ಕಾಲವನ್ನು ತಡೆಯೋರು ಯಾರೂ ಇಲ್ಲ…
*****************************
ಕಾಲಕ್ಕೆ ಎದುರಾಗಿ ಯಾರೂ ಜಯಿಸಲಾರರು. ನಾವೇನೇ ಅಂದರೂ ನಿರ್ಣಾಯಕ ಹಂತದಲ್ಲಿ ಗೆಲುವು ಕಾಲನದೇ ಆಗಿರುತ್ತದೆ. ಇದಕ್ಕೆ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಸರ್ವ ಕಾಲದಲ್ಲಿ ಸರ್ವತ್ರವಾಗಿ ಇದು ನಡೆದುಕೊಂಡು ಬಂದದ್ದೇ ಇದಕ್ಕೆ ಉದಾಹರಣೆ. ಅಂಥ ಕಾಲನ ಹೊಡೆತಕ್ಕೆ ಅದೆಷ್ಟೋ ಯುಗಪುರುಷರು, ರಾಜ ಮನೆತನಗಳು, ಸಾಮ್ರಾಜ್ಯಗಳು, ನಾಗರಿಕತೆಗಳು, ಸಂಸ್ಕೃತಿಗಳು, ಡೈನೊಸಾರ್ ನಂಥ ಸಂತತಿಗಳೇ ನಾಮಾವಶೇಷವಾಗಿ ಹೋಗಿವೆ. ಅಂಥ ಗತಕಾಲಕ್ಕೆ ಸಾಕ್ಷಿಯಾಗಿ ಇಂದು ನಮ್ಮ ಕಣ್ಣ ಮುಂದಿರುವ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಪ್ರಾಥಮಿಕ ಶಾಲೆಯ ಬಗ್ಗೆ ಒಂದಷ್ಟು ವಿಚಾರ ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ಯಾರೋ ಹೇಳಿದ್ದರು ಈ ವರ್ಷದಿಂದ ದುರ್ಗದ ಶಾಲೆ ಶಾಶ್ವತವಾಗಿ ಮುಚ್ಚಿ ಹೋಗುತ್ತದೆ ಎಂದು. ಅದೇನು ದೊಡ್ಡ ಸುದ್ದಿಯಲ್ಲ. ಕಾರಣ ಅಂಥ ಹತ್ತಾರು ಶಾಲೆಗಳು ಇಂದು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗಿರುವುದು ಹೊಸತೂ ಅಲ್ಲ ಆಶ್ಚರ್ಯವೂ ಅಲ್ಲ. ಆದರೆ ಅದೆಲ್ಲೊ ದೂರದಲ್ಲಾದರೆ ಅಥವಾ ತಮಗೆ ಸಂಬಂಧ ಪಟ್ಟದ್ದಲ್ಲವಾದರೆ ಯಾವ ಸಮಾಚಾರವೂ ನಮಗೆ ತೀವ್ರ ಬಾಧೆ ಕೊಡುವುದಿಲ್ಲ. ಆದರೆ ಅದು ನಮಗೆ ನೇರ ಸಂಬಂಧವಾದರೆ ಅದರ ಪರಿಣಾಮ ಬೇರೆಯಾಗಿರುತ್ತದೆ. ಇದಕ್ಕೆ ಉದಾಹರಣೆ ನಮ್ಮ ದುರ್ಗದ ಶಾಲೆಯ ಅವನತಿ. ನಾವು ಹುಟ್ಟಿ ಬೆಳೆದದ್ದು ಬೆಳ್ತಂಗಡಿ ತಾಲೂಕಾದರೂ ಶಾಲೆ, ಬಾಲ್ಯವೆಂದಾಗ ದುರ್ಗದ ಶಾಲೆ ನಮಗೆ ಆಪ್ತವಾಗುತ್ತದೆ. ಕಾರಣ ನಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಇದೇ ದುರ್ಗದ ಶಾಲೆಯಲ್ಲಿ ಪೂರೈಸಿದ್ದರಿಂದ ನಮಗೆ (ನಾವು ಆರು ಜನ ಸಹೋದರ-ಸಹೋದರಿಯರಿಗೂ ಈ ಶಾಲೆಯ ನೇರ ಸಂಪರ್ಕವಿರುವುದರಿಂದ) ಈ ಸುದ್ದಿ ನಮ್ಮ ಮನಸ್ಸನ್ನು ಕಲಕಿದ್ದಂತು ನಿಜ.
