ಸಾಮಾನ್ಯವಾಗಿ ನಾವು ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬಳಸುವಾಗ ಚಿತ್ರ, ವೀಡಿಯೋ, ಶಬ್ದ ಇತ್ಯಾದಿ ಪ್ರತಿಯೊಂದು ಮಾಹಿತಿಯೂ “ಬಿಟ್” (b) ಎಂಬ ರೂಪದಲ್ಲಿ ಇರುತ್ತದೆ. ಇದೇ ಬೇಸಿಕ್ ಬೈನರಿ ಯೂನಿಟ್ ಅಥವಾ ಮೂಲಮಾನ. ಇಂತಹ 8 ಬಿಟ್‌ಗಳು ಸೇರಿದಾಗ 1 ಬೈಟ್ (B) ಆಗುತ್ತದೆ. ಕಂಪ್ಯೂಟರ್ ಟರ್ಮಿನಾಲಜಿ ಪ್ರಕಾರ (ಬೈನರಿ ಭಾಷೆ) ಕಿಲೋ ಬೈಟ್( 1 KB) ಅಂದರೆ 1000 ಬೈಟ್ ಅಲ್ಲ (ದಶಮಾಂಶ ಪದ್ಧತಿ ಪ್ರಕಾರ “ಕಿಲೋ” ಅಂದರೆ ಸಾವಿರ). ಬದಲಾಗಿ 1024 ಬೈಟ್ಸ್. ಹಾಗಾದರೆ 1 KB ಮಾಹಿತಿಗೆ 1024 ×8 = 8192 ಬಿಟ್ಸ್ ಬೇಕು. ಇಲ್ಲಿ b ಮತ್ತು B ಗಳ ಮಧ್ಯೆ ಇರುವ ವ್ಯತ್ಯಾಸವನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು.
1 MB ಅಂದರೆ 1024 KB×1024 ಬೈಟ್ಸ್= 1,048,576 ಬೈಟ್ಸ್ ಎಂದರ್ಥ.
MB = ಮೆಗಾ ಬೈಟ್ಸ್,
GB =ಗಿಗಾ ಬೈಟ್ಸ್.
ನಮ್ಮ ಪೆನ್ ಡ್ರೈವ್, ಮೊಬೈಲ್ ಮೆಮೊರಿ, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್, ರ‍್ಯಾಮ್ ಇತ್ಯಾದಿಗಳ ಮೆಮೊರಿ ಸಾಮರ್ಥ್ಯವನ್ನು MB ಅಥವಾ GBಗಳಲ್ಲಿ ಹೇಳುವುದು ವಾಡಿಕೆ. ಉದಾ: 4GB ಪೆನ್ ಡ್ರೈವ್. ಆದರೆ ಇಂಟರ್ನೆಟ್ ಸ್ಪೀಡನ್ನು (ಡೇಟಾ ಸ್ಪೀಡ್, ಡೇಟಾ ಎಕ್ಸ್ಚೇಂಜ್, ಡೇಟಾ ಫ್ಲೋ ರೇಟ್, ಬ್ಯಾಂಡ್ ವಿಡ್ತ್ ಇತ್ಯಾದಿಯಾಗಿ ಕರೆಯಲೂ ಬಹುದು) ಬೇರೆ ವಿಧದಲ್ಲಿ ಹೇಳುವುದು ಚಾಲ್ತಿಯಲ್ಲಿದೆ. ಅದೇ Mbps (ಮೆಗಾ ಬಿಟ್ಸ್ ಪರ್ ಸೆಕೆಂಡ್)..ಇಲ್ಲಿ “b” ಯನ್ನು ಬಳಸುವುದು, B ಅಲ್ಲ. ಅಂದರೆ ಪ್ರತೀ ಸೆಕೆಂಡಿಗೆ ಎಷ್ಟು ಬಿಟ್ಸ್ ಡೇಟಾ ಎಕ್ಸ್ಚೇಂಜ್ ಆಗುತ್ತದೆ ಎಂದರ್ಥ. ಇಲ್ಲಿ “ಎಕ್ಸ್ಚೇಂಜ್” ಅಂದರೆ ಡೌನ್ ಲೋಡ್ ಅಥವಾ ಅಪ್ ಲೋಡ್ ಸ್ಪೀಡ್. ಅಪ್ ಲೋಡ್ ಅಂದರೆ ನಮ್ಮ ಕಂಪ್ಯೂಟರಿನಿಂದ ಹೊರಹೋಗುವುದು, ಡೌನ್ ಲೋಡ್ ಎಂದರೆ ನಮ್ಮ ಕಂಪ್ಯೂಟರಿಗೆ ಹೊರಗಿನಿಂದ ಬರುವ ಡೇಟಾ ಎಂದು ತಿಳಿಯಬೇಕು. ಹೆಚ್ಚಿನ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಹೇಳುವುದು ಡೌನ್ ಲೋಡ್ ಸ್ಪೀಡ್.
Mbps ನ ನಿಜವಾದ ಅರ್ಥವೇನು : ಉದಾಹರಣೆಯ ಮೂಲಕ ನೋಡುವಾ…ಒಂದು ಆಫೀಸಿಗೆ 1000 Mbps ಸಂಪರ್ಕ ಇದೆ ಎಂದುಟ್ಟುಕೊಳ್ಳುವಾ. ಸಾಮಾನ್ಯವಾಗಿ ನಾವು ಇಲ್ಲಿ ತಪ್ಪಾಗಿ ಅರ್ಥೈಸುವುದೇ ಜಾಸ್ತಿ–ಪ್ರತಿ ಸೆಕೆಂಡಿಗೆ 1000 MB ಡೇಟಾ (ಅಂದಾಜು 1GB) ಡೌನ್ ಲೋಡ್ ಆಗಬಲ್ಲುದು ಅಂತ ನಮ್ಮ ಲೆಕ್ಕಾಚಾರ. ಆದರೆ ಇದು ತಪ್ಪು. ಇಲ್ಲಿ ಇರುವುದು ಬಿಟ್ಸ್ ಡೇಟಾ. ನಿಜವಾದ ಅರ್ಥ, ಪ್ರತೀ ಸೆಕೆಂಡಿಗೆ 1000 ಮೆಗಾ ಬಿಟ್ಸ್ ಡೇಟಾ ಡೌನ್ ಲೋಡ್ ಆಗುವುದು. ಬಿಟ್ ಅನ್ನು ಬೈಟ್ಸ್ ಗೆ ಬದಲಾಯಿಸಿದಾಗ, 1000 / 8 =125 MB ಡೇಟಾ ಪ್ರತೀ ಸೆಕೆಂಡಿಗೆ ನಿಜವಾದ ಡೌನ್ ಲೋಡ್ ಸ್ಪೀಡ್. ಇದರರ್ಥ ನಾವು ಸ್ಪೀಡನ್ನು 8 ಪಟ್ಟು ತಪ್ಪಾಗಿ ಲೆಕ್ಕಾಚಾರ ಮಾಡಿದ್ದೇವೆ!!!
ಇಲ್ಲಿ ಇನ್ನೂ ಒಂದು ವಿಚಾರ ಇದೆ..ಜಿಯೊ, ಏರ್ ಟೆಲ್, BSNL ಸರ್ವಿಸ್ ಪ್ರೊವೈಡರ್‌ಗಳು ಹೇಳುವುದು Ideal ಸ್ಪೀಡ್ (ಎಲ್ಲವೂ ಪರ್ಫೆಕ್ಟ್ ಇದ್ರೆ ಮಾತ್ರ).. ಕಾರು ಕಂಪೆನಿಗಳೂ ಕಾರಿನ ಮೈಲೇಜ್ ಹೇಳುವುದು Ideal/ ಫ್ಯಾಕ್ಟರಿ ಕಂಡಿಶನಿಗೆ. ಆದರೆ ವಾಸ್ತವಿಕವಾಗಿ ನಮಗೆ ಸಿಗುವ ಸ್ಪೀಡ್ 75-85% ಮಾತ್ರ ಅಥವಾ ಇನ್ನೂ ಕಡಿಮೆ. ಇದಕ್ಕೆ ಟ್ರಾಫಿಕ್, ಪೀಕ್ ಅವರ್, ಕೇಬಲ್, ವೈ ಫೈ, ನಿಮ್ಮ ಕಂಪ್ಯೂಟರ್ ಸಾಮರ್ಥ್ಯ ಇತ್ಯಾದಿ ಕಾರಣ. ಕೆಲವೊಮ್ಮೆ ನಿಮ್ಮ ಪ್ಯಾಕೇಜ್ ಮುಗಿದರೆ ನಿಮ್ಮ ಸ್ಪೀಡ್ “ತ್ರಾಟಲ್ ಡೌನ್” ಆಗಬಹುದು, ಅಂದರೆ ಕಂಪೆನಿಯವರು ಬೇಕಂತಲೇ ಇಳಿಸುವುದು. ಕೆಲವು ವೆಬ್ ಸೈಟ್ ಗಳಿಗೆ ತುಂಬಾ ಸರ್ವರ್ ಗಳು ಇದ್ರೆ, ಎಷ್ಟು ಜನ ಬ್ರೌಸ್ ಮಾಡಿದ್ರೂ ಸ್ಪೀಡ್ ಕಡಿಮೆ ಆಗದೆ ಇರಬಹುದು (ಉದಾ: ಯೂಟ್ಯೂಬ್). ಹಾಗಾದರೆ ವಾಸ್ತವಿಕ ಸಂಗತಿ : 1000 Mbps ಕನೆಕ್ಷನ್ ಇದ್ರೆ ನಿಜವಾಗಿಯೂ ಸಿಗುವುದು 100MB ಸ್ಪೀಡ್ ಮಾತ್ರ…
ನಮ್ಮ ಮೊಬೈಲಿನ/ಲ್ಯಾಪ್ ಟಾಪಿನ ಇಂಟರ್ನೆಟ್ ಸ್ಪೀಡ್ ನೋಡುವುದು ಹೇಗೆ ??? ಇದು ಬಹಳ ಸುಲಭ. ಇದಕ್ಕಾಗಿಯೇ App /Utility/Software ಗಳು ಇವೆ. ಅದನ್ನು ರನ್ ಮಾಡಿದ್ರೆ ನಿಮ್ಮ ನಿಜವಾದ ಇಂಟರ್ನೆಟ್ ಸ್ಪೀಡ್ ಗೊತ್ತಾಗುತ್ತದೆ (ಡೌನ್ ಲೊಡ್, ಅಪ್ ಲೋಡ್ )….Ookla Speedtest App, NetSpot, Fast.com ಇತ್ಯಾದಿ ಟ್ರೈ ಮಾಡಿ ನೀವೇ ನೋಡಿಕೊಳ್ಳಿ….
ಡಾ. ಅಜಿತ್ ಹೆಬ್ಬಾರ್ ಹೊಸಮಠ















