ಸಾಹಿತ್ಯ, ಕಲೆ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು ಜೀವನವನ್ನು ನಿಜ ಅರ್ಥದಲ್ಲಿ ಸವಿಯುವವರು. ಯಕ್ಷಗಾನ ತಾಳಮದ್ದಲೆ, ಬಯಲಾಟಗಳು ನನ್ನ ಆಸಕ್ತಿಯ ಕ್ಷೇತ್ರ. ಬಹಳ ವರ್ಷಗಳ ಹಿಂದೆ ಒಂದಷ್ಟು ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದರೂ ಮತ್ತೆ ಸಾಹಿತ್ಯ ಕ್ಷೇತ್ರದಲ್ಲಿ ತೀವ್ರವಾಗಿ ನನ್ನನ್ನು ತೊಡಗಿಸಿಕೊಂಡ ಕಾರಣ ತಾಳಮದ್ದಲೆ ಕ್ಷೇತ್ರದಲ್ಲಿ ನನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ನಾಧ್ಯವಾಗಿರಲಿಲ್ಲ. ನನ್ನ ಈ ಇಳಿ ವಯಸ್ಸಿನಲ್ಲೂ ತಾಳಮದ್ದಲೆಗಳ ಆಕರ್ಷಣೆ ನನ್ನನ್ನು ಬಿಟ್ಟಿಲ್ಲ. ನನ್ನ ಆಸಕ್ತಿಗೆ ನೀರೆರೆದು ತಮ್ಮ ʼಬೆಂಗಳೂರು ಯಕ್ಷರುʼ ತಂಡದಲ್ಲಿ ನನ್ನನ್ನು ಸೇರ್ಪಡೆಗೊಳಿಸಿದವರು ಗೆಳೆಯ ಸಾಂಸ್ಕೃತಿಕ ಕಲಾಸಕ್ತಿಯ ಶ್ರೀ ಬಾಲಚಂದ್ರ ದಾಮ್ಲೆಯವರು.
ನಿನ್ನೆ ಭಾನುವಾರ (04-01-2026) ಸಂಜೆ 4 ಗಂಟೆಗೆ ಬೆಂಗಳೂರು ಯಕ್ಷರು ಸಮಾನ ಮನಸ್ಕ ಯಕ್ಷಪ್ರೇಮಿಗಳನ್ನು ಸೇರಿಸಿ ಸಂಘ ಸ್ಥಾಪನೆಯ ಪ್ರಸ್ತಾವನೆ, ರೂಪು ರೇಷೆಗಳನ್ನು ದಾಮ್ಲೆಯವರ ನೇತೃತ್ವದಲ್ಲಿ ಬೆಂಗಳೂರು ರಾಜಾಜಿನಗರದ ಚಿತ್ಪಾವನ ಸಮಾಜದಲ್ಲಿ ವಿಘ್ನಹರನ ಪ್ರಾರ್ಥನೆಯೊಂದಿಗೆ ಬೆಂಗಳೂರು ಯಕ್ಷರು ಸಾಂಕೇತಿಕವಾಗಿ ತನ್ನ ಶುಭಾರಂಭವನ್ನು ಪ್ರಾರಂಭಿಸಿತು. ನಿನ್ನೆಯ ಸಾಂಕೇತಿಕ ಶುಭಾರಂಭದ ಕಾರ್ಯಕ್ರಮದಲ್ಲಿ ಶ್ರೀಯುತರಾದ ಬಾಲಚಂದ್ರ ದಾಮ್ಲೆ, ದಿವಾಕರ ಡೋಂಗ್ರೆ, ಗಜಾನನ ಗೋಖಲೆ, ಗೋವಿಂದ ಅಭ್ಯಂಕರ್, ದೀಪಕ್ ತುಳುಪುಳೆ, ಪ್ರಕಾಶ ಗೋಗಟೆ, ಚಂದ್ರಶೇಖರ ಶೆಂಡ್ಯೆ, ದಾಮೋದರ ಪಾಳಂದ್ಯೆ, ಶೈಲೇಶ ಬರ್ವೆ, ಅರುಣ ಮರಾಠೆ ಮತ್ತು ಹರೀಶ ಡೋಂಗ್ರೆಯವರು ಹಾಜರಿದ್ದರು.
