ಮಹಾರಾಷ್ಟ್ರದ ಪ್ರಾಕೃತ ಭಾಷೆಯ ಒಂದು ಕವಲಾಗಿರುವಂತಹ ಒಂದು ಭಾಷೆ ಎಂದರೆ ಅದು ಚಿತ್ಪಾವನರ ಮನೆ ಮಾತು. ಅದೇ ಚಿತ್ಪಾವನಿ ಭಾಷೆ , ಮಹಾರಷ್ಟ್ರದ ಮರಾಠಿಯ ಹಳೆಯ ಪ್ರಬೇಧ.
ಇಂದಿಗೂ ಕೂಡ ಕರ್ನಾಟಕದ ದಕ್ಷಿಣದ ಕರಾವಳಿಯಂಚಿನಲ್ಲಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಚಿತ್ಪಾವನ ಸಮಾಜದಲ್ಲಿ ಮನೆ ಮಾತಾಗಿದೆ ಈ ಚಿತ್ಪಾವನಿ ಭಾಷೆ.
ಇತ್ತೀಚಿಗೆ ನಮ್ಮ ಈ ಚಿತ್ಪಾವನಿ ಭಾಷೆಗೆ ಆಂಗ್ಲ ಭಾಷೆಯನ್ನು ಮಿಶ್ರಿತಗೊಳಿಸಿ, ಭಾಷೆಯನ್ನು ಸರಳೀಕೃತಗೊಳಿಸಲಾಗುತ್ತಿದೆ. ಉದಾಹರಣೆಗೆ ಕಿತಂರೆ ಉಶ್ಶೀರು? – ಕಿತಂರೇ ಲೇಟ?
ಚಿತ್ಪಾವನಿ ಭಾಷೆಯನ್ನು ಬರೆಯಲು ಕನ್ನಡ ಹಾಗೂ ದೇವನಾಗರಿ ಲಿಪಿಯನ್ನು ಬಳಸಲಾಗುತ್ತದೆ.
ಚಿತ್ಪಾವನಿ ಭಾಷಾತಜ್ಞರಾಗಿರುವಂತಹ ಡಾ.ಎಂ.ಪ್ರಭಾಕರ ಜೋಶಿಯವರು ಚಿತ್ಪಾವನಿ ಭಾಷೆಯ ಉಗಮ ಹಾಗೂ ಮೂಲದ ಬಗ್ಗೆ ಹೀಗೆ ಹೇಳುತ್ತಾರೆ,
“ಮಹಾರಾಷ್ಟ್ರೀ ಪ್ರಾಕೃತವು ಸಾ.ಶ.ಪೂ. 3ನೇ ಶತಮಾನದಿಂದ 8ನೇ ಶತಮಾನದವರೆಗೆ ಆಡುಭಾಷೆಯಾಗಿತ್ತು. ಚಿತ್ಪಾವನಿಯು ಸುಮಾರು 1850ರ ಬಳಿಕ ರೂಪುಗೊಂಡಂತಹ ಹೊಸ ಮರಾಠಿ ಮಾನಕಭಾಷೆಯ ಹಳೆಯ ರೂಪವೇ ಹೊರತು ಮರಾಠಿಯ ಪರಿವರ್ತಿತ ರೂಪವಲ್ಲ”
ಸುಲಭ ಚಿತ್ಪಾವನಿ ಎನ್ನುವ ಪುಸ್ತಕವನ್ನು ಅಸ್ನೋಡಾ, ಗೋವಾ ಇಲ್ಲಿಯ ಶ್ರೀಯುತ ಶ್ರೀಧರ ಕೇಶವ ಬರ್ವೆಯವರು 2001ನೇ ಇಸವಿಯಲ್ಲಿ ಪ್ರಕಟಣೆಗೊಳಿಸಿದ್ದಾರೆ.
ಚಿತ್ಪಾವನಿ ಭಾಷಾ ವ್ಯಾಕರಣ
- ನಮ್ಮ ಚಿತ್ಪಾವನಿ ಭಾಷೆಯಲ್ಲಿರುವಂತಹ ವ್ಯಂಜನಗಳು ವಿಶಿಷ್ಟ ಉಚ್ಚಾರಗಳನ್ನು ಹೊಂದಿವೆ. ಅದರಲ್ಲಿಯೂ ‘ಚ’ ವರ್ಗದ ವ್ಯಂಜನಗಳಿಗೆ ಇನ್ನೂ ವಿಶಿಷ್ಟವಾದಂತಹ ಉಚ್ಚಾರವಿದೆ.
