ಕಾವೇರಜ್ಜಿಯ ಸ್ವಗತ
******************
ಆ ಕಾಲವೊಂದಿತ್ತು..
ನೆನಪುಗಳು ಬರುತಿವೆ ನನಗೀ ಹೊತ್ತು..
ಮನೆಗೆ ಹಿರಿಯ ಮಗಳಾಗಿ ಜನಿಸಿದೆನು ನಾನಂದು..
ದ್ವೀಪದಂತಿದ್ದ ಬ್ರಾಹ್ಮಣರ ವಾಳ್ಯದಲಿ..
ತಮ್ಮ ತಂಗಿಯರು, ನೆರೆಕರೆಯವರು ಆಡುತ್ತ
ಜಗಳವಾಡುತ್ತ ಮತ್ತೆ ಒಂದಾಗುತ್ತ…
ಸುಖವಾಗಿ ಅನುಭವಿಸಿದ ಸಹಜತೆಯ ಆ ಬಾಲ್ಯ ಮಧುರವಾಗಿತ್ತು…
ಶಾಲೆ ನಾ ಕಂಡಿಲ್ಲ.. ಸಂಗೀತ ತಿಳಿದಿಲ್ಲ.. ಸಾಹಿತ್ಯ ಗೊತ್ತಿಲ್ಲ..
ಅದಕಿಂತಲು ಹೆಚ್ಚು ಗೊತ್ತಿಲ್ಲದ ಇದೆಲ್ಲ ಇದೆ ಎಂದೂ ಗೊತ್ತಿಲ್ಲ…
ಅಂತಿರುವ ಆ ಬದುಕು ಬದಲಾಯಿತು ಆ ಒಂದು ದಿನ. ಬದಲಾಗಬಾರದಂತೆ..
ಗುರುತು ಪರಿಚಯವಿರದ, ಇದುವರೆಗು ನೋಡಿರದ ಹುಡುಗನೊಬ್ಬನನು ತೋರಿಸಿದರು ನನ್ನ ಹೆತ್ತವರು ಮತ್ತೆ…
‘ಈ ಹುಡುಗ ನಿನಗೆ ಗಂಡನಾಗುವನು ಮುಂದೆ ಒಪ್ಪಿಕೋ ಈತನನು, ಮದುವೆ ಮಾಡುವೆವು’ ಎಂದಾಗ ಆಯ್ಕೆಯ ಸ್ವಾತಂತ್ರ್ಯ..? ಅಥವಾ ಸ್ವಾತಂತ್ರ್ಯದ ಅರಿವಾದರೂ ನನಗೆಲ್ಲಿತ್ತು..?
ಆಹಾ..ಐದು ದಿನದ ಮದುವೆ ಮುಗಿದು ಹೋಯಿತು ಅಂದು.. ಅಂತೆಯೇ ಹದಿನೈದು ವರುಷದ ಬಾಲ್ಯವೂ…!!
ಗಂಡನೆಂಬವನೊಡನೆ ಜತೆಗೂಡಿ ಪಯಣಿಸಿದೆ ತಂದೆ ತಾಯಿ ಸೋದರರೊಡನೆ ಬಂಧು ಬಳಗದ ಬಂಧವನು ಕಳಚಿಕೊಂಡು…
ಕಾಡ ಹಾದಿಯ ತುಳಿದು ನನ್ನ ಪಾಲಿನ ಭವಿಷ್ಯದ ಪರಿಣಾಮ ಅರಿಯದೆ ಹೆತ್ತವರು ಹೋಗೆಂದೆಡೆಗೆ ಹೊರಟೆ…. ಹೊಸತಾದ ಬದುಕಿಗೆ ನಾಂದಿ ಹಾಡುವ ತೆರದಿ…
ಬೇಕು ಬೇಡಗಳ ಅರಿವಿರದೆ ಬಾಲ್ಯದ ಗಡಿ ದಾಟಿ ಯೌವನವು ಬಂದಿತ್ತು…
ಸುಖದು:ಖದ ಒಡನೆ ದಾಂಪತ್ಯವು ಸಾಗುತ್ತ
ಬಸಿರು ಬಾಣಂತನಗಳ ನಡುವೆ ಮಕ್ಕಳೂ ದೊರಕಿತ್ತು…
ಯಾವುದೊ ತೆರದಲ್ಲಿ ಸಾಗುತ್ತಿತ್ತು ಬದುಕಿನ ಬಂಡಿ ಏರಿಳಿತಗಳ ಹಾದಿಯಲಿ…
ಇಂತಿರುವ ಆ ದಿನಗಳಲ್ಲಿ ವಿಧಿಯಾಟವೆಂಬಂತೆ…
ನಾ ನಂಬಿ ಬಂದಂಥ ನನ್ನ ಗಂಡನನು
ಸಾವೆಂಬ ಭಟನೊಬ್ಬ ಸೆಳೆದುಕೊಂಡೊಯ್ದಾಗ ಬುಡ ಕಡಿದ ಬಾಳೆಯಂತಾದೆ…!!
