪನೆಯಾದರೂ ಬರುವಂಥ ಊರುಗಳ ಹೆಸರು, ಸಂಬಂಧ, ವೃತ್ತಿಗಳಿಗೆ ಮಾತ್ರ ಕುತ್ಲೂರು-ನಾರಾವಿ ಗ್ರಾಮದ ಹಳ್ಳಿಗಳೇ ಪ್ರೇರಣೆ. ಈ ಸರಣಿ ಓದುಗರ ಮನಸ್ಸಿಗೆ ಆನಂದ ನೀಡುವ ಉದ್ದೇಶದಿಂದ ಪ್ರಾರಂಭಿಸಿದ್ದೇನೆ. ಓದಲು ಉದ್ದವಾಗದಂತೆ ಸಣ್ಣ ಸಣ್ಣ ಕಂತುಗಳನ್ನು ನೀಡುತ್ತೇನೆ. ಬಹುಷ ವಾರಕ್ಕೆ ಎರಡು ದಿನ ಅಂದರೆ ಶನಿವಾರ ಮತ್ತು ಬುಧವಾರ ಪ್ರಕಟಿಸುತ್ತೇನೆ. ಖಷಿಯಾದರೆ ಒಂದು ಮೆಚ್ಚುಗೆ ಇರಲಿ ಅಥವಾ ಒಂದು ವಾಕ್ಯದ್ದಾದರೂ ಪರವಾಗಿಲ್ಲ ಪ್ರೇರಣೆ ನೀಡುವ ಎರಡು ಮಾತುಗಳಿರಲಿ. ಯಾಕೆಂದರೆ ನಿಮ್ಮ ಒಂದು ಮೆಚ್ಚುಗೆ ಹತ್ತು ಪುಟಗಳ ಬರವಣಿಗೆಗೆ ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಎಲ್ಲ ಸಾಹಿತ್ಯ ಪ್ರಿಯರಿಗೆ ನಮಸ್ಕಾರಗಳು… ಅಂತೆಯೇ ಈ ಕಾದಂಬರಿಯ ಕಾಲಮಾನವೂ ಸಾಧಾರಣ ಅರ್ಧ ಶತಮಾನಕ್ಕೂ ಹಿಂದಿನ ದಿನಗಳನ್ನು ನೆನಪಿಸುವಂಥದ್ದು. ಮತ್ತೊಮ್ಮೆ ನಿಮ್ಮ ಸಹಕಾರವನ್ನು ಕೋರುತ್ತಿದ್ದೇನೆ.)

ಅಳಂಬ.. ಎಲ್ಲರ ದೃಷ್ಟಿಯಲ್ಲಿ ಇದು ಕುಗ್ರಾಮ. ಆದರೆ ಪ್ರಕೃತಿಯ ಸೌಂದರ್ಯ ತಿಳಿದವರಿಗೆ, ಪ್ರಕೃತಿಯೊಡನೆ ಬೆರೆತು ಬಾಳುವವರಿಗೆ ಅಥವಾ ಅಳಂಬದವರಿಗೆ ಇದು ಸ್ವರ್ಗವೇ ಆಗಿದೆ. ವಾಹನಗಳ ಓಡಾಟವಿಲ್ಲ, ಕಳ್ಳಕಾಕರ ಭಯವಿಲ್ಲ, ಹೋಟೇಲು ಅಂಗಡಿಗಳಿಲ್ಲ, ಶಾಲಾ ಕಾಲೇಜುಗಳಿಲ್ಲ, ಆಸ್ಪತ್ರೆ ಎಂಬುದಿಲ್ಲ, ಕಾಲು ದಾರಿಯ ಓಡಾಟವೇ ಎಲ್ಲ, ಜಾತಿ ಜಾತಿಗಳೊಳಗೆ ಬಡಿದಾಟಗಳಿಲ್ಲ, ದೇವಸ್ಥಾನ ಗುಡಿಗಳಿಲ್ಲ, ಮೇಲು ಕೀಳುಗಳೆಂಬ ಭಾವಗಳಿಲ್ಲ… ಹೀಗೆ ಹತ್ತಾರು ಇಲ್ಲಗಳ ನಡುವೆ ಇರುವುದಾದರೂ ಏನೆಂದು ಕೊಂಡಾಗ ಸ್ವರ್ಗ ಮಾತ್ರ ಇಲ್ಲಿದೆ ಎನ್ನಬಹುದು. ಯಾಕೆಂದರೆ ಸ್ವರ್ಗದಲ್ಲಿ ಮೇಲೆ ಹೇಳಿದ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದಿರುವುದರಿಂದ ಹಾಗೂ ಅಳಂಬವು ಆ ಇಲ್ಲದ ಸೌಲಭ್ಯಗಳಿಂದಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡದ್ದರಿಂದ ಪೂರ್ಣ ಸ್ವರ್ಗ ಅಲ್ಲದೆ ಇದ್ದರೂ ಇದು ಸ್ವರ್ಗದಂಥ ಸುಗ್ರಾಮ ಎಂದು ಹೇಳಬಹುದು.