(*ಈಗ ಚಿತ್ಪಾವನಿ ಭಾಷೆಯನ್ನು ಬರೆಯಲು ಹೆಚ್ಚಿನವರು ದೇವನಾಗರಿ ಅಥವಾ ಕನ್ನಡ ಲಿಪಿಯನ್ನು ಬಳಸುತ್ತಾರೆ. ಅದೇ ರೀತಿ ಕೆಲವರು ಚಿಂಗ್ಲೀಷ್ ಅಂದರೆ ರೋಮನ್ ಲಿಪಿಯನ್ನು ಬಳಸುತ್ತಾರೆ.)
- ವರ್ಗೀಯ ವ್ಯಂಜನಗಳ ವೈಜ್ಞಾನಿಕ ವರ್ಗೀಕರಣ:
- ಕಂಠ್ಯ : ಕಿರುನಾಲಗೆಯ ಸಹಾಯದೊಂದಿಗೆ ಕಂಠದಿಂದ ಅಥವಾ ಗಂಟಲಿನಿಂದ ಉತ್ಪನ್ನವಾಗುವ ‘ಕ’ ವರ್ಗದ ಅಕ್ಷರಗಳು. ( ಕ,ಖ,ಗ,ಘ,ಙ)
- ತಾಲವ್ಯ : ತಾಲುವಿನ ಅಂದರೆ ಬಾಯಿಯೊಳಗಿನ ಮೇಲ್ಭಾಗದ( ಟಾಟ್ಟಾರೊ) ಮೃದು ಭಾಗಕ್ಕೆ ನಾಲಿಗೆಯ ಮಧ್ಯಭಾಗ ಸ್ಪರ್ಶಿಸಿ ಉತ್ಪನ್ನವಾಗುವ ‘ಚ’ ವರ್ಗ ವ್ಯಂಜನಗಳು.(ಚ,ಛ,ಜ,ಝ,ಞ)
- ಮೂರ್ಧನ್ಯ: ತಾಲುವಿನ ಗಟ್ಟಿ ಭಾಗಕ್ಕೆ ನಾಲಗೆಯ ತುದಿ ತಾಗಿ ಉತ್ಪನ್ನವಾಗುವ ‘ಟ’ ವರ್ಗ ವ್ಯಂಜನಗಳು( ಟ,ಠ,ಡ,ಢ,ಣ)
- ದಂತ್ಯ: ಹಲ್ಲುಗಳ ಒಳಭಾಗಕ್ಕೆ ನಾಲಗೆಯ ತುದಿ ತಾಗಿ ಉತ್ಪನ್ನವಾಗುವ ‘ತ’ ವರ್ಗ ವ್ಯಂಜನಗಳು( ತ,ಥ,ದ,ಧ,ನ)
- ಓಷ್ಠ್ಯ: ನಾಲಗೆಯ ಅಗತ್ಯ ಇಲ್ಲದೆ ತುಟಿಗಳ ಸಹಾಯದಿಂದ ಉತ್ಪನ್ನವಾಗುವ ‘ಪ’ ವರ್ಗ ವ್ಯಂಜನಗಳು( ಪ,ಫ,ಬ,ಭ,ಮ)
ಅದೇ ರೀತಿ ಯ,ರ,ಲ,ವ ಇತ್ಯಾದಿ ಅವರ್ಗೀಯ ವ್ಯಂಜನಗಳು ವಿವಿಧ ವರ್ಗಗಳಲ್ಲಿ ಹಂಚಿ ಹೋಗಿವೆ.
- ಅನುನಾಸಿಕಕ್ಕೆ ಅನುಸ್ವಾರದ ಪ್ರಯೋಗ:
ನಮ್ಮ ಚಿತ್ಪಾವನಿ ಭಾಷೆಯಲ್ಲಿ ಕಿತಂ, ಬರಂ ಎನ್ನುವ ಅನುನಾಸಿಕ ಉಚ್ಚಾರಗಳು ಬಳಸಲ್ಪಡುವ ಅಕ್ಷರಗಳು ಹಲವಾರಿವೆ. ಹಾಗೆಯೇ ಈ ಅನುನಾಸಿಕ ಅಕ್ಷರಗಳನ್ನು ಉಚ್ಚರಿಸಲು ಅನುಸ್ವಾರಗಳನ್ನು ಬಳಸಲಾಗುತ್ತದೆ.
