ಕಾರ್ಕಳ ತಾಲೂಕು ಶ್ರೀ ಭಾರ್ಗವ ಸೌಹಾರ್ದ ಸಹಕಾರಿ ಸಂಘದ 16 ನೇ ವರ್ಷದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 19 ರಂದು ಶನಿವಾರ ಕಾರ್ಕಳದ ಚಿತ್ಪಾವನ ಸಂಘದ ಶ್ರೀ ಭಾರ್ಗವ ಸಭಾಭವನದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಪಾಂಡುರಂಗ ಫಾಟಕರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀಮತಿಯರಾದ ವಿನಯಾ ಫಾಟಕ್ ಹಾಗೂ ಸುಲಭಾ ದಾಮ್ಲೆ ಪ್ರಾರ್ಥನೆ ನಡೆಸಿದ ಬಳಿಕ ಉಪಾಧ್ಯಕ್ಷ ಶ್ರೀ ಸುಧಾಕರ ಡೋಂಗ್ರೆ ಯವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮಿ ಸಂಘದ ವಾರ್ಷಿಕ ವರದಿ ಹಾಗೂ ಪರಿಶೋಧಿತ ಲೆಕ್ಕ ಪತ್ರಗಳನ್ನು ಮಂಡಿಸಿದರು. ನಿರ್ದೇಶಕರಾದ ದಿನೇಶ್ ಗೋರೆ, ಅರವಿಂದ ಹೆಬ್ಬಾರ್, ಲಕ್ಷ್ಮಣ ಬಾಪಟ್, ಕೇಶವ ಮರಾಠೆ, ಜಯಂತ ಜೋಶಿ, ರಕ್ಷಾ ಗೋರೆ ಹಾಗೂ ವಿನಯಾ ಫಾಟಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿ ನಾಗೇಶ ಡೋಂಗ್ರೆ, ಶಿವಮೊಗ್ಗ ಇವರು ಸಹಕಾರಿ ತತ್ವದ ಬಗ್ಗೆ ಸ್ಥೂಲವಾಗಿ ತಿಳಿಸಿದರು. ಸಭಾಧ್ಯಕ್ಷರು ತಮ್ಮ ಮಾತಿನಲ್ಲಿ ಸಹಕಾರಿ ಸಂಘವು ಸ್ವಂತ ಕಟ್ಟಡ ಹೊಂದಿದ್ದು ಈ ವರ್ಷದ ಲಾಭಾಂಶ ಮೂರು ಲಕ್ಷದ ಅರ್ವತ್ತಾರು ಸಾವಿರ ಮಾತ್ರ ಬಂದಿದ್ದು ಶೇಕಡಾ ಆರು ಡಿವಿಡೆಂಡ್ ಕೊಡಬಹುದು ಎಂದು ಘೋಷಿಸಿದರು. ಹಾಗೂ ವ್ಯವಹಾರ ಜಾಸ್ತಿ ಮಾಡುವಲ್ಲಿ ಎಲ್ಲರ ಸಹಕಾರ ಕೋರಿದರು. ಶ್ರೀ ಅನಂತ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಶ್ರೀಮತಿ ರಕ್ಷಾ ಗೋರೆ ವಂದಿಸಿದರು.