ಹಾಗಾದರೆ ಇಲ್ಲೇನಿದೆ ಎಂದಾಗ ಮೊದಲನೆಯದಾಗಿ ಸ್ವಚ್ಛಂದ ಬದುಕಿದೆ. ಪರಿಶುದ್ಧವಾದ ಗಾಳಿ ಇದೆ. ಅಮೃತ ಸಮಾನವಾದ ನಿತ್ಯವೂ ಹರಿದು ಹೋಗುವ ಗಂಗಾಜಲವಿದೆ. ಸುತ್ತಮುತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳಿವೆ. ದಿನಕ್ಕೆ ಒಂದೆರಡು ಸಲವಾದರೂ ಜಿಂಕೆ-ಕಡವೆ-ಕಾಡೆಮ್ಮೆ-ಕಾಡು ಹಂದಿಗಳ ಸಹಜ ಬದುಕಿನ ಸಂಚಾರ ಕಾಣುವ ಭಾಗ್ಯವಿದೆ. ಅಪರೂಪಕ್ಕೆ ಹೆಬ್ಬುಲಿಯ ದರ್ಶನವೂ ಆಗುವುದಿದೆ. ಅಂತೆಯೆ ಕಾಡು ಪ್ರಾಣಿಗಳಿಂದಾಗಿ ಅಳಂಬದಲ್ಲಿ ಮಾನವರು ಜೀವ ಕಳಕೊಂಡ ಉದಾಹರಣೆಯೇ ಇಲ್ಲವೆಂಬ ಖ್ಯಾತಿಯೂ ಇದೆ. ಹಕ್ಕಿಗಳ ಕಲರವ ಮನೆಯೊಳಗಿಂದಲೆ ಬರುತ್ತದೋ ಎಂಬ ಭಾವ ಬರುವಂಥ ಖೇಚರಿಗಳ ಹಿತವಾದ ಸಾಂಗತ್ಯವಿದೆ.

ಮಂಗಗಳು ನಿತ್ಯವೂ ಬಂದರೂ ಕೃಷಿ-ಬೆಳೆಯನ್ನು ಹಾಳು ಮಾಡದಿರುವಂಥ ಆಹಾರ ವ್ಯವಸ್ಥೆ ಕಾಡಿನೊಳಗೆ ಸರ್ವ ಕಾಲದಲ್ಲೂ ಇದೆ. ಬೇಸಿಗೆಯಲ್ಲಿ ತಂಪಾದ, ಚಳಿಗಾಲದಲ್ಲಿ ಬೆಚ್ಚಗಿನ, ಮಳೆಗಾಲದಲ್ಲಿ ಪ್ರವಾಹ ರಹಿತವಾದ ಸರ್ವ ಋತುಮಾನಗಳು ಮಾನವರಿಗಾಗಲಿ ಅನ್ಯ ಜೀವಿಗಳಿಗಾಗಲಿ ಹಿತಾನುಭವ ಕೊಡುತ್ತಿದೆ. ಆಗೊಮ್ಮೆ ಈಗೊಮ್ಮೆ ಬೃಹದಾಕಾರದ ಸರಿಸೃಪಗಳೊ ಸಣ್ಣ ಸಣ್ಣ ವಿಷದ ಹಾವುಗಳೊ ಬಂದು ಹೋಗುವುದೂ ಕಾಣಸಿಗುತ್ತದೆ. (ಜನರೇ ಹೆದರಿ ಅಂಥ ಹಾವುಗಳನ್ನು ಕೊಂದದ್ದೇ ಜಾಸ್ತಿ ಹೊರತು ಹಾವಿನ ಕಡಿತಕ್ಕೊಳಗಾದ ಜನರ ಸಮಾಚಾರ ತೀರಾ ವಿರಳವಿದೆ.) ಪಟ್ಟಣಗಳಿಂದ ವರುಷಕ್ಕೊಂದು ಕೆ.ಜಿ. ತರಕಾರಿಯನ್ನಾಗಲಿ ಹಣ್ಣುಗಳನ್ನಾಗಲಿ ತಾರದೆಯೂ ಪೌಷ್ಟಿಕಾಂಶಗಳಿಗೆ ಒಂದಿನಿತೂ ಕೊರತೆಯಾಗದ ಹಲವು ವೈವಿಧ್ಯಗಳ ಹೂ ಹಣ್ಣು ತರಕಾರಿ ಯಥೆಚ್ಛವಾಗಿ ದೊರೆಯುತ್ತಿರುತ್ತದೆ. ರಾತ್ರಿ ಬೆಳದಿಂಗಳ ಬೆಳಕಿನ ಜತೆಗೆ ಅಮಾವಾಸ್ಯೆಯ ಗಾಢಾಂಧಕಾರಗಳನ್ನು ಅನುಭವಿಸಿದ ಸಂತೃಪ್ತಿ ಇದೆ. ಕಷ್ಟವೋ ಸುಖವೋ ಯಾರಿಗೇ ಬಂದರೂ ತಮ್ಮದೇ ಎನ್ನುವ ಭಾವದಿಂದ ಪರಸ್ಪರ ಸಹಕರಿಸಿ ಸ್ಪಂದಿಸುವ ಗುಣ ಸರ್ವರಲ್ಲೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವ್ಯಾಪ್ತಿಯ ಅರಿವಿದೆ… (ಮೆಚ್ಚಿಗೆಯಾದರೆ ಮುಂದೆ ಇನ್ನೂ ಇದೆ.)
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ.

