ಹೆಡಿಂಗ್ ನೋಡಿ ಇದು ಯಾವುದಾದರೂ ವಾಹನದ ರಿವರ್ಸ್ ಗೇರ್ ಮೆಕಾನಿಸಂ ಬಗ್ಗೆ ಏನಾದರೂ ವಿಷಯವೋ ಅಂತ ತಿಳಿಯಬೇಡಿ🤣. ವಿಷಯ ಬೇರೆ. ಇದೊಂದು ನನ್ನ ಅಧ್ಯಾಪಕ ವೃತ್ತಿಯ ಬಗ್ಗೆ/ ಅಸಾಂಪ್ರದಾಯಿಕ ಪಾಠದ ವಿಧಾನವನ್ನು ಪ್ರಯೋಗಿಸಿ ನೋಡಿದ್ದರ ಬಗ್ಗೆ. ಹಾಗಂತ ಹೊಸ ವಿಷಯವೇನಲ್ಲ. ನನ್ನ ಗಣಿತ, ವಿಜ್ಞಾನ ಅಧ್ಯಾಪಕರೂ ಇಂತಹ ಕೆಲವು ವಿಧಾನಗಳನ್ನು ಉಪಯೋಗಿಸಿಲ್ಲವೆಂದೇನಿಲ್ಲ…
ಕೆಲವೊಂದು ವರ್ಷಗಳ ಹಿಂದಿನ ಮಾತು. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠಪ್ರವಚನ. ನನಗೆ ಸಾಮಾನ್ಯವಾಗಿ ಸಿಗ್ತಾ ಇದ್ದದ್ದು ಹೈಡ್ರಾಲಿಕ್ಸ್ ಹಾಗೂ ಹೈಡ್ರಾಲಿಕ್ ಮೆಷೀನ್ಸ್ ಎಂಬ ವಿಷಯ (ಈ ಮೊದಲು ಇದರ ಬಗ್ಗೆ ಹೇಳಿದ್ದೆ, ಆದರೆ ಇವತ್ತು context ಬೇರೆ). ಇದರಲ್ಲಿ ಮೊದಲ 30% ಸ್ವಲ್ಪ ಸುಲಭದ ವಿಚಾರಗಳು, ಉಳಿದ 70% ಸಂಪೂರ್ಣ ಯಂತ್ರಗಳ ಬಗ್ಗೆ. ಇದರಲ್ಲಿ ಗಣಿತ, ಭೌತಶಾಸ್ತ್ರದ ದ್ರವಗಳ ಚಲನೆಯ ವಿಚಾರಗಳು, ಶಕ್ತಿ, ಇಂಜಿನಿಯರಿಂಗ್ ತತ್ವಗಳು, ನೂರಾರು ಸಮೀಕರಣಗಳ ಡಿರೈವೇಶನ್, ಟರ್ಬೈನಿನ ಒಳರಚನೆ, ಹೊರರಚನೆ, ಹತ್ತಾರು ಡ್ರಾಯಿಂಗ್‌ಗಳು, ಟರ್ಬೈನ್ ಡಿಸೈನ್ ಮಾಡುವುದು, ಮೆಷಿನ್ ಪಾರ್ಟ್, ಹೈಡ್ರೋ ಪವರ್ ಪ್ಲಾಂಟ್, ಪಂಪು ಡಿಸೈನ್, ಹತ್ತಾರು ನ್ಯುಮರಿಕಲ್ ಪ್ರಾಬ್ಲೆಮ್ (ಸಂಖ್ಯಾತ್ಮಕ ಸಮಸ್ಯೆಗಳು, ಶಾಲೆಯಲ್ಲಿ ಹೇಳುವುದಾದರೆ ಪ್ರ.ಪ್ರ. ಲೆಕ್ಕಗಳು) ಹೀಗೆ ಸಾಕಪ್ಪಾ ಸಾಕು ಅನ್ನಿಸುವಷ್ಟು ವಿಚಾರಗಳು. ವಿದ್ಯಾರ್ಥಿಗಳಿಗೂ ಈ ಸಬ್ಜೆಕ್ಟನ್ನು ಸಂಪೂರ್ಣ ಇಮ್ಯಾಜಿನ್ ಮಾಡಿ ಅರ್ಥೈಸಿಕೊಳ್ಳುವ ದೊಡ್ಡ ಚಾಲೆಂಜ್, ಸದ್ಯ ಸೆಮಿಸ್ಟರ್ ಮುಗಿದು