ಇಂದು ಅಂದರೆ ೧೦/೦೨/೨೦೨೬ ರಂದು ದುರ್ಗದ ಹರಿಹರೇಶ್ವರ ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನದ ವಠಾರದಲ್ಲೇ ಇರುವ ನಮ್ಮ ಶಾಲೆಯನ್ನು ನೋಡುವಾಗ ಅದ್ಯಾಕೊ ಮನಸ್ಸಿಗೆ ಬೇಸರವಾಗುವುದರೊಡನೆ ಹಿಂದೆ ನಾವು ಶಾಲೆಗೆ ಹೋಗುತ್ತಿರುವಾಗಿನ ಸಮಗ್ರ ಚಿತ್ರಣ ಕಣ್ಣ ಮುಂದೆ ಕನಸೋ ಎಂಬಂತೆ ತೇಲಿ ಹೋಯಿತು. ಅದನ್ನೆಲ್ಲ ಇಲ್ಲಿ ಕ್ರೋಢೀಕರಿಸಿ ನಿಮ್ಮೊಡನೆ ಹಂಚಿಕೊಳ್ಳಬೇಕೆಂದೆನಿಸಿದಾಗ ಮೂಡಿಬಂದ ಬರಹ ಇದು.. ಈ ಶಾಲೆ ಪ್ರಾರಂಭವಾಗಿ ಎಂಭತ್ತೈದು ವರ್ಷಳಷ್ಟಾದರೂ ಆಗಿರಬಹುದು. (ನನ್ನ ತಾಯಿ ಇಲ್ಲಿಯ ವಿದ್ಯಾರ್ಥಿಯಾಗಿದ್ದರು. ಮುಂದೆ ಮಕ್ಕಳಾದ ನಾವೂ ವಿದ್ಯಾರ್ಥಿಗಳಾಗಿದ್ದೆವು. ಇನ್ನೊಂದು ವಿಶೇಷವೆಂದರೆ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಯುತ ವೆಂಕಟ್ರಮಣ ಭಟ್ಟರು ನಮ್ಮ ತಾಯಿಗೂ ಗುರುಗಳಾಗಿದ್ದರು ಅಂತೆಯೆ ನಮಗೂ. ಆದ್ದರಿಂದ ಶಾಲೆ ಪ್ರಾರಂಭವಾದ ತಾರೀಕು ಬಹುಷ ಬಲ್ಲವರು ಜೀವಂತವಿರುವವರಲ್ಲಿ ಕಡಿಮೆ ಎಂದೇ ಹೇಳಬಹುದು. ಶಾಲೆಯ ದಾಖಲೆಗಳಲ್ಲಿ ಲಭ್ಯವಿರಬಹುದು. ನನ್ನ ಲೇಖನಕ್ಕೆ ಅದು ಅಷ್ಟೊಂದು ಮಹತ್ವವಲ್ಲದ ಕಾರಣ ಅದನ್ನು ಉಪೇಕ್ಷಿಸಿದ್ದೇನೆ ಕ್ಷಮಿಸಿ)
Suddi Suvidha Goal:

ಸಾಧಾರಣ ಅರವತ್ತು ವರ್ಷಗಳಷ್ಟು ಹಿಂದೆ ಹೋದಾಗ ಆಗಿನ ಶಾಲೆಗಳು ಹೆಚ್ಚಾಗಿ ಸರಕಾರಿ ಶಾಲೆಗಳೇ ಆಗಿದ್ದವು. ಕನ್ನಡ ಮಾಧ್ಯಮದ ಜತೆಗೆ ಇಂಗ್ಲೀಷ್, ಹಿಂದಿ, ಸಂಸ್ಕೃತ ಭಾಷೆಯ ಪಠ್ಯಗಳೂ ಇರುತ್ತಿದ್ದವು. ಆದರೆ ಅದ್ಯಾವುದೂ ತಲೆಗೆ ಹೊರೆಯಾಗದಂತೆ ಇರುತ್ತಿತ್ತು. ಮಾತ್ರವಲ್ಲ ಆರ್ಥಿಕವಾಗಿಯೂ ಹೊರೆ ಎನಿಸುತ್ತಿರಲಿಲ್ಲ. ಅಂತೆಯೇ ಮೂರು ತಲೆಮಾರುಗಳಿಗೆ ಸಾಕ್ಷಿಯಾದ ನಮ್ಮ ದುರ್ಗದ ಹರಿಹರೇಶ್ವರ ಓರಿಯಂಟಲ್ ಪ್ರಾಥಮಿಕ ಶಾಲೆ ಇಂದು ಶಾಶ್ವತವಾಗಿ ಬೀಗ ಧಾರಣೆ ಮಾಡಿದೆ ಎಂದರೆ ನಾಗರಿಕತೆ ಎನ್ನೋಣವೆ? ಕಾಲ ಎನ್ನೋಣವೆ? ಜನಸಂಖ್ಯೆ ಕಡಿಮೆ ಆಗಿದೆ ಎನ್ನೋಣವೆ? ಬೇಜವಾಬ್ದಾರಿ ಎನ್ನೋಣವೆ? ಯಾರದ್ದಾದರು ಶಾಪವೆನ್ನೋಣವೆ? ಗೊತ್ತಿಲ್ಲ.. ಅಂತು ಬೀಗ ಮುದ್ರೆಯಾದಂಥ ಶಾಲೆಯನ್ನು ನೋಡುವಾಗ ಮನಸ್ಸಿಗೆ ಬಹಳ ಬೇಸರವಾಗುವುದಂತು ನಿಜ. ಒಂದು ಕಾಲದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಮಕ್ಕಳ ಕಲರವದೊಂದಿಗೆ ಗ್ರಾಮದ ಜೀವನಾಡಿ ಎಂಬಂತೆ ಮೆರೆಯುತ್ತಿತ್ತು ಈ ಶಾಲೆ. ಹರಿಹರೇಶ್ವರ ದೇವಸ್ಥಾನ ಮತ್ತು ಹರಿಹರೇಶ್ವರ ಶಾಲೆ ದುರ್ಗ ಗ್ರಾಮದ ಅಸ್ಮಿತೆಯೇ ಆಗಿತ್ತು. ಇತ್ತಲಿಂದ ದೇವಸ್ಥಾನದ ಗಂಟೆ ಅತ್ತಲಿಂದ ಶಾಲೆಯ ಗಂಟೆ ಒಂದಕ್ಕೊಂದು ಪೂರಕವಾಗಿ ಒಂದೇ ಆತ್ಮ ಎರಡು ಶರೀರದಲ್ಲಿ ಮಿಡಿಯುವಂತೆ ಮೊಳಗುತ್ತಿತ್ತು. ಇಂದಿಗಾಗುವಾಗ ಮನೆಯೊಂದರ ಆಧಾರಸ್ತಂಭವು ಕುಸಿದಂತೆ, ಮನೆಯಲ್ಲಿ ಎಲ್ಲರಿಗೂ ಪ್ರೀತಿ ಪಾತ್ರನಾದವನನ್ನು ಕಳಕೊಂಡಂತೆ, ಗ್ರಾಮದಿಂದ ವಿದ್ಯಾ ಮಾತೆ ಮುನಿದು ಹೋದಂತೆ ಈ ಶಾಲೆಯ ಗಂಟೆ ತನ್ನ ನಾದವನ್ನು ನಿಲ್ಲಿಸಿ ಸ್ಥಬ್ದವಾದುದು ಮಾತ್ರ ವರ್ತಮಾನದ ಅಪ್ರಿಯ ಸತ್ಯ.