Events/Announcements

Advertisement

ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ

Post Views: 18 **ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ ಗೌರವ** ಶಿರಸಿ: ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವವೊಂದು ಶಿರಸಿ ತಾಲೂಕಿನ...

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 32 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ

Post Views: 75 ಡಾ. ಕೃಪಾ ಫಡಕೆಗೆ ವಿಪ್ರ ರತ್ನ ಪ್ರಶಸ್ತಿ ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆಸಾಲಿನ, ಪ್ರಸ್ತುತ ಮೈಸೂರು ನಿವಾಸಿ ಡಾ.ಕೃಪಾ ಫಡಕೆ ಅವರಿಗೆ ಶನಿವಾರ ಮೈಸೂರಿನಲ್ಲಿ ವಿಪ್ರ ರತ್ನ...

ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ – ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರರ ಉದಾತ್ತ ಕಾರ್ಯ

Post Views: 61 ನಿವೃತ್ತ ಶಿಕ್ಷಕ ಕವಿ ಶಂಕರ್ ಎನ್ ತಾಮನ್ಕರ್ ಮುಂಡಾಜೆ ಇವರು ತಮ್ಮ ತಂದೆಯವರಾದ ದಿ.ನಾರಾಯಣ ತಾಮನ್ಕರ್ ಹೆಸರಲ್ಲಿ ಪ್ರತಿವರ್ಷ ಕೊಡಮಾಡುವ ಶೈಕ್ಷಣಿಕ ಮತ್ತು ಆರೋಗ್ಯ ಸಹಾಯದ ಅಂಗವಾಗಿ...

ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026

Post Views: 107 ಚಿತ್ಪಾವನ ಸಮಾಜ (ರಿ) ಬೆಂಗಳೂರು ಶೃಂಗೇರಿ ಯಾತ್ರೆ ಹಾಗೂ ಶ್ರೀ ಶ್ರೀ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದ – 2026 ಪ್ರಿಯ ಸಮಾಜ ಬಾಂಧವರೇ, ಸಪ್ರೇಮ ನಮಸ್ಕಾರಗಳು....

ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು.

Post Views: 90 ಭಿಡೆ ಸಹೋದರಿಯರಿಗೆ ‘ವರ್ಣಶ್ರೀ’ ಬಿರುದು. ಲಾಸ್ಯ ವರ್ಧನ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿದ ವರ್ಣೋತ್ಸವ- 2026 ಸ್ಪರ್ಧೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಪ್ರಥಮ ಬಹುಮಾನದೊಂದಿಗೆ...

ವೃಕ್ಷ ಸಮಿತಿಯಲ್ಲಿ ಪರಿಸರ ತಜ್ಞ ಸದಸ್ಯರಾಗಿ ಡಾ. ಅಜಿತ್ ಹೆಬ್ಬಾರ್ ಹೊಸಮಠ ಆಯ್ಕೆ

Post Views: 64 ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ವೃಕ್ಷ ಸಂರಕ್ಷಣಾ ಅಧಿನಿಯಮದ ಪ್ರಕಾರ ನಗರ ಪ್ರದೇಶಗಳ ಮರಗಳ ಸಂರಕ್ಷಣೆಗಾಗಿ ನಿರ್ಮಿಸಿದ ಪ್ರಾಧಿಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್...

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 78 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 91 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 567 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

Recently Added

View All

ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ

Post Views: 32 ಡಾ. ಕರುಣಾ ಇವರ ಆಕಾರ್ ಡೆಂಟಲ್ ಕ್ಲಿನಿಕ್ ಇದರ ಪ್ರಾರಂಭೋತ್ಸವ, ನಿನ್ನೆ ಬೆಂಗಳೂರಿನ ನಾಗರಬಾವಿಯಲ್ಲಿ ಹೆತ್ತವರ ಸಮಕ್ಷಮದಲ್ಲಿ ನೆರವೇರಿತು. ನಮ್ಮ ಬಳಗದ ಯುವ ವಕೀಲರಾದ ಶ್ರೀಯುತ ರಂಜಿತ್...

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 209 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 296 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 450 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 318 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 468 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 302 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 285 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 309 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 226 Courtesy: Scholarspace with Anubhav

Watch our latest podcasts