ಪಾಸಾದ್ರೆ ಸಾಕು ಅಂತ ಹೆಚ್ಚಿನವರದ್ದು ಮಾನಸಿಕ ಸ್ಥಿತಿ. “ಬಾಯಿಪಾಠ ಕಲಿಕೆ” ಮಾಡಿದ್ರೆ ಇಲ್ಲಿ ವರ್ಕ್ ಔಟ್ ಆಗೋದಿಲ್ಲ ಅಂತ ಅವರಿಗೂ ಗೊತ್ತು. ಟರ್ಬೈನಿನ ಬ್ಲೇಡನ್ನೇ ಜಗಿಯಲಿಕ್ಕೆ ಕೊಟ್ಟಷ್ಟು ಕಷ್ಟ (ಕಬ್ಬಿಣದ ಕಡ್ಲೆ). ಪಾಪ ಇದರ ಮೇಲೆ ಎಸೈನ್‌ಮೆಂಟ್ ಬರೆ ಬೇರೆ…ಇದೆಲ್ಲಾ ಸ್ವಲ್ಪ ಉತ್ಪ್ರೇಕ್ಷೆಯಾದರೂ, ಕೆಲವು ಖುಷಿ ಪಟ್ಟು ಓದಿ ಉತ್ತಮ ಅಂಕ ತೆಗೆದ ವಿದ್ಯಾರ್ಥಿಗಳಿಲ್ಲವೆಂದಿಲ್ಲ. ಇದು ವಿದ್ಯಾರ್ಥಿಗಳ ಬವಣೆಯಾದರೆ ಇತ್ತ ಮಾಷ್ಟ್ರ ಗತಿಯೇನು? ನಾನಂತೂ ವಿದ್ಯಾರ್ಥಿಗಳಿಗಿಂತ ಜಾಸ್ತಿ ಹೋಂ ವರ್ಕ್ ಮಾಡಿ ಸುಸ್ತೋ ಸುಸ್ತು. ದಪ್ಪ ದಪ್ಪದ ಮಣಭಾರದ ಪುಸ್ತಕಗಳನ್ನು ನೋಡಿಯೇ ಮಕ್ಕಳಿಗೆ ಹಾರ್ಟ್ ಬೀಟ್ ರೈಸ್. ಫಲಿತಾಂಶದ ದಿನವಂತೂ ಅಧ್ಯಾಪಕರ “ಬೀಟ್” ನೂರರ ಮೇಲೆ😜. ಇವತ್ತಿನ ಮೈನ್ ಟಾಪಿಕ್ ಬಗ್ಗೆ ಹೇಳಲಿಕ್ಕೆ ಇಷ್ಟು ಪೀಠಿಕೆ ಅಗತ್ಯ ಇತ್ತಾ ಅಂತ ನಿಮಗೆ ಅನ್ನಿಸುತ್ತಾ ಇರಬಹುದು. ಈಗ ಮುಖ್ಯ ವಿಷಯಕ್ಕೆ ಬರುವಾ.
*ಮೇಲೆ ಹೇಳಿದ ಯಂತ್ರಗಳ ಪಾಠ ಮಾಡಲು ಅಧ್ಯಾಪಕ ಸರಿಯಾದ ಪಾಠದ ಸಿಕ್ವೆಂಸ್ ಅನುಸರಿಸ ಬೇಕು. ಇದು ಕ್ಲಿಷ್ಟಕರ ವಿಷಯಗಳ ಪಾಠ ಮಾಡುವಾಗ ಯಾವುದೇ ಅಧ್ಯಾಪಕನು ಅನುಸರಿಸಬೇಕಾದ ವಿಧಾನ. ಹೇಗೆ ಹಂತ ಹಂತವಾಗಿ ಮಾಡಬೇಕು ಅಂತ ನೋಡುವಾ…

- ಅಗತ್ಯ ಇರುವ ಗಣಿತ, ಭೌತ ಶಾಸ್ತ್ರದ ಟಾಪಿಕ್ ಗಳ ಸಂಪೂರ್ಣ ಅರಿವು ಮೂಡಿಸ ಬೇಕು
- ಟರ್ಬೈನ್ ಬಗ್ಗೆ ನಿಧಾನವಾಗಿ ಪರಿಚಯ ಮಾಡಿಸಬೇಕು
- ಟರ್ಬೈನ್ ವರ್ಕಿಂಗ್ ಪ್ರಿನ್ಸಿಪಲ್ ಬಗ್ಗೆ ವಿವರಿಸ ಬೇಕು
- ಸಮೀಕರಣಗಳ ಡಿರೈವೇಶನ್ ಮಾಡಬೇಕು ( ಅಂದರೆ ಮೂಲದಿಂದ ಸಮೀಕರಣಗಳನ್ನು ರಚಿಸುವುದು).
- ಒಳ ರಚನೆ, ಹೊರ ರಚನೆ ಬಗ್ಗೆ ಚಿತ್ರದ ಮೂಲಕ ತಿಳಿಸಿಕೊಡಬೇಕು.
- ಅತ್ಯಂತ ಕ್ಲಿಷ್ಟಕರ ಡಿಸೈನ್ ವಿನ್ಯಾಸದ ಬಗ್ಗೆ ವಿವರಣೆ ಕೊಡಬೆಕು.
- ಕೊನೆಯಲ್ಲಿ ಪಕ್ಕಾ ಟರ್ಬೈನ್ “ಡಿಸೈನ್ ಹಂತ”- ಹಲವಾರು ಸಂಖ್ಯಾತ್ಮಕ ಸಮಸ್ಯೆಗಳನ್ನು (ನ್ಯುಮರಿಕಲ್ಸ್) ಸಾಲ್ವ್ ಮಾಡಬೇಕು..ಯುನಿವರ್ಸಿಟಿ ಪ್ರಶ್ನೆ ಪತ್ರಿಕೆಯ ಸಮಸ್ಯೆಗಳನ್ನು ಬಿಡಿಸಬೇಕು…ಹೀಗೆ ಹಲವಾರು ವಿಚಾರಗಳು.
ಹೌದು, ಎಲ್ಲ ಸರಿ ಹೋದ್ರೆ ಇದು ಸರಿಯಾದ ವಿಧಾನ. ಆದರೆ ನಾನು ಅಂದುಕೊಂಡಂತೆ ಆಗುತ್ತಿರಲಿಲ್ಲ..ಕ್ಲಿಷ್ಟಕರ ಡಿಸೈನ್ ಯಾವಾಗಲೂ ವಿದ್ಯಾರ್ಥಿಗಳಿಗೆ ಬಗೆಹರಿಯದ ಸಮಸ್ಯೆಯಾಗುತ್ತಿತ್ತು. ಹೆಚ್ಚಿನ ಮಕ್ಕಳು ಎಡವುತ್ತಿದ್ದೇ ಇಲ್ಲಿ. ನನಗೂ ನನ್ನ ಪಾಠದ ವೀಕ್ ನೆಸ್ ಇರಬಹುದೇನೋ ಅನ್ನಿಸಿ ಕಿರಿ ಕಿರಿಯಾಗುತ್ತಿತ್ತು. ಒಂದು ಪ್ರಾಬ್ಲೆಮ್ ಸಾಲ್ವ್ ಮಾಡಲು ಒಂದು ಗಂಟೆ ಸಾಲದ ಎಷ್ಟೋ ಸನ್ನಿವೇಶಗಳೂ ಇತ್ತು. ಹೀಗೊಂದು ದಿನ ಒಂದು ಐಡಿಯಾ ಮಂಡೆಗೆ ಬಂತು..ಸಾಂಪ್ರದಾಯಿಕ ಶೈಲಿ ವರ್ಕ್ ಆಗದಿದ್ದರೆ ಅಸಾಂಪ್ರಾದಾಯಿಕವಾಗಿ ಹೋದ್ರೆ ಹೇಗೆ?…ಮೇಲೆ ಹೇಳಿದ ಆರ್ಡರ್ 1,2,3,4,5,6,7 ಬದಲು ಸಿಕ್ವೆನ್ಸ್ ಬದಲಾಯಿಸಿದ್ರೆ ಹೇಗೆ ????…ಈ 1,2,7,1,2,3,4,5,6,7 ಆರ್ಡರ್ ನಲ್ಲಿ ಹೇಳಿ ಕೊಟ್ರೆ ಹೇಗೆ ?? ಅಂದರೆ ಬೇಸಿಕ್ಸ್ ಸ್ವಲ್ಪ ಹೇಳಿ ಕೊಟ್ಟು (1,2) ನೇರವಾಗಿ ಕೊನೆಯ ಹಂತಕ್ಕೆ ಜಂಪ್ (7). ಅಲ್ಲಿ ನ್ಯುಮರಿಕಲ್ ಪ್ರಾಬ್ಲೆಮ್ ಗಳನ್ನು ಮಾಡಿಸಿ ಮಾಡಿಸಿ ಮಕ್ಕಳ ತಲೆಗೆ ಅರ್ಥವಾಗದಿದ್ದರೂ “ಯಾಂತ್ರಿಕವಾಗಿ” ತಲೆಗೆ ಹೊಕ್ಕುವಂತೆ ಮಾಡುವುದು. (ಯಂತ್ರದ ಬಗ್ಗೆ ಯಾಂತ್ರಿಕವಾಗಿ ಪಾಠ ಮಾಡುವುದು!!!)