ಅನುಸ್ವಾರದ ಅಕ್ಷರಕ್ಕೆ ಉಚ್ಚಾರವಾಗಿ ಯಾವಾಗಲೂ ‘ಮ್’ ಎಂದೇ ಬರುವುದಿಲ್ಲ. ಬದಲಾಗಿ, ವ್ಯಂಜನಗಳ ಯಾವ ಅಕ್ಷರದ ಅಥವಾ ಯಾವ ವರ್ಗದ ಅಕ್ಷರದ ಮೊದಲು ಅನುಸ್ವಾರ ಬರುತ್ತದೋ ಆ ಪ್ರಕಾರದಲ್ಲಿ ಉಚ್ಚರಿಸಲಾಗುತ್ತದೆ.
ಕ ವರ್ಗಕ್ಕೆ ಙ (ಅಂಕುಡಿ – ಅಙಕುಡಿ)
ಚ ವರ್ಗಕ್ಕೆ ಞ ( ಕುಂಚಿ – ಕುಞಚಿ )
ಟ ವರ್ಗಕ್ಕೆ ಣ (ಮಾಂಡೋವು – ಮಾಣ್ ಡೋವು )
ತ ವರ್ಗಕ್ಕೆ ನ ( ಸಾಂದಣ – ಸಾನ್ ದಣ)
ಪ ವರ್ಗಕ್ಕೆ ಮ ( ಆಂಬಟ – ಆಮ್ ಬಟ)
- ಅಕಾರಂತ ಅಕ್ಷರಗಳ ದೀರ್ಘ ಉಚ್ಚಾರ
ಚಿತ್ಪಾವನಿ ಭಾಷೆಯಲ್ಲಿ ಹ್ರಸ್ವ ಅಕ್ಷರಗಳು ದೀರ್ಘ ಉಚ್ಚಾರ ಹೊಂದುವ ಶಬ್ದಗಳು ಬಹಳಷ್ಟಿವೆ. ಕೊನೆಯ ಅಕ್ಷರಕ್ಕಿಂತ ಹಿಂದಿನ ಹೃಸ್ವಾಕ್ಷರ ಹೆಚ್ಚಾಗಿ ದೀರ್ಘವಾಗಿ ಉಚ್ಚರಿಸಲಾಗುತ್ತದೆ.
ಉದಾ: ಬಽರಂ , ಅಽಳುಂ, ಶಽಳ ಇತ್ಯಾದಿ.
- ಅಕಾರಂತ ಅಕ್ಷರಗಳ ಹ್ರಸ್ವ ಉಚ್ಚಾರ
ಚಿತ್ಪಾವನಿ ಭಾಷೆಯಲ್ಲಿ ಹ್ರಸ್ವ ಅಕ್ಷರಗಳ ಉಚ್ಚಾರವನ್ನು ಹೊಂದುವ ದೀರ್ಘ ಅಕ್ಷರಗಳ ಉದಾಹರಣೆಗಳು ಬಹಳಷ್ಟಿವೆ. ಆಜ್ಜೋಳ, ಆಪ್ಪದಾ,ಆಯ್ಯೆ ಮುಂತಾದ ಶಬ್ದಗಳಲ್ಲಿ ಎರಡು ಮಾತ್ರಾ ಕಾಲದ ದೀರ್ಘಾಕ್ಷರಗಳ ಉಚ್ಚಾರ ಹ್ರಸ್ವವಾಗಿ ಒಂದು ಮಾತ್ರಾಕಾಲದ್ದಾಗಿ ಬದಲಾಗುತ್ತದೆ.
ಇತರೆ ಭಾಷೆಗಳಂತೆ ಪ್ರಾದೇಶಿಕವಾಗಿ ನಮ್ಮ ಈ ಚಿತ್ಪಾವನಿ ಭಾಷೆಯೂ ಬದಲಾಗುತ್ತಾ ಹೋಗುತ್ತದೆ.
ಹಾಗೆಯೇ ಚಿತ್ಪಾವನಿಯಲ್ಲಿ ಕರ್ತೃ, ಕರ್ಮ, ಕ್ರಿಯಾ ಪದಗಳು, ಲಿಂಗ, ವಚನ, ಕಾಲಗಳು, ಪುರುಷಗಳು , ವಿಭಕ್ತಿ ಪ್ರತ್ಯಯಗಳು ಇವೆ.
ಮಾಹಿತಿ : ಕರ್ನಾಟಕ ಚಿತ್ಪಾವನ ವೃತ್ತಾಂತ ಪುಸ್ತಕ