ನಾನು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಅಂದರೆ ಸಾಧಾರಣ ಅರ್ವತ್ತೆಂಟನೆ ಇಸವಿಯಿಂದ ಎಪ್ಫತ್ತ ನಾಲ್ಕರವರೆಗೆ ನಮಗೆ ಮುಖ್ಯೋಪಾಧ್ಯಾಯರು ಶ್ರೀಯುತ ವೆಂಕಟ್ರಮಣ ಭಟ್ಟರು. ಜತೆಗೆ ಶ್ರೀಮತಿ, ಶ್ರೀಮತಿ ರಮಾ ಟೀಚರ್, ಶ್ರೀಮತಿ ಜಯಲಕ್ಷ್ಮಿ ಟೀಚರ್, ಶ್ರೀಮತಿ ಮುಕ್ತಾ ಟೀಚರ್, ಶ್ರೀಯುತ ಸದಾನಂದ ಮೇಷ್ಟ್ರು, ರಮಾನಾಥ ಮೇಷ್ಟ್ರು, ನನ್ನ ಸೋದರ ಮಾವನಾದ ಶ್ರೀಯುತ ರಾಮನಾಥ ಫಾಟಕರು, ಶ್ರೀಯುತ ಕೃಷ್ಣ ಚಿಪ್ಳೂಣ್ಕರ್ ಇವರೆಲ್ಲ ಸಹ ಉಪಾಧ್ಯಾಯರಾಗಿದ್ದವರು. ಪಾಠ ಪ್ರವಚನಗಳ ಜತೆಗೆ ಪ್ರತಿ ಶುಕ್ರವಾರವೂ ಸಾಯಂಕಾಲ ಶಾಲೆಯಲ್ಲಿ ಭಜನೆ ನಡೆಯುತ್ತಿತ್ತು. ಶಾಲಾ ಪ್ರವಾಸ ಮತ್ತು ವಾರ್ಷಿಕೋತ್ಸವಗಳು ನಿರಂತರ ನಡೆಯುತ್ತಿದ್ದವು. ಅದರಲ್ಲೂ ವಾರ್ಷಿಕೋತ್ಸವ ಮಾತ್ರ ಭಾರಿ ವಿಜ್ರಂಭಣೆಯಿಂದ ಊರಿನ ಜಾತ್ರೆಯೋ ಎಂಬಂತೆ ನಡೆಯುತ್ತಿತ್ತು. ಪಾಠ ಪ್ರವಚನಗಳೂ ಅತ್ಯುತ್ತಮ ರೀತಿಯಲ್ಲಿ ಇದ್ದರೆ ಪಾಠ ಮಾಡುವ ಉಪಾಧ್ಯಾಯರ ಮೇಲೆ ಅತೀವ ಗೌರವವಿದ್ದಂತೆ, ಪೆಟ್ಟಿನ ಭೀತಿಯೂ ಇರುತ್ತಿತ್ತು. ಅಂತೆಯೇ ಶಾಲೆಯಲ್ಲಿ ಬಿಸಿ ಊಟವಾಗಲಿ ಸಮವಸ್ತ್ರಗಳಾಗಲಿ ಇರುತ್ತಿರಲಿಲ್ಲ. ದೂರದಿಂದ ಬರುವವರು ಬುತ್ತಿ ತರುತ್ತಿದ್ದರೆ ಹತ್ತಿರದವರು ಮನೆಗಳಿಗೆ ಹೋಗುತ್ತಿದ್ದರು. ಅಲ್ಲಲ್ಲಿ ಹರಿದ ಅಥವಾ ತೇಪೆ ಹಾಕಿದ ಬಟ್ಟೆ ಬರೆಗಳು, ಕಡ್ಡಿ ತುಂಡಾದ ಕೊಡೆಗಳು, ಹರಿದ ಚಪ್ಪಲಿಗಳು, (ಹೆಚ್ಚಿನ ವಿದ್ಯಾರ್ಥಿಗಳಿಗೆ ಚಪ್ಪಲಿಯೇ ಇರುತ್ತಿರಲಿಲ್ಲ.) ಆಟವಾಡುವಾಗ ಮೊಣಕಾಲಿಗೆ ಗಾಯ ಮಾಡಿಕೊಂಡು-ನಡೆವಾಗ ಬೆರಳುಗಳ ಉಗುರು ಕಳಕೊಂಡು-ಮುಳ್ಳುಗಳನ್ನು ಚುಚ್ಚಿಸಿಕೊಂಡು ಕುಂಟುತ್ತ ಶಾಲೆಗೆ ಬರುವುದು ಕೂಡ ಅಂದಿನ ವಿದ್ಯಾರ್ಥಿಗಳ ನಿತ್ಯದ ನೋಟವಾಗಿತ್ತು. ಯಾವುದೊ ತರಗತಿಯಲ್ಲಿ ಯಾರಿಗೊ ಏಟು ಬೀಳುವಾಗ ಸಹಜವಾಗಿಯೇ ಯಾರೂ ಗಲಾಟೆ ಮಾಡುವುದಾಗಲಿ, ತುಂಟಾಟ ಮಾಡುವುದಾಗಲಿ, ಕಲಿಯದೆ ಸೋಮಾರಿಯಾಗಿ ಇರುತ್ತಿರಲಿಲ್ಲ. ಕಾರಣ ಅದೇ ಏಟು ತಮಗೂ ಬೀಳಬಹುದೆಂಬ ಭೀತಿ. ದುರ್ಗ ಮಾತ್ರವಲ್ಲ ಸಾಧಾರಣ ಅಂದಿನ ಎಲ್ಲ ಶಾಲೆಗಳ ಚಿತ್ರಣವೂ ಇದೇ ರೀತಿಯಲ್ಲಿತ್ತು.

ಇನ್ನು ಒಂದನೆ ಅಥವಾ ಎರಡನೆ ತರಗತಿಗೆ ಸೇರುವ ಮಕ್ಕಳು ಒಂದೊಂದೆ ತರಗತಿಯಿಂದ ತೇರ್ಗಡೆಯಾದಾಗ ಮುಂದಿನ ತರಗತಿಯ ಅನುಭವ ಬಹಳ ಖುಷಿ ಕೊಡುತ್ತಿತ್ತು. ಅಂತೆಯೆ ನಾವು ಇನ್ನು ಇಂತಿಷ್ಟು ವರ್ಷಗಳಲ್ಲಿ ಏಳನೇ ತರಗತಿಗೆ ಹೋಗುವವರಿದ್ದೇವೆ ಎನ್ನುವ ಕಲ್ಪನೆಯೇ ರೋಮಾಂಚನಗೊಳಿಸುತ್ತಿತ್ತು. ಏಳನೇ ತರಗತಿಯ ವಿದ್ಯಾರ್ಥಿಗಳೆಂದರೆ ಶಾಲೆಗೆ ಹಿರಿಯ ವಿದ್ಯಾರ್ಥಿಗಳು. ಆ ಕಾಲದಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುತ್ತಿದ್ದುದರಿಂದ ಎಲ್ಲ ಉಪಾಧ್ಯಾಯರುಗಳು ಅವರನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಅದಕ್ಕಾಗಿ ಶಾಲೆಯ ಇತರ ಎಲ್ಲ ವಿದ್ಯಾರ್ಥಿಗಳು ಏಳನೆ ತರಗತಿಯವರಿಗೆ ವಿಶೇಷ ಗೌರವ ಕೊಡುತ್ತಿದ್ದರು. ಒಂದು ಕಾಲಕ್ಕೆ ನಮಗೆ ಕೂಡ ಅಂಥ ಗೌರವ ಸಿಗುವ ದಿನಗಳಿವೆ ಎಂಬ ಕಲ್ಪನೆಯೆ ಖುಷಿ ಕೊಡುತ್ತಿತ್ತು. ಮತ್ತೊಂದು ವಿಷಯವೆಂದರೆ ನಮ್ಮ ತರಗತಿಯ ಹೊರತು ಬೇರೆ ತರಗತಿಗೆ ಅಪ್ಪಣೆ ಇಲ್ಲದೆ ಯಾರಿಗೂ ಪ್ರವೇಶವಿರುತ್ತಿರಲಿಲ್ಲ. ಆದ್ದರಿಂದ ದಾಟಿ ಬಂದ ತರಗತಿಗಳಿಗಿಂತ ಮುಂದಿನ ತರಗತಿಗಳು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ಮಯ ಹಾಗೂ ಕುತೂಹಲಕಾರಿಯಾಗಿರುತ್ತಿದ್ದವು.