..ಇದಕ್ಕೂ, ಭಜನೆ ಮಾಷ್ಟ್ರುಗಳು ಸ್ವಲ್ಪವೂ ಸಂಗೀತ ಜ್ಞಾನವಿಲ್ಲದ ಮಕ್ಕಳಿಗೆ ಭಜನೆ ಹೇಳಿಕೊಡುವ ಪಾಠಕ್ಕೂ ಹೋಲಿಕೆ ಇದೆ. ಮಕ್ಕಳಲ್ಲಿ ಯಾವುದೋ ಒಂದು ಭಜನೆಯನ್ನು ನೇರವಾಗಿ ಹಾಡಿಸಿ ಹಾಡಿಸಿ, ಒಟ್ಟೊಟ್ಟಿಗೆ ಹೇಳಿಸಿ ತಲೆಗೆ ತುರುಕಿಸುವುದು (ಬೊಗಳಿ ಬೊಗಳಿ ರಾಗ😜). ಮತ್ತೆ ಹಿಂದೆ ಹೋಗಿ ಮೂಲ ಪಾಠವನ್ನು ಹೇಳಿ ಕೊಡುವುದು. ನನ್ನದೂ ಇದೇ ಉದ್ದೆಶ. 7 ರಿಂದ ಮತ್ತೆ 1ಕ್ಕೆ ಬಂದು ಸರಿಯಾದ ಏರಿಕೆ ಕ್ರಮದಲ್ಲಿ ಹೊಗುವುದು. ಇದೇ ರಿವರ್ಸ್ ಮೆಥಡ್…
ಹಾಗಾದ್ರೆ ಇದರಿಂದ ಪ್ರಯೋಜನ ಆಯಿತಾ ಇಲ್ವಾ ಎಂಬ ಪ್ರಶ್ನೆ ಬರಲೇ ಬೇಕು… ಇಲ್ಲಿ, ಈ ಮೆಥಡ್ ನಲ್ಲಿ ಸ್ವಲ್ಪ ಸಮಯ ಹೆಚ್ಚು ಬೇಕು..ಹಲವಾರು ವರ್ಷಗಳಿಂದ ಈ ಟೆಕ್ನಿಕ್ ಬಳಸಿದ್ದೇನೆ. ನನಗೆ ತಿಳಿದಂತೆ ಉತ್ತಮ ಪರಿಣಾಮ ನೋಡಿದ್ದೇನೆ. ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದಕ್ಕಿಂತಲೂ ಕಷ್ಟದ ಇನ್ನೊಂದು ವಿಷಯಕ್ಕೂ ಅಳವಡಿಸಿದ್ದೇನೆ.ಇದನ್ನು ಬೇರೆ ಅಧ್ಯಾಪಕರು (ಇಂಜಿನಿಯರಿಂಗ್ ಮಾತ್ರವಲ್ಲ) ಬೇರೆ ಬೇರೆ ಕ್ಲಾಸುಗಳಿಗೆ ಪ್ರಯೋಗಿಸಿ ನೋಡಿ ಸಕ್ಸೆಸ್/ಫೈಲ್ ಆಗಿರಲೂ ಬಹುದು. ಅದು ಅವರವರ situation ಗೆ ಬಿಟ್ಟದ್ದು. ನಿಮ್ಮದೂ ಇಂತಹ ಸ್ಟೋರಿಗಳಿದ್ದರೆ ನನಗೂ ತಿಳಿಸಿ😁.
ಹೀಗೊಂದು ನನ್ನ ಇಂಜಿನಿಯರಿಂಗ್ ಅಧ್ಯಾಪಕ ವೃತ್ತಿಯ ಸಣ್ಣದೊಂದು ಅನುಭವ🙏🏻🙏🏻….
ಡಾ. ಅಜಿತ್ ಹೆಬ್ಬಾರ್ ಹೊಸಮಠ.
*