ಮೊದಲ ಕಾಯಕ್ರಮದಲ್ಲಿ ʼಕೃಷ್ಣ ಸಂಧಾನʼ ಅನ್ನುವ ತಾಳಮದ್ದಲೆಯನ್ನು ಪ್ರಾಯೋಗಿಕವಾಗಿ ನಿರ್ವಹಿಸಲಾಯಿತು.
ಈ ಕಥಾನಕದಲ್ಲಿ ಅರ್ಥದಾರಿಗಳಾಗಿ ಶ್ರೀ ಕೃಷ್ಣನಾಗಿ ಬಾಲಚಂದ್ರ ದಾಮ್ಲೆ, ವಿದುರನಾಗಿ ಶೈಲೇಶ ಬರ್ವೆ, ಭೀಮನಾಗಿ ದಾಮೋದರ ಪಾಳಂದ್ಯೆ, ದ್ರೌಪದಿಯಾಗಿ ಹರೀಶ ಡೋಂಗ್ರೆ ಮತ್ತು ದುರ್ಯೋಧನನಾಗಿ ದಿವಾಕರ ಡೋಂಗ್ರೆಯವರು ಪಾತ್ರ ನಿರ್ವಹಣೆ ಮಾಡಿದರು. ಭಾಗವತರಾಗಿ ದೀಪಕ್ ತುಳುಪುಳೆ, ಮೃದಂಗ ವಾದಕರಾಗಿ ಪ್ರಕಾಶ ಗೋಗಟೆ ಮತ್ತು ಚಂದ್ರಶೇಖರ್ ಶೆಂಡ್ಯೆ ಸಹಕರಿಸಿದರು.
ಗಣಪತಿ ಪೂಜನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬೆಂಗಳೂರು ಚಿತ್ಪಾವನ ಸಮಾಜದ ಕಾರ್ಯದರ್ಶಿ ಶ್ರೀ ಗಜಾನನ ಗೋಖಲೆಯವರು ನಮ್ಮೊಡನಿದ್ದು ತಂಡಕ್ಕೆ ಶುಭವನ್ನು ಕೋರಿ ಮುಂದಿನ ದಿನಗಳಲ್ಲೂ ಸಂಘದ ವತಿಯಿಂದ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ನಮ್ಮ ಪ್ರಥಮ ಪ್ರಯತ್ನ ಹೇಗಾಗುತ್ತದೊ ಏನೋ ಅನ್ನುವ ತಳಮಳವಿದ್ದ ನಮ್ಮೆಲ್ಲರ ಆತಂಕವನ್ನು ಪರಿಹರಿಸಿ ತಾಳಮದ್ದಳೆ ಕಾಯಕ್ರಮವು ಭರವಸೆಯನ್ನು ಮೂಡಿಸುವ ಕಾರ್ಯಕ್ರಮವಾಗಿ ಹೊರ ಹೊಮ್ಮಿತು. ಬೆಂಗಳೂರಿನಲ್ಲಿ ಚಿತ್ಪಾವನ ಯಕ್ಷಗಾನಾಸಕ್ತರ ಸಂಘಟನೆಯ ಇಂತಹ ಒಂದು ಪರಿಕಲ್ಪನೆಯನ್ನು ಹುಟ್ಟು ಹಾಕಿ ನಮ್ಮೆಲ್ಲರನ್ನು ಸೇರಿಸಿ ಅದರ ಶುಭಾರಂಭವನ್ನು ಗೈದ ಶ್ರೀ ಬಾಲಚಂದ್ರ ದಾಮ್ಲೆಯವರ ಪ್ರಯತ್ನದಲ್ಲಿ ಮುಂದಿನ ದಿನಗಳಲ್ಲೂ ಚಿತ್ಪಾವನ ಯಕ್ಷಗಾನಾಸಕ್ತರು ಸಹಭಾಗಿಗಳಾಗೋಣ. ಅನೇಕ ಯಕ್ಷಗಾನಾಸಕ್ತ ಯುವಕರು ʼಬೆಂಗಳೂರು ಯಕ್ಷರುʼ ತಂಡದಲ್ಲಿ ಸೇರಿಕೊಳ್ಳುತ್ತಿರುವುದು ಸಂತಸ ಪಡುವ ವಿಷಯವಾಗಿದೆ.
ʼಯಕ್ಷಗಾನಂ ವಿಶ್ವಗಾನಂʼ