ಹುಟ್ಟು ಸಾವುಗಳ ವಿಧಿಯಾಟಕ್ಕೆ ಬಲಿಯಾದೆ…!!!
ನನಗೆ ಸ್ಥಿರವಲ್ಲದ ಆ ಮುತ್ತೈದೆ ಮುಖವಾಡ ಕಳಚಿಟ್ಟು…
ನನಗೆಂದೆ ಇರುವಂಥ ವಿಧವೆ ಎಂಬ ಪಟ್ಟವನು ಶಾಶ್ವತವಾಗಿ ಗಳಿಸಿದೆನು…!!!
ನೆನಪಾಗುತಿದೆ ಇಂದು ಯೌವನದ ಆ ದಿನಗಳಲಿ ಚೆಲುವೆ ನಾನಾಗಿದ್ದೆ…
ದಟ್ಟ ಕೂದಲಿನ ಮಾರುದ್ದ ಜಡೆ…
ತಲೆ ತುಂಬ ಮುಡಿದಿದ್ದ ಹೂವಿನ ಮಾಲೆ…
ಕಾಸಿನಗಲದ ಕುಂಕುಮದ ಬೊಟ್ಟು…
ಕನ್ನಡಿಯಲಿ ನೋಡಿ ಸಂಭ್ರಮಿಸುತಿದ್ದೆ ಕಚ್ಚೆ ಸೀರೆಯನುಟ್ಟು….
ಹೆಮ್ಮೆ ಪಟ್ಟಿದ್ದೆ ನನ್ನೊಳಗೆ ನಾನು.
ಹೆತ್ತವರು ಕೈಗೊಂಡ ನಿರ್ಧಾರವನ್ನು…
ಆದರೆ ಆ ಭಟನ ಆಕ್ರಮಣಕ್ಕೆ ಆಯಿತು
ನನ್ನ ಗಂಡನ ಜತೆ ಸಕಲ ಸೌಭಾಗ್ಯಗಳ ಸಮಾಧಿ….. ಸಮಾಧಿ….!!
ನಾ ಮುಂದೆ ಬಂದರೆ ಲಕ್ಷಣ ಎಂದವರೇ…
ಇಂದು ನನ್ನನ್ನು ಕಂಡರೆ ಅವಲಕ್ಷಣ ಎನ್ನುವರು… ಅವಲಕ್ಷಣ ಎನ್ನುವರು…
ಇದಕ್ಕೆ ನಾ ಹೇಗೆ ಹೊಣೆಯೋ..ಆ ದೇವನೇ ಬಲ್ಲನೊ..ಅಥವಾ ಸಮಾಜ ಬಲ್ಲದೊ..ಕಾಣೆ…
ಆಸೆಗಳು.. ವಿಚಾರಗಳು.. ಧ್ಯೇಯಗಳು.. ಜಿಜ್ಞಾಸೆಗಳು ಇದ್ದವು ನನ್ನಲ್ಲಿ ಅನೇಕ…
ಆದರೆ ಅದೆಲ್ಲವೂ ನನ್ನ ಸುತ್ತಿಸಿಕೊಂಡ ಏಕವಸ್ತ್ರದೊಳಗೆ ಬಚ್ಚಿಟ್ಟುಕೊಂಡಿವೆ ಬಹುತೇಕ…
ಬಾಲ್ಯದ ನೆನಪಿಲ್ಲ… ಯೌವನದ ಸುಖವಿಲ್ಲ… ವೃದ್ಧಾಪ್ಯ ಮುಗಿದಿಲ್ಲ… ಅಂತೆಯೇ ಯಾರೋ ಹೇಳಿದ್ದರು ಆತ್ಮಕ್ಕೆ ಸಾವಿಲ್ಲ…
ನಗೆಯು ಬರುತಿದೆ ಎನಗೆ ನಗೆಯು ಉಕ್ಕಿ ಬರುತಿದೆ…
ಸಾವಿರದ ಆತ್ಮಕ್ಕೆ ವೈಧವ್ಯದ ಪಟ್ಟ…!!!
ಆ ಪಟ್ಟಕ್ಕೆ ಅಪಶಕುನದ ಲೇಪ…!!!
ಇನ್ನು ಮುಂದಾದರೂ ಮಕ್ಕಳೇ
ಅಂಧ ಶ್ರದ್ಧೆಯನು ಬಿಡಿ. ಅದುವೆ ಬದುಕಿಗೆ ಶಕುನ… ಉಳಿದೆಲ್ಲವೂ ಅಪಶಕುನ….
************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