ಹಾಗೆಯೆ ಶಾಲೆಯಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವಗಳು ಅತ್ಯಂತ ವಿಜ್ರಂಭಣೆಯಿಂದ ನಡೆಯುತ್ತಿದ್ದವು. ಅದಕ್ಕೆಂದೇ ತಿಂಗಳುಗಳಿಂದ ತಯಾರಿಗಳು, ಶಾಲಾ ಮಕ್ಕಳಿಂದ ಅವರವರ ಪ್ರತಿಭೆಗಳನ್ನು ಪ್ರದರ್ಶಿಸುವುದಕ್ಕಾಗಿ ಇರುವ ನೃತ್ಯ-ನಾಟಕ-ಬಾಷಣ-ಗಾಯನಗಳಲ್ಲಿ ಭಾಗಿಯಾಗುವವರ ಸಂಭ್ರಮ, ನಾಟಕದ ಪಾತ್ರಧಾರಿಗಳ ಆಯ್ಕೆ, ಅಭಿನಯ-ಸ್ಕ್ರಿಪ್ಟಿನ ಬಾಯಿಪಾಠ-ಹಾವ ಭಾವ ಮುಂತಾದವುಗಳ ಬಗ್ಗೆ ಉಪಾಧ್ಯಾಯರಿಂದ ತರಬೇತಿ.. ಹೀಗೆ ಹಲವಾರು ಕಾರ್ಯಕ್ರಮಗಳು ಪ್ರಾರಂಭವಾದಾಗ ಶಾಲೆಯಲ್ಲಿ ವಿದ್ಯುತ್ ಸಂಚಾರವಾದಂತೆ ಆಗುತ್ತಿತ್ತು. ಎಲ್ಲರೂ ಯಾವುದೊ ಹೊಸತಾದ ಲಹರಿಯಲ್ಲಿ ಇರುತ್ತಿದ್ದರು. ಜತೆಗೆ ಹಳೆಯ ವಿದ್ಯಾರ್ಥಿಗಳಿಂದ ನಾಟಕವೂ ನಡೆಯುತ್ತಿತ್ತು. ವಾರ್ಷಿಕೋತ್ಸವ ಹತ್ತಿರ ಬಂದಂತೆ ನಾಟಕ ಪ್ರಾಕ್ಟೀಸುಗಳ ಜತೆಗೆ ಶಾಲೆಗೆ ಸುಣ್ಣ ಬಣ್ಣ, ಪತಾಕೆಗಳನ್ನು ಕಟ್ಟುವ ಸಂಭ್ರಮ, ಸ್ಟೇಜಿನ ತಯಾರಿ, ಸಾಧ್ಯವಿದ್ದವರಿಗೆ ಹೊಸ ಬಟ್ಟೆ ಹೊಲಿಸುವ ತವಕ, ತಾವು ಭಾಗವಹಿಸುವ ಕಾರ್ಯಕ್ರಮದ ಪರಿಪೂರ್ಣತೆಯತ್ತ ಗಮನ, ಆಟೋಟ ಸ್ಪರ್ಧೆಗಳಲ್ಲಿ-ಭಾಷಣ-ಛದ್ಮವೇಷಗಳಲ್ಲಿ-ಹಾಡುಗಳಲ್ಲಿ ಬಹುಮಾನ ಪಡಕೊಂಡವರಿಗೆ ವೇದಿಕೆ ಹತ್ತುವ ಹೆಮ್ಮೆ.. ಹೀಗೆ ವಿವಿಧತೆಯಲ್ಲಿ ಏಕತೆ ಎನ್ನುವಂತೆ ಊರಿನ ಮಕ್ಕಳಿಂದ ವೃದ್ಧರವರೆಗೂ ಶಾಲಾ ವಾರ್ಷಿಕೋತ್ಸವವೆಂದರೆ ತಮ್ಮ ಮನೆಯ ಕಾರ್ಯಕ್ರಮವೊ ಎಂಬ ತಾದಾತ್ಮ್ಯತೆಯಿಂದ ಎಲ್ಲರೂ ಭಾಗವಹಿಸುವ ಚಂದಕ್ಕೆ ಸಾಟಿ ಇರಲಿಲ್ಲ. ಇದಕ್ಕೆ ಒಂದು ಕಾರಣವೆಂದರೆ ಪ್ರತಿ ಮನೆಗೂ ಶಾಲೆಗೂ ನೇರ ಸಂಪರ್ಕವಿದ್ದು ಶಾಲೆಯನ್ನು ಬರಿದೆ ಶಾಲೆ ಎಂದು ಮಾತ್ರವಲ್ಲ ಇದೊಂದು ವಿದ್ಯಾಮಾತೆಯ ದೇಗುಲವೆಂದೇ ಎಲ್ಲರೂ ತಿಳಿದಿದ್ದುದೇ ಆಗಿದೆ. ಪ್ರತಿ ಮನೆಯ ಮಕ್ಕಳೂ ಮನೆಯಲ್ಲಿ ಕಳೆದುದಕ್ಕಿಂತ ಹೆಚ್ಚಿನ ಬಾಲ್ಯವನ್ನು ಶಾಲೆಗಳಲ್ಲಿ ಅನುಭವಿಸಿದ್ದರು. ಅಂತೆಯೇ ಇನ್ನೊಂದು ಕಾರಣ ಪ್ರತಿಯೊಬ್ಬನ ಉತ್ಕರ್ಷೆಗೆ ಅಡಿಪಾಯ ಈ ಶಾಲೆಯೇ ಆಗಿರುವುದು. ಹಲವು ದಶಕಗಳಲ್ಲಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ತಯಾರು ಮಾಡಿ ಕೊಡುವಲ್ಲಿ ಇಂಥ ಶಾಲೆಗಳು ಪ್ರಧಾನ ಪಾತ್ರ ವಹಿಸಿದ್ದವು. ಕಾಲನ ಹೊಡೆತ ತೀವ್ರವಾದಾಗ ಸೂಕ್ಷ್ಮ ಸಂವೇದಿಯಾದ ಈ ಶಾಲೆಗಳು ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳಕೊಳ್ಳಲಾರಂಭಿಸಿದವು.
ಇಂದು ಅಲ್ಲಲ್ಲಿ ಜರಿದ ಗೋಡೆಗಳು, ಗೆದ್ದಲು ತಿಂದು ಬೀಳುತ್ತಲೇ ಇರುವ ರೀಪು ಪಕಾಸುಗಳು, ನಿನ್ನ ಬಿಟ್ಟಿರಲಾರೆ ಎಂದು ಸಹಗಮನ ಮಾಡುತ್ತಿರುವ ಹಂಚುಗಳು, ಮುರಿದ ಡೆಸ್ಕ್ ಬೆಂಚುಗಳು, ಕಾಲುಗಳನ್ನು ಕಳಕೊಂಡ ತರಗತಿಗಳನ್ನು ಪ್ರತ್ಯೇಕಿಸುವ ವಿಭಾಜಕಗಳು, ಮನಸೋದ್ದಿಶ್ಯ ತಿರುಗುತ್ತ ಸ್ವಚ್ಛಂದವಾಗಿ ಹಾರಾಡಿಕೊಂಡು ಗೂಡು ಕಟ್ಟಿಕೊಂಡಿರುವ ಪಾರಿವಾಳಗಳು, ವಿದ್ಯಾ ಮಾತೆಯ ವೇದಿಕೆಯಂತಿರುವ ಕರಿ ಹಲಗೆಗಳು, ನಾವೇನು ಕಮ್ಮಿ ಎಂದು ಭೀತಿಯೇ ಇಲ್ಲದೆ ತೂಗಾಡುತ್ತಿರುವ ಜೇಡರ ಬಲೆಗಳು, ತಮ್ಮ ಸರದಿಗಾಗಿ ಕಾದು ಕೊಂಡಿರುವ ಇನ್ನೂ ಬೀಳದೆ ಇರುವ ಮರ ಮಟ್ಟುಗಳು, ಹಂಚುಗಳಿಲ್ಲದ ಕಡೆ ನೇರವಾಗಿ ಪ್ರವೇಶಿಸುವ ಸೂರ್ಯನ ಕಿರಣಗಳು, ಶಾಲೆಯ ಸೌಂದರ್ಯವನ್ನು ಇಮ್ಮಡಿ ಗೊಳಿಸಿದ ಹಾಗೂ ಇಂದು ಕಸ ಕಡ್ಡಿಗಳಿಂದ ತುಂಬಿ ಹೋದ ಜಗಲಿಗಳು, ತಾವಿನ್ನು ಬೃಹತ್ ಸಾಮ್ರಾಜ್ಯ ಸ್ಥಾಪಿಸುವವರಿದ್ದೇವೆ ಎಂದು ನಮಗೆ ಹೇಳುವಂತೆ ಅನ್ನಿಸುವ ಸಣ್ಣ ಸಣ್ಣ ಕುರುಚಲು ಗಿಡಗಳು, ನಮ್ಮನ್ನು ನೀರುಣಿಸಿ ಸಾಕಿದಿರಿ ಆದರೆ ಫಲ ಕೊಡುವಾಗ ನಮ್ಮನ್ನೆ ಬಿಟ್ಟು ಹೋಗಿ ಅನಾಥ ಮಾಡಿದಿರಿ ಎಂದು ಅಣಕಿಸುವ ಕಲ್ಪವೃಕ್ಷಗಳು, ಯಾವ ಕಾಲಕ್ಕೂ ನೀರನ್ನು ಕರುಣಿಸಿ ಸಾವಿರಾರು ಮಕ್ಕಳ ಜಲಬಾಧೆಯನ್ನು ನೀಗಿಸಿದ ಬಾವಿಯ ಅಸ್ತಿತ್ವವನ್ನೆ ಇಲ್ಲವಾಗಿಸಲು ಹೊರಟಿರುವ ವಿವಿಧ ಜಾತಿಯ ಪೊದೆಗಳು.. ಹೀಗೆ ಅನೇಕ ವಿಷಯಗಳ ದಾಳಿಯಿಂದ ಖಿನ್ನನಾಗಿ ಸೂಕ್ಷ್ಮವಾಗಿ ಕೇಳಿದರೆ ಅಂದಿನ ಮಕ್ಕಳ ಕಲರವ ಕಿವಿಗಳಿಗೆ ಕೇಳುತ್ತಲಿದೆಯೋ ಎಂದು ಕಣ್ಣು ಮುಚ್ಚಿ ಮೌನವಾದಾಗ, ಕಿವಿಗೆ ಕೇಳದಿದ್ದರೂ ಮನಸ್ಸಿಗೆ-ಹೃದಯಕ್ಕೆ ಕೇಳುತ್ತಲೇ ಇತ್ತು ಕೇಳುತ್ತಲೇ ಇತ್ತು… ಕಣ್ಣುಬಿಡುವಲ್ಲಿವರೆಗೆ…..
ವಾಸ್ತವಕ್ಕೆ ಬಂದಾಗ ಕಂಡಂಥ ಸತ್ಯ… ಹೀಗೆಯೇ ಕ್ರಮೇಣ ಒಂದೊಂದೇ ಒಂದೊಂದೇ ಶಾಲೆಗಳು ಗತ ವೈಭವಕ್ಕೆ ಸಾಕ್ಷಿಯಾಗಿ ಪಳೆಯುಳಿಕೆಗಳಾಗಿ ನಿಂತಾಗ ನಮ್ಮಂಥವರು ಎರಡು ಹನಿ ಕಣ್ಣೀರನ್ನಷ್ಟೆ ಹಾಕಬಲ್ಲೆವು ಎಂದರೆ ವಿಧಿ ಎನ್ನೋಣವೆ?? ಕಾಲ ಎನ್ನೋಣವೆ?? ಅಥವಾ…
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















